ಟೈಟಾನ್ಸ್‌ ಚಾಲೆಂಜ್‌ ಗೆಲ್ಲಲು ಆರ್‌ಸಿಬಿ ಕಾತರ

| Published : Apr 28 2024, 01:15 AM IST / Updated: Apr 28 2024, 04:19 AM IST

ಸಾರಾಂಶ

ಸನ್‌ರೈಸರ್ಸ್‌ನ ಸೋಲಿಸಿ ಆತ್ಮವಿಶ್ವಾಸದಲ್ಲಿರುವ ಆರ್‌ಸಿಬಿಗೆ ಮತ್ತೊಂದು ಸವಾಲು. ಸಂಘಟಿತ ಆಟವಾಡಿ ಪಂದ್ಯ ಗೆಲ್ಲಲು ಮಾಸ್ಟರ್‌ಪ್ಲ್ಯಾನ್‌. ಲಯಕ್ಕೆ ಮರಳಿದ ರಜತ್‌, ಗ್ರೀನ್‌, ಜ್ಯಾಕ್ಸ್‌ ಮೇಲೆ ವಿಶ್ವಾಸ. ಈ ಪಂದ್ಯ ಸೋತರೆ ಪ್ಲೇ-ಆಫ್‌ ಬಾಗಿಲು ಬಂದ್‌. ಟೈಟಾನ್ಸ್‌ಗೆ 5ನೇ ಜಯದ ಗುರಿ.

ಅಹಮದಾಬಾದ್‌: ಹೆಚ್ಚೂ ಕಡಿಮೆ ಪ್ಲೇ-ಆಫ್‌ ರೇಸ್‌ನಿಂದ ಹೊರಬಿತ್ತು ಅನ್ನುವಷ್ಟರಲ್ಲಿ ಎಚ್ಚೆತ್ತು, ಬಲಿಷ್ಠ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಗೆದ್ದು ಬೀಗಿರುವ ಆರ್‌ಸಿಬಿ ಪಾಳಯದಲ್ಲಿ ಈಗ ಗೆಲುವಿನ ಆತ್ಮವಿಶ್ವಾಸ, ಮಂದಹಾಸ ಮೂಡಿದೆ. ಆದರೆ ಅದನ್ನು ಉಳಿಸಿಕೊಳ್ಳಲಿದೆಯೇ ಎಂಬ ಕುತೂಹಲ ಅಭಿಮಾನಿಗಳದ್ದು. ಇದಕ್ಕೆ ಭಾನುವಾರ ಗುಜರಾತ್‌ ಟೈಟಾನ್ಸ್‌ ವಿರುದ್ಧ ನಿಗದಿಯಾಗಿರುವ ಪಂದ್ಯದ ಬಳಿಕ ಉತ್ತರ ಸಿಗಲಿದೆ.

ಬ್ಯಾಟರ್‌ಗಳು ಅಬ್ಬರಿಸಿದರೆ ಬೌಲರ್‌ಗಳು ಕೈಕೊಡುವುದು, ಬೌಲರ್‌ಗಳು ಮಿಂಚಿದರೆ ಬ್ಯಾಟರ್‌ಗಳು ಸಪ್ಪೆ. ಇದು ಪ್ರತಿ ಬಾರಿ ಆರ್‌ಸಿಬಿ ಎದುರಿಸುವ ಸಮಸ್ಯೆ. ಆದರೆ ಈ ಬಾರಿ ಎರಡೂ ವಿಭಾಗವೂ ತಂಡದ ಕೈಹಿಡಿದಿದ್ದು ಕಳೆದ ಸನ್‌ರೈಸರ್ಸ್‌ ವಿರುದ್ಧ ಪಂದ್ಯದಲ್ಲಿ ಮಾತ್ರ. ಗುಜರಾತ್‌ ವಿರುದ್ಧವೂ ಸಂಘಟಿತ ಆಟವಾಡಿ ಪಂದ್ಯ ಗೆಲ್ಲಲು ಆರ್‌ಸಿಬಿ ನೋಡುತ್ತಿದೆ. 9ರಲ್ಲಿ ಕೇವಲ 2ರಲ್ಲಿ ಗೆದ್ದಿರುವ ತಂಡ ಈ ಪಂದ್ಯದಲ್ಲಿ ಸೋತರೆ ಪ್ಲೇ-ಆಫ್‌ ಹಾದಿ ಮುಚ್ಚುವುದು ಖಚಿತ.

