ಬದುಕಿನಲ್ಲಿ ಬಣ್ಣದ ಚಿತ್ತಾರ ಬರೆವ ಹಬ್ಬ ಹೋಳಿ

| Published : Mar 25 2024, 12:47 AM IST / Updated: Mar 25 2024, 12:43 PM IST

ಬದುಕಿನಲ್ಲಿ ಬಣ್ಣದ ಚಿತ್ತಾರ ಬರೆವ ಹಬ್ಬ ಹೋಳಿ
Share this Article
  • FB
  • TW
  • Linkdin
  • Email

ಸಾರಾಂಶ

ಹೋಳಿ ಹಬ್ಬದ ಸಂದೇಶವೆಂದರೆ ಅಸುರೀ ಗುಣಗಳನ್ನು ಸುಡುವುದು ಮತ್ತು ದೈವೀ ಗುಣಗಳನ್ನು ಆವಾಹನೆ ಮಾಡಿಕೊಳ್ಳುವುದು. ಜೊತೆಗೆ ನಮ್ಮ ಬದುಕಿನಲ್ಲಿ ಒಲವಿನ ಚಿತ್ತಾರ ಮೂಡಿಸಿಕೊಂಡು, ದುಷ್ಟಗುಣಗಳಿಂದ ಮುಕ್ತರಾಗುವುದು. ವಸಂತನ ಆಗಮನವನ್ನು ಸಂಭ್ರಮಿಸುವ ಈ ಹಬ್ಬ ನಮ್ಮ ಬದುಕಿನಲ್ಲೂ ಹೊಸ ಸಂಭ್ರಮವನ್ನು ತರಲಿ.

ಗವಿಸಿದ್ದೇಶ್.ಕೆ ಕಲ್ಗುಡಿ, ಗಂಗಾವತಿ

ಜಾತ್ರೆ, ಉತ್ಸವ ಮತ್ತು ಹಬ್ಬಗಳು ಭಾರತೀಯ ಸಂಸ್ಕೃತಿಯ ಕುರುಹುಗಳು. ಸಂಸ್ಕೃತಿ ನಮ್ಮ ದೇಶದ ಪ್ರತಿಷ್ಠೆ. ಹಬ್ಬ-ಹರಿದಿನಗಳು ಜೀವನದಲ್ಲಿ ಹಾದಿ ತಪ್ಪುವ ನಮ್ಮೆಲ್ಲರನ್ನು ಒಗ್ಗೂಡಿಸಿ, ಪರಸ್ಪರರಲ್ಲಿ ಸಾಮರಸ್ಯ ಮೂಡಿಸಿ, ದೈವಶ್ರದ್ಧೆ, ರಾಷ್ಟ್ರೀಯ ಭಾವೈಕ್ಯತೆಯನ್ನು ಮೂಡಿಸಿ, ಎಲ್ಲರ ಮನರಂಜಿಸುತ್ತವೆ. 

ಇಂತಹ ಹಬ್ಬಗಳ ಸಾಲು ಸಾಲೇ ನಮ್ಮ ದೇಶದಲ್ಲಿದೆ. ಇದರಲ್ಲಿ ಫಾಲ್ಗುಣ ಮಾಸದ, ಶಿಶಿರ ಋತುವಿನ, ಶುಕ್ಲಪಕ್ಷದ ಹುಣ್ಣಿಮೆಯಂದು ಆಚರಿಸಲ್ಪಡುವ ಹೋಳಿಯೂ ಒಂದು.

ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ಧಾರ್ಮಿಕ ಮತ್ತು ವೈಜ್ಞಾನಿಕ ವೈಶಿಷ್ಟ್ಯವಿರುತ್ತದೆ. ಹೋಳಿಗೂ ಕೂಡ ಧಾರ್ಮಿಕ ಮತ್ತು ಪೌರಾಣಿಕ ಹಿನ್ನೆಲೆಯಿದೆ. 

ಹೋಳಿಯನ್ನು ಕಾಮನ ಹಬ್ಬ, ವಸಂತೋತ್ಸವ, ರಂಗಪಂಚಮಿ, ಫಗ್ವಾ ಹಾಗೂ ಡೋಲ್ ಯಾತ್ರಾ ಎಂದೂ ಕರೆಯಲಾಗುತ್ತದೆ. ಹೋಳಿಯ ಆಚರಣೆಯಲ್ಲಿ ವಿಭಿನ್ನತೆಯಿದ್ದರೂ, ಅದರ ಸಂದೇಶ ಮಾತ್ರ ಒಂದೇ.

