ತುರುವೇಕೆರೆಯಲ್ಲಿ ೯ರಿಂದ ಮೇವಿನ ಬ್ಯಾಂಕ್ ಆರಂಭ

| Published : May 08 2024, 01:01 AM IST

ಸಾರಾಂಶ

ರೈತಾಪಿಗಳು ತಾವು ಸಾಕಿರುವ ಜಾನುವಾರುಗಳ ಕಿವಿಯಲ್ಲಿರುವ ನೋಂದಣಿ ಸಂಖ್ಯೆಯನ್ನು ಸಮೀಪದ ಪಶು ಆರೋಗ್ಯ ಕೇಂದ್ರದಲ್ಲಿ ನೋಂದಣಿ ಮಾಡಿಸಬೇಕು. ಪ್ರತಿ ಜಾನುವಾರುವಿಗೆ ಪ್ರತಿ ದಿನ ೬ ಕೆಜಿಯಂತೆ ಒಂದು ವಾರಕ್ಕೆ ಅಗತ್ಯವಿರುವ ಮೇವನ್ನು ಅಂದರೆ ೪೨ ಕೆಜಿ ಮೇವನ್ನು ನೀಡಲಾಗುವುದು. ಪ್ರತಿ ಕೆಜಿ ಮೇವಿಗೆ ೨ ರು.ಗಳಂತೆ ಶುಲ್ಕ ವಿಧಿಸಲಾಗುತ್ತದೆ.

ಕನ್ನಡಪ್ರಭ ವಾರ್ತೆ ತುರುವೇಕೆರೆ

ತಾಲೂಕಿನಲ್ಲಿ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಕಂಡುಬಂದಿರುವುದರಿಂದ ಮೇ ೯ ರಂದು ಮಾಯಸಂದ್ರದ ಟಿ ಬಿ ಕ್ರಾಸ್ ನಲ್ಲಿರುವ ಚುಂಚಾದ್ರಿ ರೈತ ಸಂತೆಯಲ್ಲಿ ಮೇವಿನ ಬ್ಯಾಂಕ್‌ನ್ನು ಪ್ರಾರಂಭಿಸಲಾಗುವುದು ಎಂದು ತಹಸೀಲ್ದಾರ್ ವೈ.ಎಂ.ರೇಣುಕುಮಾರ್ ಮತ್ತು ಪಶುಸಂಗೋಪನಾ ಇಲಾಖಾ ಸಹಾಯಕ ನಿರ್ದೇಶಕ ಡಾ.ರೇವಣ ಸಿದ್ದಯ್ಯ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದರು.