ರಜತ್‌ ಲಯಕ್ಕೆ: ವಿರಾಟ್‌ ಕೊಹ್ಲಿ(430 ರನ್‌) ಆರೆಂಜ್‌ ಕ್ಯಾಪ್‌ ತನ್ನಲ್ಲೇ ಇಟ್ಟುಕೊಂಡಿದ್ದರೂ ಅವರ ನಿಧಾನ ಆಟ ತಂಡಕ್ಕೆ ಮತ್ತು ಅವರ ಟಿ20 ಭವಿಷ್ಯಕ್ಕೆ ಮುಳುವಾಗುವಂತಿದೆ. ಆದರೆ ರಜತ್‌ ಪಾಟೀದಾರ್‌, ಕ್ಯಾಮರೂನ್‌ ಗ್ರೀನ್‌, ವಿಲ್‌ ಜ್ಯಾಕ್ಸ್‌ ತಡವಾಗಿಯಾದರೂ ಲಯಕ್ಕೆ ಮರಳಿರುವುದು ತಂಡದ ಪ್ಲಸ್‌ ಪಾಯಿಂಟ್‌. ಇವರ ಜೊತೆ ನಾಯಕ ಫಾಫ್‌ ಡು ಪ್ಲೆಸಿಯೂ ಮಿಂಚಬೇಕಾದ ಅಗತ್ಯವಿದೆ.

ಇನ್ನು ಬೌಲರ್‌ಗಳ ಬಗ್ಗೆ ಯೋಚಿಸುವುದೇ ಬಿಟ್ಟಿದ್ದ ಫ್ರಾಂಚೈಸಿಯ ಕಳೆದ ಪಂದ್ಯದ ಬಳಿಕ ಮತ್ತೆ ವಿಶ್ವಾಸವಿಟ್ಟಿದೆ. ಸಿರಾಜ್‌, ದಯಾಳ್‌ ವಿಕೆಟ್‌ ಪಡೆಯದಿದ್ದರೂ ದುಬಾರಿಯಾಗದಿದ್ದರೆ ಸಾಕು ಎಂಬಂತಿದ್ದು, ಹಿರಿಯ ಸ್ಪಿನ್ನರ್‌ ಕರ್ಣ್‌ ಶರ್ಮಾ ಜೊತೆ ಜ್ಯಾಕ್ಸ್‌, ಸ್ವಪ್ನಿಲ್ ಸಿಂಗ್‌ ಮತ್ತೊಮ್ಮೆ ತಂಡಕ್ಕೆ ಆಕ್ಸಿಜನ್‌ ತುಂಬುವ ವಿಶ್ವಾಸದಲ್ಲಿದ್ದಾರೆ.

ಅಸ್ಥಿರ ಆಟ: ಅತ್ತ ಗುಜರಾತ್‌ ಸ್ಥಿತಿ ಕೂಡಾ ಶೋಚನೀಯವಾಗಿದ್ದು, ಟೂರ್ನಿಯಲ್ಲಿ ಸತತವಾಗಿ ಎರಡು ಪಂದ್ಯ ಗೆದ್ದೇ ಇಲ್ಲ. 9ರಲ್ಲಿ 4 ಪಂದ್ಯದಲ್ಲಿ ಜಯಿಸಿರುವ ತಂಡಕ್ಕೆ ಪ್ಲೇ-ಆಫ್‌ ರೇಸ್‌ನಲ್ಲಿರಬೇಕಿದ್ದರೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯ. ಪ್ರಮುಖರಾದ ಡೇವಿಡ್‌ ಮಿಲ್ಲರ್‌, ರಾಹುಲ್‌ ತೆವಾಟಿಯಾ ಕಳಪೆ ಪ್ರದರ್ಶನ ನೀಡುತ್ತಿದ್ದು, ಬೌಲರ್‌ಗಳು ಮೊಚು ಕಳೆದುಕೊಂಡಿದ್ದಾರೆ. ಶುಭ್‌ಮನ್‌ ಗಿಲ್‌, ಸಾಯಿ ಸುದರ್ಶನ್‌ ಮಿಂಚುತ್ತಿದ್ದರೂ, ಇತರರಿಂದ ಬೆಂಬಲ ಸಿಗದಿದ್ದರೆ ಮತ್ತೊಂದು ಸೋಲು ಕಟ್ಟಿಟ್ಟ ಬುತ್ತಿ.

ಒಟ್ಟು ಮುಖಾಮುಖಿ: 03 

ಆರ್‌ಸಿಬಿ: 01ಟೈಟಾನ್ಸ್‌: 01

ಸಂಭವನೀಯ ಆಟಗಾರರ ಪಟ್ಟಿ 

ಆರ್‌ಸಿಬಿ: ಕೊಹ್ಲಿ, ಡು ಪ್ಲೆಸಿ(ನಾಯಕ), ಜ್ಯಾಕ್ಸ್‌, ರಜತ್‌, ಗ್ರೀನ್‌, ದಿನೇಶ್‌, ಲೊಮ್ರೊರ್‌, ಕರ್ಣ್‌, ಫರ್ಗ್ಯೂಸನ್‌, ಸಿರಾಜ್‌, ದಯಾಳ್‌.ಟೈಟಾನ್ಸ್‌: ಸಾಹ, ಗಿಲ್‌(ನಾಯಕ), ಮಿಲ್ಲರ್‌, ಅಜ್ಮತುಲ್ಲಾ, ತೆವಾಟಿಯಾ, ಶಾರುಖ್‌, ರಶೀದ್, ಕಿಶೋರ್‌, ನೂರ್‌, ಮೋಹಿತ್‌, ಸಂದೀಪ್‌.

ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಜಿಯೋ ಸಿನಿಮಾ