ಹೋಳಿ ಹಬ್ಬದ ಸಂದೇಶ: ಅರಿಷಡ್ವರ್ಗಗಳಲ್ಲಿ ಮೊದಲನೆಯದಾದ ಕಾಮ ಮನುಷ್ಯನ ಶತ್ರುವೂ ಹೌದು, ಮಿತ್ರನೂ ಹೌದು ಹಾಗೂ ಅದೊಂದು ಪುರುಷಾರ್ಥವೂ ಕೂಡ. 

ಅದರ ನಿಗ್ರಹ ಮಾತ್ರ ವಾಯುವಿನಷ್ಟೇ ದುಷ್ಕರವಾದದ್ದು. ಪ್ರಾಚೀನ ಕಾಲದಲ್ಲಿ ನಮ್ಮ ಋಷಿ, ಮುನಿಗಳು, ಮಹಾನ್ ವ್ಯಕ್ತಿಗಳೂ ಕೂಡ ಕಾಮವನ್ನು ನಿಗ್ರಹಿಸಲು ಹೊರಟು ಸೋತಿದ್ದಾರೆ. 

ಹಾಗಾಗಿ ಕಾಮವನ್ನು ಜಯಿಸುವುದು ಅಷ್ಟು ಸುಲಭವಲ್ಲ. ಇಲ್ಲಿ ಹೋಳಿ ಹುಣ್ಣಿಮೆ ಕಾಮದ ನಿಗ್ರಹ ತತ್ವವನ್ನು ಹೊರಚೆಲ್ಲುತ್ತದೆ. 

ಹೋಳಿ, ಅಂತರಂಗ ಮತ್ತು ಬಹಿರಂಗ ಶುದ್ಧಿಗಳ ಮೂಲಕ ಕಾಮವನ್ನು ನಿಗ್ರಹಿಸಿ, ಪ್ರೇಮವನ್ನು ಸಾಕ್ಷಾತ್ಕರಿಸಿಕೊಳ್ಳುವ ಮೂಲಕ ಬದುಕನ್ನು ಹಸನಗೊಳಿಸಿಕೊಳ್ಳುವುದಲ್ಲದೇ, ಮನುಷ್ಯ ತನ್ನೆಲ್ಲಾ ಅಸುರಿ ಭಾವಗಳನ್ನು ತ್ಯಜಿಸುವ ಮೂಲಕ, ದೈವೀ ಭಾವಗಳನ್ನು ಸಾಕ್ಷಾತ್ಕರಿಸಿಕೊಳ್ಳುವ ಸಂದೇಶವನ್ನು ಜಗತ್ತಿಗೆ ಸಾರುತ್ತದೆ.

ಹೋಳಿ ಬಣ್ಣದ ಹಬ್ಬವೂ ಹೌದು. ಉತ್ತರ ಭಾರತದಲ್ಲಿ ತುಂಬಾ ವಿಶೇಷವಾಗಿ ಆಚರಿಸಲ್ಪಡುತ್ತದೆ. ಇಂದು, ಹಿರಿಯರು, ಕಿರಿಯರು, ಮಹಿಳೆಯರು ಯಾವುದೇ ಭೇದವೆಣಿಸದೇ ಮೋಜು ಮಸ್ತಿಗಳನ್ನು ಮಾಡುತ್ತಾ, ಬಣ್ಣದ ಓಕುಳಿಯಲ್ಲಿ ಮಿಂದೇಳುತ್ತಾರೆ. 

ನಮ್ಮ ಬದುಕು ಕೂಡ ಹಲವು ಆಸೆ-ಆಕಾಂಕ್ಷೆಗಳೆಂಬ ಬಣ್ಣಗಳಿಂದ ಕೂಡಿದ್ದು, ಅವುಗಳನ್ನು ಆನಂದಿಸಬೇಕು ಎನ್ನುವುದೇ ಬಣ್ಣದ ಓಕುಳಿಯ ಸಂದೇಶ. ಈ ಸಮಯದಲ್ಲಿ ಪ್ರಕೃತಿಯಲ್ಲೂ ಕೂಡ ಒಂದು ಹೊಸತನವನ್ನು ಕಾಣಬಹುದು. 

