ಇಂದು-ನಾಳೆ ಹಿರಿಯ, ವಿಕಲಚೇತನರ ಮತದಾನ

| Published : Apr 25 2024, 01:02 AM IST

ಸಾರಾಂಶ

ಮತಗಟ್ಟೆಯಲ್ಲಿ ಮತದಾನ ಮಾಡುವಾಗ ಅನುಸರಿಸುವ ನಿಯಮಗಳನ್ನು ತಪ್ಪದೇ ಮನೆಯಿಂದ ಮತದಾನವಾಗುವಲ್ಲಿ ಅನುಸರಿಸಬೇಕು. ಮತದಾನ ಚಲಾವಣೆಯಲ್ಲಿ ಗೌಪ್ಯತೆ ಕಾಪಾಡಬೇಕು.

ಧಾರವಾಡ

ಧಾರವಾಡ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಮತದಾನಕ್ಕೆ ನೋಂದಾಯಿಸಿಕೊಂಡಿರುವ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು ಶೇ. 40ಕ್ಕಿಂತ ಹೆಚ್ಚು ಅಂಗವಿಕಲತೆ ಇರುವ ವಿಕಲಚೇತನ ಮತದಾರರು ಏ.25 ಮತ್ತು 26ರಂದು ಮನೆಯಿಂದ ಮತದಾನ ಮಾಡಲಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ದಿವ್ಯಪ್ರಭು ಹೇಳಿದರು.

ಆಲೂರು ವೆಂಕಟರಾವ್ ಭವನದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳಿಗೆ ನಡೆದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಈ ಕುರಿತು ಮಾಹಿತಿಯನ್ನು ನೋಂದಾಯಿತ ಮತದಾರರಿಗೆ ತಲುಪಿಸಲಾಗಿದ್ದು, ಸಿಬ್ಬಂದಿ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ. ಅಧಿಕಾರಿಗಳು ಚುನಾವಣಾ ಆಯೋಗದ ನಿಯಮಗಳನ್ನು ತಪ್ಪದೇ ಪಾಲಿಸಿಬೇಕು. ಮತದಾನದ ಗೌಪ್ಯತೆ ಕಾಪಾಡಬೇಕು ಎಂದರು.

ಮತಗಟ್ಟೆಯಲ್ಲಿ ಮತದಾನ ಮಾಡುವಾಗ ಅನುಸರಿಸುವ ನಿಯಮಗಳನ್ನು ತಪ್ಪದೇ ಮನೆಯಿಂದ ಮತದಾನವಾಗುವಲ್ಲಿ ಅನುಸರಿಸಬೇಕು. ಮತದಾನ ಚಲಾವಣೆಯಲ್ಲಿ ಗೌಪ್ಯತೆ ಕಾಪಾಡಬೇಕು. ಮತದಾರ ಮತ್ತು ಅಧಿಕಾರಿಗಳಿಗೆ ಮಾತ್ರ ಮತದಾನ ಸ್ಥಳದಲ್ಲಿ ಇರಲು ಅವಕಾಶವಿದೆ. ನಿಯೋಜಿತ ಪೊಲೀಸರು ಅಗತ್ಯ ಭದ್ರತೆ ನೀಡಬೇಕು. ಸೆಕ್ಟರ್ ಅಧಿಕಾರಿಗಳು ರೂಟ್ ಮತ್ತು ಇತರ ಅಗತ್ಯ ಮಾಹಿತಿ ನೀಡಬೇಕೆಂದರು.

ಎರಡೂ ದಿನ ಬೆಳಗ್ಗೆ 9ರಿಂದ ಸಂಜೆ 5ರ ವರೆಗೆ ಮತದಾರನ ಮನೆ-ಮನೆಗೆ ತೆರಳಿ ಮತದಾನ ಪ್ರಕ್ರಿಯೆ ಕಾರ್ಯ ಕೈಗೊಳ್ಳಲಿದ್ದಾರೆ. ಅಧಿಕಾರಿಗಳು ಬ್ಯಾಲೇಟ್ ಪೇಪರ್‌ದೊಂದಿಗೆ ಮತದಾರನಿಗೆ ಮುಂಚಿತವಾಗಿ ತಿಳಿಸಿರುವ ಸಮಯಕ್ಕೆ, ಅವರ ಮನೆಗೆ ತೆರಳಿ ಮತದಾನ ಮಾಡಿಸಿಕೊಳ್ಳುತ್ತಾರೆ. ನೋಂದಾಯಿತ ಮತದಾರ ಎರಡೂ ದಿನ ತಮಗೆ ನೀಡಿದ ಸಮಯಕ್ಕೆ ಸರಿಯಾಗಿ ಮನೆಯಲ್ಲಿದ್ದು, ತಮ್ಮ ಮತದಾನದ ಹಕ್ಕು ಚಲಾಯಿಸಬೇಕು ಎಂದ ಅವರು, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ಎಚ್ಚರಿಕೆ ವಹಿಸಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು. ಮತದಾನದ ಪೂರ್ಣ ಪ್ರಕ್ರಿಯೆಯನ್ನು ನಿಯಮದಂತೆ ವಿಡಿಯೋ ಚಿತ್ರಿಕರಣ ಮಾಡಬೇಕು ಎಂದು ತಿಳಿಸಿದರು.

