ಲಂಕಾ ಬೌಲರ್ಸ್‌ vs ಆಫ್ರಿಕಾ ಬ್ಯಾಟರ್ಸ್‌

| Published : Oct 08 2023, 12:01 AM IST

ಸಾರಾಂಶ

ಲಂಕಾಕ್ಕೆ ಪ್ರಮುಖ ಬೌಲರ್‌ಗಳ ಅನುಪಸ್ಥಿತಿ ಕಾಡಲಿದೆ
ನವದೆಹಲಿ: ಗಾಯಾಳುಗಳ ಸಮಸ್ಯೆ ನಡುವೆಯೇ ಈ ಬಾರಿ ವಿಶ್ವಕಪ್‌ನಲ್ಲಿ ಕಣಕ್ಕಿಳಿಯಲಿರುವ ಶ್ರೀಲಂಕಾ ಹಾಗೂ ದಕ್ಷಿಣ ಆಫ್ರಿಕಾ ತಂಡಳು ಶನಿವಾರ ಪರಸ್ಪರ ಮುಖಾಮುಖಿಯಾಗಲಿವೆ. ಇಲ್ಲಿನ ಅರುಣ್‌ ಜೇಟ್ಲಿ ಕ್ರೀಡಾಂಗಣ ಪಂದ್ಯಕ್ಕೆ ಆತಿಥ್ಯ ವಹಿಸಲಿದ್ದು, ಉಭಯ ತಂಡಗಳೂ ಶುಭಾರಂಭದ ನಿರೀಕ್ಷೆಯಲ್ಲಿವೆ. ಈ ಪಂದ್ಯ ದ.ಆಫ್ರಿಕಾದ ಬ್ಯಾಟರ್‌ಗಳು ಹಾಗೂ ಶ್ರೀಲಂಕಾದ ಬೌಲರ್‌ಗಳ ನಡುವಿನ ಹಣಾಹಣಿ ಎಂದೇ ಕರೆಸಿಕೊಳ್ಳುತ್ತಿದೆ. ಆಕ್ರಮಣಕಾರಿ ಬ್ಯಾಟರ್‌ಗಳಾದ ಡೇವಿಡ್‌ ಮಿಲ್ಲರ್‌, ಹೆನ್ರಿಚ್‌ ಕ್ಲಾಸೆನ್‌, ಡಿ ಕಾಕ್‌, ಮಾರ್ಕ್‌ರಮ್‌ರನ್ನು ಲಂಕಾದ ಸ್ಪಿನ್ನರ್‌ಗಳು ಎಷ್ಟರ ಮಟ್ಟಿಗೆ ಕಟ್ಟಿಹಾಕಲಿದ್ದಾರೆ ಎಂಬುದರ ಮೇಲೆ ಫಲಿತಾಂಶ ನಿರ್ಧಾರವಾಗುವ ಸಾಧ್ಯತೆ ಹೆಚ್ಚು. ದ.ಆಫ್ರಿಕಾ ಪ್ರಮುಖ ವೇಗಿಗಳಾದ ಏನ್ರಿಚ್‌ ನೋಕಿಯಾ, ಸಿಸಾಂಡ ಮಗಾಲ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯಲಿದ್ದು, ಬೌಲಿಂಗ್‌ ವಿಭಾಗ ದುರ್ಬಲವಾಗಿರುವಂತೆ ಕಂಡುಬರುತ್ತಿದೆ. ಹೀಗಾಗಿ ರಬಾಡ, ಸ್ಪಿನ್ನರ್‌ಗಳಾದ ಕೇಶವ್‌ ಮಹಾರಾಜ್‌, ತಬ್ರೇಜ್‌ ಶಮ್ಸಿ ಮೇಲೆ ತಂಡ ಹೆಚ್ಚಿನ ಭರವಸೆ ಇಟ್ಟುಕೊಂಡಿದೆ. ಅತ್ತ ಲಂಕಾಕ್ಕೆ ಕೂಡಾ ಪ್ರಮುಖ ಬೌಲರ್‌ಗಳ ಅನುಪಸ್ಥಿತಿ ಕಾಡಲಿದೆ. ತಾರಾ ಸ್ಪಿನ್ನರ್‌ ಮಹೀಶ್‌ ತೀಕ್ಷಣ ಕೂಡಾ ಆರಂಭಿಕ ಪಂದ್ಯದಲ್ಲಿ ಆಡಲ್ಲ. ಆದರೆ ತಂಡ 2023ರಲ್ಲಿ ಉತ್ತಮ ಗೆಲುವಿನ ದಾಖಲೆ ಹೊಂದಿದ್ದು, ಆಡಿರುವ 22 ಪಂದ್ಯಗಳಲ್ಲಿ 14ರಲ್ಲಿ ಗೆದ್ದಿದೆ. ಬಹುತೇಕ ಎಲ್ಲಾ ಪಂದ್ಯಗಳಲ್ಲೂ ಎದುರಾಳಿ ತಂಡಗಳನ್ನು ಆಲೌಟ್‌ ಮಾಡಿದೆ. ಕುಸಾಲ್‌ ಮೆಂಡಿಸ್‌, ವೇಗಿ ಮಥೀಶ ಪತಿರನ, ಆಲ್ರೌಂಡರ್‌ಗಳಾದ ಅಸಲಂಕ, ದುನಿತ್‌ ವೆಲ್ಲಲಗೆ ತಂಡದ ಟ್ರಂಪ್‌ಕಾರ್ಡ್‌ ಎನಿಸಿದ್ದಾರೆ. -- ಒಟ್ಟು ಮುಖಾಮುಖಿ 80 ದ.ಆಫ್ರಿಕಾ: 45 ಶ್ರೀಲಂಕಾ: 33 ಫಲಿತಾಂಶವಿಲ್ಲ: 01 ಟೈ: 01 ಸಂಭವನೀಯ ಆಟಗಾರರ ಪಟ್ಟಿ ದ.ಆಫ್ರಿಕಾ: ಬವುಮಾ(ನಾಯಕ), ಡಿ ಕಾಕ್‌, ಡುಸ್ಸೆನ್‌, ಮಾರ್ಕ್‌ರಮ್‌, ಕ್ಲಾಸೆನ್‌, ಮಿಲ್ಲರ್‌, ಯಾನ್ಸನ್‌, ಗೋಟ್ಜೀ, ಫೆಲುಕ್ವಾಯೊ/ಶಮ್ಸಿ, ಕೇಶವ್‌, ರಬಾಡ. ಶ್ರೀಲಂಕಾ: ಪೆರೆರಾ, ನಿಸ್ಸಾಂಕ, ಕುಸಾಲ್‌ ಮೆಂಡಿಸ್‌, ಸಮರವಿಕ್ರಮ, ಅಸಲಂಕ, ಧನಂಜಯ, ಶಾನಕ(ನಾಯಕ), ವೆಲ್ಲಲಗೆ, ಹೇಮಂತ, ಮಧುಶನಕ, ಲಹಿರು. ಪಂದ್ಯ ಆರಂಭ: ಮಧ್ಯಾಹ್ನ 2ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಡಿಸ್ನಿ+ ಹಾಟ್‌ಸ್ಟಾರ್‌