ಬೆಂಗಳೂರು 10K ಮ್ಯಾರಥಾನ್‌: ಕೀನ್ಯಾದ ಪೀಟರ್‌ ಚಾಂಪಿಯನ್‌

| Published : Apr 29 2024, 01:43 AM IST / Updated: Apr 29 2024, 04:22 AM IST

ಬೆಂಗಳೂರು 10K ಮ್ಯಾರಥಾನ್‌: ಕೀನ್ಯಾದ ಪೀಟರ್‌ ಚಾಂಪಿಯನ್‌
Share this Article
  • FB
  • TW
  • Linkdin
  • Email

ಸಾರಾಂಶ

ಭಾರತೀಯರ ಎಲೈಟ್‌ ವಿಭಾಗದಲ್ಲಿ ಕಿರಣ್‌ ಮಾತ್ರೆ, ಸಂಜೀವನಿ ಜಾಧವ್‌ಗೆ ಮೊದಲ ಸ್ಥಾನ. 96 ವರ್ಷದ ದತ್ತಾತ್ರೇಯ ಸೇರಿ 28 ಸಾವಿರ ಓಟಗಾರರು ಭಾಗಿ.

 ಬೆಂಗಳೂರು :  16ನೇ ಆವೃತ್ತಿಯ ವಿಶ್ವ 10ಕೆ ಬೆಂಗಳೂರು ಮ್ಯಾರಥಾನ್‌ನಲ್ಲಿ ಕೀನ್ಯಾದ ಪೀಟರ್‌ ಎಂವಾನಿಕಿ ಹಾಗೂ ಲಿಲಿಯಾನ್‌ ಕಸಾಯಟ್‌ ಕ್ರಮವಾಗಿ ಪುರುಷ ಹಾಗೂ ಮಹಿಳಾ ವಿಭಾಗಗಳಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ.

ಭಾನುವಾರ ನಗರದ ಫೀಲ್ಡ್‌ ಮಾರ್ಷಲ್‌ ಮಾಣೆಕ್‌ ಶಾ ಪರೇಡ್‌ ಕ್ರೀಡಾಂಗಣ ಹಾಗೂ ಸುತ್ತಮುತ್ತ ಮಾರ್ಗಗಳಲ್ಲಿ ರೇಸ್‌ ನಡೆಯಿತು. ಆರಂಭದಲ್ಲೇ ಇತರ ಸ್ಪರ್ಧಿಗಳಿಂದ ಅಂತರ ಕಾಯ್ದುಕೊಂಡಿದ್ದ ಪೀಟರ್‌, 28.15 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಅಗ್ರಸ್ಥಾನಿಯಾದರು.

 ಕೀನ್ಯಾದ ಹಿಲರಿ ಚೆಪ್‌ಕ್ವೊನಿ(28.33 ನಿಮಿಷ), ಎಥಿಯೋಪಿಯಾದ ಹಾಗೊಸ್‌ ಯೊಬ್‌(28.39 ನಿ.) ಕ್ರಮವಾಗಿ 2, 3ನೇ ಸ್ಥಾನ ಪಡೆದರು. ಮಹಿಳಾ ವಿಭಾಗದಲ್ಲಿ ಲಿಲಿಯಾನ್‌ 30.56 ನಿಮಿಷಗಳಲ್ಲಿ ಕ್ರಮಿಸಿದರೆ, ಕೀನ್ಯಾದ ಎಮ್ಯಾಕುಲೇಟ್‌(31.17 ನಿ.) ದ್ವಿತೀಯ, ಎಥಿಯೋಪಿಯಾದ ಲೆಮ್ಲೆಮ್‌ ಹೈಲು(31.23 ನಿ.) 3ನೇ ಸ್ಥಾನ ಪಡೆದರು.ಪದಕ ವಿಜೇತರಿಗೆ ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋಟ್‌, ಮಾಜಿ ಅಥ್ಲೀಟ್‌ ಅಂಜು ಬಾಬಿ ಜಾರ್ಜ್‌, ರೇಸ್‌ನ ರಾಯಭಾರಿ, ನ್ಯೂಜಿಲೆಂಡ್‌ನ ದಿಗ್ಗಜ ಶಾಟ್‌ಪುಟ್‌ ಪಟು ವೆಲೇರಿ ಆ್ಯಡಮ್ಸ್‌ ಸೇರಿದಂತೆ ಗಣ್ಯರು ಪ್ರಶಸ್ತಿ, ನಗದು ವಿತರಿಸಿದರು.

