ಟಿ20 ವಿಶ್ವಕಪ್‌ಗೆ ಇಂದು ಭಾರತ ತಂಡ ಪ್ರಕಟ ನಿರೀಕ್ಷೆ: ನಾಳೆ ಡೆಡ್‌ಲೈನ್‌

| Published : Apr 30 2024, 02:05 AM IST / Updated: Apr 30 2024, 04:23 AM IST

ಸಾರಾಂಶ

ಭಾರತ ತಂಡದ ಆಯ್ಕೆ ಬಗ್ಗೆ ಅಹಮದಾಬಾದ್‌ನಲ್ಲಿ ಇಂದು ಆಯ್ಕೆ ಸಮಿತಿ ಸಭೆ ನಡೆಸಲಿದೆ. ನಾಳೆ ಅಂತಿಮ ತಂಡ ಪ್ರಕಟಗೊಳ್ಳುವ ನಿರೀಕ್ಷೆಯಿದೆ.

ನ್ಯೂಯಾರ್ಕ್‌: ಜೂ.1ರಿಂದ 29ರ ವರೆಗೆ ಅಮೆರಿಕ ಹಾಗೂ ವೆಸ್ಟ್‌ಇಂಡೀಸ್‌ನಲ್ಲಿ ನಡೆಯಲಿರುವ ಬಹುನಿರೀಕ್ಷಿತ ಟಿ20 ವಿಶ್ವಕಪ್‌ಗೆ ತಂಡವನ್ನು ಪ್ರಕಟಿಸಲು ಮೇ 1 ಕೊನೆ ದಿನವಾಗಿದೆ. ಹೀಗಾಗಿ ಭಾರತ ಸೇರಿದಂತೆ ಕೆಲ ತಂಡಗಳು ಮಂಗಳವಾರ(ಏ.30) ಆಟಗಾರರ ಪಟ್ಟಿ ಪ್ರಕಟಿಸುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ.ಟೂರ್ನಿಯಲ್ಲಿ 20 ತಂಡಗಳು ಪಾಲ್ಗೊಳ್ಳಲಿದ್ದು, ನ್ಯೂಜಿಲೆಂಡ್‌ ಹೊರತುಪಡಿಸಿ ಇತರೆಲ್ಲಾ ತಂಡಗಳು ಇನ್ನಷ್ಟೇ ತಂಡ ಪ್ರಕಟಿಸಬೇಕಿದೆ.

 ಟೀಂ ಇಂಡಿಯಾದ ಆಯ್ಕೆಗಾಗಿ ಮಂಗಳವಾರ ಆಯ್ಕೆ ಸಮಿತಿಯು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಅವರ ಜೊತೆ ಅಹಮದಾಬಾದ್‌ನಲ್ಲಿ ಸಭೆ ನಡೆಸಲಿದ್ದಾರೆ. ಬುಧವಾರ ತಂಡ ಅಧಿಕೃತವಾಗಿ ಪ್ರಕಟಗೊಳ್ಳುವ ನಿರೀಕ್ಷೆಯಿದೆ.

ಐಪಿಎಲ್‌ನಲ್ಲಿ ಮಿಂಚಿರುವ ಆಟಗಾರರನ್ನು ನೇರವಾಗಿ ವಿಶ್ವಕಪ್‌ಗೆ ಆಯ್ಕೆ ಮಾಡುವ ಬದಲು ಈಗಾಗಲೇ ಭಾರತ ತಂಡದಲ್ಲಿ ಆಡಿರುವ ಹಾಗೂ ಸದ್ಯ ಉತ್ತಮ ಲಯದಲ್ಲಿರುವ ಆಟಗಾರರನ್ನೇ ಆಯ್ಕೆ ಮಾಡಲು ಒಲವು ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. 

ಹೀಗಾಗಿ ಹೊಸ ಮುಖಗಳಿಗೆ ಅವಕಾಶ ಸಾಧ್ಯತೆ ಕಡಿಮೆ.ವಿಕೆಟ್‌ ಕೀಪರ್‌ಗಳಾಗಿ ಸಂಜು ಸ್ಯಾಮ್ಸನ್‌, ರಿಷಭ್‌ ಪಂತ್‌ ಇಬ್ಬರೂ ಆಯ್ಕೆಯಾಗುವ ಸಾಧ್ಯತೆಯಿದೆ. ಇದೇ ವೇಳೆ ಹಾರ್ದಿಕ್‌ ಪಾಂಡ್ಯ ಬದಲು ಪಂತ್‌ಗೆ ಉಪನಾಯಕತ್ವ ಸಿಗಬಹುದು ಎನ್ನಲಾಗುತ್ತಿದೆ. ಜೊತೆಗೆ ಕೆ.ಎಲ್‌.ರಾಹುಲ್‌, ಯಜುವೇಂದ್ರ ಚಹಲ್‌ ಕೂಡಾ ವಿಶ್ವಕಪ್‌ ತಂಡದ ಆಯ್ಕೆ ರೇಸ್‌ನಲ್ಲಿದ್ದಾರೆ.

ಭಾರತದ ಸಂಭಾವ್ಯರ ಪಟ್ಟಿ

ರೋಹಿತ್‌ ಶರ್ಮಾ(ನಾಯಕ), ಯಶಸ್ವಿ ಜೈಸ್ವಾಲ್‌, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್‌, ಸಂಜು ಸ್ಯಾಮ್ಸನ್‌, ರಿಷಭ್‌ ಪಂತ್‌, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್‌ ಪಟೇಲ್‌, ಶಿವಂ ದುಬೆ, ರಿಂಕು ಸಿಂಗ್‌, ಕುಲ್ದೀಪ್‌ ಯಾದವ್‌, ಜಸ್‌ಪ್ರೀತ್‌ ಬೂಮ್ರಾ, ಅರ್ಶ್‌ದೀಪ್‌ ಸಿಂಗ್‌, ಆವೇಶ್‌ ಖಾನ್‌/ಮೊಹಮದ್‌ ಸಿರಾಜ್‌.

ಆಯ್ಕೆ ರೇಸ್‌ನಲ್ಲಿರುವವರು: ಕೆ.ಎಲ್‌.ರಾಹುಲ್‌, ಯಜುವೇಂದ್ರ ಚಹಲ್‌, ರವಿ ಬಿಷ್ಣೋಯ್‌, ಸಂದೀಪ್‌ ಶರ್ಮಾ.