ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕೊನೆಗೆ ತಳ್ಳಲ್ಪಟ್ಟ ಕಲ್ಯಾಣದ ಜಿಲ್ಲೆಗಳು!

| Published : May 10 2024, 01:32 AM IST

ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕೊನೆಗೆ ತಳ್ಳಲ್ಪಟ್ಟ ಕಲ್ಯಾಣದ ಜಿಲ್ಲೆಗಳು!
Share this Article
  • FB
  • TW
  • Linkdin
  • Email

ಸಾರಾಂಶ

ಕಲ್ಯಾಣದ ಹೆಬ್ಬಾಗಿಲು ಕಲಬುರಗಿ ಜಿಲ್ಲೆ ಕಳೆದ ಬಾರಿಯ ತನ್ನ 29 ನೇ ಸ್ಥಾನದಿಂದ ಈ ಬಾರಿ ದಿಢೀರನೆ 34 ನೇ ಸ್ಥಾನಕ್ಕೆ ಕುಸಿದಿದೆ. ಇದಲ್ಲದೆ ಕಲಬುರಗಿ ಕಂದಾಯ ವಿಭಾಗದ 43 ಶಾಲೆಗಳು ಶೂನ್ಯ ಫಲಿತಾಂಶ ದಾಖಲಿಸಿವೆ.

ಶೇಷಮೂರ್ತಿಅವಧಾನಿ

ಕನ್ನಡಪ್ರಭ ವಾರ್ತೆ ಕಲಬುರಗಿ

ಎಸ್ಸೆಸ್ಸೆಲ್ಸಿ ಫಲಿತಾಂಶ ಇಂದು ಪ್ರಕಟವಾಗಿದ್ದು ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಟಕ ಜಿಲ್ಲೆಗಳು ಎಂದಿನಂತೆ ಕಳಪೆ ಸಾಧನೆಯನ್ನೇ ದಾಖಲಿಸಿವೆ.

ಕಲ್ಯಾಣದ ಹೆಬ್ಬಾಗಿಲು ಕಲಬುರಗಿ ಜಿಲ್ಲೆ ಕಳೆದ ಬಾರಿಯ ತನ್ನ 29 ನೇ ಸ್ಥಾನದಿಂದ ಈ ಬಾರಿ ದಿಢೀರನೆ 34 ನೇ ಸ್ಥಾನಕ್ಕೆ ಕುಸಿದಿದೆ. ಇದಲ್ಲದೆ ಕಲಬುರಗಿ ಕಂದಾಯ ವಿಭಾಗದ 43 ಶಾಲೆಗಳು ಶೂನ್ಯ ಫಲಿತಾಂಶ ದಾಖಲಿಸಿವೆ.

ಕಂದಾಯ ವಿಭಾಗೀಯ ಕೇಂದ್ರ, ಕಲ್ಯಾಣದ ಹೆಬ್ಬಾಗಿಲು, ಶೈಕ್ಷಣಿಕವಾಗಿ ಪ್ರಗತಿ ಹೊಂದುತ್ತಿದೆ ಎಂದು ಗಮನ ಸೆಳೆಯುತ್ತಿರುವ ಕಲಬುರಗಿ ಜಿಲ್ಲೆಯಲ್ಲೇ ಫಲಿತಾಂಶ ಈ ಬಾರಿ ಗೋತಾ ಹೊಡೆದಿದೆ.

ಪ್ರಸಕ್ತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಬರೆದ ಜಿಲ್ಲೆಯ 45,980ವಿದ್ಯಾರ್ಥಿಗಳಲ್ಲಿ 24,380 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಳೆದ ಬಾರಿಗೂ, ಈ ಬಾರಿಗೂ ತೇರ್ಗಡೆ ಶೇಕಡಾವಾರು ಅಜಗಜಾಂತರ ವ್ಯತ್ಯಾಸವಾಗಿದ್ದು, ರಾಜ್ಯ ರ್ಯಾಂಕಿಂಗ್‌ನಲ್ಲಿ ಕಲಬುರಗಿ ಸ್ಥಾನಮಾನ 34 ಕ್ಕೆ ಕುಸಿದಿದೆ.

ಕಲ್ಯಾಣ ನಾಡಿನ 7 ಜಿಲ್ಲೆಗಳ ಪೈಕಿ ಪಂಚ ಜಿಲ್ಲೆಗಳ ಫಲಿತಾಂಶ 30 ರ ಅಂಕಿ ದಾಟಿ ರಾಜ್ಯ ರ್ಯಾಂಕಿಂಗ್‌ನಲ್ಲಿ ಕೊಟ್ಟ ಕೊನೆಯ ಸ್ಥಾನಗಳಲ್ಲಿ ರಾರಾಜಿಸುತ್ತಿದೆ.

