ಎರಡು ಬಾರಿ ಮತ ಹಾಕಿದ ಅದಮಾರು ಶ್ರೀಗಳು

| Published : Apr 27 2024, 01:21 AM IST / Updated: Apr 27 2024, 10:21 AM IST

Adamaru Swamiji

ಸಾರಾಂಶ

ಶ್ರೀಗಳು ನಗರದ ನಾರ್ತ್ ಶಾಲೆಯ ಮತಗಟ್ಟೆಗೆ ಮುಂಜಾನೆ ಮೊದಲಿಗರಾಗಿ ಮತದಾನಕ್ಕೆ ಆಗಮಿಸಿ ಮತಯಂತ್ರದ ಗುಂಡಿ ಒತ್ತಿದ್ದರು. ಆದರೆ ಬೀಪ್ ಸೌಂಡ್ ಕೇಳಿರಲಿಲ್ಲ.

 ಉಡುಪಿ :  ಮತಯಂತ್ರದ ತಾಂತ್ರಿಕ ದೋಷದಿಂದಾಗಿ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಅವರು ಎರಡು ಬಾರಿ ಮತದಾನ ಮಾಡಿದ ಘಟನೆ ನಡೆಯಿತು.

ಶ್ರೀಗಳು ನಗರದ ನಾರ್ತ್ ಶಾಲೆಯ ಮತಗಟ್ಟೆಗೆ ಮುಂಜಾನೆ ಮೊದಲಿಗರಾಗಿ ಮತದಾನಕ್ಕೆ ಆಗಮಿಸಿ ಮತಯಂತ್ರದ ಗುಂಡಿ ಒತ್ತಿದ್ದರು. ಆದರೆ ಬೀಪ್ ಸೌಂಡ್ ಕೇಳಿರಲಿಲ್ಲ. ಈ ಬಗ್ಗೆ ಶ್ರೀಗಳು ಅವರು ಕೇಳಿದಾಗ ನಿಮ್ಮ ಮತದಾನವಾಗಿದೆ ಎಂದು ಅಧಿಕಾರಿಗಳು ಹೇಳಿದ್ದರು. ಅದರಂತೆ ಶ್ರೀಗಳು ಮತಗಟ್ಟೆಯಿಂದ ಹೊರಗೆ ಬಂದು ಮಠಕ್ಕೆ ಹಿಂತೆರಳಲು ಸಿದ್ಧರಾಗಿದ್ದರು.

ಅಷ್ಟರಲ್ಲಿ ಮತಗಟ್ಟೆಯ ಅಧಿಕಾರಿಗಳಿಗೆ ಶ್ರೀಗಳ ಮತ ದಾಖಲಾಗದಿರುವುದು ಗಮನಕ್ಕೆ ಬಂದು ಮತ್ತೆ ಶ್ರೀಗಳಿಗೆ ಮಾಹಿತಿ ನೀಡಿದರು. ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದ ಶ್ರೀಗಳು ಅಧಿಕಾರಿಗಳ ಮನವಿಯಂತೆ ಮತ್ತೆ ಮತದಾನ ಕೇಂದ್ರದೊಳಗೆ ತೆರಳಿ ಪುನಃ ಮತದಾನ ಮಾಡಿ, ಬೀಪ್ ಸೌಂಡ್ ಕೇಳಿದ ಮೇಲೆ ಹೊರಗೆ ಬಂದರು.

* ಸ್ವಾತಂತ್ರ್ಯ ಬಂದು 10 ವರ್ಷವಾಗಿದೆ ಅಷ್ಟೇ

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಬ್ರಿಟಿಷರು ಭಾರತ ಬಿಟ್ಟು 75 ವರ್ಷಗಳಾದರೂ, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 10 ವರ್ಷವಾಯಿತು. ಇದೇ ರೀತಿಯಲ್ಲಿ ಭಾರತ ಸದೃಢವಾಗಿ ಮುಂದುವರಿಯಬೇಕು, ಅದಕ್ಕೆ ಈ ದೇಶದಲ್ಲಿ ಇರುವುದು ಒಂದೇ ಪಕ್ಷ, ಮತ್ತೆಲ್ಲವೂ ಪಕ್ಷಪಾತ ಎಂದರು.

