‘ಕೈಗಾರಿಕೆಗಳಿಗೆ ಪರಿಸರದ ಬಗ್ಗೆ ಕಾಳಜಿಯಿರಲಿ’

| Published : Oct 06 2023, 01:10 AM IST / Updated: Oct 06 2023, 01:11 AM IST

ಸಾರಾಂಶ

ತಾಲೂಕು ಅಭಿವೃದ್ಧಿಗೆ ಕೈಗಾರಿಕೆಗಳು ವರದಾನವಾಗಿದೆ. ಆದರೆ, ಕೈಗಾರಿಕೆಗಳ ಆಡಳಿತ ಮಂಡಳಿಗಳು ಪರಿಸರ ಮಾಲಿನ್ಯ ಮಂಡಳಿಯ ನಿಯಮಗಳು ಪಾಲಿಸಬೇಕು. ಪರಿಸರದ ಮೇಲೆ ಪರಿಣಾಮ ಬೀರದಂತೆ ಕೈಗಾರಿಕಾ ತ್ಯಾಜ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದಾಗ ಮಾತ್ರ ಪರಿಸರ ಸಂರಕ್ಷಣೆಗೆ ಅರ್ಥ ಸಿಗಲಿದೆ ಎಂದು ಜಿಲ್ಲಾಧಿಕಾರಿ ಅಕ್ರಂಪಾಷ ಹೇಳಿದರು.
ಪರಿಸರ ಸಾರ್ವಜನಿಕ ಆಲಿಕೆ ಸಭೆ । ಡಿಸಿ ಅಕ್ರಂಪಾಷ ಸಲಹೆ ಕನ್ನಡ ಪ್ರಭವಾರ್ತೆ ಮಾಲೂರು ತಾಲೂಕು ಅಭಿವೃದ್ಧಿಗೆ ಕೈಗಾರಿಕೆಗಳು ವರದಾನವಾಗಿದೆ. ಆದರೆ, ಕೈಗಾರಿಕೆಗಳ ಆಡಳಿತ ಮಂಡಳಿಗಳು ಪರಿಸರ ಮಾಲಿನ್ಯ ಮಂಡಳಿಯ ನಿಯಮಗಳು ಪಾಲಿಸಬೇಕು. ಪರಿಸರದ ಮೇಲೆ ಪರಿಣಾಮ ಬೀರದಂತೆ ಕೈಗಾರಿಕಾ ತ್ಯಾಜ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದಾಗ ಮಾತ್ರ ಪರಿಸರ ಸಂರಕ್ಷಣೆಗೆ ಅರ್ಥ ಸಿಗಲಿದೆ ಎಂದು ಜಿಲ್ಲಾಧಿಕಾರಿ ಅಕ್ರಂಪಾಷ ಹೇಳಿದರು. ಪಟ್ಟಣದ ಹೊರವಲಯದ ಹೊಸೂರು ಮಾಲೂರು ರಸ್ತೆಯ ಕೂರಂಡಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಎಪಿಎಲ್ ಅಪೋಲೋ ಲಿಮಿಟೆಡ್ ಪ್ರಸ್ತಾವಿತ ಕಲಾಯಿ ಉಕ್ಕಿನ ಕೊಳವೆಗಳ ಉತ್ಪಾದನಾ ಸಾಮರ್ಥ್ಯ ಮಾಸಿಕ,೫೦೦೦ಎಂಪಿ ಯಿಂದ ೩೦೦೦೦ ಎಂಪಿ ವಿಸ್ತರಿಸಿರುವ ಪರಿಸರ ಸಾರ್ವಜನಿಕ ಆಲಿಕೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹೆಚ್ಚು ಹೆಚ್ಚು ಕೈಗಾರಿಕೆಗಳು ಪ್ರಾರಂಭವಾಗುತ್ತಿರುವುದರಿಂದ ನಿರುದ್ಯೋಗಿ ವಿದ್ಯಾವಂತರಿಗೆ ಉದ್ಯೋಗದ ಅವಕಾಶ ಸಿಗುತ್ತಿದೆ. ಕೈಗಾರಿಕೆಗಳು ಜಿಲ್ಲೆಯ ಹಾಗೂ ಇಲ್ಲಿನ ಮಾಲೂರು ತಾಲೂಕಿಗೆ ವರದಾನವಾಗಿವೆ. ಕೈಗಾರಿಕಾ ಆಡಳಿತ ಮಂಡಳಿಗಳು ಪರಿಸರ ಮಂಡಳಿ ನಿಯಮಗಳನ್ನು ಪಾಲಿಸಿ ಪರಿಸರದ ಮೇಲೆ ದುಷ್ಪರಿಣಾಮ ಬೀರದಂತೆ ಕೈಗಾರಿಕಾ ತ್ಯಾಜ್ಯವನ್ನು