ಕಲ್ಯಾಣ ನಾಡಿನ ಗಿರಿ ಜಿಲ್ಲೆ ಯಾದಗಿರಿ, ಬಿಸಿಲೂರು, ತೊಗರಿ ಕಣಜ ಕಲಬುರಗಿ, ಬಿದರಿ ಕಲೆಯ ಬೀದರ್‌, ಕೊಪ್ಪಳ ಮತ್ತು ಭತ್ತದ ನಾಡು ರಾಯಚೂರು ಜಿಲ್ಲೆಗಳು ಎಸ್ಸೆಸ್ಸೆಲ್ಸಿ ರಾಜ್ಯ ರ್ಯಾಂಕಿಂಗ್‌ನಲ್ಲಿ ಕ್ರಮವಾಗಿ 35, 34, 33, 32 ಹಾಗೂ 31ನೇ ಸ್ಥಾನಕ್ಕೆ ತೃಪ್ತಿ ಪಡುವತಾಗಿರೋದು ಈ ಬಾಗದಲ್ಲಿನ ಎಸ್ಸೆಸ್ಸೆಲ್ಸಿ ಶಿಕ್ಷಣ ಆರಕ್ಕೇರಲಿಲ್ಲ, ಮೂರಕ್ಕಿಂತ ಕೊಳಗೇ ಇಳಿಯಿತು ಎಂಬಂತಾಗಿದೆ.

ಈ ಪಂಚ ಜಿಲ್ಲೆಗಳ ಕಳಪೆ ಫಲಿತಾಂಶದ ನಡುವೆಯೂ ತುಸು ಸಮಧಾನದ ಸಂಗತಿ ಎಂದರೆ ಕಲ್ಯಾಣದ ಬಳ್ಳಾರಿ ಹಾಗೂ ವಿಜಯ ನಗರ ಜಿಲ್ಲೆಗಳು ಎಸ್ಸೆಸ್ಸೆಲ್ಸಿಯಲ್ಲಿ ಕ್ರಮವಾಗಿ 28 ಹಾಗೂ 27 ನೇ ಸ್ಥಾನದಲ್ಲಿ ಕಾಣಿಸಿಕೊಂಡಿರೋದು. ಈ ಎರಡು ಜಿಲ್ಲೆಗಳ ಎಸ್ಸೆಸ್ಸೆಲ್ಸಿ ಸಾಧನೆ ತುಸು ಸಮಾಧಾನ ತಂದಿದೆ, ಜೊತೆಗೇ ಕಲ್ಯಾಣದ ಮಾನ ಕಾಪಾಡಿದೆ ಎಂದೇ ಹೇಳಲಾಗುತ್ತಿದೆ.

ಫಲಿತಾಂಶ ಹೆಚ್ಚಳಕ್ಕೆ ಆಸರೆಯಾಗದ ಕೆಕೆಆರ್‌ಡಿಗಿ ಕಲಿಕಾ ಆಸರೆ:

ಕಲ್ಯಾಣ ನಾಡಿನಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ವೃದ್ದಿಗೆ ಈ ಬಾರಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯವು ತುಂಬ ಗಮನ ನೀಡಿದ್ದರು. ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಮಂಡಳಿಯಿಂದ ಎಸ್ಸೆಸ್ಸೆಲ್ಸಿ ಮಕ್ಕಳಿಗಾಗಿ ಕಲಿಕಾ ಆಸರೆ ಎಂಬ ವಿಶೇಷ ಹೊತ್ತಿಗೆ ಸಿದ್ಧಪಡಿಸಿ ಹಂಚಲಾಗಿತ್ತು. ಇದಕ್ಕಾಗಿ ಅಂದಾಜು 3 ಕೋಟಿ ರು. ಸಹ ವೆಚ್ಚವಾಗಿತ್ತು.

