ಒಂದು ಮತಕ್ಕಾಗಿ ಅಧಿಕಾರಿಗಳ 18 ಕಿ.ಮೀ ಕಾಲ್ನಡಿಗೆ ಯಾತ್ರೆ!

| Published : Apr 20 2024, 01:32 AM IST / Updated: Apr 20 2024, 07:05 AM IST

ಸಾರಾಂಶ

ವೃದ್ಧ ಮತದಾರನಿಗೆ ಮನೆಯಲ್ಲೇ ಮತದ ಅವಕಾಶ ನೀಡಲಾಗಿದ್ದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು 18 ಕಿ.ಮೀ ಕಾಲ್ನಡಿಗೆ ಮೂಲಕ ಬಂದು ಮತ ಹಾಕಿಸಿದ್ದಾರೆ.

ಇಡುಕ್ಕಿ: ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಹಿರಿಯ ನಾಗರಿಕರಿಗೆ ಮನೆಯಿಂದಲೇ ಮತದಾನಕ್ಕೆ ಚುನಾವಣಾ ಆಯೋಗ ಅವಕಾಶ ಮಾಡಿಕೊಟ್ಟಿದ್ದು, ಕೇರಳದಲ್ಲಿ ಆ ಪ್ರಕ್ರಿಯೆ ಭಾವನಾತ್ಮಕ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ.

ಇಡುಕ್ಕಿ ಜಿಲ್ಲೆಯ ಎಡಮಲಕ್ಕುಡಿಯ 92 ವರ್ಷದ ಶಿವಲಿಂಗಂ ಮನೆಯಿಂದಲೇ ಮತದಾನ ಮಾಡುವುದಕ್ಕೆ ಅರ್ಜಿ ಸಲ್ಲಿಸಿದ್ದರು. ಆಯೋಗ 9 ಅಧಿಕಾರಿಗಳನ್ನು ಈ ಪ್ರಕ್ರಿಯೆಗೆ ನೇಮಿಸಿತ್ತು. ಆ ವ್ಯಕ್ತಿಯ ಮತ ದಾಖಲಿಸಬೇಕು ಅಂದ್ರೆ ಗುಡ್ಡಗಾಡು ಪ್ರದೇಶಕ್ಕೆ ಸಾಗಬೇಕಿದ್ದ ಸವಾಲಿತ್ತು. ಅದರಂತೆ ಬುಧವಾರ ಮುಂಜಾನೆ 6 ಗಂಟೆಗೆ ಎಡಮಲಕ್ಕುಡಿಗೆ ಹೊರಟ ಅಧಿಕಾರಿಗಳು ಬರೋಬ್ಬರಿ 18 ಕಿ.ಮೀ ಗುಡ್ಡಗಾಡು ಪ್ರದೇಶದಲ್ಲಿ ಕಾಲ್ನಡಿಗೆ ಮೂಲಕವೇ ಸಾಗಿದ್ದಾರೆ. ಕಾಡು ಪ್ರಾಣಿಗಳ ಭೀತಿ ನಡುವೆ ಮೂವರು ಮಹಿಳಾ ಅಧಿಕಾರಿಗಳೂ ಸೇರಿದಂತೆ 9 ಜನರು ಮಧ್ಯಾಹ್ನ 1.15ರ ಸುಮಾರಿಗೆ ಶಿವಲಿಂಗಂ ಮನೆ ತಲುಪಿ ಮತ ದಾಖಲಿಸಿದ್ದಾರೆ.

ಎದ್ದೇಳುವುದಕ್ಕೆ , ಮಾತನಾಡುವುದಕ್ಕೂ ಆಗದ ಶಿವಲಿಂಗಂ ಮತ ಚಲಾಯಿಸಿದ ಬಳಿಕ ಭಾವುಕರಾದರು. ನಾನಾ ಕಾರಣಗಳಿಂದ ಮತದಾನದಿಂದ ತಪ್ಪಿಸಿಕೊಳ್ಳವರಿಗೆ ಈ ಹಿರಿ ಜೀವದ ಆಸಕ್ತಿಯೇ ಒಂದು ಸ್ಪೂರ್ತಿ.