ಫಾಲ್ಗುಣ ಹುಣ್ಣಿಮೆಯಷ್ಟೊತ್ತಿಗೆ ಗಿಡ-ಮರಗಳು ಚಿಗುರೊಡೆದು, ಹಚ್ಚಹಸಿರಿನೊಂದಿಗೆ ಕಂಗೊಳಿಸುತ್ತಿರುತ್ತವೆ. ಇದು ವಸಂತನ ಬರುವಿಕೆಯನ್ನು ಸ್ವಾಗತಿಸುವ ಸಂದರ್ಭ. ಹಾಗಾಗಿಯೇ ಹೋಳಿಯನ್ನು ವಸಂತೋತ್ಸವ ಎಂದೂ ಕೂಡ ಕರೆಯುತ್ತಾರೆ.

ಪೌರಾಣಿಕ ಹಿನ್ನೆಲೆ: ಹೋಳಿ ಹಬ್ಬದ ಕುರಿತು ಹಲವಾರು ಪೌರಾಣಿಕ ಕಥೆಗಳಿವೆ. ಹಿಂದೆ ತಾರಕಾಸುರನೆಂಬ ದುರಹಂಕಾರಿ ರಾಕ್ಷಸನಿದ್ದ. ಲೋಕಕಂಟಕನಾಗಿ ಮೆರೆಯುತ್ತಿದ್ದ. ಅವನು ತನಗೆ ಸಾವು ಬಾರದಿರಲಿ, ಬಂದರೂ, ಶಿವನಿಗೆ ಜನಿಸಿದ ಏಳು ದಿನದ ಶಿಶುವಿನಿಂದ ಬರಲಿ ಎಂದು ಬ್ರಹ್ಮನಿಂದ ವರ ಪಡೆದಿದ್ದ. 

ಆಗ ಶಿವ ಭೋಗ ಸಮಾಧಿಯಲ್ಲಿದ್ದ. ಎಲ್ಲಾ ದೇವತೆಗಳು ವಿಷ್ಣುವಿನ ಮಗನಾದ ಕಾಮನಲ್ಲಿಗೆ ತೆರಳಿ, ಹೇಗಾದರೂ ಮಾಡಿ ಶಿವನು ಪಾರ್ವತಿಯಲ್ಲಿ ಮೋಹಗೊಳ್ಳುವಂತೆ ಮಾಡಬೇಕೆಂದು ಅಂಗಲಾಚುತ್ತಾರೆ. 

ಆಗ ಕಾಮದೇವನು ತನ್ನ ಅರವಿಂದ, ಅಶೋಕಾದಿ ಹೂಬಾಣಗಳನ್ನು ಶಿವನ ಮೇಲೆ ಹೂಡಿದ. ಅದರಿಂದ ಎಚ್ಚರಗೊಂಡ ಶಿವ, ಕೋಪದಿಂದ ತನ್ನ ಮೂರನೇ ಕಣ್ಣನ್ನು ತೆರೆದು ಕಾಮನನ್ನು ಭಸ್ಮ ಮಾಡುತ್ತಾನೆ. 

ಕಾಮದೇವ ಅಂದಿನಿಂದ ಅನಂಗನಾಗುತ್ತಾನೆ. ಇದು ನಡೆದದ್ದು ಫಾಲ್ಗುಣ ಮಾಸದ ಹುಣ್ಣಿಮೆಯಂದು ಎಂದು ಹೇಳಲಾಗಿದೆ. ಹಾಗಾಗಿ ಈ ಹಬ್ಬವನ್ನು ಕಾಮನ ಹುಣ್ಣಿಮೆ ಎಂದೂ ಕರೆಯುತ್ತಾರೆ. 

ಇದರ ಪ್ರತೀಕವಾಗಿ ಇಂದು ಕಾಮದೇವನ ಮೂರ್ತಿ ಮಾಡಿ, ಬೆರಣಿ, ಕಟ್ಟಿಗೆ ಮತ್ತು ಅಳಿದುಳಿದ ವಸ್ತುಗಳನ್ನು ಒಂದೆಡೆ ಸಂಗ್ರಹ ಮಾಡಿ, ಅದಕ್ಕೆ ಪೂಜೆಯನ್ನು ಮಾಡಿ ಕಾಮದಹನ ಮಾಡಲಾಗುತ್ತದೆ.

