ನಂಜನಗೂಡಿನಲ್ಲಿ ಶಾಂತಿಯುತ ಮತದಾನ

| Published : Apr 27 2024, 01:02 AM IST

ಸಾರಾಂಶ

ಕ್ಷೇತ್ರದ ಒಟ್ಟು 246 ಮತಗಟ್ಟೆಗಳಲ್ಲಿ ನಡೆದ ಮತದಾನ ನಿಗದಿತ ಸಮಯಕ್ಕೆ ಆರಂಭಗೊಂಡರೂ ಬೆಳಗ್ಗೆ 11ರ ಸುಮಾರಿಗೆ ಶೇ. 18.5 ರಷ್ಟು ಮತದಾನವಾಗಿತ್ತು. ನಂತರ ಸಮಯದಲ್ಲಿ ಸ್ವಲ್ಪ ನಿಧಾನಗತಿಯಲ್ಲಿ ಏರಿಕೆ ಕಾಣತೊಡಗಿತು.

ಕನ್ನಡಪ್ರಭ ವಾರ್ತೆ ನಂಜನಗೂಡು

ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಶುಕ್ರವಾರ ನಡೆದ ಲೋಕಸಭಾ ಚುನಾವಣೆಯು ಯಾವುದೇ ಅಹಿತಕರ ಘಟನೆ ನಡೆಯದೆ ಶಾಂತಿಯುತವಾಗಿ ಮತದಾನ ನಡೆಯಿತು.

ಕ್ಷೇತ್ರದ ಒಟ್ಟು 246 ಮತಗಟ್ಟೆಗಳಲ್ಲಿ ನಡೆದ ಮತದಾನ ನಿಗದಿತ ಸಮಯಕ್ಕೆ ಆರಂಭಗೊಂಡರೂ ಬೆಳಗ್ಗೆ 11ರ ಸುಮಾರಿಗೆ ಶೇ. 18.5 ರಷ್ಟು ಮತದಾನವಾಗಿತ್ತು. ನಂತರ ಸಮಯದಲ್ಲಿ ಸ್ವಲ್ಪ ನಿಧಾನಗತಿಯಲ್ಲಿ ಏರಿಕೆ ಕಾಣತೊಡಗಿತು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಶೇ. 31 ಹಾಗೂ 4 ಗಂಟೆ ವೇಳೆಗೆ ಶೇ. 51ರಷ್ಟು ಮತದಾನವಾಗಿತ್ತು. 5ರ ವೇಳೆಗೆ ಬಿರುಸುಗೊಂಡ ಮತದಾನ ಶೇ 67.75ಕ್ಕೆ ತಲುಪಿತು. ತಾಲೂಕಿನ ಮಾದಾಪುರ ಹಾಗೂ ನಗರದ ನಾಗಮ್ಮ ಶಾಲೆಯ ಮತಗಟ್ಟೆಯಲ್ಲಿ ಇವಿಎಂ ಯಂತ್ರ ಕೈಕೊಟ್ಟಿದ್ದರಿಂದ 15 ನಿಮಿಷ ತಡವಾಗಿ ಮತದಾನ ಆರಂಭವಾಗಿದ್ದು ಬಿಟ್ಟರೆ ಉಳಿದೆಲ್ಲ ಮತಗಟ್ಟೆಗಳಲ್ಲಿ ಮತದಾನ ಸುಸೂತ್ರವಾಗಿ ನೆರವೇರಿತು.

ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೇಸ್ ಪಕ್ಷದ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. ಪ್ರತಿ ಬೂತ್‌ ನಲ್ಲೂ ಕೂಡ ಎರಡೂ ಪಕ್ಷದ ಕಾರ್ಯಕರ್ತರು ತಮ್ಮ ಪಕ್ಷಕ್ಕೆ ಮತ ನೀಡುವಂತೆ ಮತದಾರರ ಮನವೊಲಿಸುವ ದೃಶ್ಯ ಸಾಮಾನ್ಯವಾಗಿತ್ತು.

ಮತದಾರರು ಹುಮ್ಮಸ್ಸಿನಿಂದ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮೂಲಕ ತಮ್ಮ ಹಕ್ಕು ಚಲಾಯಿಸಿ ಹರ್ಷ ವ್ಯಕ್ತಪಡಿಸಿದರು.

