ನಾಳೆ,ನಾಡಿದ್ದು ವೀರಶೈವ ಧರ್ಮ ಸಮ್ಮೇಳನ

| Published : May 08 2024, 01:02 AM IST

ಸಾರಾಂಶ

ವೀರಶೈವ ಸಮಾಜದ ತ್ರಿವಳಿ ರತ್ನಗಳಾದ ಶ್ರೀಬಸವೇಶ್ವರರು, ಶ್ರೀರೇಣುಕಾಚಾರ್ಯರು ಹಾಗೂ ಶ್ರೀಗುರು ಸಿದ್ದರಾಮೇಶ್ವರರ ಜಯಂತಿ ಉತ್ಸವಕ್ಕೆ ವೀರಶೈವ ಸಮಾಜದ ಅಂಗ ಸಂಸ್ಥೆಗಳಾದ ವೀರಶೈವ ಕೋ-ಅಪರೇಟಿವ್ ಬ್ಯಾಂಕ್, ತುಮಕೂರು ಬಸವೇಶ್ವರ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ, ಸ್ನೇಹ ಸಂಗಮ ಸೌಹಾರ್ಧ ಪತ್ತಿನ ಸಹಕಾರಿ, ರೇಣುಕಾ ವಿದ್ಯಾಪೀಠ, ಮೈತ್ರಿ ವೀರಶೈವ ಮಹಿಳಾ ಸಂಘ, ವೀರಶೈವ ಉಚಿತ ವೈದ್ಯಕೀಯ ಸೇವಾ ಕೇಂದ್ರ ಸೇರಿದಂತೆ ಹಲವು ಸಂಘ- ಸಂಸ್ಥೆಗಳು ಸಹಕಾರ ನೀಡಿವೆ.

ಕನ್ನಡಪ್ರಭ ವಾರ್ತೆ ತುಮಕೂರು

ತುಮಕೂರು ನಗರ ವೀರಶೈವ ಸಮಾಜ ಸೇವಾ ಸಮಿತಿ ಹಾಗೂ ವಿವಿಧ ವೀರಶೈವ ಸಂಘ, ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಡಾ.ಶಿವಕುಮಾರ ಸ್ವಾಮೀಜಿಯವರ ಕೃಪಾಶೀರ್ವಾದದೊಂದಿಗೆ ಬಸವ ಜಯಂತಿ ಅಂಗವಾಗಿ ಮೇ 9 ಮತ್ತು 10ರಂದು ವೀರಶೈವ ಧರ್ಮ ಸಮ್ಮೇಳನ ಹಾಗೂ ಮೂವರು ಮಹಾತ್ಮರ ಜಂಟಿ ಉತ್ಸವದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತುಮಕೂರು ನಗರ ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷ ಟಿ.ಬಿ.ಶೇಖರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,1963ರಲ್ಲಿ ಆರಂಭವಾದ ತುಮಕೂರು ನಗರ ವೀರಶೈವ ಸಮಾಜ ಸೇವಾ ಸಮಿತಿ ಅಂದಿನಿಂದಲೂ ಇಂದಿನವರೆಗೂ ಬಸವ ಜಯಂತಿಯನ್ನು ಚಾಚೂ ತಪ್ಪದೇ ಆಚರಿಸಿಕೊಂಡು ಬಂದಿದೆ. ಕಳೆದ 10 ವರ್ಷಗಳಿಂದ ಸಮಾಜ ಭಾಂಧವರ ತೀರ್ಮಾನದಂತೆ ಬಸವ ಜಯಂತಿಯ ಉತ್ಸವದ ಜೊತೆಗೆ, ಶ್ರೀರೇಣುಕಾಚಾರ್ಯರರು ಮತ್ತು ಶ್ರೀಗುರು ಸಿದ್ದರಾಮೇಶ್ವರರ ಉತ್ಸವಗಳನ್ನು ಒಟ್ಟಿಗೆ ಆಚರಿಸಿಕೊಂಡು ಬರಲಾಗುತ್ತಿದೆ.

ಈ ಬಾರಿ ಮೇ 9 ರಂದು ವೀರಶೈವ ಧರ್ಮ ಸಮ್ಮೇಳನವನ್ನು ವೀರಶೈವ ಕಲ್ಯಾಣ ಮಂಟಪದಲ್ಲಿ ಹಾಗೂ ಮೇ 10ರಂದು ಬಸವೇಶ್ವರರು, ಶ್ರೀರೇಣುಕಾಚಾರ್ಯರು ಹಾಗೂ ಶ್ರೀಗುರು ಸಿದ್ದರಾಮೇಶ್ವರರ ಉತ್ಸವವನ್ನು ಆಯೋಜಿಸಲಾಗಿದೆ ಎಂದರು.

ವೀರಶೈವ ಸಮಾಜದ ತ್ರಿವಳಿ ರತ್ನಗಳಾದ ಶ್ರೀಬಸವೇಶ್ವರರು, ಶ್ರೀರೇಣುಕಾಚಾರ್ಯರು ಹಾಗೂ ಶ್ರೀಗುರು ಸಿದ್ದರಾಮೇಶ್ವರರ ಜಯಂತಿ ಉತ್ಸವಕ್ಕೆ ವೀರಶೈವ ಸಮಾಜದ ಅಂಗ ಸಂಸ್ಥೆಗಳಾದ ವೀರಶೈವ ಕೋ-ಅಪರೇಟಿವ್ ಬ್ಯಾಂಕ್, ತುಮಕೂರು ಬಸವೇಶ್ವರ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ, ಸ್ನೇಹ ಸಂಗಮ ಸೌಹಾರ್ಧ ಪತ್ತಿನ ಸಹಕಾರಿ, ರೇಣುಕಾ ವಿದ್ಯಾಪೀಠ, ಮೈತ್ರಿ ವೀರಶೈವ ಮಹಿಳಾ ಸಂಘ, ವೀರಶೈವ ಉಚಿತ ವೈದ್ಯಕೀಯ ಸೇವಾ ಕೇಂದ್ರ ಸೇರಿದಂತೆ ಹಲವು ಸಂಘ- ಸಂಸ್ಥೆಗಳು ಸಹಕಾರ ನೀಡಿವೆ. ಎಲ್ಲರೂ ವೀರಶೈವ ಧರ್ಮ ಸಮ್ಮೇಳನ ಮತ್ತು ತ್ರಿವಳಿ ರತ್ನಗಳ ಉತ್ಸವದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಟಿ.ಬಿ.ಶೇಖರ್ ಮನವಿ ಮಾಡಿದರು.

