ಟ್ಯೂಷನ್‌ ಗೀಳು ಅಂಟಿಸಿಕೊಳ್ಳದೆ ಜಿಲ್ಲೆಯ ಟಾಪರ್‌ ಆದಿತ್ಯ ಎಸ್.ಎಂ.

| Published : May 10 2024, 01:40 AM IST

ಟ್ಯೂಷನ್‌ ಗೀಳು ಅಂಟಿಸಿಕೊಳ್ಳದೆ ಜಿಲ್ಲೆಯ ಟಾಪರ್‌ ಆದಿತ್ಯ ಎಸ್.ಎಂ.
Share this Article
  • FB
  • TW
  • Linkdin
  • Email

ಸಾರಾಂಶ

ಟಾಪರ್‌ ಸ್ಥಾನ ಬರಬೇಕೆಂಬ ಕಾರಣಕ್ಕಾಗಿ ಟ್ಯೂಷನ್‌ಗೆ ಹೋಗಲೇಬೇಕೆಂಬ ಕೆಲವಲ್ಲಿರುವ ಅಭಿಪ್ರಾಯವನ್ನು ಸುಳ್ಳಾಗಿಸಿದ್ದಾರೆ.

ಜಿ. ಸೋಮಶೇಖರ

ಕೊಟ್ಟೂರು: ಟ್ಯೂಷನ್‌ ಅಥವಾ ವಿಶೇಷ ತರಬೇತಿಯ ಗೋಜಿಗೆ ಹೋಗದೇ ತನ್ಮಯತೆಯಿಂದ ವಿದ್ಯಾರ್ಜನೆ ಮಾಡಿದರೆ ಪರೀಕ್ಷೆಯಲ್ಲಿ ಸಾಧನೆ ತೋರಬಹುದೆಂಬುದನ್ನು ಈ ಸಲದ ಎಸ್ಎಸ್ಎಲ್‌ಸಿ ಪರೀಕ್ಷೆಯ ಫಲಿತಾಂಶದಲ್ಲಿ ವಿಜಯನಗರ ಜಿಲ್ಲೆಗೆ ಪ್ರಥಮ ಟಾಪರ್‌ (625ಕ್ಕೆ 621 ಅಂಕ- ಶೇ.99.36) ಆಗಿ ಆದಿತ್ಯ ಎಸ್.ಎಂ. ಹೊರಹೊಮ್ಮಿದ್ದಾರೆ.

ಪರೀಕ್ಷೆಯಲ್ಲಿ ರಾಜ್ಯದ ಮೊದಲ ಟಾಪರ್‌ ಸ್ಥಾನ ಪಡೆದುಕೊಳ್ಳಲೇಬೇಕೆಂದು ಆಸೆ ಹೊಂದಿ ಪ್ರತಿ ನಿತ್ಯ ನಾಲ್ಕೈದು ತಾಸು ಓದುವುದನ್ನು ಅಭ್ಯಾಸ ಮಾಡಿಕೊಂಡಿದ್ದ ಆದಿತ್ಯ ತನ್ನ ಶಾಲೆಯಾದ ಗುರುದೇವ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರು ಮಾಡುತ್ತಿದ್ದ ಪಾಠ ಪ್ರವಚನಗಳನ್ನು ಮನನ ಮಾಡಿಕೊಂಡು ಅಭ್ಯಾಸ ಮಾಡಿದಾತ.

ಟಾಪರ್‌ ಸ್ಥಾನ ಬರಬೇಕೆಂಬ ಕಾರಣಕ್ಕಾಗಿ ಟ್ಯೂಷನ್‌ಗೆ ಹೋಗಲೇಬೇಕೆಂಬ ಕೆಲವಲ್ಲಿರುವ ಅಭಿಪ್ರಾಯವನ್ನು ಸುಳ್ಳಾಗಿಸಿದ್ದಾರೆ. ತಂದೆ ಶಿಕ್ಷಕ ಕೊಟ್ರಯ್ಯ ಮತ್ತು ತಾಯಿ ರೂಪಾ ಅವರ ಪ್ರೋತ್ಸಾಹ ಸಲಹೆ ಪಾಲಿಸುತ್ತ ಓದಿನತ್ತ ಮುನ್ನುಗ್ಗಿ ಈ ಸಾಧನೆ ತೋರಿದ್ದಾರೆ. ತಂದೆ ಪಟ್ಟಣದ ಸರ್ಕಾರಿ ಬಾಲಕಿಯರ ಶಾಲೆಯ ಚಿತ್ರಕಲಾ ಶಿಕ್ಷಕರಾಗಿದ್ದಾರೆ.

ಪರೀಕ್ಷೆಯಲ್ಲಿ ಆದಿತ್ಯ ಕನ್ನಡದಲ್ಲಿ 124, ಇಂಗ್ಲಿಷ್‌-100, ಹಿಂದಿ-100, ಗಣಿತ-98, ವಿಜ್ಞಾನ-100, ಸಮಾಜವಿಜ್ಞಾನ-99 ಅಂಕಗಳನ್ನು ಗಳಿಸಿದ್ದಾರೆ.

ಈ ಸಲದ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯದ ಮೊದಲ ಟಾಪರ್‌ ಸ್ಥಾನ ಪಡೆಯುವ ನಿಟ್ಟಿನಲ್ಲಿ ಅಭ್ಯಾಸ ಮಾಡಿದ್ದೆ. ಆದರೆ ವಿಜಯನಗರ ಜಿಲ್ಲೆ ಟಾಪರ್‌ ಮೊದಲ ಸ್ಥಾನ ಪಡೆದುಕೊಂಡಿದ್ದಕ್ಕೆ ಖುಷಿಯಾಗಿರುವೆ. ಪಿಯುಸಿ ತರಗತಿಯನ್ನು ದಾವಣಗೆರೆ ಕಾಲೇಜ್‌ ಒಂದರಲ್ಲಿ ಸೇರ್ಪಡೆಯಾಗುವ ಹಂಬಲವಿದೆ ಎನ್ನುತ್ತಾರೆ ಜಿಲ್ಲೆಯ ಟಾಪರ್‌ ಆದಿತ್ಯ ಎಸ್.ಎಂ.

ಆದಿತ್ಯ ಈ ಸಾಧನೆ ಮಾಡುವ ಬಗ್ಗೆ ಶಾಲೆಯ ಶಿಕ್ಷಕರಿಗೆ ಭರವಸೆ ಇತ್ತು. ಅದರಂತೆ ಆದಿತ್ಯ ಪೂರ್ಣ ಪ್ರಮಾಣದಲ್ಲಿ ನಿರಂತರ ಅಭ್ಯಾಸ ಮಾಡಿ ಜಿಲ್ಲೆಗೆ ಪ್ರಥಮ ಸ್ಥಾನ ಹೊಂದಿರುವುದು ನಮ್ಮ ಶಾಲೆ ಮತ್ತು ಸಂಸ್ಥೆಗೆ ಹೆಮ್ಮೆ ತಂದಿದೆ. ಇದಕ್ಕಾಗಿ ಆತನನ್ನು ಅಭಿನಂದಿಸುತ್ತೇವೆ ಎನ್ನುತ್ತಾರೆ ಕೊಟ್ಟೂರಿನ ಗುರುದೇವ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಪ್ರಕಾಶ್‌ ಕೋಡಿಹಳ್ಳಿ.