ಸುತ್ತೂರು ಶ್ರೀಗಳು, ಮಹದೇವಪ್ಪ ಮತದಾನ

ತಾಲೂಕಿನ ಸುತ್ತೂರು ಗ್ರಾಮದ ಮತಗಟ್ಟೆಯಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮತದಾನ ಮಾಡಿದರು. ಈ ಹಿಂದೆ ಮೈಸೂರಿನಲ್ಲಿ ಮತದಾನ ಮಾಡುತ್ತಿದ್ದ ಶ್ರೀಗಳು ಕಳೆದ ವಿಧಾನಸಭಾ ಚುನಾವಣೆಯಿಂದ ಸುತ್ತೂರು ಕ್ಷೇತ್ರದ ಮತಗಟ್ಟೆಯಲ್ಲೇ ಮತದಾನ ಮಾಡುತ್ತಿದ್ದು, ಇದೀಗ ಲೋಕಸಭಾ ಚುನಾವಣೆಯಲ್ಲೂ ಸುತ್ತೂರಿನಲ್ಲೇ ಮತದಾನ ಮಾಡಿ ಗಮನ ಸೆಳೆದರು. ಇನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್‌ ಅವರು ತಮ್ಮ ಹುಟ್ಟೂರಾದ ತಾಲೂಕಿನ ಹದಿನಾರು ಗ್ರಾಮದಲ್ಲಿ ತಮ್ಮ ಕುಟುಂಬದವರೊಂದಿಗೆ ಆಗಮಿಸಿ ತಮ್ಮ ಓಟಿನ ಹಕ್ಕು ಚಲಾಯಿಸಿದರು.

ನಂಜನಗೂಡು ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ ತಮ್ಮ ಸ್ವಗ್ರಾಮ ದೊಡ್ಡಕವಲಂದೆ ಸಮೀಪವಿರುವ ಚಾಮರಾಜನಗರ ತಾಲೂಕಿನ ಹೆಗ್ಗವಾಡಿ ಗ್ರಾಮದಲ್ಲಿ ಸಹೋದರ ಧೀರೇನ್ ಧ್ರುವನಾರಾಯಣ ಜತೆ ಆಗಮಿಸಿ ಮತ ಚಲಾಯಿಸಿದರು. ಮಾಜಿ ಶಾಸಕ ಕಳಲೆ ಎನ್. ಕೇಶವಮೂರ್ತಿ ಕಳಲೆ ಗ್ರಾಮದಲ್ಲಿ ಹಾಗೂ ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ ನಗರದಲ್ಲಿ ಮತದಾನ ಮಾಡಿದರು.

ತಾಲೂಕಿನ ಕಸುವಿನಹಳ್ಳಿ, ಮಲ್ಕುಂಡಿ, ಶಿರಮಳ್ಳಿ, ಕುರಹಟ್ಟಿ, ನೇರಳೆ, ಕುಪ್ಪರವಳ್ಳಿ ಹಾಗೂ ಹೊಸಕೋಟೆ ಗ್ರಾಮಗಳಲ್ಲಿ ತೆರೆಯಲಾಗಿದ್ದ ಸಖಿ ಮತಗಟ್ಟೆಗಳಲ್ಲಿ ಹೊಸದಾಗಿ ಮತದಾನ ಮಾಡಿದಯುವಕಯುವತಿಯರು ಸೆಲ್ಫಿತೆಗೆದುಕೊಂಡು ಹರ್ಷ ವ್ಯಕ್ತಪಡಿಸಿದರು. ಹುಲ್ಲಹಳ್ಳಿ ಹಾಗೂ ತಾಂಡವಪುರ ಗ್ರಾಮಗಳಲ್ಲಿ ಸಾಂಪ್ರದಾಯಿಕ ಮತಗಟ್ಟೆಗಳನ್ನು ವಿಶೇಷವಾಗಿ ಸಿಂಗರಿಸಲಾಗಿತ್ತು.

ವರುಣದಲ್ಲಿ ಶಾಂತಿಯುತ ಮತದಾನ

ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ಕ್ಷೇತ್ರದಲ್ಲಿ ಶೇ. 74 ರಷ್ಟು ಶಾಂತಿಯುತ ಮತದಾನ ನಡೆಯಿತು. ಮತದಾರರು ಹುಮ್ಮಸ್ಸಿನಿಂದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಬೆಳಗ್ಗೆ 11ಕ್ಕೆ ಶೇ. 23, 1 ಗಂಟೆ ವೇಳೆಗೆ ಏರಿಕೆ ಕಂಡ ಮತದಾನ ಪ್ರಕ್ರಿಯೆ 41.45 ಕ್ಕೆ ಏರಿಕೆಯಾಯಿತು. ಮಧ್ಯಾಹ್ನ 3ರ ವೇಳೆಗೆ 56.15, 5 ಗಂಟೆ ವೇಳೆಗೆ 71.76ಕ್ಕೆ ತಲುಪಿತು.

------------