3ನೇ ಬಾರಿ ಕೊಡವ ಕೌಟುಂಬಿಕ ಹಾಕಿ ಕಿರೀಟ ಗೆದ್ದ ಚೇಂದಂಡ

| Published : Apr 29 2024, 01:35 AM IST / Updated: Apr 29 2024, 04:28 AM IST

ಸಾರಾಂಶ

ರೋಚಕ ಫೈನಲ್‌ನ ಪೆನಾಲ್ಟಿ ಶೂಟೌಟ್‌ನಲ್ಲಿ ನೆಲ್ಲಮಕ್ಕಡ ವಿರುದ್ಧ 8-7 ಗೋಲುಗಳಿಂದ ಜಯಭೇರಿ. 3ನೇ ಸ್ಥಾನ ಗಿಟ್ಟಿಸಿಕೊಂಡ ಕುಲ್ಲೇಟಿರ ತಂಡ.

ದುಗ್ಗಳ ಸದಾನಂದ

 ನಾಪೋಕ್ಲು :  ಕೊಡವ ಕುಟುಂಬಗಳ ನಡುವಿನ 24ನೇ ವರ್ಷದ ಕೌಟುಂಬಿಕ ಕುಂಡ್ಯೋಳಂಡ ಹಾಕಿ ಕಾರ್ನಿವಲ್‌ನಲ್ಲಿ ಚೇಂದಂಡ ತಂಡ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಚೇಂದಂಡ ತಂಡ ನೆಲ್ಲಮಕ್ಕಡ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ 8-7 ಗೋಲುಗಳಿಂದ ಮಣಿಸಿ ಮೂರನೇ ಬಾರಿ ಪ್ರಶಸ್ತಿ ತನ್ನದಾಗಿಸಿಕೊಂಡಿತು. 

ನಾಪೋಕ್ಲುವಿನ ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರಿಡಾಂಗಣದಲ್ಲಿ ನಡೆದ ಪಂದ್ಯ ರೋಚಕತೆಯಿಂದ ಕೂಡಿತ್ತು. ಉಭಯ ತಂಡಗಳಿಂದಲೂ ಸಮಬಲದ ಹೋರಾಟ ಕಂಡುಬಂದು, ನಿಗದಿತ ಸಮಯದ ಮುಕ್ತಾಯಕ್ಕೆ ಇತ್ತಂಡಗಳು 2-2 ಗೋಲುಗಳಿಂದ ಸಮಬಲ ಸಾಧಿಸಿದವು. ಹೀಗಾಗಿ ಫಲಿತಾಂಶಕ್ಕೆ ಪೆನಾಲ್ಟಿ ಶೂಟೌಟ್‌ ಮೊರೆ ಹೋಗಬೇಕಾಯಿತು.

ನಂತರ ನಡೆದ ಪೆನಾಲ್ಟಿ ಶೂಟೌಟ್‌ ವೀಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸಿತು ಅಂತಿಮ ಕ್ಷಣದಲ್ಲಿ ಚೇಂದಂಡ ತಂಡ 8-7 ಮುನ್ನಡೆಯೊಂದಿಗೆ ನೆಲ್ಲಮಕ್ಕಡ ವಿರುದ್ಧ ವಿಜಯ ಸಾಧಿಸಿ ಮೂರನೇ ಬಾರಿಗೆ ಪ್ರತಿಷ್ಠಿತ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಪ್ರಶಸ್ತಿ ಎತ್ತಿ ಹಿಡಿಯಿತು. ನೆಲ್ಲಮಕ್ಕಡ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ವಿಜೇತ ತಂಡಕ್ಕೆ ನಗದು ಹಾಗೂ ಟ್ರೋಫಿ ವಿತರಿಸಲಾಯಿತು. ದ್ವಿತೀಯ ಸ್ಥಾನ ಪಡೆದ ನೆಲ್ಲಮಕ್ಕಡ ತಂಡಕ್ಕೆ ಟ್ರೋಫಿ ಹಾಗೂ ನಗದು ವಿತರಿಸಲಾಯಿತು.

ಕುಲ್ಲೇಟಿರಕ್ಕೆ 3ನೇ ಸ್ಥಾನ

ಫೈನಲ್ ಪಂದ್ಯಕ್ಕೂ ಮೊದಲು 3ನೇ ಹಾಗೂ 4ನೇ ಸ್ಥಾನಕ್ಕಾಗಿ ಕುಲ್ಲೇಟಿರ ಮತ್ತು ಕುಪ್ಪಂಡ(ಕೈಕೇರಿ) ತಂಡಗಳ ನಡುವೆ ಪಂದ್ಯ ನಡೆಯಿತು. ಪೆನಾಲ್ಟಿ ಶೂಟೌಟ್‌ನಲ್ಲಿ ಕುಪ್ಪಂಡ(ಕೈಕೇರಿ) ವಿರುದ್ಧ ಕುಲ್ಲೇಟಿರ 3- 2 ಅಂತರದಲ್ಲಿ ಗೆದ್ದು 3ನೇ ಸ್ಥಾನ ಪಡೆದುಕೊಂಡಿತು.