ಮತದಾನ ಅಂತ್ಯ: ಮತ ಗಳಿಕೆ ಲೆಕ್ಕಾಚಾರ ಶುರು!

| Published : May 09 2024, 01:03 AM IST

ಸಾರಾಂಶ

ದಾವಣಗೆರೆ ಲೋಕಸಭೆ ಕ್ಷೇತ್ರದ ಚುನಾವಣೆ ಮುಗಿದ ಬೆನ್ನಲ್ಲೇ ಪ್ರಮುಖ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು, ಪಕ್ಷೇತರ ಅಭ್ಯರ್ಥಿಗಳು ಬಿಡುವಿಲ್ಲದೇ ಅವಿರತ ಪ್ರಚಾರ, ಸುತ್ತಾಟದಲ್ಲಿ ಕಳೆದಿದ್ದವರು ಬುಧವಾರ ಒಂದಿಷ್ಟು ನಿರಮ್ಮಳರಾಗಿದ್ದರು.

- ರಿಲ್ಯಾಕ್ಸ್ ಜೊತೆಗೆ ಗೆಲುವಿನ ಬಗ್ಗೆ ಲೆಕ್ಕಾಚಾರದಲ್ಲಿ ಮುಳುಗಿದ ಅಭ್ಯರ್ಥಿಗಳು । ಪತ್ರಿಕೆಗಳ ಮೇಲೆ ಕಣ್ಣಾಡಿಸಿ ಚರ್ಚೆ

- ಎಲ್ಲ ಪಕ್ಷಗಳು, ಅಭ್ಯರ್ಥಿಗಳಲ್ಲಿ ಎಲ್ಲಿ ಲೀಡ್‌, ಎಲ್ಲಿ ಹಿನ್ನಡೆ ಎಂಬ ಲೆಕ್ಕಾಚಾರ । ಎಲ್ಲರ ಚಿತ್ರ ಮತ ಎಣಿಕೆ ದಿನದತ್ತ - - -

ಕನ್ನಡಪ್ರಭ ವಾರ್ತೆ, ದಾವಣಗೆರೆ

ದಾವಣಗೆರೆ ಲೋಕಸಭೆ ಕ್ಷೇತ್ರದ ಚುನಾವಣೆ ಮುಗಿದ ಬೆನ್ನಲ್ಲೇ ಪ್ರಮುಖ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು, ಪಕ್ಷೇತರ ಅಭ್ಯರ್ಥಿಗಳು ಬಿಡುವಿಲ್ಲದೇ ಅವಿರತ ಪ್ರಚಾರ, ಸುತ್ತಾಟದಲ್ಲಿ ಕಳೆದಿದ್ದವರು ಬುಧವಾರ ಒಂದಿಷ್ಟು ನಿರಮ್ಮಳರಾಗಿದ್ದರು.

ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ, ಪತ್ನಿ, ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಬೆಳಗ್ಗೆ ಕಾಲೇಜು ಕ್ಯಾಂಪಸ್‌ನಲ್ಲಿ ವಾಕ್ ಮುಗಿಸಿಕೊಂಡು, ನಂತರ ಪತ್ರಿಕೆಗಳ ಮೇಲೆ ಕಣ್ಣಾಡಿಸಿದರು. ಅಲ್ಲದೇ, ಬೆಳಂಬೆಳಗ್ಗೆಯೇ ಯಾವ್ಯಾವ ವಿಧಾನಸಭಾ ಕ್ಷೇತ್ರ, ನಗರ, ಪಟ್ಟಣ, ಗ್ರಾಮಗಳಲ್ಲಿ ಮತದಾರರ ಪ್ರತಿಕ್ರಿಯೆ ಮತದಾನದ ನಂತರ ಹೇಗಿದೆ, ವಾತಾವರಣ ಹೇಗಿದೆಯೆಂಬ ಬಗ್ಗೆ ವಿಚಾರಿಸಿದರು.

ದಿನವಿಡೀ ಖುದ್ದಾಗಿ ಬಂದು ಭೇಟಿಯಾಗುವವರು, ಫೋನ್‌ನಲ್ಲಿ ಮಾತನಾಡುವವರ ಜೊತೆ ಸಂಸದ ಸಿದ್ದೇಶ್ವರ, ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಸೇರಿದಂತೆ ಪಕ್ಷದ ಮುಖಂಡರು, ಪದಾಧಿಕಾರಿಗಳ ಜೊತೆಗೆ ಚರ್ಚಿಸಿದರು. ದಾವಣಗೆರೆ ಲೋಕಸಭಾ ಕ್ಷೇತ್ರವನ್ನು ಮತ್ತೆ ಗೆದ್ದೇ ಗೆಲ್ಲುತ್ತೇವೆಂಬ ವಿಶ್ವಾಸದಲ್ಲಿ ಜಿ.ಎಂ.ಸಿದ್ದೇಶ್ವರ, ಗಾಯತ್ರಿ ಸಿದ್ದೇಶ್ವರ ಇದ್ದಾರೆ. ಬಹುತೇಕರ ವಿಶ್ವಾಸವೂ ಅದೇ ಆಗಿತ್ತು. ಎದುರಾಳಿಗಳು ಏನೇ ತಂತ್ರ ಮಾಡಿದರೂ ಮತದಾರರ ಮಂತ್ರ ದೇಶಕ್ಕಾಗಿ ಮತದಾನ, ಮೋದಿಗಾಗಿ ಮತದಾನ ಎಂಬುದಾಗಿದೆ. ಹಾಗಾಗಿ ನಾವು ಗೆದ್ದೇ ಗೆಲ್ಲುತ್ತೇವೆಂಬ ದೃಢ ವಿಶ್ವಾಸದಲ್ಲಿ ಬಿಜೆಪಿ ಪಾಳೆಯವಿದೆ.

ಕಾಂಗ್ರೆಸ್‌ ಪಾಳಯದಲ್ಲಿ ಚರ್ಚೆ:

ಇತ್ತ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಬೆಳಗ್ಗೆಯೇ ಎದ್ದು ಪೂಜೆ, ದೇವರ ದರ್ಶನ ನಂತರ ಪತ್ರಿಕೆಗಳ ಮೇಲೆ ಕಣ್ಣಾಡಿಸಿದರು. ಅನಂತರ ಜಿಲ್ಲೆಯ ಎಂಟೂ ವಿಧಾನಸಭಾ ಕ್ಷೇತ್ರಗಳ ತಮ್ಮ ಪಕ್ಷದ ಶಾಸಕರು, ಮಾಜಿ ಶಾಸಕರು, ಮುಖಂಡರ ಜೊತೆಗೆ ಮತದಾರರ ಅಭಿಪ್ರಾಯ, ಆ ಊರು, ಗ್ರಾಮಗಳಲ್ಲಿ ಜನರ ಪ್ರತಿಕ್ರಿಯೆ ವಾತಾವರಣ ಹೇಗಿದೆಯೆಂಬುದನ್ನು, ಯಾವ್ಯಾವ ಕಡೆ ಹೆಚ್ಚು ಮತದಾನ, ಎಲ್ಲಿ ಕಡಿಮೆಯಾಗಿದೆ ಎಂಬ ಮಾಹಿತಿ ಪಡೆದರು.

ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಎಸ್‌.ಎಸ್‌. ಮಲ್ಲಿಕಾರ್ಜುನ ಅವರಂತೂ ದಾವಣಗೆರೆಯಲ್ಲಿ ಈ ಸಲ ಗೆದ್ದೇ ಗೆಲ್ಲುತ್ತೇವೆಂಬ ದೃಢ ವಿಶ್ವಾಸದಲ್ಲಿದ್ದಾರೆ. ಅದರಲ್ಲೂ ಶಾಸಕ ಶಾಮನೂರು ಶಿವಶಂಕರಪ್ಪ ಒಂದು ಹೆಜ್ಜೆ ಮುಂದೆ ಹೋಗಿ, ಒಂದು ರು.ಗೆ ನೂರು ರು. ಕೊಡುತ್ತೇನೆ. ಯಾರಿದ್ದೀರಿ? ದಾವಣಗೆರೆಯಲ್ಲಿ ಈ ಸಲ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ದಾಖಲೆ ಮತಗಳ ಅಂತರದಲ್ಲಿ ಗೆಲ್ಲುತ್ತಾರೆಂಬ ವಿಶ್ವಾಸ ವ್ಯಕ್ತಪಡಿಸುತ್ತೇವೆ ಎಂದಿದ್ದಾರೆ. ಎಸ್‌.ಎಸ್‌. ಮಲ್ಲಿಕಾರ್ಜುನ ಕಾಂಗ್ರೆಸ್ಸಿನ ಗ್ಯಾರಂಟಿ ಯೋಜನೆ, ಜನಪರ ಕಾರ್ಯ ಕೈ ಹಿಡಿದು ಗೆಲ್ಲಿಸುತ್ತೇವೆ. ಇಲ್ಲಿ ವಾಜಪೇಯಿ, ಮೋದಿ ಅಲೆ ಇಲ್ಲ. ಇರೋದು ಕಾಂಗ್ರೆಸ್ಸಿನ ಗ್ಯಾರಂಟಿ ಯೋಜನೆ ಅಲೆ ಮಾತ್ರ ಎಂದಿದ್ದಾರೆ.

ಪಕ್ಷೇತರ ಅಭ್ಯರ್ಥಿ ವಿನಯಕುಮಾರ:

ಇನ್ನು ಕಾಂಗ್ರೆಸ್-ಬಿಜೆಪಿ ಪಾಲಿಗೆ ಬಿಸಿತುಪ್ಪವೇ ಆಗಿದ್ದ, ಕಾಂಗ್ರೆಸ್‌ ವಿರುದ್ಧ ಬಂಡಾಯ ಸಾರಿದ್ದ ಜಿ.ಬಿ.ವಿನಯಕುಮಾರ ಸಹ ಚುನಾವಣೆಯಿಂದ ಬಿಡುವು ಸಿಕ್ಕಿತೆಂದು ಮೈಮರೆಯದೇ, ಎಂದಿನಂತೆ ತಮ್ಮ ದೈನಂದಿನ ಕಾರ್ಯದಲ್ಲಿ ಮಗ್ನರಾಗಿದ್ದರು. ಎಸ್‌.ಎಸ್‌. ಬಡಾವಣೆಯ ತಮ್ಮ ನಿವಾಸದಲ್ಲಿ ಬೆಂಬಲಿಗರು, ಹಿತೈಷಿಗಳ ಸಭೆ ನಡೆಸಿದರು. ಚುನಾವಣೆಯಲ್ಲಿ ಏನೆಲ್ಲಾ ಆಯಿತೆಂಬ ಬಗ್ಗೆ ಸಮಾಲೋಚನೆ ನಡೆಸಿದರು. ಕಳೆದೊಂದು ತಿಂಗಳಿನಿಂದ ಮತದಾರರು ಒಂದೊಳ್ಳೆಯ ಫಲಿತಾಂಶದ ಭರವಸೆ ಮೂಡಿಸಿದ್ದಾರೆ ಎಂದು ಹೇಳಿದ್ದಾರೆ.

ಹಗಲಿರುಳು ತಮ್ಮ ಜೊತೆಗೆ ಹಿತೈಷಿಗಳು, ಅಭಿಮಾನಿಗಳು, ಬಂಧು ಬಳಗ, ಭಗಿನಿಯರು, ಸಂಘ-ಸಂಸ್ಥೆ, ಸಂಘಟನೆಗಳು, ವಿವಿಧ ಸ್ತರದ ಪ್ರಮುಖರು, ಸ್ನೇಹಿತರು, ನಗರ , ಗ್ರಾಮೀಣ ವಾಸಿಗಳು, ರೈತರು, ವಿದ್ಯಾರ್ಥಿ, ಯುವ ಜನರು ತಮಗೆ ಬೆಂಬಲಿಸಿ, ತಮ್ಮೊಂದಿಗೆ ನಿಂತಿದ್ದಾರೆ. ಸ್ವಾಭಿಮಾನಿಯಾಗಿ ಕಣಕ್ಕಿಳಿದಿದ್ದೆ. ಯಾರಿಗೂ ಹಣ ಹಂಚಿಲ್ಲ. ಆಮಿಷವೊಡ್ಡಿಲ್ಲ. ಮತ ಖರೀದಿಸದೇ, ಪ್ರಜಾಪ್ರಭುತ್ವ, ಸಂವಿಧಾನದ ಆಶಯದಂತೆ ನಡೆದಿದ್ದೇವೆ. ಇಲ್ಲಿ ವಿನಯಕುಮಾರ ಡೀಲ್ ಆಗಿದ್ದು ಬಿಜೆಪಿ, ಕಾಂಗ್ರೆಸ್ ಜೊತೆಗಲ್ಲ. ನಿಜವಾಗಿಯೂ ಡೀಲ್ ಆಗಿದ್ದು ಬಿಜೆಪಿ-ಕಾಂಗ್ರೆಸ್ ಮಧ್ಯೆ. ಮುಂದಿನ ದಿನಗಳಲ್ಲಿ ಜನರಿಗೆ ಇದು ಗೊತ್ತಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಮಾಯಕೊಂಡ ಶಾಸಕರೂ ಬ್ಯುಸಿ:

ಅತ್ತ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ತಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು, ಬೆಂಬಲಿಗರೊಂದಿಗೆ ದಾವಣಗೆರೆ ಶ್ರೀ ಜಯದೇವ ವೃತ್ತದ ಹೇರ್ ಸಲೂನ್‌ವೊಂದರ ಮುಂದೆ ಕುಳಿತು, ಮೇ 7ರ ಚುನಾವಣೆಯಲ್ಲಿ ತಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಲೀಡ್ ಕೊಡುವ ಗ್ರಾಮಗಳು, ಊರುಗಳ ಬಗ್ಗೆ ಪಕ್ಷದ ಮುಖಂಡರು, ಕಾರ್ಯಕರ್ತರು, ಬೆಂಬಲಿಗರೊಂದಿಗೆ ಚರ್ಚಿಸಿದರು. ಕಾಂಗ್ರೆಸಿನ ಗ್ಯಾರಂಟಿ ಯೋಜನೆಗಳು, ಹೊಸ ಭರವಸೆಗಳು, ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅಭಿವೃದ್ಧಿ ಕಾರ್ಯ, ಸಿಎಂ ಸಿದ್ದರಾಮಯ್ಯ ನಾಯಕತ್ವ, ಡಾ.ಪ್ರಭಾ ಮಲ್ಲಿಕಾರ್ಜುನ ಸಮಾಜಮುಖಿ ಕಾರ್ಯಗಳು ಕಾಂಗ್ರೆಸ್ಸಿನ ಗೆಲುವಿಗೆ ಸಹಕಾರಿಯಾಗಲಿವೆ ಎಂದು ವಿಶ್ಲೇಷಿಸುವಲ್ಲಿ ಬ್ಯುಸಿಯಾಗಿದ್ದುದು ಕಂಡುಬಂತು.

ದಿನವಿಡೀ ಕಾಂಗ್ರೆಸ್, ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳು, ಕಾಂಗ್ರೆಸ್ಸಿನ ಮಿತ್ರಪಕ್ಷ, ಬೆಂಬಲ ಘೋಷಿಸಿದ್ದ ಸಂಘಟನೆಗಳು ಚುನಾವಣೆ ಗೆಲುವಿನ ಬಗ್ಗೆ ತಮ್ಮದೇ ಲೆಕ್ಕಾಚಾರದಲ್ಲಿ ತೊಡಗಿದ್ದವು.

- - -

-8ಕೆಡಿವಿಜಿ7, 8: ದಾವಣಗೆರೆ ಜಿಎಂಐಟಿ ಅತಿಥಿ ಗೃಹದಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಕನ್ನಡಪ್ರಭದಲ್ಲಿ ರಾಜಕೀಯ ಸುದ್ದಿಗಳ ಮೇಲೆ ಕಣ್ಣಾಡಿಸುತ್ತಿರುವುದು. ಸಂಸದ ಜಿ.ಎಂ. ಸಿದ್ದೇಶ್ವರ ಸಹ ಪಕ್ಷದ ಮುಖಂಡರೊಂದಿಗೆ ಚುನಾವಣೆ ಬಗ್ಗೆ ಚರ್ಚಿಸುತ್ತಾ ಪತ್ರಿಕೆ ಓದುತ್ತಿರುವುದು.

- - -

-8ಕೆಡಿವಿಜಿ9, 10:

ದಾವಣಗೆರೆ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ತಮ್ಮ ನಿವಾಸ ಶಿವ ಪಾರ್ವತಿಯಲ್ಲಿ ವಿವಿಧ ಕ್ಷೇತ್ರದ ಮುಖಂಡರಿಂದ ಚುನಾವಣೆ ಬಗ್ಗೆ ಮಾಹಿತಿ ಪಡೆಯುತ್ತಿರುವುದು.

- - -

-8ಕೆಡಿವಿಜಿ11, 12:

ದಾವಣಗೆರೆಯ ಎಸ್ಸೆಸ್ ಲೇಔಟ್ ನ ತಮ್ಮ ನಿವಾಸದಲ್ಲಿ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ ತಮ್ಮ ಬೆಂಬಲಿಗರು, ಸಂಘ ಸಂಸ್ಥೆಯವರ ಜೊತೆಗೆ ಚರ್ಚಿಸುತ್ತಿರುವುದು.