ಜಾಲಹಳ್ಳಿ 2ನೇ ಹಂತ ಕದಂಬ ಹೋಟೆಲ್‌ಗೆ ಬಾಂಬ್ ಬೆದರಿಕೆ

| Published : Apr 23 2024, 01:45 AM IST / Updated: Apr 23 2024, 05:39 AM IST

ಸಾರಾಂಶ

ನಗರದ ಮತ್ತೊಂದು ಜನಸಂದಣಿ ತುಂಬಿರುವ ಹೋಟೆಲ್‌ಗೆ ಬಾಂಬ್ ಬೆದರಿಕೆ ಪತ್ರ ಬಂದು ಸೋಮವಾರ ಕೆಲ ಕಾಲ ಆತಂಕ ಸೃಷ್ಟಿಸಿದ ಘಟನೆ ಜಾಲಹಳ್ಳಿ ಸಮೀಪ ನಡೆಯಿತು.

 ಬೆಂಗಳೂರು : ನಗರದ ಮತ್ತೊಂದು ಜನಸಂದಣಿ ತುಂಬಿರುವ ಹೋಟೆಲ್‌ಗೆ ಬಾಂಬ್ ಬೆದರಿಕೆ ಪತ್ರ ಬಂದು ಸೋಮವಾರ ಕೆಲ ಕಾಲ ಆತಂಕ ಸೃಷ್ಟಿಸಿದ ಘಟನೆ ಜಾಲಹಳ್ಳಿ ಸಮೀಪ ನಡೆಯಿತು.

ಜಾಲಹಳ್ಳಿ ಎರಡನೇ ಹಂತದ ಕದಂಬ ಹೋಟೆಲ್‌ಗೆ ಬೆದರಿಕೆ ಬಂದಿದ್ದು, ಜಾಲಹಳ್ಳಿ ಠಾಣೆಗೆ ಏ.20 ಹಾಗೂ 22ರಂದು ಹೋಟೆಲ್‌ನಲ್ಲಿ ಬಾಂಬ್ ಇಡುವುದಾಗಿ ಕಿಡಿಗೇಡಿಯೊಬ್ಬ ಪತ್ರ ಕಳುಹಿಸಿದ್ದ. ಈ ಪತ್ರ ನೋಡಿದ ಕೂಡಲೇ ಎಚ್ಚೆತ್ತ ಪೊಲೀಸರು, ಹೋಟೆಲ್‌ಗೆ ತೆರಳಿ ತೀವ್ರ ಪರಿಶೀಲನೆ ನಡೆಸಿ ಹುಸಿ ಬೆದರಿಕೆ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ಭೀತಿ ವಾತಾವರಣ ನಿವಾರಣೆಯಾಗಿದೆ.

ಕುಂದಲಹಳ್ಳಿ ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಕೃತ್ಯ ಮರೆಯುವ ಮುನ್ನವೇ ಮತ್ತೊಂದು ಜನಪ್ರಿಯ ಹೋಟೆಲ್‌ಗೆ ಬೆದರಿಕೆ ಪತ್ರ ಬಂದ ಸಂಗತಿ ಜನರಲ್ಲಿ ಆತಂಕಕ್ಕೂ ಕಾರಣವಾಗಿತ್ತು.

ಪತ್ರದಲ್ಲಿ ಏನಿದೆ?

ಜಾಲಹಳ್ಳಿ ಠಾಣಾಧಿಕಾರಿ ಹೆಸರಿಗೆ ಮಧ್ಯಾಹ್ನ 12 ಗಂಟೆಗೆ ಅಂಚೆ ಮೂಲಕ ಪತ್ರ ಬಂದಿದೆ. ಆ ಪತ್ರವನ್ನು ತೆರೆದು ಇನ್‌ಸ್ಪೆಕ್ಟರ್ ಓದಿದಾಗ ಅದರಲ್ಲಿ ‘ನೀವು ಪೊಲೀಸರು ಸರಿಯಿಲ್ಲ. ಜನರಿಗೆ ನೋವಿಗೆ ಸ್ಪಂದಿಸುತ್ತಿಲ್ಲ. ಭ್ರಷ್ಟಾಚಾರ ಅತಿಯಾಗಿದೆ’ ಎಂದು ಆರೋಪಿಸಿ ಕಿಡಿಗೇಡಿ ಬರೆದಿದ್ದ. ಅಲ್ಲದೆ ಜಾಲಹಳ್ಳಿ 2ನೇ ಹಂತದ ಕದಂಬ ಹೋಟೆಲ್‌ಗೆ ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಆತ ಉಲ್ಲೇಖಿಸಿದ್ದ. ಈ ಪತ್ರವನ್ನು ಗಂಭೀರವಾಗಿ ಪರಿಗಣಿಸಿದ ಜಾಲಹಳ್ಳಿ ಪೊಲೀಸರು, ಕೂಡಲೇ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಬಳಿಕ ತಡ ಮಾಡದೆ ಹೋಟೆಲ್‌ಗೆ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳ ಜತೆ ತೆರಳಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ಅಂತಿಮವಾಗಿ ಹುಸಿ ಬೆದರಿಕೆ ಕರೆ ಎಂಬುದು ಗೊತ್ತಾಗಿದೆ. ಈ ಪತ್ರದ ಬರೆದ ಕಿಡಿಗೇಡಿ ಪತ್ತೆಗೆ ತನಿಖೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.