‘ರೂಹಿಲ್ಲದ ಚೆಲುವ’ ಬಹುಶ್ರುತ ವಚನಕಾರ್ತಿ ಅಕ್ಕಮಹಾದೇವಿ ಕುರಿತ ಐತಿಹಾಸಿಕ ಕಾದಂಬರಿ

| Published : Mar 29 2024, 12:45 AM IST / Updated: Mar 29 2024, 02:43 PM IST

‘ರೂಹಿಲ್ಲದ ಚೆಲುವ’ ಬಹುಶ್ರುತ ವಚನಕಾರ್ತಿ ಅಕ್ಕಮಹಾದೇವಿ ಕುರಿತ ಐತಿಹಾಸಿಕ ಕಾದಂಬರಿ
Share this Article
  • FB
  • TW
  • Linkdin
  • Email

ಸಾರಾಂಶ

ಅಕ್ಕಮಹಾದೇವಿಯವರ ಜೀವನ ಪಯಣದ ವಾಸ್ತವ ಕಥನ ಬಹುಮಟ್ಟಿಗೆ ಅಮೂರ್ತವಾಗಿಯೇ ಉಳಿದಿದೆ. ಹೀಗೆ ಅದೃಶ್ಯವಾಗಿರುವ ಅಕ್ಕನ ಜೀವನಯಾತ್ರೆಯ ಹೆಜ್ಜೆಗುರುತುಗಳನ್ನು ಸಮಕಾಲೀನ ವಾಸ್ತವತೆಯ ಚೌಕಟ್ಟಿನಲ್ಲಿ ಮೂರ್ತಗೊಳಿಸಿಕೊಳ್ಳುವ ಸೃಜನಶೀಲ ಸಾಹಸವೇ ರೂಹಿಲ್ಲದ ಚೆಲುವ ಕಾದಂಬರಿ.

ಕನ್ನಡಪ್ರಭ ವಾರ್ತೆ ಮೈಸೂರು

ವಿ.ಮಾ. ಜಗದೀಶ್ ಅವರ ರೂಹಿಲ್ಲದ ಚೆಲುವ- ಬಹುಶ್ರುತ ವಚನಕಾರ್ತಿ ಅಕ್ಕಮಹಾದೇವಿ ಅವರನ್ನು ಕುರಿತ ಐತಿಹಾಸಿಕ ಕಾದಂಬರಿ.

ಈಗಾಗಲೇ ಸತ್ಯವಾನ್ ಸಾವಿತ್ರಿ ಅವರನ್ನು ಕುರಿತು ಅಮೃತಪಥ- ಮಹಾಕಾವ್ಯ ರಚಿಸಿ ಸಾರಸ್ವತ ಲೋಕದ ಗಮನ ಸೆಳೆದಿದ್ದ ಜಗದೀಶ್ ಅವರು, ಇದೀಗ ಅಕ್ಕಮಹಾದೇವಿಯವರ ಜೀವನದ ಪ್ರಮುಖ ಘಟ್ಟಗಳನ್ನು ಆಧರಿಸಿ, ಉಡುತಡಿಯಲ್ಲಿ, ಕಲ್ಯಾಣ ಪಥದಲ್ಲಿ, ಕಲ್ಯಾಣದಲ್ಲಿ, ಕದಳಿಯ ಮಡಿಲಲ್ಲಿ- ಹೀಗೆ ನಾಲ್ಕು ಅಧ್ಯಾಯಗಳಲ್ಲಿ ಕಾದಂಬರಿಯನ್ನು ಹೆಣೆದಿದ್ದಾರೆ.