ಮೇ 9ರ ಗುರುವಾರ ಬೆಳಗ್ಗೆ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆಯುವ ವೀರಶೈವ ಧರ್ಮ ಸಮ್ಮೇಳನದ ವಿವರ ನೀಡಿದ ತುಮಕೂರು ನಗರ ವೀರಶೈವ ಸಮಾಜ ಸೇವಾ ಸಮಿತಿ ಗೌರವ ಕಾರ್ಯದರ್ಶಿ ಅತ್ತಿ ರೇಣುಕಾನಂದ, ಕಾರ್ಯಕ್ರಮದ ಸಾನಿಧ್ಯವನ್ನು ಶಿವಗಂಗೆ ಮೇಲಣಗವಿ ಮಠದ ಶ್ರೀವಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದು, ಉದ್ಘಾಟನೆಯನ್ನು ಮಾಜಿ ಐಪಿಎಸ್ ಅಧಿಕಾರಿ ಶಂಕರ ಮಹಾದೇವ ಬಿದರಿ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ತುಮಕೂರು ನಗರ ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷ ಟಿ.ಬಿ.ಶೇಖರ್ ವಹಿಸಲಿದ್ದು, ಸಂಸದ ಜಿ.ಎಸ್.ಬಸವರಾಜು,ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಾಜಿ ಸಚಿವ ಎಸ್.ಶಿವಣ್ಣ ಅವರು ಗೌರವ ಉಪಸ್ಥಿತರಿರುವರು. ಮುಖ್ಯ ಅತಿಥಿಗಳಾಗಿ ತುಮಕೂರು ನಗರ ವೀರಶೈವ ಸಮಾಜ ಸೇವಾ ಸಮಿತಿ ಮಾಜಿ ಅಧ್ಯಕ್ಷರಾದ ಕೈ.ವೈ.ಸಿದ್ದಲಿಂಗಮೂರ್ತಿ, ಟಿ.ಕೆ.ನಂಜುಂಡಪ್ಪ, ಸಿ.ವಿ.ಮಹದೇವಯ್ಯ ಉಪಸ್ಥಿತರಿರುವರು. ಮೈತ್ರಿ ಮಹಿಳಾ ಬಳಗದಿಂದ ಬಸವ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ ತುಮಕೂರು ಜಿಲ್ಲಾ ವೀರಶೈವ ಸಮಾಜ ಸೇವಾ ಸಮಿತಿಯ ಉಪಾಧ್ಯಕ್ಷ ಎಸ್.ಜಿ.ಚಂದ್ರಮೌಳಿ ಬಹುಮಾನ ವಿತರಿಸುವರು.

ವೀರಶೈವ ಸಮಾಜದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಅಭಿವೃದ್ಧಿಗೆ ದುಡಿದ ಸಮಾಜದ ಹಿರಿಯರಾದ ಜಿ.ಎಸ್.ಪರಮಶಿವಯ್ಯ, ಟಿ.ಎಸ್.ಜಗನ್ನಾಥ್, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ, ಪಾವರ್ತಮ್ಮ ಜಗದೀಶ್, ಎನ್.ಬಿ.ಪ್ರದೀಪಕುಮಾರ್, ಎಚ್.ಎನ್.ಚಂದ್ರಶೇಖರ್, ಸಾವಿತ್ರಮ್ಮ ಮುದ್ದಪ್ಪ, ಕೆ.ಎಲ್.ಗೀತಾ ಅವರನ್ನು ಸಮಾಜದ ವತಿಯಿಂದ ಸನ್ಮಾನಿಸಲಾಗುವುದು ಎಂದು ಅತ್ತಿ ರೇಣುಕಾನಂದ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ತುಮಕೂರು ನಗರ ವೀರಶೈವ ಸಮಾಜ ಸೇವಾ ಸಮಿತಿ ಉಪಾಧ್ಯಕ್ಷ ಚಂದ್ರಮೌಳಿ, ತುಮಕೂರು ನಗರ ವೀರಶೈವ ಸಮಾಜ ಸೇವಾ ಸಮಿತಿ ಜಂಟಿ ಕಾರ್ಯದರ್ಶಿ ರುದ್ರೇಶ್, ಖಜಾಂಚಿ ಶಿವಲಿಂಗಮ್ಮ, ಅಡಳಿತಾಧಿಕಾರಿ ಎ.ಎಸ್.ರುದ್ರಕುಮಾರ್ ಅರಾಧ್ಯ, ನಿರ್ದೇಶಕ ಟಿ.ಆರ್.ನಟರಾಜು, ಕೆ.ಎಸ್.ವಿಶ್ವನಾಥ್,ಎಚ್.ಬಿ.ನಾಗರಾಜು, ಬಿ.ಉಮೇಶ್ ಸೇರಿ ಹಲವರು ಉಪಸ್ಥಿತರಿದ್ದರು.