ಬೆಂಗಳೂರು ದಕ್ಷಿಣ ಕ್ಷೇತ್ರ : 22 ಅಭ್ಯರ್ಥಿಗಳ ಹಣೆಬರಹ ಭದ್ರ

| Published : Apr 27 2024, 02:05 AM IST / Updated: Apr 27 2024, 04:18 AM IST

ಸಾರಾಂಶ

ದೊಡ್ಡಮಟ್ಟದ ಗೊಂದಲ, ಗದ್ದಲ ಇಲ್ಲದೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಮತದಾನ ಪ್ರಕ್ರಿಯೆ ಮುಕ್ತಾಯವಾಗಿದ್ದು, ಕಣದಲ್ಲಿರುವ 22 ಅಭ್ಯರ್ಥಿಗಳ ಹಣೆಬರಹವನ್ನು ಮತದಾರ ಮತ ಪೆಟ್ಟಿಗೆಯಲ್ಲಿ ಭದ್ರಗೊಳಿಸಿದ್ದಾರೆ.

 ಬೆಂಗಳೂರು :  ದೊಡ್ಡಮಟ್ಟದ ಗೊಂದಲ, ಗದ್ದಲ ಇಲ್ಲದೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಮತದಾನ ಪ್ರಕ್ರಿಯೆ ಮುಕ್ತಾಯವಾಗಿದ್ದು, ಕಣದಲ್ಲಿರುವ 22 ಅಭ್ಯರ್ಥಿಗಳ ಹಣೆಬರಹವನ್ನು ಮತದಾರ ಮತ ಪೆಟ್ಟಿಗೆಯಲ್ಲಿ ಭದ್ರಗೊಳಿಸಿದ್ದಾರೆ.

ಬೆಳಗ್ಗೆ 7 ಗಂಟೆಯಿಂದ ಯಾವುದೇ ಗೊಂದಲವಿಲ್ಲದೆ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಬೆಳಗ್ಗೆ 10 ಗಂಟೆಯವರೆಗೆ ಬಿರುಸಿನಿಂದ ಸಾಗಿದ ಮತದಾನ ಪ್ರಕ್ರಿಯೆ ಆನಂತರ ಬಿಸಿಲಿನ ಕಾರಣದಿಂದ ಕೊಂಚ ಮಟ್ಟಿಗೆ ಕುಂಠಿತವಾಯಿತು. ಮಧ್ಯಾಹ್ನ 3 ಗಂಟೆ ನಂತರ ಮತದಾನ ಪ್ರಕ್ರಿಯೆಯಲ್ಲಿ ಏರಿಕೆಯಾಗಿದ್ದು, ಅಂತಿಮವಾಗಿ ಶೇ.50ರಷ್ಟು ಮತದಾನವಾಗಿದೆ. ಯುವ ಮತದಾರರ ಜತೆಗೆ ಹಿರಿಯ ಮತದಾರರೂ ಉತ್ಸಾಹದಿಂದಲೇ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದು, ಕೆಲವೆಡೆ ವ್ಹೀಲ್‌ಚೇರ್‌ ಸಹಾಯದಿಂದ ಹಿರಿಯರು ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು. ಇನ್ನು ಆಸ್ಪತ್ರೆಗೆ ದಾಖಲಾಗಬೇಕಾದವರು, ಚಿಕಿತ್ಸೆ ಪಡೆಯುತ್ತಿರುವವರು ಆ್ಯಂಬುಲೆನ್ಸ್‌ ಮೂಲಕ ಬಂದು ಮತ ಚಲಾಯಿಸಿದ್ದು ಇತರರಿಗೆ ಪ್ರೇರಣೆ ನೀಡುವಂತಿತ್ತು.ಮತದಾರರ ಹೆಸರುಗಳೇ ಮಾಯ!

ಬಸವನಗುಡಿಯ ನ್ಯಾಷನಲ್‌ ಕಾಲೇಜು ಮತಗಟ್ಟೆಯಲ್ಲಿ 50ಕ್ಕೂ ಹೆಚ್ಚು ಮತದಾರರ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದಿರುವುದರಿಂದ ಕೆಲಕಾಲ ಗೊಂದಲ ವುಂಟಾಯಿತು. ಮತದಾನಕ್ಕೆ ಬಂದಿದ್ದವರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದಿರುವುದರ ಬಗ್ಗೆ ಚುನಾವಣಾ ಸಿಬ್ಬಂದಿ ಬಳಿ ಆಕ್ಷೇಪ ವ್ಯಕ್ತಪಡಿಸಿದರು. ಹಲವು ಸಮಯ ಕಾದರೂ ಮತದಾನಕ್ಕೆ ಅವಕಾಶ ಸಿಗದ ಕಾರಣ, ಅವರೆಲ್ಲರೂ ವಾಪಾಸು ಮನೆಗೆ ತೆರಳಿದರು.

