ಥಾಮಸ್‌ ಕಪ್‌: ಹಾಲಿ ಚಾಂಪಿಯನ್‌ ಭಾರತ ಕ್ವಾರ್ಟರ್‌ಗೆ ಎಂಟ್ರಿ

| Published : Apr 30 2024, 02:01 AM IST / Updated: Apr 30 2024, 04:25 AM IST

ಸಾರಾಂಶ

ಸತತ 2 ಪಂದ್ಯಗಳನ್ನು ಗೆದ್ದಿರುವ ಭಾರತ ಬುಧವಾರ ಗುಂಪು ಹಂತದ ಕೊನೆ ಪಂದ್ಯದಲ್ಲಿ 14 ಬಾರಿ ಚಾಂಪಿಯನ್‌ ಇಂಡೋನೇಷ್ಯಾ ವಿರುದ್ಧ ಸೆಣಸಾಡಲಿದೆ.

ಚೆಂಗ್ಡು(ಚೀನಾ): ಹಾಲಿ ಚಾಂಪಿಯನ್‌ ಭಾರತ ಥಾಮಸ್‌ ಕಪ್‌ ಪುರುಷರ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಟ್ಟಿದೆ. ಸತತ 2ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಭಾರತ, ಸೋಮವಾರ ‘ಸಿ’ ಗುಂಪಿನ 2ನೇ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ 5-0 ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿತು.

ಆರಂಭಿಕ ಪಂದ್ಯದಲ್ಲಿ ಥಾಯ್ಲೆಂಡನ್ನು 4-1ರಿಂದ ಮಣಿಸಿದ್ದ ಭಾರತ ಮತ್ತೊಮ್ಮೆ ಪ್ರಾಬಲ್ಯ ಸಾಧಿಸಿತು. ಮೊದಲ ಸಿಂಗಲ್ಸ್‌ನಲ್ಲಿ ಪ್ರಣಯ್‌ ಅವರು ಹ್ಯಾರಿ ಹುವಾಂಗ್‌ರನ್ನು ಸೋಲಿಸಿದರೆ, ಡಬಲ್ಸ್‌ನಲ್ಲಿ ಸಾತ್ವಿಕ್‌-ಚಿರಾಗ್‌ ಶೆಟ್ಟಿ ಜೋಡಿ ಬೆನ್‌ ಲೇನ್‌-ಸೀನ್‌ ವೆಂಡಿ ಜೋಡಿಯನ್ನು ಮಣಿಸಿತು. 

ಮಾಜಿ ವಿಶ್ವ ನಂ.1 ಕಿದಂಬಿ ಶ್ರೀಕಾಂತ್‌, ನದೀಮ್ ಡಾಲ್ವಿ ವಿರುದ್ಧ ಗೆದ್ದರೆ, ಧ್ರುವ್‌-ಅರ್ಜುನ್‌ ಜೋಡಿ ರೋರಿ ಈಸ್ಟನ್‌-ಅಲೆಕ್ಸ್‌ ಗ್ರೀನ್‌ರನ್ನು ಸೋಲಿಸಿತು. ಕೊನೆ ಸಿಂಗಲ್ಸ್‌ನಲ್ಲಿ ಚೋಲನ್‌ ಕಯಾನ್‌ ವಿರುದ್ಧ ಕಿರಣ್‌ ಜಾರ್ಜ್‌ ಗೆದ್ದು ಅಂತರವನ್ನು 5-0ಗೆ ಏರಿಸಿದರು.ಭಾರತ ಬುಧವಾರ ಗುಂಪು ಹಂತದ ಕೊನೆ ಪಂದ್ಯದಲ್ಲಿ 14 ಬಾರಿ ಚಾಂಪಿಯನ್‌ ಇಂಡೋನೇಷ್ಯಾ ವಿರುದ್ಧ ಸೆಣಸಾಡಲಿದೆ.

ಮತ್ತೊಂದೆಡೆ ಈಗಾಗಲೇ ಸತತ 2 ಗೆಲುವಿನ ಮೂಲಕ ಕ್ವಾರ್ಟರ್‌ ಫೈನಲ್‌ ಸ್ಥಾನ ಖಚಿತಪಡಿಸಿಕೊಂಡಿರುವ ಭಾರತ ಮಹಿಳಾ ತಂಡ, ಊಬರ್‌ ಕಪ್‌ ಟೂರ್ನಿಯ ಗುಂಪು ಹಂತದ ಕೊನೆ ಪಂದ್ಯದಲ್ಲಿ ಮಂಗಳವಾರ ಚೀನಾ ವಿರುದ್ಧ ಸೆಣಸಾಡಲಿದೆ. ಟೂರ್ನಿಯ ಇತಿಹಾಸದಲ್ಲಿ ಈ ವರೆಗೂ ಫೈನಲ್‌ಗೇರದ ಭಾರತ, ಈ ಬಾರಿ ಪ್ರಶಸ್ತಿ ಬರ ನೀಗಿಸುವ ನಿರೀಕ್ಷೆಯಲ್ಲಿದೆ.