ಬಾಂಗ್ಲಾದೇಶಕ್ಕೆ ಆಫ್ಘನ್ ಚಾಲೆಂಜ್‌

| Published : Oct 08 2023, 12:03 AM IST

ಬಾಂಗ್ಲಾದೇಶಕ್ಕೆ ಆಫ್ಘನ್ ಚಾಲೆಂಜ್‌
Share this Article
  • FB
  • TW
  • Linkdin
  • Email

ಸಾರಾಂಶ

ಧರ್ಮಶಾಲಾ ಕ್ರೀಡಾಂಗಣ ಆತಿಥ್ಯ ವಹಿಸಲಿದೆ
ಧರ್ಮಶಾಲಾ: ನ್ಯೂಜಿಲೆಂಡ್‌ ವಿರುದ್ಧ ತವರಿನ ಸರಣಿ ಸೋಲು, ಏಷ್ಯಾಕಪ್‌ನ ವೈಫಲ್ಯ ಹಾಗೂ ತಂಡದೊಳಗಿನ ಕಿತ್ತಾಟದ ನಡುವೆ ಈ ಬಾರಿ ವಿಶ್ವಕಪ್‌ನಲ್ಲಿ ಆಡಲು ಬಂದಿರುವ ಬಾಂಗ್ಲಾದೇಶಕ್ಕೆ ಶನಿವಾರ ಅಫ್ಘಾನಿಸ್ತಾನ ತಂಡದ ಸವಾಲು ಎದುರಾಗಲಿದೆ. ಇದು ಈ ವಿಶ್ವಕಪ್‌ನ ಮೊದಲ ಹಗಲು ಪಂದ್ಯವಾಗಿದ್ದು, ಧರ್ಮಶಾಲಾ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ತಮೀಮ್‌ ಇಕ್ಬಾಲ್‌ ಅನುಪಸ್ಥಿತಿಯಲ್ಲಿ ನಾಯಕತ್ವವನ್ನು ಹೆಗಲಿಗೇರಿಸಿಕೊಂಡಿರುವ ಶಕೀಬ್‌ ಅಲ್‌ ಹಸನ್‌ ಮೇಲೆ ವಿಶ್ವಕಪ್‌ನಲ್ಲಿ ತಂಡವನ್ನು ಯಶಸ್ಸಿನತ್ತ ಕೊಂಡೊಯ್ಯಬೇಕಾದ ಹೊಣೆಗಾರಿಕೆಯಿದೆ. ತಂಡ ಈ ವರ್ಷ ಅಸ್ಥಿರ ಪ್ರದರ್ಶನ ತೋರಿದ್ದು, 9 ಪಂದ್ಯಗಳಲ್ಲಿ ಗೆದ್ದಿದ್ದರೆ 8 ಪಂದ್ಯಗಳಲ್ಲಿ ಸೋಲನುಭವಿಸಿವೆ. ಆದರೂ ತಂಡ ಅನುಭವಿ ಆಟಗಾರರಾದ ಮುಷ್ಫಿಕುರ್‌, ಮುಷ್ತಾಫಿಜುರ್‌, ಲಿಟನ್‌ ದಾಸ್‌, ಮುಹ್ಮೂದುಲ್ಲಾ ಮೇಲೆ ಹೆಚ್ಚಿನ ಭರವಸೆ ಇಟ್ಟಿದ್ದು, ಯುವ ತಾರೆಗಳಾದ ತೌಹೀದ್‌, ತಂಜೀದ್‌ ಕೂಡಾ ಚೊಚ್ಚಲ ವಿಶ್ವಕಪ್‌ನಲ್ಲಿ ಅಬ್ಬರಿಸಲು ಕಾಯುತ್ತಿದ್ದಾರೆ. ಅತ್ತ ಯಾವುದೇ ತಂಡಕ್ಕೂ ಅಚ್ಚರಿಯ ರೀತಿಯಲ್ಲಿ ಸೋಲುಣಿಸಬಲ್ಲ ಆಪ್ಘನ್‌ ಕೂಡಾ ಗೆಲುವಿನೊಂದಿಗೆ ಟೂರ್ನಿಗೆ ಕಾಲಿಡಲು ಕಾಯುತ್ತಿದೆ. ವಿಶ್ವ ಶ್ರೇಷ್ಠ ಆಲ್ರೌಂಡರ್‌ಗಳಾದ ರಶೀದ್‌ ಖಾನ್‌, ಮೊಹಮದ್‌ ನಬಿ ಮೇಲೆ ತಂಡ ಹೆಚ್ಚಾಗಿ ಅವಲಂಬಿಸಿದ್ದು, ಸ್ಪಿನ್ನರ್‌ಗಳಾದ ಮುಜೀಬ್‌, ನೂರ್‌ ಅಹ್ಮದ್ ಬಾಂಗ್ಲಾ ಬ್ಯಾಟರ್‌ಗಳನ್ನು ಕಟ್ಟಿಹಾಕಲು ಕಾಯುತ್ತಿದ್ದಾರೆ. ರಹ್ಮಾನುಲ್ಲಾ ಗುರ್ಬಾಜ್‌, ಜದ್ರಾನ್‌ ಬ್ಯಾಟಿಂಗ್‌ನಲ್ಲಿ ಅಬ್ಬರಿಸುವ ತವಕದಲ್ಲಿದ್ದಾರೆ. ಅಭ್ಯಾಸ ಪಂದ್ಯದಲ್ಲಿ ಆಫ್ಘನ್‌, ಲಂಕಾಕ್ಕೆ ಸೋಲುಣಿಸಿದ ರೀತಿ ನೋಡಿದರೆ, ತಂಡದಿಂದ ಆಕ್ರಮಣಕಾರಿ ಪ್ರದರ್ಶನ ನಿರೀಕ್ಷಿಸಬಹುದು. ಒಟ್ಟು ಮುಖಾಮುಖಿ 15 ಅಫ್ಘಾನಿಸ್ತಾನ: 06 ಬಾಂಗ್ಲಾದೇಶ: 09 ಫಲಿತಾಂಶವಿಲ್ಲ: 00 ಟೈ: 00 ಸಂಭವನೀಯ ಆಟಗಾರರ ಪಟ್ಟಿ ಅಫ್ಘಾನಿಸ್ತಾನ: ರಹ್ಮಾನುಲ್ಲಾ, ಜದ್ರಾನ್‌, ರಹ್ಮತ್‌ ಶಾ, ಹಶ್ಮತುಲ್ಲಾ(ನಾಯಕ), ನಬಿ, ನಜೀಬುಲ್ಲಾ, ಅಜ್ಮತುಲ್ಲಾ, ರಶೀದ್‌, ನವೀನ್‌, ಮುಜೀಬ್‌, ಫಾರೂಕಿ. ಬಾಂಗ್ಲಾದೇಶ: ತಂಜೀದ್‌, ಲಿಟನ್‌, ನಜ್ಮುಲ್‌, ಶಕೀಬ್‌(ನಾಯಕ), ತೌಹೀದ್‌, ಮುಷ್ಫಿಕುರ್‌, ಮೆಹಿದಿ, ನಸುಮ್‌/ಹಸನ್‌, ತಸ್ಕೀನ್‌, ಶೊರೀಫುಲ್‌, ಮಹ್ಮೂದ್‌. ಪಂದ್ಯ ಆರಂಭ: ಬೆಳಗ್ಗೆ 10.30ಕ್ಕೆ, ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಡಿಸ್ನಿ+ಹಾಟ್‌ಸ್ಟಾರ್‌.