ಪ್ರತಿಭೆ ಇದ್ದರೂ ಹೀಗೆ ನಿರ್ದೇಶಕರು ಯಾಕೆ ಖಾಲಿ ಕೂತಿದ್ದಾರೆ?

| Published : Apr 26 2024, 12:47 AM IST / Updated: Apr 26 2024, 05:36 AM IST

Film theater

ಸಾರಾಂಶ

ಕನ್ನಡದ ಬಳಷ್ಟು ನಿರ್ದೇಶಕರಿಗೆ ಕೆಲಸ ಇಲ್ಲ. ಪ್ರತಿಭೆ ಇದ್ದರೂ ಹೀಗೆ ನಿರ್ದೇಶಕರು ಯಾಕೆ ಖಾಲಿ ಕೂತಿದ್ದಾರೆ?

ನಿರ್ದೇಶಕನನ್ನು ಕ್ಯಾಪ್ಟನ್ ಆಫ್ ದಿ ಶಿಪ್ ಅನ್ನುತ್ತಾರೆ. ಚಿತ್ರವನ್ನು ರೂಪಿಸಿ, ವಿನ್ಯಾಸ ಮಾಡಿ, ನಿರ್ದೇಶಿಸಿ, ಸಂಕಲನ ಮಾಡಿಸಿ ಪ್ರೇಕ್ಷಕರ ಮುಂದಿಡುವುದು ನಿರ್ದೇಶಕನ ಹೊಣೆ. ಹೀಗಾಗಿ ಒಂದು ಸಿನಿಮಾ ಆರಂಭದಿಂದ ಕೊನೆತನಕ ನಿರ್ದೇಶಕ ಚಟುವಟಿಕೆಯಿಂದ ಇರುತ್ತಾನೆ. ಚಿತ್ರ ಮುಗಿದ ನಂತರ ಮುಂದಿನ ಚಿತ್ರದ ಸಿದ್ಧತೆಯಲ್ಲಿ ಕತೆಗಾರರ ಜತೆ ಚರ್ಚೆಯಲ್ಲಿರುತ್ತಾನೆ. ಅದು ಕೂಡ ಸುದ್ದಿಯಾಗುತ್ತಿರುತ್ತದೆ.

ಹಾಗಿದ್ದರೆ ಕನ್ನಡದ ನಿರ್ದೇಶಕರು ಏನು ಮಾಡುತ್ತಿದ್ದಾರೆ?

ಕಳೆದ ವರ್ಷ ಗೆದ್ದ ಸಿನಿಮಾಗಳ ಪಟ್ಟಿ ನೋಡಿದಾಗ ಥಟ್ಟನೆ ಕಾಣುವ ಹೆಸರುಗಳು ಇವು- ‘ಹಾಸ್ಟಲ್‌ ಹುಡುಗರು ಬೇಕಾಗಿದ್ದಾರೆ’ ಚಿತ್ರದ ನಿತಿನ್‌ ಕೃಷ್ಣಮೂರ್ತಿ, ‘ಡೇರ್‌ ಡೆವಿಲ್‌ ಮುಸ್ತಾಫಾ’ ನಿರ್ದೇಶಕ ಶಶಾಂಕ್‌ ಸೋಗಾಲ, ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರ ಕೊಟ್ಟ ಶಶಾಂಕ್‌, ‘ಘೋಸ್ಟ್‌’ ಚಿತ್ರದ ಶ್ರೀನಿ.

ಈ ಪೈಕಿ ನಿತಿನ್‌ ಕೃಷ್ಣಮೂರ್ತಿ ಹಾಗೂ ಶಶಾಂಕ್‌ ಸೋಗಲ್‌ ಸುದ್ದಿ ಇಲ್ಲ. ಶಶಾಂಕ್‌ ಹೊಸ ಚಿತ್ರದ ಕಾಲ್‌ಶೀಟಿಗಾಗಿ ಉಪೇಂದ್ರ ಹಿಂದೆ ಬಿದ್ದಿದ್ದಾರೆ ಎನ್ನುವ ಸುದ್ದಿ ಇದೆ. ಶ್ರೀನಿ ಮುಂದಿನ ಚಿತ್ರದ ಬಗ್ಗೆ ಯಾವ ಮಾಹಿತಿಯೂ ಇಲ್ಲ. ಬಡವ ರ್‍ಯಾಸ್ಕಲ್ ಸಿನಿಮಾದ ನಿರ್ದೇಶಕ ಶಂಕರ್ ಗುರು ಮುಂದಿನ ಚಿತ್ರ ಕೈಗೆತ್ತಿಕೊಂಡಿಲ್ಲ.