ಎಲ್ಲೆಲ್ಲಿ ಎಷ್ಟೇಷ್ಟು ನೋಂದಣಿ..

ಜಿಲ್ಲೆಯಲ್ಲಿ ಮನೆಯಿಂದ ಮತದಾನಕ್ಕಾಗಿ ಈಗಾಗಲೇ ನವಲಗುಂದ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು 156, ವಿಕಲಚೇತನ 83, ಕುಂದಗೋಳ ಮತಕ್ಷೇತ್ರದಲ್ಲಿ 85 ವರ್ಷ ಮೇಲ್ಪಟ್ಟವರು 69, ವಿಕಲಚೇತನ 32, ಧಾರವಾಡ ಕ್ಷೇತ್ರದಲ್ಲಿ 85 ವರ್ಷ ಮೇಲ್ಪಟ್ಟವರು 276, ವಿಕಲಚೇತನ 92, ಹು-ಧಾ ಪೂರ್ವದಲ್ಲಿ 85 ವರ್ಷ ಮೇಲ್ಪಟ್ಟವರು 118, ವಿಕಲಚೇತನ 37, ಹು-ಧಾ ಕೇಂದ್ರದಲ್ಲಿ 85 ವರ್ಷ ಮೇಲ್ಪಟ್ಟವರು 203, ವಿಕಲಚೇತನ 32, ಹು-ಧಾ ಪಶ್ಚಿಮದಲ್ಲಿ 85 ವರ್ಷ ಮೇಲ್ಪಟ್ಟವರು 272, ವಿಕಲಚೇತನ 46, ಕಲಘಟಗಿಯಲ್ಲಿ 85 ವರ್ಷ ಮೇಲ್ಪಟ್ಟವರು 99, ವಿಕಲಚೇತನ 56, ಧಾರವಾಡ ಮತಕ್ಷೇತ್ರದ ಹಾವೇರಿ ಜಿಲ್ಲೆಯ ಶಿಗ್ಗಾಂವಿದಲ್ಲಿ 85 ವರ್ಷ ಮೇಲ್ಪಟ್ಟವರು 211, 71 ವಿಕಲಚೇತನರು ಮನೆಯಿಂದ ಮತದಾನಕ್ಕೆ ನೋಂದಾಯಿಸಿಕೊಂಡಿದ್ದಾರೆ. ಒಟ್ಟಾರೆ ಜಿಲ್ಲೆಯ 85 ವರ್ಷ ಮೇಲ್ಪಟ್ಟವರು 1404, ವಿಕಲಚೇತನ 449 ಸೇರಿ ಒಟ್ಟು 1853 ಮತದಾರರು ಮತದಾನ ಮಾಡಲಿದ್ದಾರೆ ಎಂದರು.

ಕಲಘಟಗಿ ವಿಧಾನಸಭಾ ಮತಕ್ಷೇತ್ರದ ಸಹಾಯಕ ಚುನಾವಣಾ ಅಧಿಕಾರಿ ಆಗಿರುವ ಹಿರಿಯ ಕೆಎಎಸ್ ಅಧಿಕಾರಿ ಸಿದ್ದು ಹುಲ್ಲೋಳಿ, ಸಹಾಯಕ ಚುನಾವಣಾಧಿಕಾರಿಗಳಾದ ಪ್ರಿಯಾಂಗ ಎಂ, ಡಾ. ಈಶ್ವರ ಉಳ್ಳಾಗಡ್ಡಿ, ವಿನೋದಕುಮಾರ ಹೆಗ್ಗಳಗಿ, ರುದ್ರೇಶ ಗಾಳಿ, ದೇವರಾಜ ಆರ್, ಶಾಲಂ ಹುಸೇನ್, ತಹಸೀಲ್ದಾರ್‌ ಮಲ್ಲಿಕಾರ್ಜುನ ಹೆಗ್ಗಣ್ಣವರ, ದೊಡ್ಡಪ್ಪ ಹೂಗಾರ ಇದ್ದರು.