ಫಲಿತಾಂಶ ನಿರ್ಧರಿಸಲಿರುವ ಮೋದಿ ಗ್ಯಾರಂಟಿ, ಕಾಂಗ್ರೆಸ್ ಗ್ಯಾರಂಟಿ

| Published : May 08 2024, 01:02 AM IST

ಫಲಿತಾಂಶ ನಿರ್ಧರಿಸಲಿರುವ ಮೋದಿ ಗ್ಯಾರಂಟಿ, ಕಾಂಗ್ರೆಸ್ ಗ್ಯಾರಂಟಿ
Share this Article
  • FB
  • TW
  • Linkdin
  • Email

ಸಾರಾಂಶ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೋದಿ ಗ್ಯಾರಂಟಿ, ಕಾಂಗ್ರೆಸ್ ಗ್ಯಾರಂಟಿ ಈ ಎರಡರ ಪ್ರಭಾವವೂ ನಿಚ್ಚಳವಾಗಿ ಕಂಡುಬಂದಿದೆ. ಹಾಗಿದ್ದರೆ, ಯಾವುದರ ಪ್ರಭಾವ ಹೆಚ್ಚು ಎನ್ನುವುದರ ಮೇಲೆ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ವಸಂತಕುಮಾರ ಕತಗಾಲ

ಕಾರವಾರ: ಮೋದಿ ಗ್ಯಾರಂಟಿ, ಕಾಂಗ್ರೆಸ್ ಗ್ಯಾರಂಟಿ, ಮಂಗಳವಾರ ನಡೆದ ಚುನಾವಣೆಯಲ್ಲಿ ಈ ಎರಡರ ಪ್ರಭಾವವೂ ನಿಚ್ಚಳವಾಗಿ ಕಂಡುಬಂದಿದೆ. ಹಾಗಿದ್ದರೆ, ಯಾವುದರ ಪ್ರಭಾವ ಹೆಚ್ಚು ಎನ್ನುವುದರ ಮೇಲೆ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ಕೆಲವೆಡೆ ಮಹಿಳೆಯರು ಕಾಂಗ್ರೆಸ್ ಗ್ಯಾರಂಟಿಯ ಬಗ್ಗೆ ಒಲವು ಹೊಂದಿದ್ದರೆ, ಕೆಲವೆಡೆ ಯುವಕರು ಹಾಗೂ ಪುರುಷರು ಮೋದಿ ಗ್ಯಾರಂಟಿಯ ಬಗ್ಗೆ ಆಕರ್ಷಿತರಾಗಿದ್ದಾರೆ. ಮಹಿಳೆಯರು ತಮ್ಮ ಕುಟುಂಬಕ್ಕೆ ಕಾಂಗ್ರೆಸ್ ಗ್ಯಾರಂಟಿಯಿಂದ ಆಗಿರುವ ಪ್ರಯೋಜನಗಳನ್ನು ವಿವರಿಸಿ, ಕಾಂಗ್ರೆಸ್‌ನತ್ತ ಚಿತ್ತ ಹರಿಸಿದರೆ, ಯುವಕರು, ಪುರುಷರು ದೇಶದ ಭದ್ರತೆ, ರಕ್ಷಣೆಗೆ ಭವಿಷ್ಯದ ದೃಷ್ಟಿಯಿಂದ ಬಿಜೆಪಿಯತ್ತ ವಾಲಿದ್ದಾರೆ.

ಈ ಚುನಾವಣೆ ಪ್ರಮುಖ ಅಭ್ಯರ್ಥಿಗಳಾದ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ, ಕಾಂಗ್ರೆಸ್‌ನ ಅಂಜಲಿ ನಿಂಬಾಳ್ಕರ್ ನಡುವೆ ನೇರ ಪೈಪೋಟಿ ಎಂದು ಮೇಲ್ನೋಟಕ್ಕೆ ಕಂಡರೂ, ನಿಜವಾದ ಹೋರಾಟ ನಡೆದಿರುವುದು ಕಾಂಗ್ರೆಸ್ ಗ್ಯಾರಂಟಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸಿನ ನಡುವೆ. ಆದರೆ ಕಾಂಗ್ರೆಸ್ ಗ್ಯಾರಂಟಿ ಹೆಚ್ಚು ಪ್ರಭಾವ ಬೀರಿದೆಯಾ ಅಥವಾ ಮೋದಿ ಅವರದ್ದಾ ಎನ್ನುವುದು ಈ ಚುನಾವಣೆಯ ಫಲಿತಾಂಶವನ್ನು ನಿರ್ಧರಿಸಲಿದೆ.

