ಮೂಲ ಸಮಸ್ಯೆ ನಿವಾರಣೆಗೆ ಬಜೆಟಲ್ಲಿ ಯೋಜನೆಗಳೇ ಇಲ್ಲ

| Published : Mar 01 2024, 02:16 AM IST / Updated: Mar 01 2024, 08:15 AM IST

ಮೂಲ ಸಮಸ್ಯೆ ನಿವಾರಣೆಗೆ ಬಜೆಟಲ್ಲಿ ಯೋಜನೆಗಳೇ ಇಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಬಿಳಿಯಾನೆಯಂತಹ ಯೋಜನೆಗಳು ಬೆಂಗಳೂರಿಗೆ ಬೇಕಿಲ್ಲ. ಆದರೆ ನೀರಿನ ಸಮಸ್ಯೆ ಬಗ್ಗೆ ಬಜೆಟ್‌ ಚಕಾರ ಎತ್ತಿಲ್ಲ ಎಂಬುದಾಗಿ ನಗರ ಯೋಜನಾ ತಜ್ಞರಾಗಿರುವ ಎನ್‌ ಆರ್‌ ಸುರೇಶ್‌ ವಿಶ್ಲೇಷಣೆ ಮಾಡಿದ್ದಾರೆ.

ಪ್ರಮುಖವಾಗಿ ಸುರಂಗ ರಸ್ತೆ ನಿರ್ಮಾಣ, ಸ್ಕೈ-ಡೆಕ್‌ನಂತಹ ಬಿಳಿಯಾನೆ ಯೋಜನೆಗಳ ಅವಶ್ಯಕತೆ ನಗರಕ್ಕೆ ಬೇಕಿಲ್ಲ. ಅಲ್ಲದೆ, ಹಲವು ತಜ್ಞರು ಈಗಾಗಲೇ ಸುರಂಗ ರಸ್ತೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. 

ನಗರಕ್ಕೆ ಪ್ರಯೋಜವಾಗುವ ಯೋಜನೆಗಳ ಬಗ್ಗೆ ಬಜೆಟ್‌ನಲ್ಲಿ ಗಮನಹರಿಸಿಲ್ಲ. ಪ್ರಮುಖವಾಗಿ ಪರಿಸರ ಸಂರಕ್ಷಣೆಗೆ ಅಗತ್ಯವಿರುವ ಯೋಜನೆ ರೂಪಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. 

ಸಸಿಗಳನ್ನು ನೆಡಲು ಅನುದಾನ ಮೀಸಲಿಟ್ಟಿದ್ದರೂ, ಈವರೆಗೆ ನೆಡಲಾಗಿರುವ ಸಸಿಗಳನ್ನು ನಿರ್ವಹಣೆ ಮಾಡಿರುವ ಬಗ್ಗೆ ಯಾವುದೇ ಮಾಹಿತಿಯನ್ನೂ ನೀಡಿಲ್ಲ.

ಕುಡಿಯುವ ನೀರಿನ ಸಮಸ್ಯೆ ಉಲ್ಭಣಿಸುತ್ತಿದ್ದರೂ, ಅದಕ್ಕೆ ಶಾಶ್ವತ ಪರಿಹಾರ ನೀಡುವಲ್ಲಿ ಬಜೆಟ್‌ ವಿಫಲವಾಗಿದೆ. ಅಲ್ಲದೆ, ಆ ಬಗ್ಗೆ ಎಲ್ಲಿಯೂ ಉಲ್ಲೇಖಿಸದಿರುವುದು ನಿರಾಶಾದಾಯಕ ಸಂಗತಿ. 

ಹಾಗೆಯೇ, ಹೈಕೋರ್ಟ್‌ ಬೇಡ ಎಂದಿರುವ ಸಾರ್ವಜನಿಕ ಸ್ಥಳಗಳಲ್ಲಿ ಜಾಹೀರಾತು ಪ್ರದರ್ಶನವನ್ನು ಮತ್ತೆ ಆರಂಭಿಸುವುದಾಗಿ ಬಜೆಟ್‌ನಲ್ಲಿ ಹೇಳಲಾಗಿದೆ. ಇದು ಬೆಂಗಳೂರಿಗೆ ಮಾರಕವಾಗಲಿದೆ. 

₹500 ಕೋಟಿ ಆದಾಯ ಗಳಿಕೆಗೆ ಜಾಹೀರಾತು ನೀತಿ ಜಾರಿಗೆ ತಂದು ಜಾಹೀರಾತು ಪ್ರದರ್ಶನಕ್ಕೆ ಅನುಮತಿ ನೀಡಲು ಮುಂದಾಗಿರುವುದು, ಸಮಂಜಸವಲ್ಲ.

ಅದರ ಬದಲು ಆಸ್ತಿ ತೆರಿಗೆ ಸಮರ್ಪಕ ವಸೂಲಿ, ಆದಾಯ ಸೋರಿಕೆ ತಡೆಯಂತಹ ಕ್ರಮಗಳಿಂದಲೇ ₹1 ಸಾವಿರ ಕೋಟಿ ಹೆಚ್ಚಿನ ಆದಾಯಗಳಿಸಬಹುದಿತ್ತು. ಹೀಗಾಗಿ ಜಾಹೀರಾತು ನೀತಿ ಜಾರಿ ಬಗ್ಗೆ ಮತ್ತೊಮ್ಮೆ ಯೋಚಿಸುವುದು ಒಳ್ಳೆಯದು.

 ಬಿಬಿಎಂಪಿ ಆರ್ಥಿಕ ಪರಿಸ್ಥಿತಿಯ ಲೆಕ್ಕಪರಿಶೋಧನೆಯ ಅಗತ್ಯವಿದೆ. ಆ ಮೂಲಕ ಆದಾಯ ಸೋರಿಕೆ ಸೇರಿ ಆರ್ಥಿಕ ಪರಿಸ್ಥಿತಿ ಕುಂಠಿತವಾಗುವಂತೆ ಮಾಡಿರುವ ಅಂಶಗಳು ಬೆಳಕಿಗೆ ಬರಲಿವೆ. ಒಟ್ಟಾರೆ, ಜನಪ್ರತಿನಿಧಿಗಳಿಲ್ಲದ ಬಿಬಿಎಂಪಿಯಲ್ಲಿ ಅಧಿಕಾರಿಗಳು ತಮ್ಮ ದೃಷ್ಟಿಕೋನದಲ್ಲಿ ಬಜೆಟ್‌ ಮಂಡಿಸಿದ್ದಾರೆ.