ಜುವೆಲ್ಲರಿ ವ್ಯಾಪಾರಿಯ ಚಿನ್ನ ಕದ್ದಿದ್ದ ಐವರು ಆರೋಪಿಗಳ ಬಂಧನ

| Published : Apr 26 2024, 12:47 AM IST

ಜುವೆಲ್ಲರಿ ವ್ಯಾಪಾರಿಯ ಚಿನ್ನ ಕದ್ದಿದ್ದ ಐವರು ಆರೋಪಿಗಳ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು, ಡಿವೈಎಸ್ಪಿ ಎಸ್.ಪಾಂಡುರಂಗ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಎಂ.ನಂಜಪ್ಪ ಮತ್ತು ಸಿಬ್ಬಂದಿ ಆಂದ್ರಪ್ರದೇಶ ಮತ್ತು ಒರಿಸ್ಸಾ ರಾಜ್ಯಗಳಲ್ಲಿ ಆರೋಪಿಗಳ ಮತ್ತು ಚಿನ್ನದ ಪತ್ತೆಗಾಗಿ ವಿಶೇಷ ಕಾರ್ಯಾಚರಣೆ ನಡೆಸಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕೆಜಿಎಫ್

ಕೆಜಿಎಫ್ ಮೂಲದ ಚಿನ್ನದ ವ್ಯಾಪರಿಯೊಬ್ಬರಿಂದ ಬಂಗಾರಪೇಟೆ ಬಸ್ ನಿಲ್ದಾಣದಲ್ಲಿ ಕಳವು ಮಾಡಿಕೊಂಡು ಹೋಗಿದ್ದ ೧.೦೬ ಕೋಟಿ ಮೌಲ್ಯದ ೧ ಕೆಜಿ ೪೦೮ ಗ್ರಾಂ ತೂಕದ ಚಿನ್ನಾಭರಣ ವಶಪಡಿಸಿಕೊಂಡ ಬಂಗಾರಪೇಟೆ ಪೊಲೀಸರು, ಐವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

ಕೆಜಿಎಫ್‌ನ ಯು.ಗೌತಮ್‌ ಚಂದ್ ಎಂಬ ಚಿನ್ನದ ವ್ಯಾಪಾರಿಯು ಫೆ.೨೫ ರಂದು ಬಂಗಾರಪೇಟೆ ಪಟ್ಟಣದ ಜ್ಯೂವೆಲ್ಲರಿ ಅಂಗಡಿಗಳಿಗೆ ಚಿನ್ನಾಭರಣಗಳನ್ನು ಸರಬರಾಜು ಮಾಡಲು ಬಂದು, ವ್ಯಾಪಾರ ವಹಿವಾಟು ಮುಗಿಸಿ ಅಂದು ಮದ್ಯಾಹ್ನ ಕೆಜಿಎಫ್‌ಗೆ ವಾಪಸ್ಸಾಗುತ್ತಿದ್ದರು. ಬಂಗಾರಪೇಟೆ ಪಟ್ಟಣದ ಬಸ್‌ನಿಲ್ದಾಣದ ಸಮೀಪ ಯಾರೋ ಇಬ್ಬರು ಅಪರಿಚಿತ ಕಳ್ಳರು, ದ್ವಿಚಕ್ರ ವಾಹನದಲ್ಲಿ ಬಂದು ಕೆಜಿಎಫ್‌ನ ಯು.ಗೌತಮ್‌ಚಂದ್ ರ ಗಮನ ಬೇರೆಡೆಗೆ ಸೆಳೆದು ಅವರ ಚಿನ್ನಾಭರಣ ಹಾಗೂ ನಗದು ಒಳಗೊಂಡ ಬ್ಯಾಗನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು.

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಚಿನ್ನದ ಆಭರಣಗಳು ಕಳವಾಗಿರುವ ಕುರಿತು ಗೌತಮ್ ದೂರು ನೀಡಿದ್ದರು.

ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು, ಡಿವೈಎಸ್ಪಿ ಎಸ್.ಪಾಂಡುರಂಗ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಎಂ.ನಂಜಪ್ಪ ಮತ್ತು ಸಿಬ್ಬಂದಿ ಆಂದ್ರಪ್ರದೇಶ ಮತ್ತು ಒರಿಸ್ಸಾ ರಾಜ್ಯಗಳಲ್ಲಿ ಆರೋಪಿಗಳ ಮತ್ತು ಚಿನ್ನದ ಪತ್ತೆಗಾಗಿ ವಿಶೇಷ ಕಾರ್ಯಾಚರಣೆ ನಡೆಸಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳು ಆಂದ್ರಪ್ರದೇಶದ ಕೆ.ಡಿ.ಪೇಟೆಯ ಎಂ.ಘಂಟ ಶ್ರೀಕಾಂತ್, ಚಿನ್ನಯ್ಯಪಾಳ್ಯಂ ಮೇಕಲ ಹರಿಕಿರಣ್ @ ಪಾಂಡು, ಮೇಕಲ ಲಾವ, ಒರಿಸ್ಸಾ ರಾಜ್ಯದ ಗಂಜಂ ಜಿಲ್ಲೆ ನಾರಾಯಣಪುರದ ಜಿ.ಅರೇಶ್‌ದಾಸ್ ಮತ್ತು ಜಿ.ಲಕ್ಷ್ಮೀದಾಸ್‌ರನ್ನು ಬಂಧಿಸಿ, ಅವರಿಂದ ಒಟ್ಟು ೧ ಕೋಟಿ ೬ ಲಕ್ಷ ರು. ಮೌಲ್ಯದ ೧ ಕೆಜಿ ೪೦೮ ಗ್ರಾಂ ತೂಕದ ಬಂಗಾರದ ಆಭರಣಗಳನ್ನು, ಕೃತ್ಯಕ್ಕೆ ಬಳಸಿದ ೨ ದ್ವಿಚಕ್ರ ವಾಹನಗಳು ಮತ್ತು ೪ ಮೊಬೈಲ್ ಪೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಬಂಗಾರಪೇಟೆ ಪಿಎಸ್ಐ ನಂಜಪ್ಪ, ರಾಬರ್ಟ್‌ಸನ್‌ಪೇಟೆ ಸಿಪಿಐ ರಾಮಕೃಷ್ಣಯ್ಯ, ಸೈಬರ್ ಕ್ರೈಂ ಪಿಎಸ್ಐ ಲಕ್ಷ್ಮೀನಾರಾಯಣ, ಆಂಡ್ರಸನ್‌ಪೇಟೆ ಪಿಎಸ್‌ಐ ಚೇತನ್‌ಕುಮಾರ್, ಅಪರಾಧ ವಿಶೇಷ ಪತ್ತೆ ದಳದ ಸಿಬ್ಬಂದಿ ಚಂದ್ರಕುಮಾರ್, ಪ್ರಭಾಕರ್, ಅನಿಲ್‌ಕುಮಾರ್, ಚಲಪತಿ, ಮಂಜುನಾಥರೆಡ್ಡಿ, ರಾಮಕೃಷ್ಣಾರೆಡ್ಡಿ, ಮುನಾವರ್‌ಪಾಷ, ವಿಜಯಲಕ್ಷ್ಮೀ, ಎಂ.ಆರ್.ಲಲಿತಾ, ಆರ್.ಮಂಜುಳಾ, ಮುರಳಿ, ಸೋಮಪ್ಪ ಮುಗಳಿ, ಸುಮನ್, ನವೀನ್, ಕೆ.ಒ.ಮಂಜುಳಾ ಭಾಗವಹಿಸಿದ್ದರು.