ರಾಯಚೂರು: ಬಿಸಿಲ ಧಗೆ ಲೆಕ್ಕಿಸದೇ ಬಿರುಸಿನ ಮತದಾನ

| Published : May 08 2024, 01:00 AM IST

ಸಾರಾಂಶ

ರಾಯಚೂರಿನಲ್ಲಿ ಶಾಂತಿಯುತ ಹಕ್ಕು ಚಲಾಯಿಸಿದ ಮಂದಿ. ಕಲ್ಮಂಗಿ ಮತಗಟ್ಟೆಯಲ್ಲಿ ಕೈಕೊಟ್ಟ ಮತ ಯಂತ್ರ, 2 ತಾಸು ಮತದಾನ ತಡ. ಮಾನ್ವಿಯಲ್ಲಿ ಕೇಸರಿ ಶಾಲು ಧರಿಸಿ ಬಂದವರಿಗೆ ತಡೆ, ಮಾನ್ವಿ ತಾಲೂಕಿನ ಮುಷ್ಠೂರು ಗ್ರಾಮದಲ್ಲಿ ನೀರಿಗಾಗಿ ಮತಗಟ್ಟೆ ಎದುರು ಪ್ರತಿಭಟನೆ.

ಕನ್ನಡಪ್ರಭ ವಾರ್ತೆ ರಾಯಚೂರು

ಪರಿಶಿಷ್ಟ ಪಂಗಡಕ್ಕೆ ಮೀಸಲಿರುವ ಪಕ್ಕದ ಯಾದಗಿರಿಯನ್ನೊಳಗೊಂಡ ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಬೇಸಿಗೆಯ ಬಿಸಿಲನ್ನು ಲೆಕ್ಕಿಸದೇ ಬಿರುಸಿನ ಮತದಾನವು ನಡೆಯಿತು.

ಕೆಲ ಮತಗಟ್ಟೆಗಳಲ್ಲಿ ಅಲ್ಪ-ಸಲ್ವ ಗೊಂದಲವಾಗಿದ್ದು ಬಿಟ್ಟರೆ ಬಹುತೇಕ ಎಲ್ಲ ಮತಗಟ್ಟೆಗಳಲ್ಲಿ ಶಾಂತಿಯುತವಾಗಿ ಮತದಾನ ಪ್ರಕ್ರಿಯೆಯು ಜರುಗಿತು. ರಾಯಚೂರು ನಗರ, ಗ್ರಾಮೀಣ, ಮಾನ್ವಿ, ದೇವದುರ್ಗ ಮತ್ತು ಲಿಂಗಸುಗೂರು ಜೊತೆಗೆ ಪಕ್ಕದ ಯಾದಗಿರಿ ಜಿಲ್ಲೆಯ ಶೋರಾಪುರ, ಶಹಪುರ ಹಾಗೂ ಯಾದಗಿರಿ ವಿಧಾನಸಭಾ ಕ್ಷೇತ್ರಗಳಲ್ಲಿ ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಮತದಾನ ನಡೆಯಿತು. ಅದೇ ರೀತಿ ಜಿಲ್ಲೆ ಸಿಂಧನೂರು ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರಗಳಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಅಲ್ಲಿಯ ಮತದಾರರ ಮತದಾನವನ್ನು ಮಾಡಿದರು.

ಮತ ಯಂತ್ರಗಳಲ್ಲಿ ತಾಂತ್ರಿಕ ಲೋಪದಿಂದ ತಡವಾಗಿ ಮತದಾನ ಆರಂಭಗೊಂಡದ್ದು, ಮತದಾರರು ಪಟ್ಟಿಯಲ್ಲಿ ಹೆಸರು ಇಲ್ಲದೇ ಇರುವುದರ ಕುರಿತು ಜನ ತಕರಾರು ಎತ್ತಿದ ಘಟನೆಗಳು ಅಲ್ಲಲ್ಲಿ ಜರುಗಿದರೇ ಗುಂಪಾಗಿ ಮತಗಟ್ಟೆಗಳಿಗೆ ಬರುವ ಜನರನ್ನು ಪೊಲೀಸರು ಚದುರಿಸುತ್ತಿದ್ದ ದೃಶ್ಯಗಳು ಕಂಡುಬಂದವು.

