ಕ್ವಿಕ್‌ ನ್ಯೂಸ್‌

| Published : Mar 01 2024, 02:19 AM IST / Updated: Mar 01 2024, 08:06 AM IST

ಸಾರಾಂಶ

ಗುರುವಾರ ನಡೆದ ಘಟನೆಗಳ ಸಂಕ್ಷಿಪ್ತ ಮಾಹಿತಿ.

ರಾಜ್ಯಸಭೆ ಬಹುಮತ ಹೊಸ್ತಿಲಿಗೆ ಎನ್‌ಡಿಎ: ಮೂರೇ ಸ್ಥಾನ ಬಾಕಿ

ನವದೆಹಲಿ: ಇತ್ತೀಚಿನ ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಬಲವರ್ಧನೆ ಆಗಿದೆ. ಬಹುಮತದಿಂದ ಎನ್‌ಡಿಎ ಕೇವಲ 3 ಸ್ಥಾನ ದೂರವಿದೆ. 56 ಸ್ಥಾನಗಳಿಗೆ ನಡೆದ ಚುನಾವಣೆಯ ಬಳಿಕ 30 ಸ್ಥಾನಗಳಲ್ಲಿ ಜಯಗಳಿಸಿದ ಬಿಜೆಪಿ ಬಲ ಒಟ್ಟು 97ಕ್ಕೆ ಹಿಗ್ಗಿದೆ. ಜತೆಗೆ ಎನ್‌ಡಿಎ ಬಲ 118 ತಲುಪಿದೆ. ರಾಜ್ಯಸಭೆಯಲ್ಲಿ ಸದ್ಯ ಬಹುಮತಕ್ಕೆ 121 ಸ್ಥಾನಗಳ ಅವಶ್ಯಕತೆ ಇದೆ.

ಬೀಪಿ, ಶುಗರ್‌ ಸೇರಿ 100 ಔಷಧಗಳ ಬೆಲೆ ಶೀಘ್ರದಲ್ಲೇ ಇಳಿಕೆ

ನವದೆಹಲಿ: ಮಧುಮೇಹ (ಶುಗರ್‌), ರಕ್ತದೊತ್ತಡ (ಬಿ.ಪಿ) ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಬಳಸಲಾಗುವ 100 ಔಷಧಗಳನ್ನು ದರ ನಿಯಂತ್ರಣ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಹೀಗಾಗಿ ಶೀಘ್ರವೇ ಇವುಗಳ ಬೆಲೆ ಇಳಿಕೆಯಾಗಲಿದೆ. 

ಹೀಗೆ ದರ ನಿಯಂತ್ರಣ ಪಟ್ಟಿಗೆ ಸೇರ್ಪಡೆಯಾದ ಔಷಧಗಳಲ್ಲಿ ಮಧುಮೇಹ, ರಕ್ತದೊತ್ತಡ, ಆ್ಯಂಟಿಬಯೋಟಿಕ್ಸ್‌, ಕೆಮ್ಮಿನ ಸಿರಪ್‌, ಮಾನಸಿಕ ಒತ್ತಡ, ಹಾವು ಕಡಿತ, ಎಚ್ಐವಿ ಸೋಂಕಿತರು ಬಳಸುವ ಔಷಧ, ಥಲಸ್ಸೇಮಿಯಾ ಚಿಕಿತ್ಸೆ ಬಳಸುವ ಔಷಧ, ಅಸ್ತಮಾಕ್ಕೆ ಬಳಸುವ ಔಷಧಗಳು ಕೂಡಾ ಸೇರಿವೆ. 

ಹೀಗೆ ದರ ನಿಯಂತ್ರಣಕ್ಕೆ ಒಳಪಟ್ಟ ಬಹುತೇಕ ಔಷಧಗಳು ಖ್ಯಾತನಾಮ ಕಂಪನಿಗಳಾದ ಸನ್‌ ಫಾರ್ಮಾ, ಆಲ್ಕೆಮ್‌, ಸಿಪ್ಲಾ, ಮ್ಯಾನ್‌ಕೈಂಡ್‌, ಲುಪಿನ್‌, ಟೊರೆಂಟ್‌ ಫಾರ್ಮಾ ಉತ್ಪಾದಿಸುವಂಥ ಔಷಧಗಳಾಗಿವೆ.

