ಐದು ಸಂಪುಟಗಳಲ್ಲಿ ‘ಉತ್ತಂಗಿ ಚನ್ನಪ್ಪನವರ ಸಮಗ್ರ ಸಾಹಿತ್ಯ’

| Published : Mar 06 2024, 02:16 AM IST / Updated: Mar 06 2024, 04:12 PM IST

ಐದು ಸಂಪುಟಗಳಲ್ಲಿ ‘ಉತ್ತಂಗಿ ಚನ್ನಪ್ಪನವರ ಸಮಗ್ರ ಸಾಹಿತ್ಯ’
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ, ತರಳಬಾಳು ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಡಿ. ನಾಗೇಂದ್ರಪ್ಪ ಅವರು ಸರ್ವಜ್ಞ ಸಾಹಿತಿ ಉತ್ತಂಗಿ ಚನ್ನಪ್ಪನವರ ಸಮಗ್ರ ಸಾಹಿತ್ಯವನ್ನು ಐದು ಸಂಪುಟಗಳಲ್ಲಿ ಸಂಪಾದಿಸಿದ್ದಾರೆ. ಎಸ್.ಆರ್. ಗುಂಜಾಳ ಅವರು ಗೌರವ ಸಂಪಾದಕರು.

ಕನ್ನಡಪ್ರಭ ವಾರ್ತೆ ಮೈಸೂರು

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ, ತರಳಬಾಳು ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಡಿ. ನಾಗೇಂದ್ರಪ್ಪ ಅವರು ಸರ್ವಜ್ಞ ಸಾಹಿತಿ ಉತ್ತಂಗಿ ಚನ್ನಪ್ಪನವರ ಸಮಗ್ರ ಸಾಹಿತ್ಯವನ್ನು ಐದು ಸಂಪುಟಗಳಲ್ಲಿ ಸಂಪಾದಿಸಿದ್ದಾರೆ. ಎಸ್.ಆರ್. ಗುಂಜಾಳ ಅವರು ಗೌರವ ಸಂಪಾದಕರು. ಉತ್ತಂಗಿ ಚನ್ನಪ್ಪನವರದು ಬಹುಮುಖ ಪ್ರತಿಭೆ. ಕಣ್ಮರೆಯಾಗಿದ್ದ ಕನ್ನಡ ಸಾಹಿತ್ಯವನ್ನು ಸಂಶೋಧಿಸಿ, ಬೆಳಕಿಗೆ ತಂದವರು.

1. ಸರ್ವಜ್ಞನ ವಚನಗಳು:

ಈ ಸಂಪುಟದಲ್ಲಿ ಉತ್ತಂಗಿಯವರು ಸಂಪಾದಿಸಿದ 1928 ಸರ್ವಜ್ಞನ ವಚನಗಳಿವೆ. ವಚನ ಪಿತಾಮಹ ಫ.ಗು. ಹಳಕಟ್ಟಿಯವರ ಮುನ್ನುಡಿ, ಸಂಪಾದಕರ ಪ್ರಸ್ತಾವನೆ, ಗ್ರಂಥ ಶುದ್ಧೀಕರಣಕ್ಕೆ ದೊರೆತ ಆಧಾರಗಳು, ಓಲೆಯ ಪ್ರತಿಗಳು, ಅಚ್ಚಾದ ಪ್ರತಿಗಳು, ಸೂಚನಾ ಚಿಹ್ನೆಗಳು. ವಚನಗಳ ವರ್ಣಾನುಕ್ರಮಣಿಕೆ, ಅಡಿ ಟಿಪ್ಪಣಿಗಳನ್ನು ಒಳಗೊಂಡಿದೆ. ಸರ್ವಜ್ಞನ ತ್ರಿಪದಿ, ನೈತಿಕ ಪದ್ಯಗಳು, ಲೌಕಿಕ ಪದ್ಯಗಳು ಇವೆ.

