ವಿ.ಶ್ರೀನಿವಾಸಪ್ರಸಾದ್ ದಲಿತರ ಗಟ್ಟಿ ಧ್ವನಿಯಾಗಿದ್ದರು: ಛಲವಾದಿ ನಾರಾಯಣಸ್ವಾಮಿ

| Published : May 09 2024, 12:45 AM IST

ವಿ.ಶ್ರೀನಿವಾಸಪ್ರಸಾದ್ ದಲಿತರ ಗಟ್ಟಿ ಧ್ವನಿಯಾಗಿದ್ದರು: ಛಲವಾದಿ ನಾರಾಯಣಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ದಲಿತ ಸಮುದಾಯಕ್ಕೆ ಗಟ್ಟಿ ಧ್ವನಿಯಾಗಿದ್ದ ಬಸವಲಿಂಗಪ್ಪ ಅವರನ್ನು ಬಿಟ್ಟರೆ ಶ್ರೀನಿವಾಸಪ್ರಸಾದ್ ಮಾತ್ರ. ಈಗ ರಾಜ್ಯದಲ್ಲಿ ದಲಿತ ನಾಯಕತ್ವ ಕ್ಷೀಣಿಸುತ್ತಿದೆ. ಇಂದಿನ ಯಾವ ದಲಿತ ನಾಯಕರು ಅಸ್ಪೃಶ್ಯತೆ ಹೋಗಲಾಡಿಸಲು ಶ್ರಮಿಸುತ್ತಿಲ್ಲ. ಬದಲಿಗೆ ಕೇವಲ ಸವಲತ್ತು ಪಡೆಯಲು ಮುಂದಾಗಿದ್ದಾರೆ. ಸಣ್ಣ ಪುಟ್ಟ ಸಂಘಟನೆಯ ಮುಖಂಡರೂ ಕೂಡ ತಮ್ಮನ್ನು ತಾವು ರಾಜ್ಯ ನಾಯಕರು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ರಾಜ್ಯದಲ್ಲಿ ಬಸವಲಿಂಗಪ್ಪ ಅವರನ್ನು ಬಿಟ್ಟರೆ ವಿ.ಶ್ರೀನಿವಾಸಪ್ರಸಾದ್‌ ದಲಿತರ ಗಟ್ಟಿ ಧ್ವನಿಯಾಗಿದ್ದರು ಎಂದು ಬಿಜೆಪಿ ವಕ್ತಾರ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ನಗರದ ಜೆ.ಎಲ್.ಬಿ ರಸ್ತೆಯ ಆರಾಧ್ಯ ಮಹಾಸಭಾ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಸಂಸದ ವಿ. ಶ್ರೀನಿವಾಸ ಪ್ರಸಾದ್ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

ದಲಿತ ಸಮುದಾಯಕ್ಕೆ ಗಟ್ಟಿ ಧ್ವನಿಯಾಗಿದ್ದ ಬಸವಲಿಂಗಪ್ಪ ಅವರನ್ನು ಬಿಟ್ಟರೆ ಶ್ರೀನಿವಾಸಪ್ರಸಾದ್ ಮಾತ್ರ. ಈಗ ರಾಜ್ಯದಲ್ಲಿ ದಲಿತ ನಾಯಕತ್ವ ಕ್ಷೀಣಿಸುತ್ತಿದೆ. ಇಂದಿನ ಯಾವ ದಲಿತ ನಾಯಕರು ಅಸ್ಪೃಶ್ಯತೆ ಹೋಗಲಾಡಿಸಲು ಶ್ರಮಿಸುತ್ತಿಲ್ಲ. ಬದಲಿಗೆ ಕೇವಲ ಸವಲತ್ತು ಪಡೆಯಲು ಮುಂದಾಗಿದ್ದಾರೆ. ಸಣ್ಣ ಪುಟ್ಟ ಸಂಘಟನೆಯ ಮುಖಂಡರೂ ಕೂಡ ತಮ್ಮನ್ನು ತಾವು ರಾಜ್ಯ ನಾಯಕರು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.

ಶ್ರೀನಿವಾಸ ಪ್ರಸಾದ್ ಅವರ ರಾಜಕೀಯ ಜೀವನ ಸುಗಮವಾಗಿ ಇರಲಿಲ್ಲ. ಅವರಿಗೂ ಸಹ ಅನ್ಯಾಯವಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಪಕ್ಷ ಅವರನ್ನು ಹೀನಾಯವಾಗಿ ನಡೆಸಿಕೊಂಡಿತು. ಈ ಬಗ್ಗೆ ದನಿ ಎತ್ತಿದ್ದಕ್ಕೆ ನಾನು ಕೂಡ ಪಕ್ಷದಿಂದ ಹೊರ ಬರುವಂತಾಯಿತು, ಅವರಿಗೆ ಅನ್ಯಾಯ ಮಾಡಿದವರನ್ನು ಅವರ ಅನುಯಾಯಿಗಳು ಎಂದಿಗೂ ಮರೆಯುವುದಿಲ್ಲ ಎಂದರು.