ಸಿಂಹ, ಹುಲಿ ರಕ್ಷಣೆಗೆ ದೇಶಗಳ ಒಕ್ಕೂಟ ರಚನೆಗೆ ಸಂಪುಟ ಅಸ್ತು

ನವದೆಹಲಿ: ಚಿರತೆ, ಹುಲಿ, ಸಿಂಹವೂ ಸೇರಿದಂತೆ ಬೆಕ್ಕಿನ ಪ್ರಭೇದದ ದೈತ್ಯ ಪ್ರಾಣಿಗಳ ಸಂರಕ್ಷಣೆಯ ಧ್ಯೇಯದೊಂದಿಗೆ ಸ್ಥಾಪಿಸಲು ಉದ್ದೇಶಿಸಲಾಗಿರುವ ಅಂತಾರಾಷ್ಟ್ರೀಯ ದೈತ್ಯ ಬೆಕ್ಕು ಪ್ರಭೇದಗಳ ಒಕ್ಕೂಟ (ಐಬಿಸಿಎ) ರಚನೆಗೆ ಕೇಂದ್ರ ಸರ್ಕಾರದ ಸಚಿವ ಸಂಪುಟ ಒಪ್ಪಿಗೆ ನೀಡಿದೆ. 

ಈ ಒಕ್ಕೂಟದ ಕೇಂದ್ರ ಕಚೇರಿಯು ಭಾರತದಲ್ಲಿ ಇರಲಿದ್ದು, ಬೆಕ್ಕಿನ ಪ್ರಭೇದಕ್ಕೆ ಸೇರಿದ ಬೃಹತ್‌ ಪ್ರಾಣಿಗಳು ಇರುವ 96 ರಾಷ್ಟ್ರಗಳು ಈ ಒಕ್ಕೂಟ ಸೇರುವ ಮೂಲಕ ಅವುಗಳ ಸಂರಕ್ಷಣೆ ಮಾಡಲು ಏಕರೂಪದ ಯೋಜನೆ ರೂಪಿಸುವುದು ಇದರ ಪ್ರಾಥಮಿಕ ಉದ್ದೇಶವಾಗಿದೆ. 

ಸೇನಾ ಪರೀಕ್ಷೆಯಲ್ಲಿ ಫೇಲಾಗಿದ್ದಕ್ಕೆ ನೊಂದು ಯುವಕ ಆತ್ಮಹತ್ಯೆ

ಶೃಂಗೇರಿ: ಸೇನಾ ನೇಮಕಾತಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿದ್ದರಿಂದ ಮನನೊಂದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನಲ್ಲಿ ಬುಧವಾರ ನಡೆದಿದೆ. 

ಮರ್ಕಲ್‌ ಪಂಚಾಯಿತಿ ವ್ಯಾಪ್ತಿಯ ಕಿಗ್ಗಾ ಯಡದಾಳು ಗ್ರಾಮದ ಕಾರ್ತಿಕ್‌ (23) ಆತ್ಮಹತ್ಯೆಗೆ ಶರಣಾದ ಯುವಕ. ಈತ ಭಾರತೀಯ ಸೇನೆಗೆ ಸೇರುವ ಹಂಬಲದಿಂದ ಸೇನಾ ಪರೀಕ್ಷೆಗೆ ಹಾಜರಾಗಿ ಪರೀಕ್ಷೆ ಬರೆದಿದ್ದ. 

ಆದರೆ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿದ್ದರಿಂದ ಡೆತ್‌ ನೋಟ್‌ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೇ 1ರಿಂದ ರೈಲು ಸಂಚಾರ ಬಂದ್‌: ನೌಕರರ ಎಚ್ಚರಿಕೆ

ನವದೆಹಲಿ: ತಮಗೆ ನೀಡಲಾಗುತ್ತಿದ್ದ ಹಳೆ ಪಿಂಚಣಿ ಪದ್ಧತಿಯನ್ನು ಮರುಜಾರಿ ಮಾಡಬೇಕು. ಇಲ್ಲದಿದ್ದರೆ ಮೇ 1ರಿಂದ ರೈಲು ಸಂಚಾರ ನಿಲ್ಲಿಸುವುದಾಗಿ ಎಂದು ರೈಲ್ವೆ ನೌಕರರ ಒಕ್ಕೂಟ, ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಹಳೆ ಪಿಂಚಣಿ ಪದ್ಧತಿ ಜಾರಿ ಮಾಡುವಂತೆ ಹಲವು ಬಾರಿ ಎಲ್ಲ ಮಾರ್ಗದಲ್ಲಿಯೂ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ ಸರ್ಕಾರ ಜಾರಿ ಮಾಡುವ ಯಾವುದೇ ತೀರ್ಮಾನಕ್ಕೆ ಬಂದಿಲ್ಲ ಎಂದು ಹೇಳಿದೆ.