ಇದಲ್ಲದೆ ಹೈಸ್ಕೂಲ್‌ನಲ್ಲಿ ಕಲ್ಯಾಣದ 7 ಜಿಲ್ಲೆಗಳಲ್ಲಿ ಶಿಕ್ಷಕ ಹುದ್ದೆ ಖಾಲಿ ಇರಕೂಡದು. ಖಾಲಿ ಹುದ್ದೆಗಳಿದ್ದಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಅಸಾಧ್ಯವೆಂದು ಕೆಕೆಆರ್‌ಡಿಬಿ ತನ್ನ ಶಿಕ್ಷಣ ರಂಗ ಸುಧಾರಣೆಯ ಸಂಕಲ್ಪದ ಅಕ್ಷರ ಅವಿಷ್ಕಾರ ಯೋಜನೆಯಡಿಯಲ್ಲಿ ಅಕ್ಷರ ಮಿತ್ರ ಎಂಬ ಹೆಸರಲ್ಲಿ ಅತಿಥಿ ಶಿಕ್ಷಕರ ನೇಮಕಕ್ಕೂ ಅವಕಾಶ ಕಲ್ಪಿಸಿ ಅದಕ್ಕಾಗಿ 18 ಕೋಟಿಗೂ ಅಧಿಕ ಹಣ ವ್ಯಯಿಸಿತ್ತು.

ಅಕ್ಷರ ಮಿತ್ರ ಯೋಜನೆಯಲ್ಲಿ ಕಲ್ಯಾಣದ ಜಿಲ್ಲೆಗಳ ಶಿಕ್ಷಕರ ಕೊರತೆ ನೀಗಿತ್ತಾದರೂ ಯಾಕೆ ಇದೆಲ್ಲ ಕಸರತ್ತು ಉತ್ತಮ ಫಲಿತಾಂಶವಾಗಿ ಪರಿವರ್ತನೆಯಾಗಲಿಲ್ಲವೋ? ಎಂಬ ಪ್ರಶ್ನೆ ಮೂಡಿದೆ. ಈ ಬಾರಿ ರಾಜ್ಯ ರ್ಯಾಂಕಿಂಗ್‌ನಲ್ಲಿ ಟಾಪ್‌ 20 ಜಿಲ್ಲೆಗಳಲ್ಲಿರಬೇಕು ಎಂಬ ಉತ್ಸಾಹದಿಂದಲೇ ಅನೇಕ ಕೆಲಸಗಳು ಇಲ್ಲಿ ನಡೆದರೂ ಅದ್ಯಾಕೆ ತೇರ್ಗಡೆಯಲ್ಲಿ ಕಲ್ಯಾಣದ ನೆಲದ ಮಕ್ಕಳು ಎಡವಿದರು ಎಂಬ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ.ಶೂನ್ಯ ಸಾಧನೆ ಶಾಲೆಗಳಲ್ಲಿ ಕಲ್ಯಾಣದ್ದೇ ಸಿಂಹಪಾಲು!

ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಶೂನ್ಯ ಸಾದನೆ ಶಾಲೆಗಳಲ್ಲಿ ಕಲ್ಯಾಣ ನಾಡಿನ ಶಾಲೆಗಳದ್ದೇ ಸಹಸ್ರಪಾಲು ಎಂಬುದು ಗಮನಾರ್ಹವಾಗಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಕಾರ ಕಲಬರಗಿ ವಿಭಾಗದಲ್ಲಿ ಒಟ್ಟು 43 ಶಾಲೆಗಳು ಎಸ್ಸೆಸ್ಸೆಲ್ಸಿಯಲ್ಲಿ ಶೂನ್ಯ ಸಾಧನೆ ಮಾಿವೆ.

ರಾಜ್ಯದಲ್ಲಿ ಒಟ್ಟು 78 ಶಾಲೆಗಳು ಶೂನ್ಯ ಸಾಧನೆ ಪಟ್ಟಿಯಲ್ಲಿದ್ದರೆ, ಈ ಪೈಕಿ ಕಲಬರಗಿ ಸೇರಿದಂತೆ ಕಲ್ಯಾಣದ ಜಿಲ್ಲೆಗಳದ್ದೇ ಸಿಂಹಪಾಲು ಇರೋದು ಆತಂಕಕಾರ ಸಂಗತಿಯಾಗಿ ಹೊರಹೊಮ್ಮಿದೆ. ಕಲಬುರಗಿ ಜಿಲ್ಲೆಯಲ್ಲೇ ಅತ್ಯಧಿಕ ಎಂಬಂತೆ 18 ಶಾಲೆಗಳು ಶೂನ್ಯ ಸಾಧನೆ ಮಾಡಿದರೆ, ಈ ಪ್ರಮಾಣ ಬೀದರ್‌ನಲ್ಲಿ 9, ಯಾದಗಿರಿಯಲ್ಲಿ 6 , ರಾಯಚೂರಲ್ಲಿ 5, ಕೊಪ್ಪಳ, ವಿಜಯನಗರ ತಲಾ 2 ಹಗೂ ಬಳ್ಳಾರಿಯಲ್ಲಿ 1 ಶಾಲೆಯಲ್ಲಿ ಶೂನ್ಯ ಫಲಿತಾಂಶ ದಾಖಲಾಗಿದೆ.ಶಿಕ್ಷಣರಂಗದಲ್ಲಿ ಹೆಚ್ಚಿದ ಆತಂಕ:

ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಈ ಬಾರಿ ಕಲ್ಯಾಣದ ಜಿಲ್ಲೆಗಳ ಕಳಪೆ ಸಾಧನೆ ಶಿಕ್ಷಣ ತತ್ಜ್ಞರನ್ನು ಆತಂಕಕ್ಕೆ ಈಡು ಮಾಡಿದೆ. ಏಕೇ ಹೀಗೆ? ಸಾಕಷ್ಟು ಕಲಿಕಾ ಸಾಧನಗಳೊಂದಿಗೆ ಮಕ್ಕಳನ್ನು ತಲುಪಿರೂ ಯಾಕೆ ಫಲಿತಾಂಶದಲ್ಲಿ ವೃದ್ದಿಯಾಗಲಿಲ್ಲವೆಂದು ತತ್ರಜ್ಞರು ಚಿಂತೆಗೀಡಾಗುವಂತಾಗಿದೆ. ಶಿಕ್ಷಕರ ಕೊರತೆ ನೀಗಿಸಿದ್ದಲ್ಲದೆ, ಕಲಿಕಾಸರೆ ಎಂಬ ಹೊತ್ತಿಗೆ ನೀಡುತ್ತ ಹೆಚ್ಚಿನ ಅಂಕ ಗಳಿಕೆಗೆ ಹೊಸ ವಿಧಾನಗಳೊಂದಿಗೆ ಮಕ್ಕಳಿಗೆ ಮನೆಪಾಠ ನಡೆಸಿದರೂ ಕಲ್ಯಾಣದಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗದೆ ಮುಗ್ಗರಿಸಿದ್ದು ಎಲ್ಲಿ? ಎಂಬುದೇ ಈಗಿನ ಯಕ್ಷಪ್ರಶ್ನೆಯಾಗಿದೆ. ಕಲ್ಯಾಣದ ಜಿಲ್ಲೆಗಳಿಗಂದೇ ಕಲಬುರಗಿ ಕೇಂದ್ರವಾಗಿರುವಂತೆ ಪ್ರತ್ಯೇಕ ಆಯುಕ್ತಾಲಯವಿದ್ದರೂ ಈ ಭಾಗದಲ್ಲಿನ ಹೈಸ್ಕೂಲ್‌ಗಳಲ್ಲಿನ ಆಗು ಹೋಗುಗಳನ್ನು ಸರಿಯಾಗಿ ನಿಯಂತ್ರಿಸಿ ಅಲ್ಲೆಲ್ಲಾ ಹೆಚ್ಚಿನ ಶೈಕ್ಷಣಿಕ ಚಟುವಟಿಕೆಗಳು ಹಸಿರು ಚಿಗುರುವಂತೆ ಮಾಡುವ ಪ್ರಯತ್ನಗಳು ನಿರೀಕ್ಷೆಯಂತೆ ನಡೆಯುತ್ತಿಲ್ಲವೆಂಬ ಆರೋಪಗಳಿವೆ. ಆಯುಕ್ತಾಲಾಯದಲ್ಲಿ ವರ್ಗಾವಣೆ ಸೇರಿದಂತೆ ಅನುತ್ಪಾದಾಕ ಕೆಲಸಗಳಿಗೆ ಹೆಚ್ಚಿನ ಮಹತ್ವ ದೊರಕುತ್ತಿರೋದರಿಂದಲೇ ಶಾಲಾ ಹಂತದಲ್ಲಿ, ತರಗತಿ ಹಂತದಲ್ಲಿನ ಚಟುವಟಿಕೆಗಳ ಮೇಲೆ ಸರಿಯಾಗಿ ನಿಗಾ ಇಡಲಾಗದ್ದರಿಂದಲೇ ಫಲಿತಾಂಶ ಸುಧಾರಣೆಗೆ ಅದೆಷ್ಟೇ ಕಸರತ್ತು ಮಾಡಿದರೂ, ಕೋಟಿಗಟ್ಟಲೇ ಹಣ ವೆಚ್ಚವಾದರೂ ಸುಧಾರಣೆ ಇಂದಿಗೂ ಗಗದನ ಕುಸುಮವಾಗಿದೆ ಎಂದು ಅನೇಕರು ಹೇಳುತ್ತಿದ್ದಾರೆ.