ವಯಸ್ಸಿನಲ್ಲಿ ಕಿರಿಯರಾಗಿದ್ದರೂ ಮಹತ್ತನ್ನು ಸಾಧಿಸಿದ್ದ ಅಕ್ಕಮಹಾದೇವಿ ಅವರ ಬಗ್ಗೆ ದೊರೆತಿರುವ ಮಾಹಿತಿಗಳನ್ನು ಅವಲಂಬಿಸದೇ ಅಂದಿನ ಘಟನೆಗಳನ್ನು ವಿಭಿನ್ನ ದೃಷ್ಟಿಕೋನ, ವಾಸ್ತವ ಪ್ರಜ್ಞೆ, ವೈಚಾರಿಕ ನಿಲುವಿನ ಹಿನ್ನೆಲೆಯಲ್ಲಿ ಪುನರ್ ಕಟ್ಟಿಕೊಡಲು ಲೇಖಕರು ಯತ್ನಿಸಿದ್ದಾರೆ.

ಅಕ್ಕಮಹಾದೇವಿಯವರ ಜೀವನ ಪಯಣದ ವಾಸ್ತವ ಕಥನ ಬಹುಮಟ್ಟಿಗೆ ಅಮೂರ್ತವಾಗಿಯೇ ಉಳಿದಿದೆ. ಹೀಗೆ ಅದೃಶ್ಯವಾಗಿರುವ ಅಕ್ಕನ ಜೀವನಯಾತ್ರೆಯ ಹೆಜ್ಜೆಗುರುತುಗಳನ್ನು ಸಮಕಾಲೀನ ವಾಸ್ತವತೆಯ ಚೌಕಟ್ಟಿನಲ್ಲಿ ಮೂರ್ತಗೊಳಿಸಿಕೊಳ್ಳುವ ಸೃಜನಶೀಲ ಸಾಹಸವೇ ರೂಹಿಲ್ಲದ ಚೆಲುವ ಕಾದಂಬರಿ.

ಅಕ್ಕನ ಪಾರಮಾರ್ಥಿಕ ಹಂಬಲವನ್ನು ಮಧುರಭಕ್ತಿಯ ಉತ್ಕಟತೆ, ದೈವೀ ಅನುರಕ್ತಿಯ ತನ್ಮಯತೆ ಮತ್ತು ಲೋಕವಿರೋಧಿಯೆನಿಸುವ ನಿರ್ಭಯದ ನಡೆಯನ್ನು ಸಮಕಾಲೀನ ಸಂದರ್ಭದ ವಾಸ್ತವತೆಯ ಬಿತ್ತಿಯಲ್ಲಿ ಮರು ವ್ಯಾಖ್ಯಾನಿಸುವ ಪ್ರಯತ್ನ ಇಲ್ಲಿದೆ.

ಈ ಕಾದಂಬರಿ ಕೇವಲ ಅಕ್ಕಮಹಾದೇವಿಯವರ ಕಥನಕ್ಕೆ ಮಾತ್ರ ಸೀಮಿತವಾಗಿಲ್ಲ. ಶರಣ ಧರ್ಮದ ಸಾಮಾಜಿಕ, ತಾತ್ವಿಕ, ವೈಚಾರಿಕ ಚಿಂತನೆಗಳನ್ನು ಸಮಕಾಲೀನ ಸಂದರ್ಭದಲ್ಲಿ ಚಿಂತಿಸುವ ಆಯಾಮವನ್ನು ಕಲ್ಪಿಸಿಕೊಟ್ಟಿದೆ.

ಮೈಸೂರಿನ ಶ್ರುತಿ ಪ್ರಕಾಶನ ಪ್ರಕಟಿಸಿದ್ದು, ಕೃತಿ ಕುರಿತು ಪ್ರೊ.ಶಾಂತಾ ಇಮ್ರಾಪುರ, ಪ್ರೊ.ಡಿ.ಟಿ. ಬಸವರಾಜ್ ಅವರ ಅಭಿಪ್ರಾಯಗಳಿವೆ. ಆಸಕ್ತರು ಜೀನಹಳ್ಳಿ ಸಿದ್ದಲಿಂಗಪ್ಪ, ಮೊ. 98860 26085, ವಿ.ಮಾ. ಜಗದೀಶ್, ಮೊ. 99641 46609 ಸಂಪರ್ಕಿಸಬಹುದು.