ಯಶಸ್ಸಿನ ಚಿತ್ರಗಳನ್ನು ಕೊಟ್ಟ ನಿರ್ದೇಶಕರ ಕತೆ ಹೀಗಾದರೆ ಸೋಲೋ, ಗೆಲುವೋ ಸದಾ ಸಿನಿಮಾ ಚಟುವಟಿಕೆಗಳಿಂದ ಸದ್ದು ಮಾಡುತ್ತಿದ್ದವರು ಭರ್ಜರಿ ಚೇತನ್‌, ಹರ್ಷ, ನಂದಕಿಶೋರ್‌, ಎಂ ಡಿ ಶ್ರೀಧರ್‌, ಪವನ್‌ ಒಡೆಯರ್‌, ಲೂಸಿಯಾ ಪವನ್‌ಕುಮಾರ್‌, ಪ್ರೀತಮ್‌ ಗುಬ್ಬಿ, ಅನಿಲ್‌ ಕುಮಾರ್‌, ಅನೂಪ್‌ ಭಂಡಾರಿ, ಚಂದ್ರಶೇಖರ್‌ ಬಂಡಿಯಪ್ಪ, ಹೆಬ್ಬುಲಿ ಕೃಷ್ಣ, ಹರಿಸಂತೋಷ್‌, ಅಯೋಗ್ಯ ಮಹೇಶ್‌- ಈ ನಿರ್ದೇಶಕರ ಸದ್ಯದ ಚಟುವಟಿಕೆಗಳ ಬಗ್ಗೆ ಯಾವ ಮಾಹಿತಿಯೂ ಇಲ್ಲ. ಈ ಪೈಕಿ ಚೇತನ್ ‘ಜೇಮ್ಸ್‌’ ಚಿತ್ರ ಮಾಡಿದರೂ ಸ್ಟಾರ್‌ಗಳ ಕಾಲ್‌ಶೀಟ್ ಸಿಗದೇ ಹೊಸಬರಿಗೆ ಸಿನಿಮಾ ಮಾಡಿದರು. ಹರ್ಷ ತೆಲುಗಿಗೆ, ನಂದಕಿಶೋರ್‌ ಮಯಾಳಂಗೆ, ಕಿರಣ್‌ ರಾಜ್‌, ಪವನ್‌ ಒಡೆಯರ್‌ ಹಾಗೂ ಹರಿಸಂತೋಷ್‌ ಹಿಂದಿಗೆ ಹೋಗಿದ್ದಾರೆ ಎಂಬ ಸುದ್ದಿಯ ನಂತರದ ಕತೆ ಪತ್ತೆಯಿಲ್ಲ. ಹೆಬ್ಬುಲಿ ಕೃಷ್ಣ ಅವರ ‘ಕಾಳಿ’ ಚಿತ್ರ ಟೀಸರ್ ಬಂದ ನಂತರ ಅಲ್ಲಿಗೇ ನಿಂತಿದೆ.

