ನೀರಿಲ್ಲದೆ ಒಣಗಿದ ಬೆಳೆಗಳು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ರೈತ

| Published : May 09 2024, 01:01 AM IST

ನೀರಿಲ್ಲದೆ ಒಣಗಿದ ಬೆಳೆಗಳು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ರೈತ
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ಜಿಲ್ಲೆಯಲ್ಲಿ ಪ್ರಮುಖ ಆರ್ಥಿಕ ಬೆಳೆ ಕಬ್ಬು ಸೇರಿ ತೋಟಗಾರಿಕೆ ಬೆಳೆಗಳನ್ನು ರೈತರು ಬೆಳೆಯುತ್ತಾರೆ. ಆದರೆ, ಈ ಬಾರಿ ನೀರಿಲ್ಲದೇ ಇದ್ದ ಅಲ್ಪಸ್ವಲ್ಪ ಬೆಳೆ ಒಣಗಿ ಹೋಗಿವೆ. ಈ ಭಾಗದಲ್ಲಿ ಬಹುತೇಕ ಅಂತರ್ಜಲ ಕುಸಿತದಿಂದ ಬೋರ್ ವೆಲ್‌ಗಳನ್ನು ಆಶ್ರಯಿಸಿ ಬೆಳೆ ಬೆಳೆಯುತ್ತಿದ್ದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ.

ಕನ್ನಡಪ್ರಭ ವಾರ್ತೆ ಭಾರತೀನಗರ

ಭೀಕರ ಬರಗಾಲ, ಸಕಾಲಕ್ಕೆ ಮಳೆ ಇಲ್ಲದೇ ಬಿಸಿಲಿನ ತಾಪಕ್ಕೆ ಕೆ.ಎಂ.ದೊಡ್ಡಿ ವ್ಯಾಪ್ತಿಯಲ್ಲಿ ಬಹುತೇಕ ಜಮೀನುಗಳಲ್ಲಿ ಬೆಳೆದ ಬೆಳೆಗಳು ಸಂಪೂರ್ಣ ಒಣಗಿದ್ದು ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನರಳುವಂತಾಗಿದೆ.

ಎಲ್ಲೆಡೆ ಬೇಸಿಗೆ ಬಿಸಿಲಿನ ತಾಪದಿಂದ ಬೆಳೆಗಳು ನೀರಿಲ್ಲದೆ ಒಣಗುತ್ತಿದ್ದರೆ ಸರ್ಕಾರ ರೈತರಿಗೆ ಪರಿಹಾರ ನೀಡದೆ ವಿಳಂಬ ಮಾಡುತ್ತಿದೆ. ರೈತರ ಬೆಳೆಗಳಿಗೆ ಬೆಂಬಲ ಬೆಲೆಯೂ ಸಿಕ್ಕಿಲ್ಲ. ಇದರಿಂದ ವ್ಯವಸಾಯವನ್ನೇ ನಂಬಿ ಬದುಕುತ್ತಿದ್ದ ರೈತರು ಭೀಕರ ಜಲಕ್ಷಾಮ ಎದುರಿಸುವಂತಾಗಿದೆ.

ಮಂಡ್ಯ ಜಿಲ್ಲೆಯಲ್ಲಿ ಪ್ರಮುಖ ಆರ್ಥಿಕ ಬೆಳೆ ಕಬ್ಬು ಸೇರಿ ತೋಟಗಾರಿಕೆ ಬೆಳೆಗಳನ್ನು ರೈತರು ಬೆಳೆಯುತ್ತಾರೆ. ಆದರೆ, ಈ ಬಾರಿ ನೀರಿಲ್ಲದೇ ಇದ್ದ ಅಲ್ಪಸ್ವಲ್ಪ ಬೆಳೆ ಒಣಗಿ ಹೋಗಿವೆ. ಈ ಭಾಗದಲ್ಲಿ ಬಹುತೇಕ ಅಂತರ್ಜಲ ಕುಸಿತದಿಂದ ಬೋರ್ ವೆಲ್‌ಗಳನ್ನು ಆಶ್ರಯಿಸಿ ಬೆಳೆ ಬೆಳೆಯುತ್ತಿದ್ದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ.

ಶಿಂಷಾನದಿ ಪಾತ್ರದಲ್ಲಿ ಮಳೆ ಇಲ್ಲದ ದಿನಗಳಲ್ಲಿ ಮೋಟಾರ್‌ಗಳ ಮೂಲಕ ನೀರನ್ನು ರೈತರು ತಮ್ಮ ಬೆಳೆಗಳಿಗೆ ಬಿಟ್ಟು ಉಳಿಸಿಕೊಳ್ಳುತ್ತಿದ್ದರು. ಆದರೆ, ಶಿಂಷಾನದಿ ಒಡಲು ಕೂಡ ಸಂಪೂರ್ಣ ಬರಿದಾಗಿರುವುದರಿಂದ ನೀರಿಲ್ಲದೆ ಪರಿತಪಿಸುತ್ತಿದ್ದಾರೆ.

