ಚಿತ್ರನಟ ಚಂದ್ರಪ್ಪಗೆ ಡಾ. ರಾಜ್‌ಕುಮಾರ್‌ ಪ್ರಶಸ್ತಿ ಪ್ರದಾನ

| Published : Apr 25 2024, 01:02 AM IST

ಸಾರಾಂಶ

ಚಾಮರಾಜನಗರದ ಕೀರ್ತಿ ಕಳಸ ಡಾ. ರಾಜಕುಮಾರ್ ಚಿತ್ರರಂಗದಲ್ಲಿನ ಘಟನೆ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಕೆಲವರು ರಾಜ್‌ಕುಮಾರ್ ಅವರನ್ನು ದೇವತಾ ಸ್ವರೂಪದಲ್ಲಿಯೇ ನೋಡುತ್ತಿದ್ದರು ಎಂದು ಚಾಮರಾಜನಗರ ಸಿಂಹ ಮೂವೀ ಪ್ಯಾರಡೈಸ್ ಮಾಲೀಕರಾದ ಎ.ಜಯಸಿಂಹ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಚಾಮರಾಜನಗರದ ಕೀರ್ತಿ ಕಳಸ ಡಾ. ರಾಜಕುಮಾರ್ ಚಿತ್ರರಂಗದಲ್ಲಿನ ಘಟನೆ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಕೆಲವರು ರಾಜ್‌ಕುಮಾರ್ ಅವರನ್ನು ದೇವತಾ ಸ್ವರೂಪದಲ್ಲಿಯೇ ನೋಡುತ್ತಿದ್ದರು ಎಂದು ಚಾಮರಾಜನಗರ ಸಿಂಹ ಮೂವೀ ಪ್ಯಾರಡೈಸ್ ಮಾಲೀಕರಾದ ಎ.ಜಯಸಿಂಹ ತಿಳಿಸಿದರು.

ನಗರದ ಭ್ರಮರಾಂಭ ಬಡಾವಣೆಯ ಡಾ.ರಾಜ್‌ಕುಮಾರ್‌ ಆಪ್ತ ಸ್ನೇಹಿತರು ಹಾಗೂ ಚಿತ್ರನಟ ಚಂದ್ರಪ್ಪ ಮನೆಯಲ್ಲಿ ನಟಸಾರ್ವಭೌಮ ರಾಜ್‌ಕುಮಾರ್ ೯೫ನೇಹುಟ್ಟು ಹಬ್ಬದ ಆಚರಣೆ ಪ್ರಯುಕ್ತ ಈಶ್ವರಿ ಸೋಶಿಯಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ ಸಮಾರಂಭದಲ್ಲಿ ರಾಜ್‌ಕುಮಾರ್ ಜೊತೆಯಲ್ಲಿ ೧೪ ಚಿತ್ರಗಳಲ್ಲಿ ನಟಿಸಿರುವ ಕೃಷ್ಣ ಚಿತ್ರಮಂದಿರದ ವ್ಯವಸ್ಥಾಪಕ ಚಂದ್ರಪ್ಪರಿಗೆ ೧೦ ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ದೊಂದಿಗೆ ಮುತ್ತುರಾಜ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ರಾಜ್‌ಕುಮಾರ್‌ಗೆ ಚಾಮರಾಜನಗರ ಜಿಲ್ಲೆ ಎಂದರೇ ಬಹಳ ಪ್ರೀತಿ, ನಗರಕ್ಕೆ ಬಂದರೆ ಚಂದ್ರಪ್ಪ ಮನೆ ಇಲ್ಲದಿದ್ದರೆ ಕೃಷ್ಣ ಚಿತ್ರಮಂದಿರಕ್ಕೆ ಬರುತ್ತಿದ್ದರು. ಚಾಮರಾಜನಗರದಲ್ಲಿ ಚಂದ್ರಣ್ಣ ನವರೆ ಆಪ್ತ ಸ್ನೇಹಿತರು. ರಾಜ್‌ಕುಮಾರ್ ನಟಿಸಿರುವ ಕೆಲವು ಚಿತ್ರಗಳಿಗೆ ಚಂದ್ರಣ್ಣ ನವರನ್ನು ನಟಿಸಲು ಅವಕಾಶ ಕಲ್ಪಿಸಿದ್ದರು ಭಕ್ತ ಪ್ರಹ್ಲಾದ, ದಾರಿ ತಪ್ಪಿದ ಮಗ, ವಸಂತಗೀತ, ಸಾಕ್ಷತ್‌ಕಾರ, ಪ್ರೇಮದ ಕಾಣಿಕೆ, ಸಂಪತ್ತಿಗೆ ಸವಾಲ್ ಹಾಗೂ ಇನ್ನು ಹಲವಾರು ಚಿತ್ರಗಳಲ್ಲಿ ರಾಜ್ ಜೊತೆ ನಟಿಸಿದ್ದಾರೆ. ಇವರನ್ನು ಈಶ್ವರಿ ಸೋಶಿಯಲ್ ಟ್ರಸ್ಟ್ ಗೌರವಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಚಲನಚಿತ್ರ ನಟ ಘಟಂ ಕೃಷ್ಣ ಮಾತನಾಡಿ ರಂಗಭೂಮಿ ಹಾಗೂ ಚಲನಚಿತ್ರಗಳಿಗೆ ಡಾ.ರಾಜ್‌ಕುಮಾರ್ ಕೊಡುಗೆ ಅಪಾರವಾಗಿದೆ. ಅವರಿಗೆ ಬಂದಿರುವ ಪ್ರಶಸ್ತಿಗಳು ಮತ್ತು ಬಿರುದುಗಳು ಅಭಿಮಾನಿಗಳಿಗೆ ಸಂತೋಷ ತಂದಿದೆ. ಪೌರಾಣಿಕ ಪಾತ್ರಗಳಲ್ಲಿ ಅವರಿಗೆ ಸರಿಸಮಾನರಾದ ಕಲಾವಿದರು ಮತ್ತೊಬ್ಬರಿಲ್ಲ ಎಂದು ತಿಳಿಸಿ, ಅವರು ನಮ್ಮ ಜಿಲ್ಲೆಯವರು ಎಂದು ಹೇಳಿಕೊಳ್ಳಲು ನಮಗೆ ಹೆಮ್ಮೆಯಾಗುತ್ತದೆ ಎಂದರು.

ಈಶ್ವರಿ ಸೋಶಿಯಲ್ ಟ್ರಸ್ಟ್ ಸಂಸ್ಥಾಪಕ ಪರಿಸರಪ್ರೇಮಿ ಸಿ.ಎಂ.ವೆಂಕಟೇಶ್ ಮಾತನಾಡಿ, ಪ್ರತಿವರ್ಷವು ಡಾ. ರಾಜ್‌ಕುಮಾರ್ ಹುಟ್ಟುಹಬ್ಬವನ್ನು ನಮ್ಮ ಸಂಸ್ಥೆಯ ವತಿಯಿಂದ ಆಚರಣೆ ಮಾಡಿಕೊಂಡು ಬಂದಿದ್ದೇವೆ. ಪ್ರಸ್ತುತ ೨೦೨೪ ರಿಂದ ರಾಜ್‌ಕುಮಾರ್ ಜೊತೆಯಲ್ಲಿ ಒಡನಾಟವಿರುವ ವ್ಯಕ್ಯಿಗಳನ್ನು ಗುರುತಿಸಿ ಅವರಿಗೆ ಮುತ್ತುರಾಜ್ ಪ್ರಶಸ್ತಿಯನ್ನು ಪ್ರದಾನ ಮಾಡುವುದರ ಜೊತೆಗೆ ೧೦೦೦೦ ನಗದು ಬಹುಮಾನವನ್ನು ನೀಡುತ್ತಿದ್ದೇವೆ ಮತ್ತು ಮುಂದಿನ ದಿನಗಳಲ್ಲಿ ಈ ಪ್ರಶಸ್ತಿಯನ್ನು ನಿರಂತರವಾಗಿ ರಂಗಭೂಮಿ ಮತ್ತು ಚಿತ್ರರಂಗದಲ್ಲಿ ಗಣನೀಯ ಸೇವೆ ಸಲ್ಲಿಸಿದ ಮೇರು ವ್ಯಕ್ತಿಗಳಿಗೆ ಪ್ರಶಸ್ತಿ ನೀಡುವುದರ ಮೂಲಕ ರಾಜ್‌ಕುಮಾರ್ ಅವರ ಹುಟ್ಟು ಹಬ್ಬವನ್ನು ಆರ್ಥಪೂರ್ಣವಾಗಿ ಆಚರಿಸಲಾಗುವುದೆಂದು ತಿಳಿಸಿದರು.

ರಂಗಜೋಳಿಗೆ ಅಧ್ಯಕ್ಷ ಜೆ.ಮೂರ್ತಿಮುಡಿಗುಂಡ ಮಾತನಾಡಿ, ಡಾ.ರಾಜ್‌ಕುಮಾರ್ ಮತ್ತು ಚಂದ್ರಪ್ಪ ಕಾಲಘಟ್ಟದಲ್ಲಿ ಜನ್ಮ ತಾಳಿದ ನಾವೇ ಧನ್ಯರು ಮತ್ತು ಸೂರ್ಯ ಚಂದ್ರ ಭೂಮಿ ಇರುವ ತನಕ ರಾಜಕುಮಾರ್ ಹೆಸರು ಅಜರಾಮರ ಎಂದರು.

ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ಪ್ರಧಾನ ಪ್ರಬರಂಧಕರಾದ ನಂಜುಂಡಸ್ವಾಮಿ, ಯುವ ಸಾಹಿತಿಗಳಾದ ಕೆ.ಶ್ರೀಧರ್, ಕಲಾವಿದರಾದ ಸುರೇಶ್‌ನಾಗ್, ನಟರಾಜು ಹರದನಹಳ್ಳಿ, ಗಾಯಕ ಶಿವಣ್ಣ, ಪವನ್ ಹೊಟೇಲ್ ಅಂಕಶೆಟ್ಟಿ, ಹರಳುಕೋಟೆ ಪ್ರಸಾದ್, ಲಕ್ಷ್ಮಿನರಸಿಂಹ ಹಾಗೂ ರಾಜು ಮಂಗಲ ಹಾಜರಿದ್ದರು.