2. ವಚನ ಸಂಪುಟ:

ಈ ಸಂಪುಟದಲ್ಲಿ ಮೋಳಿಗೆ ಮಾರಯ್ಯನ 819 ವಚನಗಳಿವೆ. 195 ಬೆಡಗಿನ ವಚನಗಳು, ಅವುಗಳಿಗೆ ಬರೆದ ಅರ್ಥವೂ ಇದೆ. ವಚನಗಳನ್ನು ಷಟ್ಸ್ಥಲ, ಅಷ್ಟಾವರಣ, ಪಾಗದ್ವೃತ ಎಂದು ಮೂರು ವಿಭಾಗದಲ್ಲಿ ಹೊಂದಿಸಲಾಗಿದೆ. ಸಂ.ಶಿ. ಭೂಸುನೂರುಮಠ ಅವರ ಮುನ್ನುಡಿ, ಅಕಾರಾದಿ ಪಟ್ಟಿ ಸೇರಿವೆ. ರಾಣಿ ಮಹಾದೇವಿಯ 69 ವಚನಗಳಿವೆ. ಕೆಲವು ಬೆಡಗಿನ ವಚನಗಳಿಗೆ ಅರ್ಥವನ್ನು ಬರೆಯಲಾಗಿದೆ.

ಆದಯ್ಯನ 397 ವಚನಗಳಿವೆ. ಸಂಪಾದಕರ ಮುನ್ನುಡಿ, ಗ್ರಂಥ ಶುದ್ಧೀಕರಣಕ್ಕೆ ಆಧಾರವಾಗಿರುವ ಪ್ರತಿಗಳ ವಿವರ, ಅಡಿ ಟಿಪ್ಪಣಿ, ಶಬ್ದಕೋಶಗಳು ಸೇರಿವೆ. ವಚನಗಳನ್ನು ಸ್ಥಲಕಟ್ಟಿಗಳವಡಿಸಲಾಗಿದೆ.

3. ವೀರಶೈವ ಸಾಹಿತ್ಯ ಸಂಪುಟ:

ಈ ಸಂಪುಟದಲ್ಲಿ ಉತ್ತಂಗಿಯವರು ಬರೆದ ವೀರಶೈವ ಸಾಹಿತ್ಯಕ್ಕೆ ಸಂಬಂಧಿಸಿದ ನಾಲ್ಕು ಕೃತಿಗಳು ಸೇರಿವೆ.

ಬಸವೇಶ್ವರನೂ ಕರ್ನಾಟಕದ ಅಭ್ಯುದಯವೂ ಕೃತಿಯಲ್ಲಿ ಹಿಂದೂ ಧರ್ಮಗಳ ಉಗಮ, ಬೆಳವಣಿಗೆಗಳು, ಬಸವಣ್ಣನವರು ನಡೆಸಿದ ಜಾತಿ ನಿರ್ಮೂಲನ ಚಳವಳಿಯ ಮಾಹಿತಿ ಇದೆ.

ಬಸವೇಶ್ವರನೂ ಅಸ್ಪೃಶ್ಯರ ಉದ್ಧಾರವೂ ಕೃತಿಯು ಅಸ್ಪೃಶ್ಯತೆ ಹೋಗಲಾಡಿಸಲು ಬಸವಣ್ಣನವರ ಕೈಗೊಂಡ ಕಲ್ಯಾಣ ಕ್ರಾಂತಿ, ನಡೆಸಿದ ಹೋರಾಟಗಳನ್ನು ಕಟ್ಟಿಕೊಟ್ಟಿದೆ.