ಇವರಲ್ಲದೆ ವಿಭಿನ್ನ ಚಿತ್ರಗಳನ್ನು ಮಾಡುವ ಜಯತೀರ್ಥ, ಮಂಸೋರೆ, ಕೆ ಎಂ ಚೈತನ್ಯ, ಪಾಲಾರ್‌ ಚಿತ್ರದ ಮೂಲಕ ಗಮನ ಸೆಳೆದ ಜೀವ ನವೀನ್‌, ಪೃಥ್ವಿ ಕೊಣನೂರು (ಹದಿನೇಳೆಂಟು) ಮುಂತಾದವರ ಕೈಯಲ್ಲಿ ಸ್ಟಾರ್‌ಗಳ ಕಾಲ್‌ಶೀಟ್‌ ಇಲ್ಲ, ನಿರ್ಮಾಪಕರೂ ಇಲ್ಲ. ಇದೇ ನಿರ್ದೇಶಕರ ಸಾಲಿಗೆ ಸೇರುವ ರಾಘು ಶಿವಮೊಗ್ಗ ಹಾಗೂ ‘ರಾಮ ರಾಮ ರೇ’ ಖ್ಯಾತಿಯ ಸತ್ಯಪ್ರಕಾಶ್‌ ನಟನೆಯಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಪಾಠ ಮಾಡುವ ಜತೆಗೆ ಆಗಾಗ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದ ಜಟ್ಟಗಿರಿರಾಜ್‌ ತುಂಬಾ ವರ್ಷಗಳ ನಂತರ ‘ರಾಮರಸ’ ಚಿತ್ರದ ಮೂಲಕ ಡೈರೆಕ್ಟರ್‌ ಕುರ್ಚಿಯಲ್ಲಿ ಕೂತಿದ್ದಾರೆ.

ಇಬ್ಬರು ಸ್ಟಾರ್‌ ನಟರನ್ನು ಹಾಕಿಕೊಂಡು ‘ಮಫ್ತಿ’ ಸಿನಿಮಾ ಮಾಡಿದ ನಿರ್ದೇಶಕ ನರ್ತನ್‌, ಸ್ಟಾರ್‌ ನಟನಿಗಾಗಿ ನಾಲ್ಕು ವರ್ಷ ಕಾದು ಕಾದು ಸುಸ್ತಾಗಿ ಎಂದೋ ಶುರು ಮಾಡಬೇಕಿದ್ದ ‘ಭೈರತಿ ರಣಗಲ್‌’ ಚಿತ್ರಕ್ಕೆ ಚಾಲನೆ ಕೊಟ್ಟರೂ ಅದು ಯಾವಾಗ ಬರುತ್ತೋ ಗೊತ್ತಿಲ್ಲ. ಇವರ ಹೊರತಾಗಿಯೂ ಕೆಲವು ನಿರ್ದೇಶಕರು ಆಯಾ ಹೀರೋಗಳ ಟೆರಿಟರಿಗೆ ಸೀಮಿತವಾಗಿದ್ದಾರೆ.

ಒಂದು ಕಾಲದಲ್ಲಿ ನಿರ್ದೇಶಕರು ಸಿನಿಮಾ ಗೆಲ್ಲಿಸುತ್ತಿದ್ದರು. ಈಗ ಅವರಿಗೆ ಆ ಶಕ್ತಿಯಿಲ್ಲ ಅಂತ ಸ್ಟಾರ್‌ಗಳು ಭಾವಿಸಿದ್ದಾರೆ. ಸ್ಟಾರ್‌ ಅಂದುಕೊಂಡದ್ದೆಲ್ಲ ನಿಜವೆಂದು ನಿರ್ಮಾಪಕರು ಅಂದುಕೊಂಡಿದ್ದಾರೆ. ಓಟಿಟಿಗಳು ಕನ್ನಡ ಚಿತ್ರವನ್ನು ಕಣ್ಣೆತ್ತಿಯೂ ನೋಡುತ್ತಿಲ್ಲ.

ಇಂಥ ಹೊತ್ತಲ್ಲಿ ಕನ್ನಡದ ಪ್ರತಿಭಾವಂತ ನಿರ್ದೇಶಕರ ಬಹುದೊಡ್ಡ ಬಳಗ, ಶೂನ್ಯ ನಾಳೆಗಳನ್ನು ಮುಂದಿಟ್ಟುಕೊಂಡು ಕುಳಿತಿದೆ. ಅವರ ಪ್ರತಿಭೆಯನ್ನು ಸಮರ್ಥವಾಗಿ ಬಳಸಿಕೊಳ್ಳದೇ ಇರುವುದೇ ಕನ್ನಡ ಚಿತ್ರಗಳ ಸೋಲಿಗೆ ಕಾರಣ. ಇವೆಲ್ಲದರ ನಡುವೆ ವರ್ಷಕ್ಕೆ ಹತ್ತರಿಂದ ಹನ್ನೆರಡು ನಿರ್ದೇಶಕರು ಚಿತ್ರರಂಗಕ್ಕೆ ಸೇರ್ಪಡೆ ಆಗುತ್ತಿದ್ದಾರೆ.

