ಹೊಸ ವಿತ್ತೀಯ ವರ್ಷಕ್ಕೆ ಬೇಕಿದೆ ಹೊಸ ಸಂಕಲ್ಪಗಳು!

| Published : Mar 31 2024, 02:05 AM IST

ಸಾರಾಂಶ

ನಾಳೆಯಿಂದ ಹೊಸ ಹಣಕಾಸು ವರ್ಷ ಆರಂಭ. ಹೊಸ ಆರ್ಥಿಕ ವರ್ಷದಲ್ಲಿ ಹೊಸ ಆರ್ಥಿಕ ಶಿಸ್ತನ್ನು ರೂಢಿಸಿಕೊಳ್ಳಲು ಬಯಸುವವರಿಗೆ ಈ ಲೇಖನ ಉಪಯುಕ್ತ ಮಾರ್ಗದರ್ಶಿ.

ನಾಳೆಯಿಂದ ಹೊಸ ಹಣಕಾಸು ವರ್ಷ ಆರಂಭ. ಹೊಸ ಆರ್ಥಿಕ ವರ್ಷದಲ್ಲಿ ಹೊಸ ಆರ್ಥಿಕ ಶಿಸ್ತನ್ನು ರೂಢಿಸಿಕೊಳ್ಳಲು ಬಯಸುವವರಿಗೆ ಈ ಲೇಖನ ಉಪಯುಕ್ತ ಮಾರ್ಗದರ್ಶಿ.- ರಂಗಸ್ವಾಮಿ ಮೂಕನಹಳ್ಳಿಹೊಸ ಹಣಕಾಸು ವರ್ಷದ ಪ್ರಾರಂಭದಲ್ಲಿ ಮತ್ತೊಮ್ಮೆ ಬಂದು ನಿಂತಿದ್ದೇವೆ. ಸಾಮಾನ್ಯವಾಗಿ ಹೊಸ ವರ್ಷಕ್ಕೆ ಹೊಸ ಸಂಕಲ್ಪಗಳನ್ನು ಮಾಡಿಕೊಳ್ಳುವುದು ಸಹಜ. ಹಾಗೆಯೇ ಹೊಸ ಫೈನಾನ್ಸಿಯಲ್ ಇಯರ್‌ನಲ್ಲಿ ನಾವು ಕೆಲವೊಂದು ಹೊಸ ನಿರ್ಧಾರಗಳನ್ನು, ಸಂಕಲ್ಪವನ್ನು ಮಾಡಬೇಕಾಗುತ್ತದೆ. ನಿಮಗೆಲ್ಲಾ ಗೊತ್ತೇ ಇದೆ, ನಾವು ಇಂದು ಜೀವಿಸುತ್ತಿರುವ ಕಾಲಘಟ್ಟ ಅತ್ಯಂತ ಅನಿಶ್ಚಿತತೆಯಿಂದ ಕೂಡಿದೆ. ನಿನ್ನೆಯವರೆಗೆ ಲವಲವಿಕೆಯಿಂದ ಇದ್ದವರು ಇಂದು ಇಲ್ಲ ಎನ್ನುವಂತಾಗುತ್ತಿದೆ. ಹೀಗಾಗಿ ಎಲ್ಲಕ್ಕಿಂತ ಮುಖ್ಯವಾಗಿ ಎರಡು ಕೆಲಸವನ್ನು ನೀವು ಮಾಡಲೇಬೇಕು. ಈಗ ಹೇಳಲು ಹೊರಟ ಎರಡು ಕೆಲಸಗಳು ಕೂಡ ಹೂಡಿಕೆ ಎನ್ನಿಸುವುದಿಲ್ಲ. ಪ್ರಥಮ ನೋಟಕ್ಕೆ ಖರ್ಚು ಎನ್ನಿಸುತ್ತವೆ. ಆದರೆ ದೀರ್ಘಾವಧಿಯಲ್ಲಿ ಅಥವಾ ಅವುಗಳನ್ನು ಬಳಸಬೇಕಾದ ಸಂದರ್ಭದಲ್ಲಿ ಖರ್ಚು ಎನ್ನಿಸಿದ್ದು ಖರ್ಚಲ್ಲ, ಮಹತ್ತರ ಹೂಡಿಕೆ ಎನ್ನುವುದರ ಅರಿವಾಗುತ್ತದೆ.