ಹಿಂದೂ ಸಮಾಜದ ಹಿತಚಿಂತಕ ಕೃತಿಯು ಉತ್ತಂಗಿಯವರು ನಡೆಸಿದ ವಿಶ್ವದ ಪ್ರಮುಖ ತತ್ವಶಾಸ್ತ್ರ ಮತ್ತು ಧರ್ಮಗಳ ಅಧ್ಯಯನದ ಫಲಶ್ರುತಿ. ಇಂದು ಯಾರ ರಕ್ತವೂ ಶುದ್ಧಿಯಾಗಿ ಉಳಿದಿಲ್ಲ ಎಂಬುದನ್ನು ಸಂಕರ ವಿಚಾರ, ಸಪ್ರಮಾಣ ಚರಿತ್ರೆ, ರೂಪ ಸಿದ್ಧಾಂತ, ಸಪ್ರಾಮಣ ನರವಂಶ ವಿಜ್ಞಾನಗಳಿಂದ ವಿಶ್ಲೇಷಿಸಿದ್ದಾರೆ.

ಲಿಂಗಾಯತ ಧರ್ಮ ಹಾಗೂ ಕೈಸ್ತ ಧರ್ಮ ಕೃತಿಯು ಎರಡು ಧರ್ಮಗಳನ್ನು ತಿಳಿಯುವವರಿಗೆ ಉಪಯುಕ್ತ. ಮಾನವ ಜನಾಂಗದಲ್ಲಿ ಪ್ರೀತಿಯೇ ಶ್ರೇಷ್ಠ ಎಂಬುದ್ನು ಈ ಕೃತಿ ಸಾರುತ್ತದೆ.

4. ಸಂಶೋಧನಾ ಸಂಪುಟ:

ಅನುಭವ ಮಂಟಪದಲ್ಲಿ ಅಡಕವಾಗಿರುವ ಅನುಭವ ಮಂಟಪ ಐತಿಹಾಸಿಕತೆ ಹಾಗೂ ಸಿದ್ಧರಾಮ ,ಸಾಹಿತ್ಯ ಸಂಗ್ರಹ ಕೃತಿಗಳು ಉತ್ತಂಗಿಯವರ ಸಂಶೋಧನಾ ಸಾಮರ್ಥ್ಯಕ್ಕೆ ನಿದರ್ಶನ. ಅನುಭವ ಮಂಟಪವನ್ನು ಇಂಗ್ಲೀಷಿನಲ್ಲಿ ಬರೆದಿದ್ದು, ಆಲೂರು ವೆಂಕಟರಾಯರು ಕನ್ನಡಕ್ಕೆ ತಂದಿದ್ದಾರೆ. ಬಸವಣ್ಣನವರು ಅನುಭವ ಮಂಟಪ ಕಟ್ಟಿದ ಉದ್ದೇಶ ಹಾಗೂ ಮಂಡಿಸಿದ ನೂತನ ವಿಚಾರಗಳ ಚಿಂತನ- ಮಂಥನ ಇಲ್ಲಿದೆ.

ಅನುಭವ ಮಂಟಪ ಕೃತಿ ಕುರಿತು ಕಪಟರಾಳ ಕೃಷ್ಣರಾಯರು ಬರೆದ ಲೇಖನಕ್ಕೆ ಉತ್ತರ ಎಂಬಂತೆ ಉತ್ತಂಗಿಯವರು ಅನುಭವ ಮಂಟಪದ ಐತಿಹಾಸಿಕತೆ ಕೃತಿ ರಚಿಸಿದ್ದಾರೆ.

ಸಿದ್ಧರಾಮ ವೀರಶೈವನಾಗಿರದೆ ಶೈವನಾಗಿರಬೇಕು, ಆತನಿಗೆ ಲಿಂಗಧೀಕ್ಷೆಯಾದ ಬಗ್ಗೆ ಸಂಶಯಗಳಿವೆ ಎಂಬ ಡಿ.ಎಲ್. ನರಸಿಂಹಾಚಾರ್ ಅವರ ಹೇಳಿಕೆಗೆ ಉತ್ತರ ಎಂಬಂತೆ ಉತ್ತಂಗಿಯವರು ಸಿದ್ಧರಾಮನ ಸಾಹಿತ್ಯ ಸಂಗ್ರಹ ಕೃತಿಯಲ್ಲಿ ಸಿದ್ಧರಾಮ ವೀರಶೈವನೇ, ಕಪಿಲಸಿದ್ಧ ಮಲ್ಲಿಕಾರ್ಜುನ ಹಾಗೂ ಯೋಗಿನಾಥ ಅಂಕಿತಗಳು ಅವನವೇ ಎಂದು ಸ್ಪಷ್ಪಪಡಿಸಿದ್ದಾರೆ.

