ದ.ಕ.ದಲ್ಲಿ ನಿರೀಕ್ಷೆಗೂ ಮೀರಿ ಮತದಾನ: ಬಿಜೆಪಿ ಜಿಲ್ಲಾ ಅಧ್ಯಕ್ಷ ಸತೀಶ್‌ ಕುಂಪಲ

| Published : Apr 28 2024, 01:29 AM IST / Updated: Apr 28 2024, 09:37 AM IST

ದ.ಕ.ದಲ್ಲಿ ನಿರೀಕ್ಷೆಗೂ ಮೀರಿ ಮತದಾನ: ಬಿಜೆಪಿ ಜಿಲ್ಲಾ ಅಧ್ಯಕ್ಷ ಸತೀಶ್‌ ಕುಂಪಲ
Share this Article
  • FB
  • TW
  • Linkdin
  • Email

ಸಾರಾಂಶ

ಈ ಚುನಾವಣೆಯಲ್ಲಿ ಮತದಾನದ ಪ್ರಮಾಣ ಉತ್ತಮವಾಗಿದ್ದು, ಬಿಜೆಪಿಗೆ ಗೆಲುವಿನ ವಿಶ್ವಾಸ ಇದೆ ಎಂದು ಅಭ್ಯರ್ಥಿ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಹೇಳಿದರು.

 ಮಂಗಳೂರು :  ದ.ಕ. ಲೋಕಸಭಾ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಮತದಾನವಾಗಿದೆ. ಇದಕ್ಕೆ ಪಕ್ಷದ ಸಂಘಟಿತ ಕಾರ್ಯಕರ್ತರ ಪರಿಶ್ರಮ, ಜಿಲ್ಲಾಡಳಿತದ ಪ್ರಯತ್ನ ಕಾರಣ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ.

ಮಂಗಳೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಘೋಷಣೆಗೆ ಒಂದೂವರೆ ತಿಂಗಳ ಮುನ್ನ ಹೊಸ ಪದಾಧಿಕಾರಿಗಳ ತಂಡ ಘೋಷಣೆಯಾಗಿತ್ತು. ಹೊಸ ತಂಡಕ್ಕೆ ಚುನಾವಣೆ ಎದುರಿಸುವುದು ಸವಾಲಾಗಿತ್ತು. ಅದನ್ನು ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ನಿಭಾಯಿಸಿದ್ದೇವೆ ಎಂಬ ಭಾವನೆ ಇದೆ. ಸಂಸದರು, ಶಾಸಕರು, ಪಕ್ಷದ ಹಿರಿಯರು, ಕಾರ್ಯಕರ್ತರ ಶ್ರಮದಿಂದ ಮನೆ ಮನೆ ಭೇಟಿ ಸಾಧ್ಯವಾಗಿದೆ. ನಮ್ಮ ನಿರೀಕ್ಷೆಗೆ ತಕ್ಕಂತೆ ಮತದಾನ ಆಗಿದೆ. 2019ರ ಶೇಕಡಾವಾರು ಮತದಾನಕ್ಕೆ ಸರಿಸಾಟಿಯಾಗಿದೆ. ಅದರಲ್ಲೂ ಮಹಿಳೆಯರು ಅತ್ಯಧಿಕ ಸಂಖ್ಯೆಯಲ್ಲಿ ಆಗಮಿಸಿ ಮತದಾನ ಮಾಡಿದ್ದಾರೆ, ಮತದಾನ ಮಾಡಿದ ಎಲ್ಲರಿಗೂ ಅಭಾರಿಯಾಗಿದ್ದೇವೆ ಎಂದರು. ವಿರೋಧಿಗಳ ಯತ್ನ ಕೈಗೂಡದು-ಕ್ಯಾ.ಚೌಟ:

ಈ ಚುನಾವಣೆಯಲ್ಲಿ ಮತದಾನದ ಪ್ರಮಾಣ ಉತ್ತಮವಾಗಿದ್ದು, ಬಿಜೆಪಿಗೆ ಗೆಲುವಿನ ವಿಶ್ವಾಸ ಇದೆ ಎಂದು ಅಭ್ಯರ್ಥಿ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಹೇಳಿದರು.