ತಾಲೂಕು ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯಕ್ಕೆ ಮಾಯಸಂದ್ರ ಹೋಬಳಿ ಮತ್ತು ದಬ್ಬೇಘಟ್ಟ ಹೋಬಳಿಯಲ್ಲಿ ಮೇವಿನ ಕೊರತೆ ಕಂಡುಬರುತ್ತಿದೆ. ಹಾಗಾಗಿ ಮೇ ೯ರಂದು ಮಾಯಸಂದ್ರ ಹೋಬಳಿ , ಮೇ 13ರಂದು ದಬ್ಬೇಘಟ್ಟ ಹೋಬಳಿ ಅರೇಮಲ್ಲೇನಹಳ್ಳಿಯಲ್ಲಿ ಮೇವಿನ ಬ್ಯಾಂಕ್ ಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ದಂಡಿನಶಿವರ ಮತ್ತು ಕಸಬಾ ಹೋಬಳಿಯಲ್ಲಿ ಇನ್ನೂ ಆರೇಳು ವಾರಗಳಿಗೆ ಆಗುವಷ್ಟು ಮೇವಿನ ದಾಸ್ತಾನು ಇದೆ, ಹಾಗಾಗಿ ಸದ್ಯಕ್ಕೆ ಇಲ್ಲಿ ಮೇವಿನ ಬ್ಯಾಂಕ್ ಪ್ರಾರಂಭಿಸಲಾಗುತ್ತಿಲ್ಲ. ಪರಿಸ್ಥಿತಿಯನ್ನು ಗಮನಿಸಿಕೊಂಡು ಆ ಕೇಂದ್ರಗಳಲ್ಲಿ ತೆರೆಯಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ರೈತರಿಗೆ ಸೂಚನೆ:ರೈತಾಪಿಗಳು ತಾವು ಸಾಕಿರುವ ಜಾನುವಾರುಗಳ ಕಿವಿಯಲ್ಲಿರುವ ನೋಂದಣಿ ಸಂಖ್ಯೆಯನ್ನು ಸಮೀಪದ ಪಶು ಆರೋಗ್ಯ ಕೇಂದ್ರದಲ್ಲಿ ನೋಂದಣಿ ಮಾಡಿಸಬೇಕು. ಪ್ರತಿ ಜಾನುವಾರುವಿಗೆ ಪ್ರತಿ ದಿನ ೬ ಕೆಜಿಯಂತೆ ಒಂದು ವಾರಕ್ಕೆ ಅಗತ್ಯವಿರುವ ಮೇವನ್ನು ಅಂದರೆ ೪೨ ಕೆಜಿ ಮೇವನ್ನು ನೀಡಲಾಗುವುದು. ಪ್ರತಿ ಕೆಜಿ ಮೇವಿಗೆ ೨ ರು.ಗಳಂತೆ ಶುಲ್ಕ ವಿಧಿಸಲಾಗುತ್ತದೆ. ಈ ನಿಯಮದಡಿ ರೈತರು ತಮ್ಮ ಜಾನುವಾರುಗಳಿಗೆ ಅಗತ್ಯವಿರುವ ಮೇವನ್ನು ಮೇವು ಬ್ಯಾಂಕ್ ನಲ್ಲಿ ಪಡೆಯಬಹುದಾಗಿದೆ. ರೈತರಿಗಾಗಿ ಅಧಿಕೃತವಾದ ಕಾರ್ಡ್ ನೀಡಲಾಗುವುದು ಎಂದು ತಹಸೀಲ್ದಾರ್ ವೈ.ಎಂ.ರೇಣುಕುಮಾರ್ ಮತ್ತು ಪಶುಸಂಗೋಪನಾ ಇಲಾಖಾ ಸಹಾಯಕ ನಿರ್ದೇಶಕ ಡಾ.ರೇವಣ ಸಿದ್ದಯ್ಯನವರು ತಿಳಿಸಿದರು.

ಕಂದಾಯ ಇಲಾಖೆ ಮತ್ತು ಪಶುಸಂಗೋಪನಾ ಇಲಾಖೆ ಜಂಟಿಯಾಗಿ ಕಾರ್ಯ ನಿರ್ವಹಿಸಲಿದೆ. ತಾಲೂಕಿನ ದಬ್ಬೇಘಟ್ಟ ಹೋಬಳಿಯಲ್ಲಿ ೧೫೮೦೫ ಜಾನುವಾರುಗಳಿವೆ. ಮಾಯಸಂದ್ರ ಹೋಬಳಿಯಲ್ಲಿ ೧೪೯೮೦ ರಾಸುಗಳಿವೆ. ಈ ಸಂಖ್ಯೆಯನ್ವಯ ಜಾನುವಾರುಗಳಿಗೆ ಮೇವನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕುರಿ, ಮೇಕೆಗಳಿಗೆ ಮೇವು ನೀಡುವ ಬಗ್ಗೆ ಇನ್ನೂ ಕ್ರಮ ಕೈಗೊಂಡಿಲ್ಲ. ತೀರಾ ಅಗತ್ಯವಿದ್ದಲ್ಲಿ ಸಿಬ್ಬಂದಿ ರೈತರ ಮನೆ ಬಳಿಯೇ ತೆರಳಿ ಮೇವು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ವೈ.ಎಂ.ರೇಣುಕುಮಾರ್ ತಿಳಿಸಿದರು.

ಒಂದು ವಾರಕ್ಕೆ ಅಗತ್ಯವಿರುವ ಸುಮಾರು ನೂರು ಟನ್ ನಷ್ಟು ಮೇವು ಬುಧವಾರ ಸಾಯಂಕಾಲವೇ ತಾಲೂಕಿಗೆ ತಲುಪಲಿದೆ. ಸಾರ್ವಜನಿಕರು ಮತ್ತು ರೈತಾಪಿಗಳು ಸದುಪಯೋಗಪಡಿಸಿಕೊಳ್ಳಬೇಕಾಗಿ ತಹಸೀಲ್ದಾರ್ ವೈ.ಎಂ.ರೇಣುಕುಮಾರ್ ಮತ್ತು ಪಶುಸಂಗೋಪನಾ ಇಲಾಖಾ ಸಹಾಯಕ ನಿರ್ದೇಶಕ ಡಾ.ರೇವಣ ಸಿದ್ದಯ್ಯನವರು ವಿನಂತಿಸಿಕೊಂಡಿದ್ದಾರೆ.