ತಾಯಂದಿರು ಸಂಸ್ಕೃತಿ, ಸಂಸ್ಕಾರದ ಹರಿಕಾರರು: ಅರಮೇರಿ ಕಳಂಚೇರಿ ಸ್ವಾಮೀಜಿ

| Published : May 08 2024, 01:00 AM IST

ತಾಯಂದಿರು ಸಂಸ್ಕೃತಿ, ಸಂಸ್ಕಾರದ ಹರಿಕಾರರು: ಅರಮೇರಿ ಕಳಂಚೇರಿ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಗಣಗೂರು ಗ್ರಾಮದಲ್ಲಿ ಜೀರ್ಣೋದ್ಧಾರಗೊಳಿಸಿರುವ 200 ವರ್ಷಗಳ ಇತಿಹಾಸ ಇರುವ ಶ್ರೀ ಬಸವೇಶ್ವರ ಸ್ವಾಮಿ ನೂತನ ದೇವಸ್ಥಾನದ ಉದ್ಘಾಟನೆ ಮಂಗಳವಾರ ನಡೆಯಿತು. ವಿರಾಜಪೇಟೆ ಅರಮೇರಿ ಕಳಂಚೇರಿ ಮಠದ ಪೀಠಾಧ್ಯಕ್ಷ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಧಾರ್ಮಿಕ ಸಭೆಯಲ್ಲಿ ಉಪನ್ಯಾಸ ನೀಡಿದರು.

ಕನ್ನಡಪ್ರಭ ವಾರ್ತೆ ಶನಿವಾರಸಂತೆ

ತಾಯಿಂದಿರು ಭಾರತದ ಸಂಸ್ಕೃತಿ, ಸಂಸ್ಕಾರ ಪರಂಪರೆ ಹರಿಕಾರರು ಎಂದು ವಿರಾಜಪೇಟೆ ಅರಮೇರಿ ಕಳಂಚೇರಿ ಮಠದ ಪೀಠಾಧ್ಯಕ್ಷ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದ್ದಾರೆ.ಇಲ್ಲಿಗೆ ಸಮೀಪದ ಗಣಗೂರು ಗ್ರಾಮದಲ್ಲಿ ಜೀರ್ಣೋದ್ಧಾರಗೊಳಿಸಿರುವ 200 ವರ್ಷಗಳ ಇತಿಹಾಸ ಇರುವ ಶ್ರೀ ಬಸವೇಶ್ವರ ಸ್ವಾಮಿ ನೂತನ ದೇವಸ್ಥಾನದ ಉದ್ಘಾಟನೆ ಮತ್ತು ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಭಾರತವು ಸಂಸ್ಕೃತಿ, ಸಂಸ್ಕಾರ, ಧಾರ್ಮಿಕ, ಆಧ್ಯಾತ್ಮಿಕ ಚಿಂತನೆಗಳುಳ್ಳ ಪರಂಪರೆ ಹೊಂದಿರುವ ರಾಷ್ಟ್ರವಾಗಿದೆ. ಇಂಥಹ ಸಂಸ್ಕಾರವನ್ನು ತಾಯಿ ಕಲಿಸಿಕೊಡುವುದರಿಂದ ನಮ್ಮ ದೇಶದಲ್ಲಿ ತಾಯಂದಿರಿಗೆ ಪ್ರಮುಖ ಸ್ಥಾನವಿದೆ ಎಂದರು. ನಮ್ಮ ದೇಶ ವಿಜ್ಞಾನ ತಂತ್ರ ಜ್ಞಾನದಲ್ಲಿ ಅಭಿವೃದ್ದಿ ಸಾಧಿಸಿದೆ. ಆದರೂ ನಮ್ಮ ವಿಜ್ಞಾನಿಗಳು ಆಧ್ಯಾತ್ಮಿಕ, ಧಾರ್ಮಿಕ ಚಿಂತನೆ ಮೈಗೂಡಿಸಿಕೊಂಡಿರುವ ಮೂಲಕ ಎಷ್ಟೆ ದೊಡ್ಡ ವಿಜ್ಞಾನಿ-ಸಾಧಕರಾಗಿದ್ದರೂ ದೇಶದ ಆಧ್ಯಾತ್ಮಿಕ, ಧಾರ್ಮಿಕ ಚಿಂತನೆಯನ್ನು ಮರೆತಿಲ್ಲ ಎಂದರು.

ಸಮಾಜವು ಆಧುನಿಕ, ವೈಜ್ಞಾನಿಕವಾಗಿ ಬದಲಾದರೂ ಮಾನವಿಯ ಗುಣ, ಸಂಸ್ಕಾರ. ಸಂಸ್ಕೃತಿ, ಧಾರ್ಮಿಕ, ಆಚಾರ ವಿಚಾರಗಳು ಬದಲಾಗಬಾರದು. ಇದರಿಂದ ಸಮಾಜವು ಸಂಸ್ಕಾರಗೊಳುತ್ತದೆ ಎಂದರು.ಮಾಜಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ, ನಮಗೆ ದೇಗುಲಗಳಲ್ಲಿ ಶಾಂತಿ, ನೆಮ್ಮದಿ ಮತ್ತು ಶಾಲೆಗಳಲ್ಲಿ ಜ್ಞಾನ ಸಿಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಂದು ಊರುಗಳಲ್ಲಿ ಧಾರ್ಮಿಕ ಆಚರಣೆಗೆ ದೇಗುಲ ಮಠ ಮಂದಿರಗಳಿರಬೇಕು. ಮತ್ತು ಪ್ರತಿಯೊಂದು ಊರುಗಳಲ್ಲಿ ಶಾಲೆಗಳು ವೃದ್ದಿಯಾಗಬೇಕೆಂದರು.