ಎಲ್ಲಮ್ಮಃ ದಕ್ಷಿಣ ಭಾರತದ ದೇವತೆ ಕೃತಿಯ ಬಗ್ಗೆಯೂ ವಿಶ್ಲೇಷಣೆ ಇದೆ. ಉತ್ತಂಗಿಯವರು ಇಂಗ್ಲೀಷಿನಲ್ಲಿ ಬರೆದ ಈ ಕೃತಿಯನ್ನು ಅಬ್ಕಾರಿ ಇಲಾಖೆ ನಿವೃತ್ತ ಜಂಟಿ ಆಯುಕ್ತ ಜೆ. ರಾಮಲಿಂಗೇಗೌಡರು ಕನ್ನಡಕ್ಕೆ ತಂದಿದ್ದಾರೆ.

5. ಕ್ರೈಸ್ತ ಸಂಪುಟ:

ಈ ಸಂಪುಟದಲ್ಲಿ ದೃಷ್ಟಾಂತ ದರ್ಪಣ, ಬನಾರಸಕ್ಕೆ ಬೆತ್ಲೆಹೇಮಿನ ವಿನಂತಿ, ಮೃತ್ಯುಂಜಯ, ನಾರಾಯಣ ವಾಮನ ತಿಲಕ.

- ಈ ನಾಲ್ಕು ಕೃತಿಗಳು ಸೇರಿವೆ

ಉತ್ತಂಗಿ ಚನ್ನಪ್ಪನವರ ಸುಮಾರು ಎರಡೂವರೆ ಸಾವಿರ ಪುಟಗಳ ಸಾಹಿತ್ಯವನ್ನು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಪ್ರಿಯರಾದ ಡಿ. ನಾಗೇಂದ್ರಪ್ಪ ಅವರು ಐದು ಸಂಪುಟಗಳಲ್ಲಿ ಹೊರತಂದಿರುವುದು ಮಹತ್ವದ ಸಾಧನೆ. ಉತ್ತಂಗಿ ಚನ್ನಪ್ಪನವರ ಸಾಹಿತ್ಯ ಸೇವೆಯನ್ನು ದಾಖಲಿಸಲು, ಆ ಮೂಲಕ ಮುಂದಿನ ಪೀಳಿಗೆಗೆ ದಾಟಿಸಲು ಈ ಸಂಪುಟಗಳು ನೆರವಾಗಿವೆ ಎನ್ನಬಹುದು.

ಈ ಸಂಪುಟಗಳಿಗೆ ಹಿರಿಯ ವಿದ್ವಾಂಸ ಪ್ರೊ.ರಾಗೌ ಅವರು ಮೌಲಿಕ ಮುನ್ನುಡಿ ಬರೆದಿದ್ದಾರೆ. ಮೈಸೂರಿನ ಸಂವಹನ ಪ್ರಕಾಶನ ಪ್ರಕಟಿಸಿದೆ. ಆಸಕ್ತರು ಕೃತಿಕರ್ತೃ ಡಿ. ನಾಗೇಂದ್ರಪ್ಪ, ಮೊ. 93434 05921 ಅಥವಾ ಪ್ರಕಾಶಕ ಡಿ.ಎನ್. ಲೋಕಪ್ಪ, ಮೊ 99026 39593 ಅವರನ್ನು ಸಂಪರ್ಕಿಸಬಹುದು.