ವಿ.ಶ್ರೀನಿವಾಸ ಪ್ರಸಾದ್ ಅವರು ಒಂದು ವರ್ಗದ ಪರವಾಗಿ ಅವರು ಇರಲಿಲ್ಲ. ಅಂಬೇಡ್ಕರ್ ಅವರ ಹಾದಿಯಲ್ಲಿ ಸಾಗಿದರು. ಎಲ್ಲಾ ವರ್ಗದ ಪರವಾಗಿ ಕೆಲಸ ಮಾಡಿದ್ದಾರೆ. ಸಾಮಾಜಿಕ ನ್ಯಾಯದ ಪರಿಕಲ್ಪನೆಯ ನಡೆ- ನುಡಿಯಲ್ಲಿ ಮಾತ್ರವಲ್ಲ, ಕಾನೂನಿನ ಮೂಲಕ ಸರ್ಕಾರದ ಕಾರ್ಯಕ್ರಮದ ಮೂಲಕ ಅನುಷ್ಠಾನಗೊಳಿಸಿದ ಮೇರು ವ್ಯಕ್ತಿತ್ವ ಅವರದು ಎಂದರು.

ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಮಾತನಾಡಿ, ಕೆಲವೇ ಕೆಲವರನ್ನು ಮಾತ್ರ ನಾವು ಆದರ್ಶವಾಗಿ ಇರಿಸಿಕೊಳ್ಳಬೇಕು ಎಂದು ಹೇಳುತ್ತೇವೆ. ಅಂತಹ ಆದರ್ಶವಾಗಿರಿಸಿ ಕೊಳ್ಳಬಲ್ಲ ಮೇಲ್ಪಂಕ್ತಿಯ ನಾಯಕನೊಟ್ಟಿಗೆ ಒಡಾಡಿದ್ದೇ ನನ್ನ ಭಾಗ್ಯ ಎಂದರು.

ಕಂದಾಯ ಸಚಿವರಾಗಿದ್ದ ಸಂದರ್ಭದಲ್ಲಿ ಮಡೆ ಸ್ನಾನದಂತಹ ವಿಚಾರ ಬಂದಾಗ ಸೂಕ್ಷ್ಮತೆಯ ಅಭಿಪ್ರಾಯ ವ್ಯಕ್ತಪಡಿಸಿದ್ದರು. ನಂತರ ನಂಜನಗೂಡು ಉಪ ಚುನಾವಣೆಯಲ್ಲಿ ಅವರ ಪರವಾಗಿ ಒಡಾಡಿದರೂ ಸೋಲು ಕಂಡರು ಬಳಿಕ ಸಂಸದರಾದರು. ಆಗ ನಾನು ಚಾಮರಾಜನಗರ ಸಚಿವರಾಗಿ ಅವರೊಟ್ಟಿಗೆ ನಡೆಸಿದ ಸಾಕಷ್ಟು ಸಭೆಗಳೇ ನನ್ನ ಭಾಗ್ಯವಾಗಿದೆ ಎಂದರು.

ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ರಾಜ್ಯ ಉಪಾಧ್ಯಕ್ಷ ಎಂ. ರಾಜೇಂದ್ರ, ಶಾಸಕ ಟಿ.ಎಸ್. ಶ್ರೀವತ್ಸ, ವಿಧಾನ ಪರಿಷತ್ ಮಾಜಿ ಸದಸ್ಯ ತೋಂಟದಾರ್ಯ, ಮಾಜಿ ಶಾಸಕರಾದ ಎನ್. ಮಹೇಶ್, ಹರ್ಷವರ್ಧನ್, ರಾಜವಂಶಸ್ಥ ಯದುವೀರ್ ತೃಷ್ಣದತ್ತ ಚಾಮರಾಜ ಒಡೆಯರ್, ಕೃಷ್ಣರಾಜ ಬ್ಲಾಕ್ ಬಿಜೆಪಿ ಅಧ್ಯಕ್ಷ ಯು.ಜಿ. ಗೋಪಾಲರಾಜೇ ಅರಸ್ ಮೊದಲಾದವರು ಇದ್ದರು.