ಬೇಸಿಗೆ ಬಿರುಸಿಲಿನ ಪರಿಣಾಮವಾಗಿ ನಿಗದಿತ ಸಮಯಕ್ಕೆ ಸರಿಯಾಗಿ ಮತದಾನ ಆರಂಭ ಪಡೆಯಿತು. ಬೆಳಗ್ಗೆ 7 ಗಂಟೆಯಿಂದಲೆಯೇ ಮತದಾರರು ಮತಗಟ್ಟೆಗಳತ್ತ ದಾವಿಸಿ ಹಕ್ಕು ಚಲಾಯಿಸಿ ತಮ್ಮ ತಮ್ಮ ಕೆಲಸ-ಕಾರ್ಯಗಳಿಗೆ ತೆರಳಿದರು. ಇನ್ನು ರಾಯಚೂರು ಗ್ರಾಮೀಣ ಭಾಗದಲ್ಲಿ ಸೋಮವಾರ ಅಲ್ಪ-ಸ್ವಲ್ಪ ಮಳೆಯಾಗಿದ್ದರಿಂದ ಬೇಸಿಗೆಯ ಬಿಸಿಲು ಕೊಂಚಮಟ್ಟಿಗೆ ಕಡಿಮೆಯಾಗಿದ್ದರಿಂದ ಮತದಾರರು ಬಿರುಸಿನ ಮತನವನ್ನು ಚಲಾಯಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿ ಕಂಡುಬಂದವು.

ಮಧ್ಯಾಹ್ನದ ವೇಳೆಗೆ ಮತದಾನ ಪ್ರಮಾಣವು ಜಾಸ್ತಿಯಾಗಿ ಕಂಡಿತು. ಸೂರ್ಯ ಮರೆಯಾಗುತ್ತಿದ್ದಂತೆಯೇ ಮನೆಗಳಿಂದ ಹೊರಗಡೆ ಬಂದು ಮತದಾರರು ಹಕ್ಕನ್ನು ಚಲಾಯಿಸಿದರು.

ಕೈಕೊಟ್ಟ ಮತಯಂತ್ರ:ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಸಿಂಧನೂರು ತಾಲೂಕಿನ ಕಲ್ಮಂಗಿ ಮತಗಟ್ಟೆಯಲ್ಲಿ ಮತಯಂತ್ರ ಕೈಕೊಟ್ಟ ಪರಿಣಾಮ ಎರಡು ತಾಸು ತಡವಾಗಿ ಮತದಾಯ ಆರಂಭಗೊಂಡ ಘಟನೆ ನಡೆಯಿತು. ನಿಗದಿತ ಸಮಯಕ್ಕೆ ಮತಗಟ್ಟೆಗೆ ಬಂದ ಮತದಾರರು ಸಾಲುಕಟ್ಟಿ ನಿಂತಿದ್ದರು ಮತದಾನ ಚಾಲಾಗಿರಲಿಲ್ಲ, ಸಿಬ್ಬಂದಿ ಇವಿಎಂ ಮತಯಂತ್ರದಲ್ಲಿ ಲೋಪ ಸರಿಪಡಿಸಿ ಮತದಾನ ಆರಂಭಿಸಿದರು.

ಮಹಿಳಾ ಪೇದೆ ಜೊತೆ ವಾಗ್ವಾದ: ಮತಗಟ್ಟೆಯೊಳಗೆ ಮೊಬೈಲ್‌ ಫೋನ್ ತೆಗೆದುಕೊಂಡು ಹೋಗುವುದರ ವಿಚಾರವಾಗಿ ಮಹಿಳಾ ಪೇದೆ ಜೊತೆ ಮತಗಟ್ಟೆ ಏಜೆಂಟ್‌ ಹಾಗೂ ಮತದಾರರ ನಡುವೆ ವಾಗ್ವಾದ ಉಂಟಾದ ಘಟನೆ ಮಂಗಳವಾರ ನಗರದ ಬೇಸ್ತವಾರಪೇಟೆ ಬಡಾವಣೆಯ ಮತಗಟ್ಟೆಯಲ್ಲಿ ಜರುಗಿತು. ಮೊಬೈಲ್‌ ಫೋನ್ ಬಿಡುವುದಿಲ್ಲವೆಂದು ಪೊಲೀಸ್‌ರು ಪಟ್ಟು ಹಿಡಿದರು ನಂತರ ಸ್ಥಳಕ್ಕೆ ಬಂದ ಅಧಿಕಾರಿಗಳು ಸಮಾಧಾನಪಡಿಸಿದರು.