ಕೊಡ್ಲಿಪೇಟೆ ಕಲ್ಲುಮಠದ ಶ್ರೀ ಮಹಂತ ಸ್ವಾಮೀಜಿ ಮಾತನಾಡಿ, ನಾವು ವೈಜ್ಞಾನಿಕವಾಗಿ ಸಮಾಜವನ್ನು ಬೆಳೆಸುತ್ತೇವೆ ಹೊರತು ಪರಿಸರ ಬೆಳೆಸಲು ಹೋಗುವುದಿಲ್ಲ. ಸ್ವಾರ್ಥಕ್ಕಾಗಿ ಮತ್ತು ಅಭಿವೃದ್ಧಿ ಹೆಸರಿನಲ್ಲಿ ಮರ,ಗಿಡಗಳನ್ನು ಕಡಿಯುತ್ತೇವೆ ಇದರಿಂದ ಇಂದು ಪರಿಸರ ನಾಶವಾಗಿದ್ದು, ಜಿಲ್ಲೆಯಲ್ಲಿ ಸರಿಯಾಗಿ ಮಳೆಯಾಗುತ್ತಿಲ್ಲ ಎಂದರು.

ಧಾರ್ಮಿಕ, ಆಧ್ಯಾತ್ಮಿಕ ಚಿಂತನೆಯ ಜೊತೆಯಲ್ಲಿ ಪರಿಸರ ಉಳಿಸುವ ಚಿಂತನೆ ಮೈಗೂಡಿಸಿಕೊಳ್ಳುವ ಅಗತ್ಯ ಇದೆ ಎಂದರು.

ಅಖಿಲ ಭಾರತ ವೀರಶೈವ ಸಮಾಜದ ಜಿಲ್ಲಾಧ್ಯಕ್ಷ ಎಚ್.ವಿ.ಶಿವಪ್ಪ ಮಾತನಾಡಿ, ಧಾರ್ಮಿಕ ಕೇಂದ್ರಗಳಿಂದ ನಾವು ಸಂಸ್ಕಾರ, ಸಹಬಾಳ್ವೆ, ಒಗ್ಗಟ್ಟು ಮುಂತಾದ ಮಹತ್ವ ಕಲಿಯಬಹುದು. ಈ ನಿಟ್ಟಿನಲ್ಲಿ ಪ್ರತಿಯೊಂದು ಊರುಗಳಲ್ಲಿ ಗುಡಿ, ದೇಗುಲಗಳ ನಿರ್ಮಾಣವಾಗಬೇಕಿದೆ ಎಂದರು.

ಶಿರಧನಹಳ್ಳಿ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಮಾತನಾಡಿ, ಪೋಷಕರು ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗೆ ಸೇರಿಸುವುದರಿಂದ ಅವರು ಇಂಗ್ಲಿಷ್‌ ಭಾಷೆ ಮಾತ್ರ ಮಾತನಾಡುವಲ್ಲಿ ಸೀಮಿತರಾಗುತ್ತಾರೆ. ಆದರೆ ಗ್ರಾಮೀಣ ಪ್ರದೇಶದ ಕನ್ನಡದ ಶಾಲೆಗಳಲ್ಲಿ ಸಂಸ್ಕಾರ, ಸಂಸ್ಕೃತಿ ಕಲಿಸಿಕೊಡುತ್ತದೆ. ಈ ನಿಟ್ಟಿನಲ್ಲಿ ಪೋಷಕರು ಮಕ್ಕಳಿಗೆ ಸಂಸ್ಕಾರ ಆಚಾರ ವಿಚಾರಗಳನ್ನು ಕಲಿಸಿಕೊಡಬೇಕು ಎಂದು ಸಲಹೆ ನೀಡಿದರು.

ಸೋಮವಾರಪೇಟೆ ಎಸಿಎಫ್ ಎ.ಎ.ಗೋಪಾಲ್, ಧಾರ್ಮಿಕ ಸಮಾರಂಭದ ದಿವ್ಯ ಸಾನಿಧ್ಯವಹಿಸಿದ ಅಂಕನಹಳ್ಳಿ ಮನೆಹಳ್ಳಿ ಮಠದ ಶ್ರೀ ಮಹಂತ ಶಿವಲಿಂಗ ಸ್ವಾಮೀಜಿ ಮಾತನಾಡಿದರು. ದೇವಸ್ಥಾನ ಸಮಿತಿ ಅಧ್ಯಕ್ಷ ಜಿ.ಜಿ.ಪರಮೇಶ್ ಅಧ್ಯಕ್ಷತೆ ವಹಿಸಿದ್ದರು. ಗಣಗೂರು ಗ್ರಾ.ಪಂ.ಅಧ್ಯಕ್ಷೆ ಪ್ರೇಮ, ಸದಸ್ಯ ಎಂ.ಎಸ್.ಪ್ರದೀಪ್ ಮುಂತಾದವರಿದ್ದರು

ಗ್ರಾಮದ ವಿವಿಧ ಕ್ಷೇತ್ರಗಳ ಸಾಧಕರನ್ನು ದೇವಾಲಯ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.