ಎಲ್ಲಕ್ಕೂ ಮೊದಲಿಗೆ ಆರೋಗ್ಯದ ಮೇಲಿನ ಖರ್ಚು ಇಂದಿನ ದಿನಗಳಲ್ಲಿ ಬಹಳವಾಗಿದೆ. ಯಾರಿಗೆ ಯಾವ ಖಾಯಿಲೆ ಬೇಕಾದರೂ ಬರಬಹುದು. ಆಸ್ಪತ್ರೆ ಖರ್ಚು ಕೆಲವು ಲಕ್ಷಗಳಿಗೆ ಸೀಮಿತವಾಗಿಲ್ಲ. ಅದು ಐವತ್ತು, ಅರವತ್ತು ಲಕ್ಷದವರೆಗೂ ಹೋಗುತ್ತಿದೆ. ಇಂತಹ ಸಮಯದಲ್ಲಿ ಪ್ರತಿಯೊಬ್ಬರೂ ಆರೋಗ್ಯ ವಿಮೆ ಮಾಡಿಸುವುದು ಕಡ್ಡಾಯ. ನಾಲ್ಕು ಜನರ ಕುಟುಂಬ ಇಂದು ಕನಿಷ್ಠ ಐವತ್ತು ಲಕ್ಷ ರೂಪಾಯಿ ಕವರೇಜ್ ಪಡೆದುಕೊಳ್ಳಬೇಕು. ವಾಹನ ವಿಮೆಗೆ ವ್ಯಯಿಸುವುದಕ್ಕಿಂತ ಕಡಿಮೆ ಪ್ರೀಮಿಯಂನಲ್ಲಿ ಈ ಸೌಲಭ್ಯಗಳು ಸಿಗುತ್ತಿವೆ. ಆರೋಗ್ಯ ವಿಮೆ ಮಾಡಿಸಿಲ್ಲದಿದ್ದರೆ ತಕ್ಷಣ ಮಾಡಿಸಿ. ವಾಹನ ವಿಮೆ ಕಡ್ಡಾಯ ಮಾಡಿರುವ ಸರಕಾರ, ಆರೋಗ್ಯ ವಿಮೆಯನ್ನು ಕಡ್ಡಾಯ ಮಾಡಿಲ್ಲ. ಆದರೂ ಇದನ್ನು ಮಾಡಿಸುವುದು ನಮ್ಮ ಹಣಕಾಸು ಆರೋಗ್ಯದ ದೃಷ್ಟಿಯಿಂದ ಕಡ್ಡಾಯ.ಇನ್ನು ಜೀವ ವಿಮೆ, ಇದರಲ್ಲಿ ಟರ್ಮ್ ಇನ್ಸೂರೆನ್ಸ್ ಎನ್ನುವುದನ್ನು ಮಾಡಿಸಲೇ ಬೇಕು. ಇದು ಎಂಡೋಮೆಂಟ್ ಪಾಲಿಸಿಗಳಂತಲ್ಲ, ಇಲ್ಲಿ ಕಟ್ಟಿದ ಪ್ರೀಮಿಯಂ ಹಣ ಪೂರ್ತಿ ಖರ್ಚು. ಅಂದರೆ ನಾವು ಯಾವುದೇ ತೊಂದರೆಯಿಲ್ಲದೆ ಉಳಿದುಕೊಂಡರೆ ನಮಗೆ ಯಾವುದೇ ಹಣ ವಾಪಸ್ಸು ಬರುವುದಿಲ್ಲ. ಇದೇನಿದ್ದರೂ ಜೀವಹಾನಿ ಆದಾಗ ಮಾತ್ರ ಉಪಯೋಗಕ್ಕೆ ಬರುತ್ತದೆ. ಹೀಗಾಗಿ ಇದರ ಮೇಲೆ ಭಾರತೀಯರಿಗೆ ಅಷ್ಟು ಒಲವಿಲ್ಲ. ಆದರೆ ಇಂದಿನ ಅಸ್ಥಿರ ಸಮಯದಲ್ಲಿ ಈ ರೀತಿಯ ಇನ್ಸೂರೆನ್ಸ್ ಪಾಲಿಸಿ ಮಾಡಿಸುವುದು ಬಹಳ ಮುಖ್ಯ.ಮೇಲೆ ಹೇಳಿದ ಎರಡೂ ವಿಮೆಗಳಿಗೆ ಒಟ್ಟು ವಾರ್ಷಿಕ 20/25 ಸಾವಿರ ರೂಪಾಯಿ ಖರ್ಚಾಗುತ್ತದೆ. ಆದರೆ ಅದು ನೀಡುವ ನೆಮ್ಮದಿ , ಭದ್ರತೆಗೆ ಬೆಲೆ ಕಟ್ಟಲಾಗುವುದಿಲ್ಲ. ಹೀಗಾಗಿ ಮಧ್ಯಮ ವರ್ಗದ ಜನ ಮೊದಲಿಗೆ ಇದರ ಬಗ್ಗೆ ಗಮನ ನೀಡಬೇಕು. ಉಳಿದಂತೆ ಹೊಸ ಫೈನಾನ್ಸಿಯಲ್ ಇಯರ್‌ನಲ್ಲಿ ಬದಲು ಮಾಡಿಕೊಳ್ಳಬೇಕಿರುವುದು ಮನಸ್ಥಿತಿ. ಹೌದು, ಮಧ್ಯಮವರ್ಗ ಆದಾಯ ಮೈನಸ್ ಖರ್ಚು ಉಳಿದದ್ದು ಉಳಿಕೆ ಮತ್ತು ಹೂಡಿಕೆ ಎನ್ನುವ ಸಿದ್ದಾಂತಕ್ಕೆ ಕಟ್ಟು ಬಿದ್ದಿದೆ. ಆದರೆ ಅದು ಆದಾಯ ಮೈನಸ್ ಉಳಿತಾಯ, ಹೂಡಿಕೆ ನಂತರ ಮಿಕ್ಕಿದ್ದು ಖರ್ಚಿಗೆ ಎನ್ನುವ ಮನೋಭಾವವನ್ನು ಬೆಳಸಿಕೊಳ್ಳಬೇಕು ಮತ್ತು ಅದರಂತೆ ನಡೆಯಬೇಕು. ಈ ವರ್ಷ ಏಪ್ರಿಲ್ 1ರಿಂದ ಇದನ್ನು ಅಳವಡಿಸಿಕೊಂಡು ಮುಂದಿನ ವರ್ಷದ ವೇಳೆಗೆ ಆಗಿರುವ ಬದಲಾವಣೆಯನ್ನು ದಾಖಲಿಸಿ ನೋಡಿ .ಎಲ್ಲಿ ಎಷ್ಟು ಹಣವನ್ನು ಹೂಡಬೇಕು ?ಇದೊಂದು ಮಿಲಿಯನ್ ಡಾಲರ್ ಪ್ರಶ್ನೆ. ಎಲ್ಲಿ ಮತ್ತು ಎಷ್ಟು ಹೂಡಿಕೆ ಮಾಡಬೇಕು ಎನ್ನುವುದಕ್ಕೆ ನಿಖರ ಸಿದ್ಧಾಂತ ಅಥವಾ ಫಾರ್ಮುಲಾಗಳು ಇಲ್ಲ. ಆದರೆ ಜಗತ್ತಿನಲ್ಲಿರುವ ಶ್ರೀಮಂತರು ಮಾಡುತ್ತಿರುವ ಹೂಡಿಕೆಯ ಆಧಾರದ ಮೇಲೆ ನಾವೊಂದಷ್ಟು ಫಾರ್ಮುಲಾವನ್ನು ಸಿದ್ಧ ಪಡಿಸಬಹುದು. ಅದರ ಪ್ರಕಾರ:1. Aggressive, ಹೆಚ್ಚು ಅಪಾಯವನ್ನು ತೆಗೆದುಕೊಳ್ಳಲು ಬಯಸುವ ಹೂಡಿಕೆದಾರರು:- 80 percent equities: ಅಂದರೆ ಸಂಸ್ಥೆಯ ಷೇರುಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ.-10 percent bonds, ಅಂದರೆ ಸಾಲದ ರೂಪದಲ್ಲಿ ಸಂಸ್ಥೆಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ.- 5 percent real estate, ಜಾಗ , ಜಮೀನು ಕಟ್ಟಡ ಮತ್ತು ರಿಯಲ್ ಎಸ್ಟೇಟ್ ವ್ಯಾಪಾರದಲ್ಲಿ ಪಾಲುದಾರಿಕೆಯಲ್ಲಿ ಹೂಡಿಕೆ ಮಾಡುತ್ತಿದ್ದಾರೆ.- 5 percent gold- ಉಳಿದ ಹಣವನ್ನು ದುರಿತಕಾಲದ ಡಾರ್ಲಿಂಗ್ ಎಂದು ಹೆಸರಾಗಿರುವ ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದಾರೆ.2. Moderate- ಮೀಡಿಯಂ ಅಪಾಯ ಅಂದರೆ ಅತ್ತ ಹೆಚ್ಚೂ ಅಲ್ಲ, ಇತ್ತ ಕಡಿಮೆಯೂ ಅಲ್ಲದ ಮಧ್ಯಮ ಕ್ರಮದ ಮಾರ್ಗವನ್ನು ಅನುಸರಿಸುತ್ತಿರುವರು ಹೂಡಿಕೆಯನ್ನು ಕೆಳಗಿನ ಪ್ರಮಾಣದಲ್ಲಿ ಬೇರೆ ಬೇರೆ ಅಸೆಟ್ ಕ್ಲಾಸ್‌ನಲ್ಲಿ ಮಾಡುತ್ತಿದ್ದಾರೆ . * 70 ಪ್ರತಿಶತ ಈಕ್ವಿಟಿಯಲ್ಲಿ ಹೂಡಿದ್ದಾರೆ .