ಕಿರಣ್‌, ಸಂಜೀವನಿ ವಿನ್‌ 

ಭಾರತದ ಎಲೈಟ್‌ ಅಥ್ಲೀಟ್‌ಗಳ ಪೈಕಿ ಕಿರಣ್‌ ಮಾತ್ರೆ ಹಾಗೂ ಸಂಜೀವನಿ ಜಾಧವ್‌ ಕ್ರಮವಾಗಿ ಪುರುಷ, ಮಹಿಳಾ ವಿಭಾಗಗಳಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಕಿರಣ್‌ 29.32 ನಿಮಿಷಗಳಲ್ಲಿ ಕ್ರಮಿಸಿ ಕೂಟ ದಾಖಲೆ ಬರೆದರೆ, ರಂಜೀತ್‌ ಪಟೇಲ್‌(29.35 ನಿ.), ಧರ್ಮೇಂದ್ರ(29.45 ನಿ.) ಕ್ರಮವಾಗಿ 2 ಮತ್ತು 3ನೇ ಸ್ಥಾನ ಗಿಟ್ಟಿಸಿಕೊಂಡರು.ಮಹಿಳಾ ವಿಭಾಗದಲ್ಲಿ ಸಂಜೀವನಿ 34.03 ನಿಮಿಷದಲ್ಲಿ ಗುರಿ ಮುಟ್ಟಿದರು. ಲಿಲ್ಲಿ ದಾಸ್‌(34.13 ನಿಮಿಷ) ಹಾಗೂ ಪ್ರೀನು ಯಾದವ್‌(34.24 ನಿಮಿಷ) ಕ್ರಮವಾಗಿ ಬೆಳ್ಳಿ, ಕಂಚು ಗೆದ್ದುಕೊಂಡರು.

96 ವರ್ಷದ ದತ್ತಾತ್ರೇಯ ಸೇರಿ 28 ಸಾವಿರ ಓಟಗಾರರು ಭಾಗಿ! 

ವಿಶ್ವ ಹಾಗೂ ಭಾರತೀಯ ಎಲೈಟ್‌ ಅಥ್ಲೀಟ್‌ಗಳ ಜೊತೆಗೆ ಮುಕ್ತ ವಿಭಾಗದ 10ಕೆ ಓಟದ ಸ್ಪರ್ಧೆಯೂ ನಡೆಯಿತು. ಮಜಾ ರನ್‌(5.5 ಕಿ.ಮೀ), ಸಿಲ್ವರ್ ರನ್‌(2.6 ಕಿ.ಮೀ.) ಹಾಗೂ ವಿಶೇಷ ಚೇತನ(2.6 ಕಿ.ಮೀ) ವಿಭಾಗಗಳ ರೇಸ್‌ ಪ್ರಮುಖ ಆಕರ್ಷಣೆ ಎನಿಸಿಕೊಂಡಿತು. ಅದರಲ್ಲೂ 96 ವರ್ಷದ ಎನ್‌.ಎಸ್‌.ದತ್ತಾತ್ರೇಯ 10 ಕಿ.ಮೀ. ಓಟ ಪೂರ್ಣಗೊಳಿಸಿ ಗಮನ ಸೆಳೆದರು. ಮುಕ್ತ ವಿಭಾಗದ 18,433 ಸೇರಿ ಎಲ್ಲಾ ವಿಭಾಗಗಳಲ್ಲಿ 28,600ರಷ್ಟು ಓಟಗಾರರು ಪಾಲ್ಗೊಂಡರು.