ಹೋಲಿಕಾ ದಹನ: ನಾರದ ಪುರಾಣದಲ್ಲಿ ಮತ್ತೊಂದು ಕಥೆಯಿದೆ. ಹಿರಣ್ಯಕಶಿಪು ಎಂಬ ರಾಕ್ಷಸ ಹರಿ ದ್ವೇಷಿಯಾಗಿದ್ದ. ಆದರೆ, ಅವನ ಮಗ ಪ್ರಹ್ಲಾದ ಮಹಾ ಹರಿಭಕ್ತನಾಗಿದ್ದ. ಮಗ ಪ್ರಹ್ಲಾದನಿಗೆ ಹರಿಯನ್ನು ಜಪಿಸದಿರಲು ಕೇಳಿಕೊಂಡರೂ ಬಿಡದಿದ್ದಾಗ ಕೋಪಗೊಂಡ ಹಿರಣ್ಯಕಶಿಪು, ಪ್ರಹ್ಲಾದನನ್ನು ಕೊಲ್ಲಲು ನಿಶ್ಚಯಿಸಿ, ಬೆಂಕಿಯಿಂದ ರಕ್ಷಣೆ ನೀಡುವ ವಸ್ತ್ರ ಹೊಂದಿದ್ದ ತಂಗಿ ‘ಹೋಲಿಕಾ’ಳ ಬಳಿ ತೆರಳುತ್ತಾನೆ. 

ಅಣ್ಣನ ಆಜ್ಞಾನುಸಾರ ಪ್ರಹ್ಲಾದನನ್ನು ಹೊತ್ತುಕೊಂಡ ಹೋಲಿಕಾ ಯಜ್ಞಕುಂಡವನ್ನು ಪ್ರವೇಶ ಮಾಡುತ್ತಾಳೆ. ಆಗ ವಸ್ತ್ರವು ಹಾರಿ ಹೋಗುತ್ತದೆ. ಹೋಲಿಕಾ ಕುಂಡದಲ್ಲಿ ಭಸ್ಮವಾಗುತ್ತಾಳೆ. ಅದೂ ಕೂಡ ನಡೆದದ್ದು ಇದೆ ದಿನ ಎಂದು ಹೇಳಲಾಗಿದೆ.

ಈ ಎರಡೂ ಕಥೆಗಳು ಬೇರೆ ಎನಿಸಿದರೂ, ಅವೆರಡರ ಸಂದೇಶ ಮಾತ್ರ ಒಂದೇ. ಅದು ಅಸುರೀ ಗುಣಗಳನ್ನು ಸುಡುವುದು, ದೈವೀ ಗುಣಗಳನ್ನು ಆವಾಹನೆ ಮಾಡಿಕೊಳ್ಳುವುದಾಗಿದೆ. 

ಇಂದಿಗೂ ಉತ್ತರ ಭಾರತದಲ್ಲಿ ಹೋಳಿ, ಅಂದರೆ ಉತ್ಸವಾಗ್ನಿಯನ್ನು ಹಾಕುವ ಪದ್ಧತಿ ಜಾರಿಯಲ್ಲಿದೆ. ದೆಹಲಿಯಲ್ಲಿ ಈ ದಿನ ಹತ್ತು ತಲೆಯ ರಾವಣನ ಮೂರ್ತಿಯನ್ನು ನಿಲ್ಲಿಸಿ, ಅದಕ್ಕೆ ಹಳೆಯ ಬಟ್ಟೆಗಳನ್ನು ಸುತ್ತಿ, ಗಣ್ಯರ ಸಮ್ಮುಖದಲ್ಲಿ ಲಂಕೇಶನನ್ನು ಸುಡುತ್ತಾರೆ. ನಮ್ಮ ರಾಜ್ಯದಲ್ಲಿ ಹೋಳಿ ಸಂಭ್ರಮ

ಕರ್ನಾಟಕದಲ್ಲೂ ಹೋಳಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಅದರಲ್ಲೂ ಉತ್ತರ ಕರ್ನಾಟಕದ ಭಾಗದಲ್ಲಿ ಹೋಳಿಯ ಸಂಭ್ರಮ-ಸಡಗರ ತುಸು ಜಾಸ್ತಿ. ಪ್ರಸನ್ನ ವೆಂಕಟದಾಸರು ಕಾಮನ ಹಬ್ಬದ ಬಗ್ಗೆ ಒಂದು ದೇವರನಾಮದಲ್ಲಿ ಹೀಗೆ ಹೇಳುತ್ತಾರೆ. 