ಬಿಜೆಪಿ ನರೇಂದ್ರ ಮೋದಿ ಅವರನ್ನು ಮುಂದಿಟ್ಟುಕೊಂಡೇ ಮತಬೇಟೆಯಾಡಿದೆ. ಇದಲ್ಲದೆ, ಸ್ವತಃ ನರೇಂದ್ರ ಮೋದಿ ಅವರೇ ಶಿರಸಿಗೆ ಆಗಮಿಸಿ ಬೃಹತ್ ಸಭೆ ನಡೆಸಿ ಮತ ಯಾಚಿಸಿದ್ದಾರೆ. ಇದು ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗಿದೆ. ಕಾಂಗ್ರೆಸ್ ಗ್ಯಾರಂಟಿ ಅಸ್ತ್ರವನ್ನೇ ಪ್ರಯೋಗಿಸಿದೆ. ಗ್ಯಾರಂಟಿ ನೀಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಂಡಗೋಡ ಹಾಗೂ ಕುಮಟಾಕ್ಕೆ ಆಗಮಿಸಿ ಬೃಹತ್ ಸಭೆ ನಡೆಸಿದೆ. ಇದು ಕಾಂಗ್ರೆಸ್‌ಗೆ ಪ್ಲಸ್ ಪಾಯಿಂಟ್ ಆಗಿದೆ.

ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರೋಧಿ ಅಲೆ ಹಾಗೂ ಬಿಜೆಪಿಯಲ್ಲಿ ಮುಖಂಡರ ನಡುವಣ ಕಾಲೆಳೆತದಿಂದ ಕಾಂಗ್ರೆಸ್ ಜಿಲ್ಲೆಯ ಆರರಲ್ಲಿ ನಾಲ್ಕು ಸ್ಥಾನ ಗಳಿಸಿತು. ಕಾಂಗ್ರೆಸ್ ಸರ್ಕಾರ ಬರುತ್ತಿದ್ದಂತೆ ಭರವಸೆ ನೀಡಿದ ಗ್ಯಾರಂಟಿಯನ್ನು ಜಾರಿಗೊಳಿಸಿತು. ಈ ಗ್ಯಾರಂಟಿ ಜಾರಿಗೊಳಿಸಿದ್ದರಿಂದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೀಡಿದ ಗ್ಯಾರಂಟಿ ಬಗ್ಗೆ ಮತದಾರರಲ್ಲಿ ಭರವಸೆ ಮೂಡುವಂತಾಗಿದೆ.

ಇನ್ನು ಬಿಜೆಪಿಯಲ್ಲಿ ನರೇಂದ್ರ ಮೋದಿ ಅವರ ಮೇಲೆ ಯಾವುದೆ ಕಪ್ಪುಚುಕ್ಕೆ ಇಲ್ಲ. ಭ್ರಷ್ಟಚಾರದ ಆರೋಪವೂ ಇಲ್ಲ. ದೇಶದ ಸಮಗ್ರ ಅಭಿವೃದ್ಧಿಯಿಂದ ಜಾಗತಿಕ ಮಟ್ಟದಲ್ಲಿ ಭಾರತವನ್ನು ಮೇಲಕ್ಕೆತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಯಾವುದೆ ಸ್ವಾರ್ಥ ಇಲ್ಲದೆ ಹಗಲಿರುಳು ದೇಶಕ್ಕಾಗಿ ಮೋದಿ ಅವರ ದುಡಿಮೆ ಪ್ರಶ್ನಾತೀತವಾದುದು. ಇದೇ ಕಾರಣಕ್ಕೆ ದೇಶ ನರೇಂದ್ರ ಮೋದಿ ಅವರ ಕೈಯಲ್ಲಿದ್ದರೆ ಸುರಕ್ಷಿತ ಎಂಬ ಅಭಿಪ್ರಾಯ ಜನತೆಯದ್ದು.

ಈ ನಡುವೆ ಸಂಸದ ಅನಂತಕುಮಾರ ಹೆಗಡೆ, ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಬಿಜೆಪಿ ಪರವಾಗಿ ನಿಂತಿಲ್ಲ. ಕಾಂಗ್ರೆಸ್‌ನ ಶಾಸಕರಿಬ್ಬರು ತಮ್ಮ ಪಕ್ಷದ ಪರವಾಗಿ ಸಂಪೂರ್ಣವಾಗಿ ತೊಡಗಿಕೊಂಡಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.

ಒಟ್ಟಿನಲ್ಲಿ ಚುನಾವಣೆ ಮೋದಿ ವರ್ಚಸ್ಸು ಹಾಗೂ ಕಾಂಗ್ರೆಸ್ ಗ್ಯಾರಂಟಿಯ ನಡುವೆ ನಡೆಯುತ್ತಿದೆ. ಯಾವುದು ಮೇಲುಗೈ ಸಾಧಿಸಲಿದೆ ಎನ್ನುವುದರ ಮೇಲೆ ಫಲಿತಾಂಶ ಅವಲಂಬಿಸಿದೆ. ಈ ಬಾರಿ ಉತ್ತರ ಕನ್ನಡ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸ ಇದೆ. ಎಲ್ಲೆಡೆ ಜನತೆ ಬೆಂಬಲಿಸಿದ್ದಾರೆ. ಬಿಜೆಪಿಯ ಗೆಲುವಿನ ಓಟ ಮುಂದುವರಿಯಲಿದೆ ಎಂದು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಜನತೆ ಬದಲಾವಣೆ ಬಯಸಿ ಮತದಾನ ಮಾಡಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಹೇಳಿದರು.