ದುಡಿಮೆಯಿಂದ ಮಾತ್ರ ಸುಂದರ ಜೀವನ ಸಾಧ್ಯ

| Published : May 09 2024, 01:01 AM IST

ಸಾರಾಂಶ

ಜೀವನದಲ್ಲಿ ಯಾರೂ ದುಡಿಮೆ ಮಾಡುತ್ತಾರೋ ಅಂತಹವರು ಸುಂದರವಾದ ಜೀವನ ಸಾಗಿಸುತ್ತಾರೆ. ಜೀವನದಲ್ಲಿ ಆಚಾರ-ವಿಚಾರವಂತರಾಗಿ ಸನ್ಮಾರ್ಗದಲ್ಲಿ ಸಾಗಿದರೆ ಭಗವಂತನು ಖಂಡಿತ ಒಳ್ಳೆಯದು ಮಾಡುತ್ತಾನೆ ಎಂದು ಕೆರೂರ-ಕೊಣ್ಣೂರಿನ ಡಾ.ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಜೀವನದಲ್ಲಿ ಯಾರೂ ದುಡಿಮೆ ಮಾಡುತ್ತಾರೋ ಅಂತಹವರು ಸುಂದರವಾದ ಜೀವನ ಸಾಗಿಸುತ್ತಾರೆ. ಜೀವನದಲ್ಲಿ ಆಚಾರ-ವಿಚಾರವಂತರಾಗಿ ಸನ್ಮಾರ್ಗದಲ್ಲಿ ಸಾಗಿದರೆ ಭಗವಂತನು ಖಂಡಿತ ಒಳ್ಳೆಯದು ಮಾಡುತ್ತಾನೆ ಎಂದು ಕೆರೂರ-ಕೊಣ್ಣೂರಿನ ಡಾ.ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಮನಗೂಳಿ ಪಟ್ಟಣದ ಪಟ್ಟೀಕಂಥಿ ಹಿರೇಮಠದ ಮಹಾಂತ ಶಿವಾಚಾರ್ಯ ಸ್ವಾಮೀಜಿ ಅವರ ೭೫ ನೇ ಯಾತ್ರಾಮಹೋತ್ಸವ ಹಾಗೂ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಅವರ ೨೩ನೇ ಸಂಸ್ಮರಣೋತ್ಸವ ಹಾಗೂ ಗುರು ಮಹಾಂತೇಶ್ವರ ಶ್ರೀ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆಯಂಗವಾಗಿ ಬುಧವಾರ ಭಜನಾ ಮಂಟಪದಲ್ಲಿ ಹಮ್ಮಿಕೊಂಡಿದ್ದ ಧರ್ಮಜಾಗೃತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಹಾತ್ಮರನ್ನು ಸ್ಮರಣೆ ಮಾಡುವುದರಿಂದ ಘನವಾದ ಮುಕ್ತಿ ಸಿಗುತ್ತದೆ. ಪರಮಾತ್ಮ ನಿರಾಕಾರ ರೂಪದಲ್ಲಿದ್ದಾನೆ. ಮಹಾತ್ಮರ ಲೀಲೆಗಳು ಪರಮಾತ್ಮನ ಇರುವಿಕೆಯನ್ನು ತೋರಿಸುತ್ತವೆ. ಅಪ್ರತ್ಯಕ್ಷವಾಗಿರುವ ದೇವರು ಗುರುವಿನ ರೂಪದಲ್ಲಿ ಕಾಣುತ್ತಾನೆ ಎಂದು ಸಿದ್ಧಾಂತ ಶಿಖಾಮಣಿಯಿಂದ ಗೊತ್ತಾಗುತ್ತದೆ ಎಂದರು.

ಬಹಿರಂಗ ಆಚಾರವೆಂದರೆ ದೇಹವನ್ನು ಶುದ್ಧಿಯಾಗಿಟ್ಟುಕೊಳ್ಳುವುದು. ಅಂತರಂಗ ಆಚಾರವೆಂದರೆ ಮಹಾತ್ಮರ ಅಮೃತವಾಣಿಗಳಿಂದ ಅಂತರಂಗವನ್ನು ಶುದ್ಧಿವಾಗುತ್ತದೆ. ನಮ್ಮ ಸಂಸ್ಕ್ರತಿ-ಸಂಸ್ಕಾರವನ್ನು ಎಂದಿಗೂ ಬಿಡಬಾರದು. ಇಂದು ಪ್ಯಾಶನ್ ಹೆಸರಿನಲ್ಲಿ ಹರಿದ ಬಟ್ಟೆಗಳನ್ನು ಹಾಕಿಕೊಳ್ಳುತ್ತಿರುವುದು ನಮ್ಮ ಭಾರತೀಯ ಸಂಸ್ಕ್ರತಿಗೆ ಗೌರವ ತರುವಂತಹದಲ್ಲ. ಭಾರತೀಯ ಸಂಸ್ಕ್ರತಿಯ ಬಟ್ಟೆ ಧರಿಸುವಂತೆ ನಿಜವಾದ ಸಂಸ್ಕ್ರತಿ. ಯುವಜನಾಂಗ ಯಾವುದೇ ದುಶ್ಚಟಗಳಿಗೆ ದಾಸರಾಗದೇ ಉತ್ತಮ ಜೀವನ ಸಾಗಿಸಬೇಕೆಂದ ಅವರು, ವಿದ್ಯೆ ದೈವ ಬಲವಾಗಿದೆ. ದೇವ ಕೊಟ್ಟ ವಿದ್ಯೆಯಂದ ಉತ್ತಮ ಜೀವನ ಸಾಗಿಸಬೇಕು ಎಂದು ಕರೆ ನೀಡಿದರು.

ಪಟ್ಟೀಕಂಥಿ ಹಿರೇಮಠದ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು ಬೆಂಗಳೂರಿನ ವಿಭೂತಿಪುರ ಮಠದಿಂದ ಬೆಂಗಳೂರಿನಲ್ಲಿ ಉತ್ತಮ ಗುಣಮಟ್ಟದ ಶಾಲೆಯನ್ನು ಆರಂಭಿಸಿದ್ದಾರೆ. ಈ ಶಾಲೆಯಲ್ಲಿ 300 ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದಾರೆ ಎಂದರು.

ನೇತೃತ್ವದ ವಹಿಸಿದ್ದ ಶ್ರೀಮಠದ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಗುರುವಿನ ಆಶೀರ್ವಾದವಾದರೆ ಮನುಷ್ಯನು ಮಹಾದೇವನಾಗುತ್ತಾನೆ. ಗುರುವಿನ ಆಶೀರ್ವಾದ ಸದಾ ಇರಬೇಕು. ನಾನು ಸದಾ ಭಕ್ತರ ಸಂಕಷ್ಟ ದೂರಮಾಡಬೇಕೆಂದು ದೇವರಲ್ಲಿ ಪ್ರಾರ್ಥಿಸುವೆ. ಈ ವರ್ಷ ನಾಡಿನಲ್ಲಿ ಉತ್ತಮ ಮಳೆ-ಬೆಳೆ ಆಗಲೆಂದು ದೇವರಲ್ಲಿ ಪ್ರಾರ್ಥಿಸುವೆ ಎಂದರು.

ಪಾಲಕರು ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ ಕೊಡದೇ ಹೋದರೆ ಅವರು ದುರಾಚಾರಿಗಳಾಗುತ್ತಾರೆ. ಮಕ್ಕಳಿಗೆ ದೇವರ ಮೇಲೆ ಭಕ್ತಿ, ಗುರು-ಹಿರಿಯರಿಗೆ ಗೌರವ ಕೊಡುವ ಸಂಸ್ಕಾರ ಕೊಡಬೇಕು. ಈ ಪಟ್ಟಣದಲ್ಲಿರುವ ಶ್ರೀಮಠದ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗಿನೊಂದಿಗೆ ಅಗತ್ಯ ಪಠ್ಯ ಪರಿಕರಗಳನ್ನು ಇಂದು ವಿತರಿಸಲಾಗಿದೆ. ಇದರ ಸದುಪಯೋಗ ಪಡೆದುಕೊಂಡು ಸಾಧನೆ ಮಾಡುವ ಮೂಲಕ ಪಟ್ಟಣದ ಕೀರ್ತಿ ಹೆಚ್ಚಿಸಬೇಕು.ಸತ್ಪ್ರಜೆಗಳಾಗಿ ಹೊರಹೊಮ್ಮಬೇಕೆಂದರು.

ಧುರೀಣ ಅಪ್ಪಗೌಡ ಪಾಟೀಲ ಮಾತನಾಡಿ, ಧಾರ್ಮಿಕ ಕಾರ್ಯಕ್ರಮಗಳಿಂದ ಜೀವನಕ್ಕೆ ಉತ್ತಮ ಸಂದೇಶ ಸಿಗುವ ಜೊತೆಗೆ ಅನೇಕ ಶ್ರೀಗಳ ಆಶೀರ್ವಾದ ಸಿಗುತ್ತದೆ. ದಾನ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಜಗತ್ತಿನಲ್ಲಿ ಹಣಕ್ಕಿಂತಲೂ ಅನ್ನ ಸಾಕು ಅನ್ನುವರು. ಪ್ರಶಸ್ತಿಗಳು ಸಮಾಜಕ್ಕೆ ಸೇವೆ ನೀಡಿದವರನ್ನು ಪರಿಚಯಿಸುವ ಜೊತೆಗೆ ಅವರಿಂದ ಇತರರಿಗೆ ಸಮಾಜ ಸೇವೆ ಮಾಡಲು ಪ್ರೇರಣೆ ಸಿಗುತ್ತದೆ ಎಂದರು.

ಗುಳೇದಗುಡ್ಡದ ಡಾ.ನೀಲಕಂಠ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ವೇದಿಕೆಯಲ್ಲಿ ಬೃಂಗೀಶ್ವರ ಶಿವಾಚಾರ್ಯ ಸ್ವಾಮೀಜಿ, ಶಿವಾನಂದ ದೇವರು, ಇಟಗಿಶ್ರೀಗಳು, ನಾಗಭೂಷಣ ಶಾಸ್ತ್ರೀಜಿ, ಸುಭಾಸಗೌಡ ಪಾಟೀಲ, ಬಿ.ಎಂ ಪಾಟೀಲ, ಪಪಂ ಮುಖ್ಯಾಧಿಕಾರಿ ಎಸ್.ಐ. ರೇವೂರಕರ ಇದ್ದರು. ಇದೇ ಸಂದರ್ಭದಲ್ಲಿ ಗುತ್ತಿಗೆದಾರ ಎಸ್.ಎಸ್.ಆಲೂರ ದಂಪತಿಗಳಿಗೆ ಶ್ರೀಮಠದಿಂದ ಗುರು ಮಹಾಂತೇಶ್ವರ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎಸ್.ಐ. ಬಿರಾದಾರ ಸ್ವಾಗತಿಸಿದರು. ಸಂಗಮೇಶ ಬೆಣ್ಣೂರ ನಿರೂಪಿಸಿ, ವಂದಿಸಿದರು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಶ್ರೀಮಠದ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗಿನೊಂದಿಗೆ ಪಠ್ಯಪರಿಕರಗಳನ್ನು ವಿತರಿಸಲಾಯಿತು.

ಕಾರ್ಯಕ್ರಮಕ್ಕೂ ಮುನ್ನ ಗುರು ಮಹಾಂತೇಶ್ವರರ ಹಾಗೂ ಗುರು ಸಂಗನಬಸವ ಶಿವಾಚಾರ್ಯರ ರಜತ ಮೂರ್ತಿಗಳ ಬೆಳ್ಳಿ ಅಡ್ಡಪಲ್ಲಕ್ಕಿ ಮಹೋತ್ಸವವು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯ ವೈಭವದೊಂದಿಗೆ ಜರುಗಿದ ನಂತರ ರಥೋತ್ಸವ, ಶ್ರೀಮಠದ ಪೂಜ್ಯರ ಸಿಂಹಾಸನಾರೋಹಣ ನೆರವೇರಿತು.

---

ಕೋಟ್‌

ಇಂದು ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕೃತಿ, ಸಂಸ್ಕಾರ ನೀಡುವ ಅಗತ್ಯವಿದೆ. ಶ್ರೀಮಠವು ಈ ದಿಶೆಯಲ್ಲಿ ಮಠದಿಂದ ನಡೆಯುವ ಶಾಲೆಗಳಿಂದ ಮಾಡುತ್ತಿದೆ.

-ಚಂದ್ರಶೇಖರಗೌಡ ಪಾಟೀಲ ವಿಡಿಸಿಸಿ ಬ್ಯಾಂಕಿನ ನಿರ್ದೇಶಕ