ಗ್ರಾಮೀಣ ಜನರಿಗಾಗಿ ಹೃದಯ ವೈಶಾಲ್ಯ ಯೋಜನೆ ಅನುಷ್ಠಾನ

| Published : Oct 06 2023, 01:11 AM IST

ಗ್ರಾಮೀಣ ಜನರಿಗಾಗಿ ಹೃದಯ ವೈಶಾಲ್ಯ ಯೋಜನೆ ಅನುಷ್ಠಾನ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮೀಣ ಜನರಿಗಾಗಿ ಹೃದಯ ವೈಶಾಲ್ಯ ಯೋಜನೆ ಅನುಷ್ಠಾನ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಸಿದ ಪ್ರಯೋಗ ಯಶಸ್ವಿ, ಮಂಡ್ಯದಲ್ಲಿ ಈಗ ಜಾರಿ
- ಜಿಲ್ಲೆಯ ೩೫ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರ ಉಚಿತ ಪೂರೈಕೆ - ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಸಿದ ಪ್ರಯೋಗ ಯಶಸ್ವಿ, ಮಂಡ್ಯದಲ್ಲಿ ಈಗ ಜಾರಿ ವಿಶೇಷ ವರದಿ ಕನ್ನಡಪ್ರಭ ವಾರ್ತೆ ಮಂಡ್ಯ ಗ್ರಾಮೀಣ ಜನರ ಆರೋಗ್ಯವನ್ನು ಕಾಪಾಡುವ ಸಲುವಾಗಿ ಹೃದಯ ವೈಶಾಲ್ಯ ಯೋಜನೆಯನ್ನು ಮೊದಲ ಬಾರಿಗೆ ಜಿಲ್ಲೆಯಲ್ಲಿ ಜಾರಿಗೊಳಿಸಲಾಗುತ್ತಿದೆ. ಮಂಗಳೂರಿನ ಕಾರ್ಡಿಯಾಲಜಿ ಅಟ್ ಡೋರ್‌ಸ್ಟೆಪ್ ಫೌಂಡೇಷನ್ ಸಹಯೋಗದಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಪ್ರಸ್ತುತ ಹೃದಯ ಸಂಬಂಧಿ ಆರೋಗ್ಯ ಸಮಸ್ಯೆಗಳು ಹೆಚ್ಚು ವರದಿಯಾಗುತ್ತಿವೆ. ಗ್ರಾಮೀಣ ಭಾಗದ ಜನರು ತಮ್ಮ ಹೃದಯ ಸಂಬಂಧಿತ ಪರೀಕ್ಷೆಗಳನ್ನು ಸೂಕ್ತ ಸಮಯದಲ್ಲಿ ತಪಾಸಣೆ ಮಾಡಿಸಿಕೊಳ್ಳದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಅವರ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಹೃದಯ ವೈಶಾಲ್ಯ ಯೋಜನೆಯನ್ನು ಜಿಲ್ಲೆಗೆ ಪರಿಚಯಿಸಿದ್ದಾರೆ. ಡಾ.ಕುಮಾರ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಸಮಯದಲ್ಲಿ ಕಾರ್ಪೋರೇಟ್‌ ಸಂಸ್ಥೆಯವರ ಗಮನ ಸೆಳೆದು ಈ ಯೋಜನೆ ಅನುಷ್ಠಾನಗೊಳಿಸಿ ಗ್ರಾಮೀಣ ಜನರಿಗೆ ಅನುಕೂಲ ಕಲ್ಪಿಸಿಕೊಟ್ಟಿದ್ದರು. ಸುಮಾರು 200ಕ್ಕೂ ಹೆಚ್ಚು ಇಸಿಜಿ ಯಂತ್ರಗಳನ್ನು ಉಚಿತವಾಗಿ ದೊರಕಿಸಿದ್ದರು. ಪರಿಣಾಮ 1.50 ಲಕ್ಷಕ್ಕೂ ಹೆಚ್ಚು ಜನರು ಪ್ರಯೋಜನ ಪಡೆದುಕೊಂಡಿದ್ದರು. ಅದೇ ಅನುಕೂಲವನ್ನು ಜಿಲ್ಲೆಯ ಜನರಿಗೂ ಒದಗಿಸಬೇಕೆಂಬ ಸದಾಶಯದೊಂದಿಗೆ ಯೋಜನೆಯನ್ನು ಸಕ್ಕರೆ ನಾಡಿಗೆ ತಂದಿದ್ದಾರೆ. ಹೃದಯಕ್ಕೆ ಸಂಬಂಧಿಸಿದ ಯೋಜನೆಯಾಗಿದ್ದರಿಂದ ಇದಕ್ಕೆ ಹೃದಯ ವೈಶಾಲ್ಯ ಯೋಜನೆ ಎಂಬ ಹೆಸರನ್ನು ಡಾ.ಕುಮಾರ ಅವರೇ ಇಟ್ಟಿರುವುದು ಮತ್ತೊಂದು ವಿಶೇಷ. ಮಂಗಳೂರಿನ ಕಾರ್ಡಿಯಾಲಜಿ ಅಟ್ ಡೋರ್‌ಸ್ಟೆಪ್ ಫೌಂಡೇಷನ್ (ಸಿಎಡಿ) ಸಹಯೋಗದಲ್ಲಿ ಈ ಯೋಜನೆಯನ್ನು ಕಾರ್ಪೋರೇಟ್‌ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ಅನುದಾನದಡಿ ಜಾರಿಗೊಳಿಸಲಾಗುತ್ತಿದೆ. ಸಂಸ್ಥೆಯವರು ಉಚಿತವಾಗಿ ಇಸಿಜಿ ಯಂತ್ರಗಳನ್ನು ಆಯ್ಕೆ ಮಾಡಿದ ಪ್ರಾಥಮಿಕ ಕೇಂದ್ರಗಳಿಗೆ ಪೂರೈಸಲಿದ್ದು, ನಂತರ ಸಂಬಂಧಿಸಿದ ವೈದ್ಯಾಧಿಕಾರಿಗಳಿಗೆ ತರಬೇತಿ ನೀಡಲಾಗುವುದು. ಗ್ರಾಮೀಣ ಭಾಗದ ಜನರು ತಮಗೆ ಅಗತ್ಯವೆನಿಸಿದ ಸಮಯದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತೆರಳಿ ಉಚಿತವಾಗಿ ಹೃದಯ ತಪಾಸಣೆ ಮಾಡಿಸಿಕೊಳ್ಳಬಹುದು. ತಪಾಸಣೆ ನಂತರ ವರದಿಯನ್ನು ಕೇಂದ್ರದ ವೈದ್ಯಾಧಿಕಾರಿಗಳು ಋತ್‌ಕುಕ್ಷಿ ಆ್ಯಪ್‌ಗೆ ಅಪ್‌ಲೋಡ್‌ ಮಾಡುವರು. ಬಳಿಕ ಕಾರ್ಡಿಯಾಲಜಿ ಅಟ್ ಡೋರ್ ಸ್ಟೆಪ್ ಫೌಂಡೇಷನ್ (ಸಿಎಡಿ) ಸಂಸ್ಥೆಯಡಿ ನೋಂದಣಿಯಾಗಿರುವ ತಜ್ಞ ವೈದ್ಯರು ಆನ್‌ಲೈನ್ ಮೂಲಕವೇ ವರದಿಯನ್ನು ಪರಿಶೀಲಿಸಿ ಹೃದಯದ ಸ್ಥಿತಿ-ಗತಿ ಬಗ್ಗೆ ತಿಳಿಸುವರು. ಸಮಸ್ಯೆ ಇದ್ದಲ್ಲಿ ಹತ್ತಿರದ ಆಸ್ಪತ್ರೆ ಅಥವಾ ಇನ್ಯಾವುದೇ ಆಸ್ಪತ್ರೆಗೆ ಭೇಟಿ ನೀಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಜಿಲ್ಲೆಯಲ್ಲಿ ಮೊದಲ ಹಂತವಾಗಿ ಪ್ರತಿ ತಾಲೂಕಿನಿಂದ ಐದು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅದರಂತೆ ಜಿಲ್ಲೆಯ ೩೫ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಉಚಿತವಾಗಿ ಇಸಿಜಿ ಯಂತ್ರಗಳನ್ನು ಒದಗಿಸಲಾಗಿದೆ. ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಿಗೆ ಹಾಗೂ ಸಿಹೆಚ್‌ಒಗಳಿಗೆ ತರಬೇತಿ ನೀಡಿರುವುದಾಗಿ ಜಿಲ್ಲಾಧಿಕಾರಿ ಡಾ.ಕುಮಾರ ‘ಕನ್ನಡಪ್ರಭ’ಕ್ಕೆ ತಿಳಿಸಿದರು. ----------------------- ಹೃದಯ ವೈಶಾಲ್ಯ ಯೋಜನೆಗೆ ಆಯ್ಕೆಯಾದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮಂಡ್ಯ: ಶಿವಪುರ, ಹಲ್ಲೇಗೆರೆ, ಕೆರಗೋಡು, ಬೇಬಿ, ಮಾರಗೌಡನಹಳ್ಳಿ ಮದ್ದೂರು: ಕೆ.ಹೊನ್ನಲಗೆರೆ, ಕದಲೂರು, ಕೆಸ್ತೂರು, ಕೌಡ್ಲೆ, ಕಾಡುಕೊತ್ತನಹಳ್ಳಿ ಮಳವಳ್ಳಿ: ಬೆಳಕವಾಡಿ, ಚಿಕ್ಕೇಬಾಗಿಲು, ಡಿ.ಹಲಸಹಳ್ಳಿ, ಹಲಗೂರು, ಅಂತರಹಳ್ಳಿ ಶ್ರೀರಂಗಪಟ್ಟಣ: ಬೆಳಗೊಳ, ಮಹದೇವಪುರ, ತಗ್ಗಹಳ್ಳಿ, ಅರಕೆರೆ, ಕೊತ್ತತ್ತಿ ಕೆ.ಆರ್‌.ಪೇಟೆ: ಸಂತೇಬಾಚಹಳ್ಳಿ, ಅಕ್ಕಿಹೆಬ್ಬಾಳು, ಶೀಳನೆರೆ, ಸಿಂಧಘಟ್ಟ, ಸಾರಂಗಿ ಮೇಲುಕೋಟೆ: ಚಿಕ್ಕಬ್ಯಾಡರಹಳ್ಳಿ, ನಾರಾಯಣಪುರ, ಕ್ಯಾತನಹಳ್ಳಿ, ಕೆರೆತೊಣ್ಣೂರು, ಬೆಳ್ಳಾಳೆ ನಾಗಮಂಗಲ: ಬಿಳಿಗುಂದ, ಕದಬಹಳ್ಳಿ, ಕಲಗೆರೆ, ದೇವಲಾಪುರ, ಚಿಣ್ಯ ----------- ಗ್ರಾಮೀಣ ಜನರಿಗೆ ಆರೋಗ್ಯದ ಬಗ್ಗೆ ಜಾಗೃತಿ ಇಲ್ಲ. ವೈದ್ಯಕೀಯ ಸೌಲಭ್ಯಗಳು ಕಡಿಮೆ ಇವೆ. ಸಮಯಕ್ಕೆ ಸರಿಯಾಗಿ ಹೃದಯ ತಪಾಸಣೆಗೆ ಒಳಗಾಗದೆ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚುತ್ತಿವೆ. ಈ ಕಾರಣದಿಂದ ಸಿಎಡಿ ಸಂಸ್ಥೆ ವತಿಯಿಂದ ಇಸಿಜಿ ಯಂತ್ರಗಳನ್ನು ೩೫ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನೀಡಿ ಅನುಕೂಲ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಆರೋಗ್ಯ ಕೇಂದ್ರಗಳಿಗೂ ಒದಗಿಸಲಾಗುವುದು. ಇಸಿಜಿ ವರದಿಯನ್ನು ಋತ್‌ಕುಕ್ಷಿ ಆ್ಯಪ್‌ಗೆ ಅಪ್‌ಲೋಡ್‌ ಮಾಡಿದರೆ ತಜ್ಞ ವೈದ್ಯರು ಪರಿಶೀಲಿಸಿ ಶೀಘ್ರವೇ ಹೃದಯದ ಆರೋಗ್ಯದ ಬಗ್ಗೆ ಮಾಹಿತಿ ನೀಡುವರು. -ಡಾ.ಕುಮಾರ, ಜಿಲ್ಲಾಧಿಕಾರಿ, ಮಂಡ್ಯ