ಎನ್‌ಆರ್‌ಐ ಮತದಾನ: ಚುನಾವಣೆಯಲ್ಲಿ ಅನಿವಾಸಿ ಭಾರತೀಯ ವಿದೇಶದಿಂದ ಬಂದು ಮತಚಲಾಯಿಸಿ ಗಮನ ಸೆಳೆದರು. ಇನ್ನು ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಮಸ್ಕಿ ತಾಲೂಕಿನ ವಟಗಲ್ ಗ್ರಾಮದ ಎನ್‌ಆರ್‌ಐ ಅಮರೇಶ್‌ ಅವರು ಉಮಾನ್ ದೇಶದ ಮಸ್ಕತ್‌ನಿಂದ ಬಂದು ಹಕ್ಕು ಚಲಾಯಿಸಿದರು. ಸುಮಾರು 3 ಲಕ್ಷ ರು. ಖರ್ಚು ಮಾಡಿಕೊಂಡು ಗ್ರಾಮಕ್ಕೆ ಆಗಮಿಸಿ ಮತಚಲಾಯಿಸುವುದರ ಮುಖಾಂತರ ದಾನಗಳಲ್ಲಿಯೇ ಅತ್ಯಂತ ಶ್ರೇಷ್ಠವಾದದ್ದು ಮತದಾನ ಎಂಬುವುದನ್ನು ಸಾಬೀತುಪಡಿಸಿದರು.

ನೀರಿಗಾಗಿ ಮತದಾನ ಬಂದ್: ಜಿಲ್ಲೆ ಮಾನ್ವಿ ತಾಲೂಕಿನ ಮುಷ್ಠೂರು ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಮತಗಟ್ಟೆ ಗೇಟ್‌ಗಳಿಗೆ ಬಂದ್‌ ಮಾಡಿದ ಘಟನೆ ನಡೆಯಿತು. ಗ್ರಾಮದ 254 ಮತ್ತು 255ರಲ್ಲಿ ನಡೆಯುತ್ತಿದ್ದ ಮತದಾನದ ಸಮಯದಲ್ಲಿ ಆಕ್ರೋಶಗೊಂಡ ಗ್ರಾಮಸ್ಥರು ಕೊಡಗಳನ್ನು ತುಂಬಿದ ಬಂಡಿ, ನೀರಿನ ಟ್ಯಾಂಕರ್‌ಗಳನ್ನು ತಂದು ಮತಗಟ್ಟೆ ಗೇಟ್‌ಗೆ ಅಡ್ಡಲಾಗಿ ಇಟ್ಟು ಮತದಾನ ಬಂದ್‌ ಮಾಡಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಇದರಿಂದಾಗಿ ಸುಮಾರು ಒಂದೂವರೆ ಗಂಟೆವರೆಗೂ ಮತದಾನ ಸ್ಥಗಿತಗೊಂಡಿತ್ತು. ನಂತರ ಸ್ಥಳಕ್ಕೆ ಆಗಮಿಸಿದ

ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಗ್ರಾಮಸ್ಥರು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರಿಂದ ಮತದಾತ ಮತ್ತೆ ಆರಂಭ ಕಂಡಿತು.

ಕೇಸರಿ ಶಾಲು ಗೊಂದಲ: ಜಿಲ್ಲೆ ಮಾನ್ವಿ ಪಟ್ಟಣದ ಮತಗಟ್ಟೆಯೊಂದರಲ್ಲಿ ಕೇಸರಿ ಶಾಲು ಹಾಕಿಕೊಂಡು ಬಂದವರನ್ನು ಕೇಂದ್ರದೊಳಗಡೆ ಬಿಡುವ ವಿಚಾರವಾಗಿ ಸಿಬ್ಬಂದಿ ಹಾಗೂ ಮತದಾರರು ನಡುವೆ ಕೊಂಚವಾಗ್ವಾದ ಉಂಟಾದ ಘಟನೆ ಜರುಗಿತು. ಪಟ್ಟಣದ ಮತಗಟ್ಟೆ ಸಂಖ್ಯೆ 185ರಲ್ಲಿ ಕೆಲವರು ಕೇಸರಿ ಶಾಲು ಹಾಕಿಕೊಂಡು ಮತದಾನ ಮಾಡಲು ಮತಗಟ್ಟೆಗೆ ಪ್ರವೇಶಿಸುತ್ತಿರುವುದನ್ನು ಸಿಬ್ಬಂದಿ ತಡೆದರು. ಮೇಲಿನಾಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಮತದಾನಕ್ಕೆ ಅವಕಾಶ ಮಾಡಿಕೊಟ್ಟರು.