* 20 ಪ್ರತಿಶತ ಬಾಂಡ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ .* 5 ಪ್ರತಿಶತ ಹಣವನ್ನು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಿದ್ದಾರೆ.* 5 ಪ್ರತಿಶತ ಚಿನ್ನದ ಮೇಲಿನ ಹೂಡಿಕೆಗೆ ಮೀಸಲಿಟ್ಟಿದ್ದಾರೆ.Conservative ಅಥವಾ ಕಡಿಮೆ ಅಪಾಯವನ್ನು ಬಯಸುವ ಸಿರಿವಂತರು ಕೆಳಗಿನ ಅನುಪಾತದಲ್ಲಿ ಹೂಡಿಕೆ ಮಾಡಿದ್ದಾರೆ : 60 ಪ್ರತಿಶತ ಈಕ್ವಿಟಿಯಲ್ಲಿ : 20 ಪ್ರತಿಶತ ಬಾಂಡ್‌ಗಳಲ್ಲಿ: 13 ಪ್ರತಿಶತ ರಿಯಲ್ ಎಸ್ಟೇಟ್‌ನಲ್ಲಿ: 7 ಪ್ರತಿಶತ ಚಿನ್ನದ ಮೇಲೆ.ಯಾವ ಫಾರ್ಮುಲಾ ಬೆಸ್ಟ್? ಎಲ್ಲಿ ಹೂಡಿಕೆ ಮಾಡಿದರೆ ಸೇಫ್?ಇದು ಉತ್ತಮ ಮಾರ್ಗ, ಬೆಸ್ಟ್ ಫಾರ್ಮುಲಾ ಎನ್ನುವುದು ಯಾವುದೂ ಇಲ್ಲ. ಮೇಲಿನ ಅನುಪಾತದಲ್ಲಿ ಬಹಳಷ್ಟು ಶ್ರೀಮಂತರು ಹೂಡಿಕೆ ಮಾಡಿದ್ದಾರೆ, ಗೆದ್ದಿದ್ದಾರೆ. ಹೀಗಾಗಿ ಇವುಗಳನ್ನು ಸಮಾಜ ಅನುಸರಿಸಲು ತೊಡಗಿದೆ. ಸೇಫ್ ಎನ್ನುವುದು ಕೂಡ ಭ್ರಮೆ. ಈ ಭೂಮಿಯ ಮೇಲೆ ಯಾವುದೂ ಸುರಕ್ಷಿತ ಎನ್ನುವಂತಿಲ್ಲ. ಬ್ಯಾಂಕಿನಲ್ಲಿ ಇಟ್ಟ ಹಣ ಕೂಡ ಕೇವಲ ಐದು ಲಕ್ಷದವರೆಗೆ ಮಾತ್ರ ಸೇಫ್, ಏಕೆಂದರೆ ಅಷ್ಟು ಹಣಕ್ಕೆ ಮಾತ್ರ ವಿಮೆಯಿದೆ. ಇದರರ್ಥ ಉಳಿದದ್ದು ಅಪಾಯಕ್ಕೆ ತೆರೆದುಕೊಂಡಿದೆ. ಹೀಗಾಗಿ ಇದ್ದುದರಲ್ಲೇ ಅಳೆದು ತೂಗಿ ಅಪಾಯದ ಮಟ್ಟವನ್ನು ಗ್ರಹಿಸಿ ಹೂಡಿಕೆ ಮಾಡುವುದು ಜಾಣತನ. ಮೇಲಿನ ಎಲ್ಲವುಗಳನ್ನು ಗಮನಿಸಿ ಮತ್ತು ವೈಯಕ್ತಿಕ ಅನುಭವದ ಆಧಾರದ ಮೇಲೆ ಹೂಡಿಕೆಯ ಅನುಪಾತ ಕೆಳಗಿನ ರೀತಿಯಲಿದ್ದರೆ ಉತ್ತಮ . * 5೦ ಪ್ರತಿಶತ ಈಕ್ವಿಟಿ .* 2೦ ಪ್ರತಿಶತ ಬಾಂಡ್* 25 ಪ್ರತಿಶತ ಹಣವನ್ನು ರಿಯಲ್ ಎಸ್ಟೇಟ್‌. * 5 ಪ್ರತಿಶತ ಚಿನ್ನ ನೆನಪಿರಲಿ: ನಿರಂತರೆಯಿಂದ ಮಾತ್ರ ಮಾಡಿದ ಗಳಿಕೆ -ಉಳಿಕೆ -ಹೂಡಿಕೆಗೆ ನಿಜವಾದ ಬಲ, ಅರ್ಥ ಸಿಗುತ್ತದೆ.