ನಿರ್ದೇಶಕರು ಏನಂತಾರೆ?

ಸಿನಿಮಾ ಮಾಡುವ ಆಸೆಯಂತೂ ದೂರ ಆಗಿಲ್ಲ. ಹಿಂದೆ ಒಳ್ಳೆಯ ಸಿನಿಮಾ ಬಂದಾಗ ಜನ ಥೇಟರಿಗೆ ಬಂದು ನೋಡುತ್ತಿದ್ದರು. ಲೂಸಿಯಾ, ಯೂ ಟರ್ನ್‌ನಂತಹ ಚಿತ್ರಗಳು ಗೆದ್ದಿದ್ದು ಹೀಗೆಯೇ. ಕೊರೋನಾ ನಂತರ ಒಳ್ಳೆಯ ಚಿತ್ರಕ್ಕೆ ಜನ ಬರುತ್ತಾರೆಂಬ ನಂಬಿಕೆ ಇಲ್ಲ. ದುಡ್ಡು ಹಾಕಿದ ನಿರ್ಮಾಪಕರಿಗೆ ನಾವು ಯಾವುದೇ ಭರವಸೆ ಕೊಡಲು ಆಗುತ್ತಿಲ್ಲ. ನಟರು ವರ್ಷಕ್ಕೆ ಮೂರು ಸಿನಿಮಾ ಮಾಡಬೇಕು. ಆಗ ಮಾತ್ರ ಈಗಿರುವ ಸಮಸ್ಯೆಗೆ ಪರಿಹಾರ ಸಿಗುತ್ತದೆ.

- ಮಂಸೋರೆ, ನಿರ್ದೇಶಕ

ಕನ್ನಡದಲ್ಲಿ ನನ್ನ ನಿರ್ದೇಶನದ ಸಿನಿಮಾ ಬಂದು. ಹಿಂದಿಗೆ ಹೋಗುವ ಮುನ್ನ ಕನ್ನಡದಲ್ಲಿ ಒಪ್ಪಿಕೊಂಡ 2-3 ಚಿತ್ರಗಳ ಅಡ್ವಾನ್ಸ್ ವಾಪಸ್ಸು ಕೊಟ್ಟಿದ್ದೇನೆ. ಯಾಕೆಂದರೆ ‍‘ಕಾಲೇಜು ಕುಮಾರ’ ಸಿನಿಮಾ ಮಾಡುವಾಗ ಒಳ್ಳೆಯ ಕತೆ, ಅದಕ್ಕೂ ತಕ್ಕ ಹೀರೋ ಅಂತ ಮಾತ್ರ ಯೋಚಿಸುತ್ತಿದ್ದ ನಿರ್ಮಾಪಕರ ಮನಸ್ಸು ಆಗ ಬದಲಾಗಿದೆ. ‘ನಾನು ಹಾಕೋ ಹಣಕ್ಕೆ ಏನ್‌ ಸೇಪ್‌ ಇದೆ’ ಎನ್ನುವ ಪ್ರಶ್ನೆ ನಿರ್ದೇಶಕರನ್ನು ಖಾಲಿ ಕೂರಿಸಿದೆ. ರೆಗ್ಯುಲರ್‌ ನಿರ್ಮಾಪಕರು ಸಿನಿಮಾ ನಿರ್ಮಿಸುತ್ತಿಲ್ಲ. ಮಲಯಾಳಂ ಚಿತ್ರರಂಗ ಈ ನಾಲ್ಕು ತಿಂಗಳಲ್ಲಿ 600 ಕೋಟಿ ವಹಿವಾಟು ನೋಡಿದೆ. ನಾವು ಏನು ನೋಡಿದ್ದೇವೆ?

ಹರಿಸಂತು, ನಿರ್ದೇಶಕ