ಆಸ್ಪತ್ರೆಯಿಂದ ಬಂದು ಮತದಾನ

ಜಯನಗರ ವಿಧಾನಸಭಾ ವ್ಯಾಪ್ತಿಯ ಮತಗಟ್ಟೆಯ ಮತದಾರರಾದ ಕಲಾವತಿ (78) ಎಂಬುವವರು ಖಾಸಗಿ ಆಸ್ಪತ್ರೆಯಲ್ಲಿ ಉಸಿರಾಟದ ತೊಂದರೆಗಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೂ, ಆಂಬ್ಯುಲೆನ್ಸ್‌ನಲ್ಲಿ ಬಂದ ಅವರು ತಮ್ಮ ಮತ ಚಲಾಯಿಸಿದರು. ಅದೇ ರೀತಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಮುರಳಿಧರ್‌ ಎಂಬುವವರು ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗುವುದಕ್ಕೂ ಮುನ್ನ ಬಂದು ಮತ ಚಲಾಯಿಸಿದರು. ನಂತರ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ತೆರಳಿದರು.ಮತದಾನಕ್ಕೆ ಬಂದವರಿಗೆ ಹೃದಯಾಘಾತ

ಜೆ.ಪಿ.ನಗರ 8ನೇ ಹಂತದ ಜಂಬೂಸವಾರಿ ದಿನ್ನೆಯ ಮತಗಟ್ಟೆಯಲ್ಲಿ ಮತದಾನ ಮಾಡಲು ಬಂದಿದ್ದ ಮಹಿಳೆಯೊಬ್ಬರು ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದರು. ಆಗ ಮತದಾನ ಮಾಡಲು ಬಂದಿದ್ದ ಮೂತ್ರಪಿಂಡ ತಜ್ಞ ವೈದ್ಯ ಡಾ.ಗಣೇಶ್‌ ಶ್ರೀನಿವಾಸ್‌ ಪ್ರಸಾದ್ ಅವರು ಮಹಿಳೆಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಜೀವ ಉಳಿಸಿದರು. ನಂತರ ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಂಬ್ಯುಲೆನ್ಸ್‌ ಮೂಲಕ ಆಸ್ಪತ್ರೆಗೆ ಕಳುಹಿಸಲಾಯಿತು.

ಮತಗಟ್ಟೆ ಅಧಿಕಾರಿ ವಿರುದ್ಧ ಕಾಂಗ್ರೆಸ್‌ ಆಕ್ರೋಶ

ಬಿಟಿಎಂ ಲೇಔಟ್‌ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆಯೊಂದರಲ್ಲಿ ಮತದಾನ ಮಾಡಲು ಬಂದಿದ್ದ ಮತದಾರರಿಗೆ ಮತಗಟ್ಟೆ ಅಧಿಕಾರಿಗಳು ಬಿಜೆಪಿಗೆ ಮತ ಚಲಾಯಿಸುವಂತೆ ತಿಳಿಸುತ್ತಿದ್ದಾರೆ ಎಂಬ ಕಾರಣಕ್ಕಾಗಿ ಕಾಂಗ್ರೆಸ್‌ ಕಾರ್ಯಕರ್ತರು ಗಲಾಟೆ ಮಾಡಿದರು. ಹೀಗಾಗಿ ಕೆಲಕಾಲ ಮತದಾನ ಪ್ರಕ್ರಿಯೆ ಸ್ಥಗಿತಗೊಳ್ಳುವಂತಾಯಿತು. ಕೊನೆಗೆ ಪೊಲೀಸರ ಮಧ್ಯಪ್ರವೇಶದ ನಂತರ ಮತದಾನ ಪ್ರಕ್ರಿಯೆ ಆರಂಭಿಸಲಾಯಿತು.

ಕಾಲಲ್ಲಿ ಮತ ಚಲಾಯಿಸಿದ ಕ್ರೀಡಾಪಟು

ಖ್ಯಾತಾ ಪ್ಯಾರಾ ಈಜುಗಾರ, ವಿಶೇಷ ಚೇತನ ಕೆ.ಎಸ್‌.ವಿಶ್ವಾಸ್‌ ಅವರು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ವಿಶ್ವಾಸ್‌ ಅವರಿಗೆ ಎರಡೂ ಕೈಗಳಿಲ್ಲದ ಕಾರಣ ಚುನಾವಣಾ ಸಿಬ್ಬಂದಿ ವಿಶ್ವಾಸ್‌ ಅವರ ಕಾಲಿನ ಬೆರಳಿಗೆ ಶಾಹಿ ಹಾಕಿದರು. ಅಲ್ಲದೆ, ವಿಶ್ವಾಸ್‌ ಯಾರ ನೆರವನ್ನೂ ಪಡೆಯದೆ ಕಾಲಿನಲ್ಲೇ ಮತ ಚಲಾಯಿಸಿ ಎಲ್ಲರಿಗೂ ಸ್ಫೂರ್ತಿಯಾದರು.

ಸೆಲೆಬ್ರಿಟಿಗಳ ಮತದಾನ

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್‌.ಮಂಜುನಾಥ್‌ ಸೇರಿದಂತೆ ಚಲನಚಿತ್ರ ನಟರಾದ ಅನಂತನಾಗ್‌, ಉಪೇಂದ್ರ, ಸುದೀಪ್‌, ಪ್ರೇಮ್‌, ರಕ್ಷಿತಾ, ಭಾರತಿ ವಿಷ್ಣುವರ್ಧನ್‌, ಸಪ್ತಮಿ ಗೌಡ ಸೇರಿದಂತೆ ಹಲವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಮತಗಟ್ಟೆಗಳಲ್ಲಿ ತಮ್ಮ ಮತಚಲಾಯಿಸಿದರು.