ಶಿಮುಶ ಪೀಠಕ್ಕೆ ಮುಳುವಾಗುತ್ತಾ ಅನುದಾನ ಅಪವ್ಯಯ?

| Published : May 09 2024, 12:45 AM IST

ಸಾರಾಂಶ

ಬಸವ ಪ್ರತಿಮೆಗಾಗಿ ಸರ್ಕಾರದಿಂದ ಬಿಡುಗಡೆಯಾದ ಅನುದಾನ ಮುರುಘಾ ಮಠದ ಖಾತೆಯಿಂದ ನೇರವಾಗಿ ನಿರ್ವಹಣೆಯಾಗಿದೆ. ನಂತರ ಬಳಕೆಯಾದ ಪ್ರಮಾಣ ಎಲ್ಲ ವಹಿವಾಟುಗಳ ದಾಖಲೆಸಿಗುವುದರಿಂದ ಮುರುಘಾಶ್ರಿ ಕಾನೂನು ತೊಡಕಿಗೆ ಸಿಕ್ಕಿಕೊಳ್ಳುತ್ತಾರೆ ಎನ್ನಲಾಗಿದೆ.

ಚಿಕ್ಕಪ್ಪನಹಳ್ಳಿ ಷಣ್ಮುಖ

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ಅಪ್ರಾಪ್ತರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಜೈಲು ಪಾಲಾಗಿರುವ ಮುರುಘಾ ಶ್ರೀ, ಬಸವ ಪ್ರತಿಮೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ನೀಡಿರುವ ಅನುದಾನ ಬಳಕೆ ವಿಚಾರದಲ್ಲೂ ಸಂಕಷ್ಟ ಪರಿಸ್ಥಿತಿ ಎದುರಿಸುವ ಅನಿವಾರ್ಯತೆ ಸೃಷ್ಟಿಯಾಗುವ ಎಲ್ಲ ಕುರುಹುಗಳು ಗೋಚರಿಸಿವೆ. 35 ಕೋಟಿ ರುಪಾಯಿ ಅನುದಾನ ಬಳಕೆಗೆ ಸಂಬಂಧಿಸಿದಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅವರನ್ನೊಳಗೊಂಡ ಐದು ಮಂದಿ ಅಧಿಕಾರಿಗಳು ನೀಡಿರುವ ಪರಿಶೀಲನಾ ವರದಿಯಲ್ಲಿ ಫಲಪ್ರದವಾಗದ (unfruitful) ಯೋಜನೆಯೆಂದು ಉಲ್ಲೇಖ ಮಾಡಿರುವುದರಿಂದ ಅನುದಾನ ಅಪವ್ಯಯದ ವಿಸ್ತೃತ ರೂಪ ತೆರೆದುಕೊಳ್ಳುತ್ತದೆ.

ಮುರುಘಾ ಮಠದ ಟ್ರಸ್ಟ್ ಡೀಡ್ ನಲ್ಲಿ ವಂಚನೆಯ ತಪ್ಪಿತಸ್ಥನಾದಲ್ಲಿ (guilty of fraud) ಮಠದಿಂದ ನಿರ್ಗಮಿಸಬೇಕಾಗುತ್ತದೆ ಎಂಬ ಅಂಶ ಅಡಕವಾಗಿದೆ. ಬಸವ ಪ್ರತಿಮೆ ಅನುದಾನ ಬೇಕಾಬಿಟ್ಟಿಯಾಗಿ ಬಳಕೆ ಮಾಡಿರುವುದ ಗಮನಿಸಿದರೆ ಶಿಮುಶ ಪೀಠಾಧ್ಯಕ್ಷರಾಗಿ ಉಳಿಯುವುದು ಅನುಮಾನವಾಗಿ ಕಾಣಿಸುತ್ತಿದೆ. ಸರ್ಕಾರದಿಂದ ಬಿಡುಗಡೆ ಯಾದ ಅನುದಾನ ಮುರುಘಾ ಮಠದ ಖಾತೆಯಿಂದ ನೇರವಾಗಿ ನಿರ್ವಹಣೆಯಾಗಿದೆ. ಬಿಡುಗಡೆಯಾದ ಅನುದಾನ ನಂತರ ಬಳಕೆಯಾದ ಪ್ರಮಾಣ ಎಲ್ಲ ವಹಿವಾಟುಗಳ ದಾಖಲೆ ಸಿಗುವುದರಿಂದ ಮುರುಘಾಶ್ರಿ ಕಾನೂನು ತೊಡಕಿಗೆ ಸಿಕ್ಕಿಕೊಳ್ಳುತ್ತಾರೆ ಎನ್ನಲಾಗಿದೆ.