ಬಿಸಿಲಿನ ಬೇಗೆಯಲ್ಲೂ ಎಲ್ಲರೂ ಅತ್ಯುತ್ಸಾಹದಿಂದ ಮತದಾನ ಮಾಡಿದ್ದಾರೆ. ಚುನಾವಣಾ ಪ್ರಚಾರದಲ್ಲಿ ಸುಳ್ಳು, ಅಪಪ್ರಚಾರಕ್ಕೆ ಕಾಂಗ್ರೆಸ್‌ ಯತ್ನಿಸಿದರೂ ಸಾಧ್ಯವಾಗಿಲ್ಲ. ಅದಕ್ಕೆ ತುಳುನಾಡಿನ ಸತ್ಯ ಪ್ರಮಾಣದ ನೆಲ ಎಂದಿಗೂ ಅವಕಾಶ ನೀಡುವುದಿಲ್ಲ ಎಂದರು. ಜಾತಿ ವಿಚಾರದಲ್ಲಿ ಮತ ಯಾಚನೆ ಮೂಲಕ ವಿರೋಧಿಗಳು ದಾರಿತಪ್ಪಿಸುವ ಪ್ರಯತ್ನ ನಡೆಸಿದರೂ ಮತದಾರರು ಎಂದಿಗೂ ಕೈಬಿಡುವುದಿಲ್ಲ ಎಂಬ ವಿಶ್ವಾಸ ಇದೆ ಎಂದರು.

ವಾರ್ಷಿಕ ಪ್ರಶಸ್ತಿಗೆ ನಿರ್ಧಾರ:

ಗೆಲುವಿನ ಫಲಿತಾಂಶ ಬಳಿಕ ಕ್ಷೇತ್ರದ ಸಮಸ್ಯೆಗಳನ್ನು ಆಲಿಸಲು ‘ಕ್ಯಾಚಪ್‌ ವಿತ್‌ ಚೌಟ’ ಕಾರ್ಯಕ್ರಮ ಆರಂಭಿಸಲು ಉದ್ದೇಶಿಸಲಾಗಿದೆ. ಅಲ್ಲದೆ ದ.ಕ. ಜಿಲ್ಲೆಯ ಹೆಸರನ್ನು ಬ್ರ್ಯಾಂಡ್‌ ಮಾಡುವ ನೈಜ ಸ್ಟೋರಿಗಳಿಗೆ ಹಿರಿಯ ಪತ್ರಕರ್ತ ‘ದಿ.ಮನೋಹರ ಪ್ರಸಾದ್‌’ ಹೆಸರಲ್ಲಿ ವಾರ್ಷಿಕ ಪ್ರಶಸ್ತಿ ನೀಡಲು ಉದ್ದೇಶಿಸಲಾಗಿದೆ. ಒಂದು ವರ್ಗದ ಜನತೆ ದುರುದ್ದೇಶದಿಂದ ನೈಜತೆಗಳನ್ನು ಮರೆಮಾಚಿ ಸುಳ್ಳು ವಿಚಾರಗಳನ್ನು ಹರಡುತ್ತಿದೆ. ಈ ಮೂಲಕ ದ.ಕ.ಜಿಲ್ಲೆಯ ಹೆಸರು ಕೆಡಿಸುವ ಪ್ರಯತ್ನ ನಡೆಸುತ್ತಿದೆ. ಇದಕ್ಕಾಗಿ ಜಿಲ್ಲೆಯ ಕುರಿತ ತಪ್ಪು ಅಭಿಪ್ರಾಯ ದೂರ ಮಾಡಲು ವೈಯಕ್ತಿಕ ನೆಲೆಯಲ್ಲಿ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ ಎಂದರು.

ಜಿಲ್ಲಾ ಚುನಾವಣಾ ಪ್ರಭಾರಿ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌, ಜಿಲ್ಲಾ ಸಂಚಾಲಕ ನಿತಿನ್‌ ಕುಮಾರ್‌, ಸಹ ಸಂಚಾಲಕ ಪ್ರೇಮಾನಂದ ಶೆಟ್ಟಿ ಇದ್ದರು.