ಒಂದೇ ಕುಟುಂಬದ 96 ಜನರಿಂದ ಮತದಾನ

| Published : May 08 2024, 01:05 AM IST

ಸಾರಾಂಶ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈ ಕುಟುಂಬದ ಇಬ್ಬರು ಯುವ ಮತದಾರರು ಮೊದಲ ಬಾರಿಗೆ ತಮ್ಮ ಹಕ್ಕು ಚಲಾಯಿಸಿದ್ದರು. ಈ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಮೂವರು ವಿದ್ಯಾರ್ಥಿನಿಯರು ಮೊದಲ ಬಾರಿಗೆ ಮತದಾನ ಮಾಡಿದರು.

ಹುಬ್ಬಳ್ಳಿ:

ತಾಲೂಕಿನ ಕುಂದಗೋಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನೂಲ್ವಿ ಗ್ರಾಮದ ಕೊಪ್ಪದ ಕುಟುಂಬದ 96 ಮತದಾರರು ಮಂಗಳವಾರ ಏಕಕಾಲಕ್ಕೆ ತಮ್ಮ ಹಕ್ಕು ಚಲಾಯಿಸಿ ಗಮನ ಸೆಳೆದರು.

ಗ್ರಾಮದ ಕಂಟೆಪ್ಪ ಕೊಪ್ಪದ ಹಾಗೂ ಗುರುಸಿದ್ದಪ್ಪ ಕೊಪ್ಪದ ಇಬ್ಬರೂ ಸಹೋದರರಾಗಿದ್ದು, ಅಕ್ಕಪಕ್ಕದಲ್ಲಿಯೇ ಮನೆ ಹೊಂದಿದ್ದಾರೆ. ಇವರದು ತುಂಬು ಕುಟುಂಬ. ಇವರಿಬ್ಬರ ಮನೆಯಲ್ಲಿ 200ಕ್ಕೂ ಅಧಿಕ ಜನರು ವಾಸಿಸುತ್ತಾರೆ. ಈ ಬಾರಿ 96 ಜನರಿಗೆ ಮತದಾನದ ಹಕ್ಕು ಬಂದಿದೆ. ಹಾಗಾಗಿ ಕುಟುಂಬದ ಸರ್ವ ಸದಸ್ಯರೂ ಒಟ್ಟಾಗಿ ಮತಗಟ್ಟೆಗೆ ಬಂದು ಮತದಾನ ಮಾಡಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈ ಕುಟುಂಬದ ಇಬ್ಬರು ಯುವ ಮತದಾರರು ಮೊದಲ ಬಾರಿಗೆ ತಮ್ಮ ಹಕ್ಕು ಚಲಾಯಿಸಿದ್ದರು. ಈ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಮೂವರು ವಿದ್ಯಾರ್ಥಿನಿಯರು ಮೊದಲ ಬಾರಿಗೆ ಮತದಾನ ಮಾಡಿದರು.

ನಮ್ಮ ತಂದೆಗೆ 6 ಜನ ಸಹೋದರರು. ಅ‍ವರೆಲ್ಲರೂ ಮೊದಲು ಒಂದೇ ಮನೆಯಲ್ಲಿ ವಾಸವಾಗಿದ್ದರು. ನಂತರ ಎರಡೂವರೆ ಎಕರೆ ಜಾಗದಲ್ಲಿಯೇ ಅಕ್ಕಪಕ್ಕದಲ್ಲಿ ಬೇರೆಬೇರೆ ಮನೆ ನಿರ್ಮಿಸಿ ಒಂದೇ ಭಾಗದಲ್ಲಿಯೇ ನಮ್ಮ ಕುಟುಂಬಗಳು ವಾಸಿಸುತ್ತಿವೆ. ಯಾವುದೇ ಹಬ್ಬಗಳಿರಲಿ, ಎಲ್ಲರೂ ಸೇರಿ ಆಚರಿಸುತ್ತೇವೆ. ಹಾಗೆಯೇ ಚುನಾವಣೆಯಲ್ಲೂ ಅದೇ ಹುಮ್ಮಸ್ಸಿನಿಂದ ಎಲ್ಲರೂ ಸೇರಿಕೊಂಡು ಮತಗಟ್ಟೆಗೆ ಆಗಮಿಸಿ ನಮ್ಮ ಹಕ್ಕು ಚಲಾಯಿಸುತ್ತೇವೆ ಎನ್ನುತ್ತಾರೆ ಕುಟುಂಬದ ಹಿರಿಯರಾದ ಕಂಟೆಪ್ಪ ಕೊಪ್ಪದ.

ಯುವ ಮತದಾರರ ಸಂಭ್ರಮ:

ಇದೇ ಕೊಪ್ಪದ ಕುಟುಂಬದಲ್ಲಿ ಈ ಬಾರಿ ಮೂವರು ವಿದ್ಯಾರ್ಥಿನಿಯರಾದ ಪೂಜಾ ಕೊಪ್ಪದ, ಸರಸ್ವತಿ ಕೊಪ್ಪದ, ಮಂಗಲಾ ಕೊಪ್ಪದ ಮೊದಲ ಬಾರಿಗೆ ಮತದಾನ ಮಾಡಿ ಕುಟುಂಬದೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.