ಬಹುತೇಕ ಗ್ರಾಮಗಳ ರೈತರು ಕೆರೆಕಟ್ಟೆಗಳನ್ನು ಅವಲಂಬಿಸಿಕೊಂಡಿದ್ದರು. ಆದರೆ, ಅವುಗಳು ಕೂಡ ಸಂಪೂರ್ಣ ಬರಿದಾಗಿವೆ. ಕೆರೆ ಮಣ್ಣನ್ನು ತಮ್ಮ ಹೊಲಗದ್ದೆಗಳಿಗೆ ತುಂಬಿಸಿಕೊಳ್ಳುವಲ್ಲಿ ಮುಂದಾಗುತ್ತಿದ್ದಾರೆ. ಕೆಆರ್‌ಎಸ್ ಜಲಾಶಯದಿಂದ ನೀರನ್ನು ಎರಡು ಕಟ್ಟು ನಾಲೆಗಳಿಗೆ ಬಿಟ್ಟಿದ್ದರೆ ರೈತರು ತಮ್ಮ ಕೈಗೆ ಬಂದ ಬೆಳೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿತ್ತು ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಮದ್ದೂರು ತಾಲೂಕಿನ ಭಾರತೀನಗರ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಶೇ. 30 ರಿಂದ 40 ಭಾಗದ ಅಚ್ಚುಕಟ್ಟು ಪ್ರದೇಶದಲ್ಲಿ ಮಾತ್ರ ಬೆಳೆಗಳನ್ನು ರೈತರು ಒಡ್ಡಿದ್ದರು. ನಿರೀಕ್ಷಿತ ಮಳೆ ಬಾರದ ಕಾರಣ ಉಳಿದ ಶೇ.60 ರಷ್ಟು ಜಮೀನಿನಲ್ಲಿ ರೈತರು ಬೆಳೆ ಒಡ್ಡಲು ಹಿಂದೇಟು ಹಾಕಿದ್ದರು.

ಜೂನ್ ತಿಂಗಳ ಕಬ್ಬಿನ ಫಸಲು, ಸ್ವಲ್ಪ ತಡವಾಗಿ ನಾಟಿ ಮಾಡಿದ್ದ ಭತ್ತ, ರಾಗಿ ಸೇರಿದಂತೆ ಇತರೆ ಎಲ್ಲಾ ಬೆಳೆಗಳು, ಅದರಲ್ಲೂ ಕೊಳವೆಬಾವಿ, ಅಶ್ರಿತ ಪ್ರದೇಶಗಳಲ್ಲಿನ ಬೆಳೆಗಳು ಕಳೆದ ತಿಂಗಳವರೆಗೂ ಅಚ್ಚಹಸಿರಾಗಿದ್ದವು. ಕೊಳವೆಬಾವಿಗಳು ಸಹ ಬಹುತೇಕ ಕಡೆಗಳಲ್ಲಿ ಬರಿದಾಗಿವೆ. ಇದು ರೈತರ ಬದುಕನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.‘ಮಳೆ ಬಂದರೆ ಮಾತ್ರ ರೈತರ ಅಚ್ಚುಕಟ್ಟು ಪ್ರದೇಶಗಳಿಗೆ ನೀರುಬಿಡಲು ಸಾಧ್ಯ. ಈಗ ವಿಸಿ ನಾಲೆಗಳ ಆಧುನೀಕರಣ ನಡೆಯುತ್ತಿದೆ. ಕಾಮಗಾರಿ ಮುಗಿದ ನಂತರ ಅಣೆಕಟ್ಟೆ ತುಂಬಿದರೆ ಮಾತ್ರ ನೀರು ಬಿಡಲಾಗುತ್ತದೆ.’

ಪ್ರಶಾಂತ್, ಸಹಾಯಕ ಕಾರ್ಯಪಾಲಕ ಅಭಿಯಂತರರು, ಕಾವೇರಿ ನೀರಾವರಿ ನಿಗಮ.

‘ಎಲ್ಲೆಡೆ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ಜಾನುವಾರುಗಳಿಗೆ ನೀರಿಲ್ಲದ ಪರಿಸ್ಥಿತಿ ಎದುರಾಗಿದೆ. ಸರ್ಕಾರ ಕೂಡಲೇ ಬೆಳೆ ಪರಿಹಾರ ನೀಡಬೇಕು. ನೀರಿನ ಸಮಸ್ಯೆಗೆ ಪರಿಹಾರ ಹುಡುಕಲು ಮುಂದಾಗಬೇಕು.’

ಪುಟ್ಟಸ್ವಾಮಿ, ಪಣ್ಣೇದೊಡ್ಡಿ.