ಫಾಲ್ಗುಣ ಹುಣ್ಣಿಮೆ ಬಂದಿತಿಳಿಗೆ, ಬಾಲಕರೆಲ್ಲ ನೆರೆವುದೊಂದು ಘಳಿಗೆ, ಹೋಳಿಯನಾಡುವ ಸಂಭ್ರಮದೊಳಗೆ, ಕಾಳಗ ಬೇಡಿರೋ ನಿಮ್ಮ ನಮ್ಮೊಳಗೆ ಎಂದು. 

ಇಂದು ಎಲ್ಲಾ ಮಕ್ಕಳು ಎಲ್ಲರ ಮನೆಯ ಹಿತ್ತಲಲ್ಲಿದ್ದ ಬೆರಣಿ, ಸೌದೆಗಳನ್ನು ಕದ್ದು ಒಂದೆಡೆ ಗುಡ್ಡೆಹಾಕುತ್ತಾರೆ. ಅದಕ್ಕೆ ಪೂಜೆ ಮಾಡಿ, ಬೆಂಕಿಯನ್ನು ಹಚ್ಚಿ, ಕುಣಿದು ಕುಪ್ಪಳಿಸಿ ಸಂಭ್ರಮಿಸುತ್ತಾರೆ. 

ಊರಿನ ಓಣಿಯಲ್ಲಿ, ನಿಗದಿತ ಜಾಗದಲ್ಲಿ ಕಾಮಣ್ಣನ ಕಟ್ಟೆಯನ್ನು ಮಾಡಿ, ಅಲ್ಲಿ ರತಿ-ಮನ್ಮಥರ ಮೂರ್ತಿಯನ್ನು ಮಾಡಿ, ಹಲಗೆಯನ್ನು ಬಾರಿಸುತ್ತಾ, ‘ಕಾಮಣ್ಣನ ಕಟ್ಟುವ ಕರಿಬಿದುರ ಸವರುತ್ತಾ, ಕಾಮಣ್ಣಂಗ ಬಾಸಿಂಗ ಕಟ್ಟುವ ನಮ್ಮ ಕಾಮ ಇನ್ನು ಎರಡು ದಿನ ಇರಲಿಲ್ಲೋ’ ಎಂದು ಹೇಳುತ್ತಾ ಲಬೋ, ಲಬೋ ಎಂದು ಬಾಯಿ ಬಡಿದುಕೊಳ್ಳುತ್ತಾ ದಾರಿಯುದ್ದಕ್ಕೂ ಸಾಗುವುದು ತುಂಬಾ ವಿಶಿಷ್ಟವೆನಿಸುತ್ತದೆ.

ಹೀಗೆ, ಪೌರಾಣಿಕ ಹಿನ್ನೆಲೆಯುಳ್ಳ ಹೋಳಿಯನ್ನು ದೇಶಾದ್ಯಂತ ಆಚರಿಸುವ ಪದ್ಧತಿ ಇಂದಿಗೂ ಜಾರಿಯಲ್ಲಿದೆ. ಹೋಳಿಯ ಆಚರಣೆ ವಿಭಿನ್ನವಾಗಿದ್ದರೂ ಅದರ ಸಂದೇಶ ಮಾತ್ರ ಅದ್ಭುತ. 

ಒಲವಿನ ಬಣ್ಣದ ಚಿತ್ತಾರ ನಮ್ಮ ಜೀವನದಲ್ಲಿ ಮೂಡಬೇಕು. ನಾವು ದುಷ್ಟಗುಣಗಳಿಂದ ವಿಮುಕ್ತರಾಗಬೇಕು. ಈ ನಿಟ್ಟಿನಲ್ಲಿ ಹೋಳಿಯ ಆಚರಣೆ ತುಂಬಾ ಅರ್ಥಪೂರ್ಣವೆನಿಸುತ್ತದೆ.