ಗೋದಾನ ಮಾಡು, ಭೂದಾನ ಮಾಡು ಪುಣ್ಯ ಬರುತ್ತದೆ ಅನ್ನುತ್ತಾರೆ, ಆದರೆ ಒಳ್ಳೆಯ ವ್ಯಕ್ತಿಗೆ ಮತದಾನ ಮಾಡು ತಕ್ಷಣ ಫಲಿತಾಂಶ ಸಿಗುತ್ತದೆ. ಈ ನೆಲದ ಗಾಳಿ ನೀರು ಬೆಂಕಿ ಉಪಯೋಗಿಸಿದವ ಯೋಗ್ಯ ವ್ಯಕ್ತಿಗೆ ಮತದಾನ ಮಾಡಲೇಬೇಕು, ಎಲ್ಲ ಲಾಭ ಪಡೆದು ಮತ ಹಾಕದವ ಋಣಿಯಾಗುತ್ತಾನೆ. ಅಂತಹ ಋಣಿಗಿಂತ ದೊಡ್ಡ ದೋಷಿ ಮತ್ತೊಬ್ಬ ಇಲ್ಲ ಎಂದರು.ವೊಟರ್ ಸ್ಲಿಪ್ ಅದಲು ಬದಲು: ಗೊಂದಲ

ಕನ್ನಡಪ್ರಭ ವಾರ್ತೆ ಉಡುಪಿಇಲ್ಲಿನ ರಾಜೀವ ನಗರದಲ್ಲಿ ನಕಲಿ ಮತದಾನ ನಡೆದ ಬಗ್ಗೆ ಕೆಲಕಾಲ ಮತಗಟ್ಟೆಯಲ್ಲಿ ಗೊಂದಲ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಯಾವುದೇ ನಕಲಿ ಮತದಾನ ನಡೆದಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಮಣಿಪಾಲ ಸಮೀಪದ ಅರ್ಬಿ ಎಂಬಲ್ಲಿನ ನಿವಾಸಿ ಕೃಷ್ಣ ನಾಯ್ಕ್ ಎಂಬವರು ಬೆಳಗ್ಗೆ ಮತಗಟ್ಟೆಗೆ ಬಂದು ಸರದಿಯಲ್ಲಿ ಕಾದು ಒಳಗೆ ಹೋದಾಗ ಅವರ ಹೆಸರಲ್ಲಿ ಅದಾಗಲೇ ಮತದಾನ ಆಗಿರುವ ಬಗ್ಗೆ ಅಧಿಕಾರಿ ಹೇಳಿದ್ದನ್ನು ಕೇಳಿ ಅವರು ಅಚ್ಚರಿಗೊಂಡರು. ಆದರೆ ತಾನು ಮತ ಹಾಕಿಲ್ಲ ಎಂದು ಕೈಯ ಬೆರಳು ತೋರಿಸಿದರೂ ಅಧಿಕಾರಿಗಳು ಅವರಿಗೆ ಮತದಾನಕ್ಕೆ ಅವಕಾಶ ನೀಡಲಿಲ್ಲ. ಇದರಿಂದ ಅವರು ಅಸಮಾಧಾನ ವ್ಯಕ್ತಪಡಿಸಿದರು.ಕೊನೆಗೆ ಅವರದ್ದೇ ಹೆಸರಿನ ಇನ್ನೊಬ್ಬರು ಅವರಿಗಿಂತ ಮೊದಲು ಬಂದು ಮತದಾನ ಮಾಡಿದ್ದರು. ಅವರಿಬ್ಬರಿಗೆ ನೀಡಲಾಗಿದ್ದ ‍ವೋಟರ್ ಸ್ಲಿಪ್‌ಗಳು ಅದಲು ಬದಲಾಗಿದ್ದು, ಅದರಂತೆ ಅಧಿಕಾರಿಗಳು ವಿವರಗಳನ್ನು ದಾಖಲಿಸಿದ್ದರು. ಇದು ಗೊಂದಲಕ್ಕೆ ಕಾರಣವಾಯಿತು. ಇದರಿಂದ ಅಧಿಕಾರಿಗಳು ಅಸಹಾಯಕರಾದರು.

ಕೊನೆಗೆ ಅಧಿಕಾರಿಗಳು ಮೊದಲು ಬಂದು ಮತದಾನ ಮಾಡಿದ ವ್ಯಕ್ತಿಯನ್ನು ಹುಡುಕುವ ಪ್ರಯತ್ನ ಮಾಡಿದರೂ ಫಲವಾಗಲಿಲ್ಲ. ಕೃಷ್ಣ ನಾಯ್ಕ್ ಅವರಿಗೆ ಮತದಾನಕ್ಕೆ ಅವಕಾಶ ಸಿಗಲಿಲ್ಲ.