ರೈತರಿಗೆ ಕೂಡಲೇ ಪರಿಹಾರ ನೀಡಿ : ರಾಮ ಚಂದ್ರ ಗೌಡ

| Published : Apr 28 2024, 01:16 AM IST / Updated: Apr 28 2024, 04:45 AM IST

ಸಾರಾಂಶ

ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ಬರ ಪರಿಹಾರವಾಗಲಿ ಅಥವಾ ಇನ್ನಾವುದೆ ಪರಿಹಾರವನ್ನು ವಿತರಿಸಲು ಒಂದು ನೀತಿ ನಿಯಮ ಇದೆ. ಮನಸ್ಸಿಗೆ ಬಂದಂತೆ ನೀಡಲು ಆಗುವುದಿಲ್ಲ.

 ಶಿಡ್ಲಘಟ್ಟ :  ಕೇಂದ್ರ ಸರಕಾರವು ಬರ ಪರಿಹಾರದ ಹಣ ಬಿಡುಗಡೆ ಮಾಡಿದ್ದು ರಾಜ್ಯ ಸರಕಾರವು ಕೇಂದ್ರದ ವಿರುದ್ದ ದೂರುತ್ತಾ ಕೂರದೆ ಕೂಡಲೇ ರೈತರಿಗೆ ಪರಿಹಾರದ ಹಣ ನೀಡುವ ಕೆಲಸ ಮಾಡಬೇಕೆಂದು ಶಿಡ್ಲಘಟ್ಟದ ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಆಗ್ರಹಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ಬರ ಪರಿಹಾರವಾಗಲಿ ಅಥವಾ ಇನ್ನಾವುದೆ ಪರಿಹಾರವನ್ನು ವಿತರಿಸಲು ಒಂದು ನೀತಿ ನಿಯಮ ಇದೆ. ಮನಸ್ಸಿಗೆ ಬಂದಂತೆ ನೀಡಲು ಆಗುವುದಿಲ್ಲ. ಅದಕ್ಕೆಂದೆ ಇರುವ ಸಮಿತಿಯ ನಿರ್ಧಾರಂತೆ ಪರಿಹಾರದ ಮೊತ್ತ ನಿಗದಿಪಡಿಸಿದೆ ಎಂದರು.ಕೇಂದ್ರದಿಂದ ಹಣ ಬಿಡುಗಡೆ

ಅದರಂತೆ ಇದೀಗ ಹಣ ಬಿಡುಗಡೆ ಮಾಡಿದೆ. ಆದರೆ ರಾಜ್ಯ ಸರಕಾರವು ಬರ ಪರಿಹಾರದ ಹಣ ಸಾಲದು, ತಡವಾಗಿ ಬಿಡುಗಡೆ ಮಾಡಿದೆ ಎಂದು ಕೇಂದ್ರದತ್ತ ಬೊಟ್ಟು ಮಾಡಿ ರೈತರಲ್ಲಿ ಹಾಗೂ ಸಾರ್ವಜನಿಕರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ಆಪಾದಿಸಿದರು.ರೈತರ ವಿಷಯ ಬಂದಾಗ ಯಾರೂ ಕೂಡ ರಾಜಕಾರಣ ಮಾಡುವುದು ಬೇಡ, ತಾಂತ್ರಿಕ ಕಾರಣಗಳಿಂದ ಬರ ಪರಿಹಾರ ಹಣ ತಡವಾಗಿ ಬಂದಿದ್ದು ಇನ್ನೂ ತಡ ಮಾಡದೆ ರೈತರ ಖಾತೆಗೆ ಜಮೆ ಮಾಡಿ ರೈತರಿಗೆ ಅನುಕೂಲ ಮಾಡಬೇಕು. 

ಅಲ್ಲದೆ ಕೋಲಾರ ಸಂಸತ್ ಚುನಾವಣೆ ಮುಗಿದಿದೆ. ಎಲ್ಲ ಮತದಾರರು ಮತ ಹಾಕಿದ್ದಾಗಿದೆ. ಹೆಚ್ಚು ಮತ ಪಡೆದ ಅಭ್ಯರ್ಥಿ ಗೆಲ್ಲುತ್ತಾರೆ. ರಾಜಕಾರಣದಲ್ಲಿ ಸೋಲು ಗೆಲುವು ಇದ್ದೇ ಇದೆ. ಇಲ್ಲಿಗೆ ಚುನಾವಣೆ, ಆ ಪಕ್ಷ ಈ ಪಕ್ಷದ ಮಾತುಗಳನ್ನು ಬಿಟ್ಟು ಎಲ್ಲರೂ ಸಾಮರಸ್ಯವಾಗಿ ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗೋಣ.

ಚುನಾವಣೆ ಕಾಲದಲ್ಲಿ ಮಾತ್ರ ರಾಜಕಾರಣ ಮಾಡೋಣ ಉಳಿದಂತೆ ಬದುಕು ಕಟ್ಟಿಕೊಳ್ಳುವ ಕೆಲಸದಲ್ಲಿ ತೊಡಗೋಣ ಎಂದರು.