ಪ್ರತಿಮೆ ನಿರ್ಮಾಣದ ಕನಸುಗಳು ಮೊದಲ ಬಾರಿಗೆ ಬಿಚ್ಚಿಕೊಂಡಾಗ 100 ಅಡಿ ಎತ್ತರಕ್ಕೆ ಸೀಮಿತವಾಗಿತ್ತು. ಇದಕ್ಕೆ ಪೂರಕವಾಗಿ ಪ್ಲಾನ್ ರೂಪಿಸಿ ಹೊಂದಾಣಿಕೆ ಅನುದಾನ ಕ್ಕಾಗಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆ ನಂತರವೇ ಅನುದಾನ ಬಿಡುಗಡೆಯಾಗಿದೆ. ಅಚ್ಚರಿ ಎಂದರೆ 100 ಅಡಿ ಎತ್ತರದ ಪ್ರತಿಮೆ ಸಂದರ್ಭಾನುಸಾರ ಜಾಸ್ತಿ ಯಾಗುತ್ತಾ ಹೋಗಿ 375 ಅಡಿಗೆ ಬಂದು ನಿಂತಿದೆ. 375 ಅಡಿ ಎತ್ತರ ಪ್ರತಿಮೆ ನಿರ್ಮಿಸಲು 280 ಕೋಟಿ ರು. ಅಂದಾಜು (ಅಂದಾಜಿನಲ್ಲಿಯೂ ಸ್ಪಷ್ಚತೆ ಇಲ್ಲ) ಮಾಡಲಾಗಿದೆ. ಸರ್ಕಾರದಿಂದ ಬಿಡುಗಡೆಯಾದ 40 ಕೋಟಿ ರು.ನಲ್ಲಿ 35 ಕೋಟಿ ಖರ್ಚಾಗಿದೆ. ಆದರೆ ತನ್ನ ಪಾಲಿನ ಸಂಪನ್ಮೂಲದ ವಿಚಾರವನ್ನು ಮುರುಘಾಮಠ ಎಲ್ಲಿಯೂ ತೋರಿಸಿಲ್ಲ.

375 ಅಡಿ ಎತ್ತರದ ಬಸವ ಪ್ರತಿಮೆಗೆ ಬೇಕಾದ 280 ಕೋಟಿ ರುಪಾಯಿ ಪೂರ್ಣ ಅನುದಾನವ ಸರ್ಕಾರ ನೀಡುವುದಿಲ್ಲ. ಸರ್ಕಾರದ್ದು ಹೊಂದಾಣಿಕೆ (ಮ್ಯಾಚಿಂಗ್ ಗ್ರಾಂಟ್ ) ಮೊತ್ತವಾಗಿ ಪರಿಗಣಿಸಬೇಕಾಗುತ್ತದೆ. ಸರ್ಕಾರದ ಅನುದಾನವ ಮುಕ್ತಾಯದ ಹಂತದಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತದೆ. ಆದರೆ ಬಸವ ಪ್ರತಿಮೆ ವಿಚಾರದಲ್ಲಿ ಈ ತನಕ ಎಲ್ಲಿಯೂ ಮರುಘಾ ಮಠ ತಾನು ಕ್ರೋಢೀಕರಿಸಿಕೊಂಡ ಸಂಪನ್ಮೂಲ ಬಳಕೆ ಮಾಡಿಲ್ಲವೆನ್ನಲಾಗಿದೆ. ಪರಿಶೀಲನಾ ಸಮಿತಿಗೂ ತಾನು ಖರ್ಚು ಮಾಡಿದ ಮೊತ್ತ ತೋರಿಸ ಲಾಗಿಲ್ಲ. ಸರ್ಕಾರ ಬಿಡುಗಡೆ ಮಾಡಿದ ಅನುದಾನ ಮಾತ್ರ ಬಳಕೆಯಾಗಿದೆ. ಇಲ್ಲೂ ಕೂಡಾ ಕಾಮಗಾರಿಗೂ, ಅನುದಾನ ವ್ಯಯಕ್ಕೂ ತಾಳೆಯಾಗಿಲ್ಲ. ಹಾಗಾಗಿ guilty of fraud ಎಂಬ ಟ್ರಸ್ಟ್ ಡೀಡ್‌ನಲ್ಲಿ ಅಡಕವಾಗಿರುವ ಉಲ್ಲೇಖ ತಕ್ಷಣ ಎದುರಾಗುತ್ತದೆ.

ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅವರನ್ನೊಳಗೊಂಡ ಐವರ ಸಮಿತಿ ನೀಡಿರುವ ಪರಿಶೀಲನಾ ವರದಿ ಅಂತಿಮವಲ್ಲ. ಅನುದಾನ ಅಪವ್ಯಯವಾಗಿರುವ ಅಂಶಗಳ ಪ್ರಧಾನವಾಗಿ ಹಾಗೂ ಅತ್ಯಂತ ಸೂಕ್ಷ್ಮವಾಗಿ ವರದಿಯಲ್ಲಿ ವಿಷದಪಡಿಸಲಾಗಿದೆ. ವರದಿಯಲ್ಲಿ ರಾಜ್ಯ ಸರ್ಕಾರ ತನಿಖೆ ನಡೆಸಬೇಕಾಗುತ್ತದೆ ಎಂದಿದ್ದಾರೆ. ಈ ಪರಿಶೀಲನಾ ವರದಿ ತನಿಖೆ ನಡೆಸಲು ರಾಜ್ಯ ಸರ್ಕಾರಕ್ಕೆ ಪ್ರಬಲ ದಾಖಲೆ ಕೊಟ್ಟಂತಾಗುತ್ತದೆ.

ಬಸವ ಪುತ್ಥಳಿಯಲ್ಲಿ ವ್ಯಯ ಮಾಡಲಾದ ಸರ್ಕಾರದ ಅನುದಾನದ ಬಗ್ಗೆ ಮಾಜಿ ಸಚಿವ ಹೆಚ್.ಏಕಾಂತಯ್ಯ ಅನುಮಾನ ವ್ಯಕ್ತಪಡಿಸಿ ಜಿಲ್ಲಾಧಿಕಾರಿಗೆ ಬರೆದ ಪತ್ರದ ಆಧಾರದ ಮೇಲೆ ಪರಿಶೀಲನಾ ವರದಿ ಸಿದ್ಧವಾಗಿದೆ. ಪರಿಶೀಲನಾ ವರದಿ ಇಟ್ಟುಕೊಂಡು ಯಾರಾದರೂ ಲೋಕಾಯುಕ್ತಕ್ಕೆ ದೂರು ನೀಡಿದರೆ ತನಿಖೆ ತಂತಾನೆ ಶುರುವಾಗುತ್ತದೆ. ಏಕಾಂತಯ್ಯ ಅವರು ಸರ್ಕಾರದ ಮೊರೆ ಹೋಗಿ ಸಮಗ್ರ ತನಿಖೆಗೆ ಒತ್ತಾಯಿಸಬಹುದು. ತನಿಖೆ ಆರಂಭವಾದಲ್ಲಿ ಬಸವ ಪುತ್ಥಳಿ ಸುತ್ತ guilty of fraud ಸುತ್ತುವರಿಯುತ್ತದೆ.