ರಾಣಿಬೆನ್ನೂರು: ಬಿಸಿಲನ್ನು ಲೆಕ್ಕಿಸದೇ ಮತಗಟ್ಟೆಗೆ ಆಗಮಿಸಿದ ಮತದಾರರು

| Published : May 08 2024, 01:02 AM IST

ರಾಣಿಬೆನ್ನೂರು: ಬಿಸಿಲನ್ನು ಲೆಕ್ಕಿಸದೇ ಮತಗಟ್ಟೆಗೆ ಆಗಮಿಸಿದ ಮತದಾರರು
Share this Article
  • FB
  • TW
  • Linkdin
  • Email

ಸಾರಾಂಶ

ಹಾವೇರಿ- ಗದಗ ಲೋಕಸಭಾ ಕ್ಷೇತ್ರಕ್ಕೆ ತಾಲೂಕಿನ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಶಾಂತಿಯುತ ಮತದಾನ ಜರುಗಿತು. ಮಧ್ಯಾಹ್ನ 3ರ ವೇಳೆಗೆ ಶೇ.59.88ರಷ್ಟು ಮತದಾನವಾಗಿತ್ತು. ಮಹಿಳಾ ಸಿಬ್ಬಂದಿಯಿಂದ ಕೂಡಿದ ಸಖಿ ಮತಗಟ್ಟೆಗಳು ಹಾಗೂ ಸ್ಥಳೀಯ ನಗರಸಭೆಯಲ್ಲಿನ ಮಾದರಿ ಮತಗಟ್ಟೆ ವಿಶೇಷ ಆಕರ್ಷಣೆಯಾಗಿದ್ದವು.

ರಾಣಿಬೆನ್ನೂರು: ಹಾವೇರಿ- ಗದಗ ಲೋಕಸಭಾ ಕ್ಷೇತ್ರಕ್ಕೆ ತಾಲೂಕಿನ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಶಾಂತಿಯುತ ಮತದಾನ ಜರುಗಿತು. ಮಧ್ಯಾಹ್ನ 3ರ ವೇಳೆಗೆ ಶೇ.59.88ರಷ್ಟು ಮತದಾನವಾಗಿತ್ತು. ಮಹಿಳಾ ಸಿಬ್ಬಂದಿಯಿಂದ ಕೂಡಿದ ಸಖಿ ಮತಗಟ್ಟೆಗಳು ಹಾಗೂ ಸ್ಥಳೀಯ ನಗರಸಭೆಯಲ್ಲಿನ ಮಾದರಿ ಮತಗಟ್ಟೆ ವಿಶೇಷ ಆಕರ್ಷಣೆಯಾಗಿದ್ದವು.

ತಾಲೂಕಿನ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಮತದಾರರು ಬೆಳಗ್ಗೆಯಿಂದಲೇ ಹೆಚ್ಚಿನ ಉತ್ಸುಕತೆಯಿಂದ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸುತ್ತಿರುವುದು ಕಂಡು ಬಂದಿತು. ಮಧ್ಯಾಹ್ನ 12ರಿಂದ 3ರ ನಡುವಿನ ಅವಧಿಯಲ್ಲಿ ಮತದಾನ ಪ್ರಮಾಣ ಕಡಿಮೆಯಾಗಬಹುದು ಎಂಬುದು ಎಲ್ಲರ ನಿರೀಕ್ಷೆಯಾಗಿತ್ತು. ಆದರೆ ಬಿಸಿಲು ಹೆಚ್ಚಾಗಿದ್ದರೂ ಕೂಡ ಅಚ್ಚರಿ ಎಂಬಂತೆ ಮತದಾರರು ಮತಗಟ್ಟೆಯತ್ತ ಧಾವಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಸಖಿ ಮತಗಟ್ಟೆಗಳು: ತಾಲೂಕಿನ ಕಮದೋಡ, ಇಟಗಿ ಮತ್ತು ಕುಪ್ಪೇಲೂರು ಗ್ರಾಮಗಳಲ್ಲಿ ತೆರೆಯಲಾದ ಸಖಿ (ಮಹಿಳಾ ಸ್ನೇಹಿ ಮತಗಟ್ಟೆಗಳು) ಮತದಾರರನ್ನು ಸೆಳೆಯುವಂತಿದ್ದವು. ಸೆಲ್ಫಿ ವ್ಯವಸ್ಥೆಗೆ ಮಾರುಹೋದ ಜನರು: ನಗರದ ಲೋಕೋಪಯೋಗಿ ಕಚೇರಿ, ಸರ್ಕಾರಿ ಪ್ರಾಥಮಿಕ ಶಾಲೆಯ ಯುವ ಮತದಾರರ ಮತಗಟ್ಟೆಗಳಲ್ಲಿ ಮತ ಚಲಾವಣೆ ನೆನಪಿಗಾಗಿ ಭಾವಚಿತ್ರಗಳನ್ನು ತೆಗೆದುಕೊಳ್ಳಲು ಮತದಾರರಿಗೆ ಸೆಲ್ಫಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಮತದಾನಕ್ಕೆ ಆಗಮಿಸಿದ ಬಹುತೇಕ ಮತದಾರರು ಅದರಲ್ಲಿಯೂ ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಸೆಲ್ಫಿ ತೆಗೆಯಿಸಿಕೊಂಡು ಸಂಭ್ರಮಿಸಿದರು. ವಾಹನ ವ್ಯವಸ್ಥೆ: ಈ ಬಾರಿ ಚುನಾವಣಾ ಆಯೋಗದ ವತಿಯಿಂದಲೇ ವೃದ್ಧರು ಹಾಗೂ ವಿಶೇಷ ಚೇತನರಿಗಾಗಿ ಆಟೋ ವ್ಯವಸ್ಥೆ ಮಾಡಲಾಗಿತ್ತು. ಇದರಿಂದ ಮತಗಟ್ಟೆ ಕೇಂದ್ರಕ್ಕೆ ಹೋಗಿ ಬರಲು ರಾಜಕೀಯ ಪಕ್ಷಗಳನ್ನು ಅವಲಂಬಿಸಬೇಕಾಗಿದ್ದ ಮತದಾರರಿಗೆ ಸಾಕಷ್ಟು ಅನುಕೂಲವಾಯಿತು. ಗಣ್ಯರ ಮತದಾನ: ಶಾಸಕ ಕೆ.ಬಿ. ಕೋಳಿವಾಡ ಹಾಗೂ ವಿಧಾನಸಭೆ ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ ಕುಟುಂಬ ಸದಸ್ಯರ ಸಮೇತ ತಾಲೂಕಿನ ಗುಡಗೂರ ಗ್ರಾಮದಲ್ಲಿ, ಮಾಜಿ ಸಚಿವ ಆರ್.ಶಂಕರ್ ಪತ್ನಿ ಸಮೇತ ಇಲ್ಲಿನ ಬೀರೇಶ್ವರ ನಗರದ ಸರ್ಕಾರಿ ಪ್ರಾಥಮಕ ಶಾಲೆ ನಂ.04ರಲ್ಲಿ, ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಅರುಣಕುಮಾರ ಪೂಜಾರ ಪತ್ನಿ ಸಮೇತ ತಾಲೂಕಿನ ಕೊಡಿಯಾಲ ಹೊಸಪೇಟೆ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.