ಯಶಸ್ವಿಯಾಗಿ ನಿರ್ವಹಿಸಬೇಕಾಗಿದೆ ಎಂದರು ಜೊತೆಗೆ ಉಜ್ವಲ ಪರಿಸರ ಸಂರಕ್ಷಣೆ ಮಾಡುವ ಪ್ಲಾಂಟ್ ಗಳನ್ನು ಆಧುನಿಕ ತಾಂತ್ರಿಕತೆ ಬಳಸಿ ತ್ಯಾಜ್ಯವನ್ನು ಯಶಸ್ವಿಯಾಗಿ ನಿರ್ವಹಿಸಬೇಕಿದೆ. ಕೈಗಾರಿಕೆಗಳು ಅಭಿವೃದ್ಧಿ ಹೊಂದುವುದರ ಮೂಲಕ ದೇಶದ ಆರ್ಥಿಕತೆಗೆ ಕೈಜೋಡಿಸುತ್ತಿವೆ. ಕೈಗಾರಿಕೆಗಳ ಆಡಳಿತ ಮಂಡಳಿಗಳು ಒಂದು ಪ್ರದೇಶ ಅಭಿವೃದ್ಧಿ ಪಡಿಸಲು ಸಿಎಸ್‌ಆರ್ ಅನುದಾನದ ಜತೆಗೆ ಇತರೆ ಅನುದಾನವನ್ನು ಬಳಸಿಕೊಂಡು ಗ್ರಾಮಗಳಲ್ಲಿನ ಅಂಗನವಾಡಿ ಕಟ್ಟಡಗಳ ನಿರ್ಮಾಣ ಶಾಲಾ ಕಟ್ಟಡಗಳ ದುರಸ್ತಿ, ರಸ್ತೆ, ಚರಂಡಿ, ಅಭಿವೃದ್ಧಿ ಶುದ್ಧ ಕುಡಿಯುವ ನೀರಿನ ಘಟಕಗಳು ಸೇರಿದಂತೆ ಗ್ರಾಮಕ್ಕೆ ಅಗತ್ಯವಿರುವ ಮೂಲಭೂತ ಸೌಲತ್ತುಗಳು ಒದಗಿಸಿಕೊಡುವಲ್ಲಿ ಕಾರ್ಯಪ್ರವೃತ್ತರಾಗಬೇಕು. ಇಲ್ಲಿನ ಎಪಿಎಲ್ ಅಪೋಲೋ ಟ್ಯೂಬ್ಸ್ ಲಿಮಿಟೆಡ್ ಪ್ರಾಸ್ತಾವಿತ ಕಲಾಯಿ ಉಕ್ಕಿನ ಕೊಳವೆಗಳ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿರುವುದು ಪರಿಸರ ಸಂರಕ್ಷಣೆಗೆ ಇದೊಂದು ಉತ್ತಮ ಬೆಳವಣಿಗೆಯಾಗಿದೆ ಎಂದರು. ನೊಸಗೆರೆ ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಬ್ಯಾಲಹಳ್ಳಿ ಗ್ರಾಮದ ಬಳಿ ಹೊಂಡವಿದ್ದು, ಕೈಗಾರಿಕಾ ಪ್ರದೇಶದ ಕಲುಷಿತ ನೀರು ಗ್ರಾಮಕ್ಕೆ ಚರಂಡಿಯ ಮೂಲಕ ಹರಿದು ಕೊಳವೆ ಬಾವಿಗಳಲ್ಲಿಯೂ ಬರುತ್ತಿದೆ. ಗ್ರಾಮದ ಜನರು ಕುಡಿಯಲು ಕೊಳವೆಬಾವಿಯ ನೀರನ್ನು ಬಳಸುತ್ತಿರುವುದರಿಂದ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಈ ಕಲೂಷಿತ ನೀರು ಗ್ರಾಮಕ್ಕೆ ಹರಿದು ಬಾರದಂತೆ ನಿಯಂತ್ರಿಸಲು ಪರಿಸರ ಮಾಲಿನ್ಯ ಮಂಡಳಿಯವರಿಗೆ ಸೂಚನೆ ನೀಡುಬೇಕೆಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಅವರಿಗೆ ಮನವಿ ಸಲ್ಲಿಸಿದರು. ಪರಿಸರ ಮಾಲಿನ್ಯ ಮಂಡಳಿಯ ಹಿರಿಯ ಅಧಿಕಾರಿ ವಿಜಯಲಕ್ಷ್ಮೀ, ಪರಿಸರ ಅಭಿಯಂತರ ರಾಜು, ಎಪಿಎಲ್ ಅಪೋಲೋ ಲಿಮಿಟೆಡ್ ನ ಉಪಾಧ್ಯಕ್ಷ ರಾಜಕುಮಾರ, ಮಹಾಂತಿ ಎಚ್ ಆರ್ ಗಳಾದ ಶ್ರೀನಿವಾಸ್, ಮುನಿರಾಜು, ಇನ್ನಿತರರು ಹಾಜರಿದ್ದರು.