ಇಂದು ಬಂಡಿಹಾಳದ ಕೆರಿಬಸವೇಶ್ವರ ಜಾತ್ರಾ ಮಹೋತ್ಸವ

| Published : May 10 2024, 01:33 AM IST

ಇಂದು ಬಂಡಿಹಾಳದ ಕೆರಿಬಸವೇಶ್ವರ ಜಾತ್ರಾ ಮಹೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಬಂಡಿಹಾಳ ಗ್ರಾಮದ ಕೆರಿಬಸವೇಶ್ವರ ಜಾತ್ರೆಯು ಮೇ ೧೦ರಂದು ಅದ್ಧೂರಿಯಿಂದ ನಡೆಯಲಿದೆ.

ಶಿವಮೂರ್ತಿ ಇಟಗಿ

ಕನ್ನಡಪ್ರಭ ವಾರ್ತೆ ಯಲಬುರ್ಗಾ

ತಾಲೂಕಿನ ಬಂಡಿಹಾಳ ಗ್ರಾಮದ ಕೆರಿಬಸವೇಶ್ವರ ಜಾತ್ರೆಯು ಮೇ ೧೦ರಂದು ಅದ್ಧೂರಿಯಿಂದ ನಡೆಯಲಿದೆ.

ಕೆರಿಬಸವೇಶ್ವರನಿಗೆ ಸುಮಾರು ಸಾವಿರ ವರ್ಷಗಳ ಇತಿಹಾಸವಿದೆ. ಈ ಗ್ರಾಮದಲ್ಲಿ ಒಂದು ಬೃಹತ್ ಕೆರೆ ಇದೆ. ಸುತ್ತ-ಮುತ್ತಲಿನ ಹತ್ತಾರು ಹಳ್ಳಿಗಳಿಗೆ ಜೀವ-ಜಲವಾಗಿರುವ ಈ ಕೆರೆ ನಿರ್ಮಾಣದ ಸಂದರ್ಭದಲ್ಲಿ ಅಪರೂಪವಾಗಿ ಪ್ರತ್ಯಕ್ಷವಾದ ಬಸವಣ್ಣನ ಮೂರ್ತಿಯನ್ನು ಕಂಡು ಗಾಬರಿಯಾದ ಗ್ರಾಮಸ್ಥರು ಮೂರ್ತಿಗೆ ಕೆರಿಬಸವೇಶ್ವರ ಎಂದು ನಾಮಕರಣ ಮಾಡಿ ಅಂದಿನಿಂದ ಪೂಜಿಸುತ್ತಾ ಬರುತ್ತಿದ್ದಾರೆ.

ದಿನದಿಂದ ದಿನಕ್ಕೆ ಪ್ರಚಾರ ಹೆಚ್ಚಿದಂತೆ ಇಲ್ಲಿಗೆ ಹಂಪಿ ಅರಸರು ಕೆರೆ ವೀಕ್ಷಣೆಗೆಂದು ಆಗಮಿಸುತ್ತಾರೆ. ಅದಾದ ಬಳಿಕ ನಿಜಾಮರು ಇಲ್ಲಿಗೆ ಭೇಟಿ ನೀಡಿದ್ದರು. ಇಲ್ಲಿನ ವಿಶಾಲವಾದ ಕೆರೆ ಕಂಡು ಸಂತೋಷಭರಿತರಾದ ಇಲ್ಲಿನ ದೇವಸ್ಥಾನಕ್ಕೆ ರಥ ನಿರ್ಮಾಣ ಮಾಡುವಂತೆ ಗ್ರಾಮದ ಕುಲಕರ್ಣಿಗೆ ಸೂಚಿಸಿದ್ದರು.

ನಿಜಾಮರ ಸೂಚನೆಯಂತೆ ಕುಲಕರ್ಣಿಯವರು ಕುಷ್ಟಗಿ ತಾಲೂಕಿನ ಚಳಗೇರಿ ಗ್ರಾಮದಿಂದ ಸಿದ್ದನಗೌಡ ಪಾಟೀಲ ಎಂಬ ಶಿಲ್ಪಿಯನ್ನು ಕರೆಯಿಸಿ ರಥ ನಿರ್ಮಾಣ ಮಾಡಿಸುತ್ತಾರೆ. ೧೦೧ ವರ್ಷಗಳಿಂದ ಸತತವಾಗಿ ಕೆರಿಬಸವೇಶ್ವರನ ರಥೋತ್ಸವ ಅದ್ಧೂರಿಯಾಗಿ ನಡೆದುಕೊಂಡು ಬರುತ್ತಿರುವುದು ಭಕ್ತರ ಶ್ರಮಕ್ಕೆ ಸಿಕ್ಕ ಫಲವಾಗಿದೆ. ಈ ಗ್ರಾಮಕ್ಕೆ ಭೇಟಿ ನೀಡುವ ಪ್ರತಿಯೊಬ್ಬರೂ ಕೆರಿಬಸವೇಶ್ವರನ ಆಶೀರ್ವಾದ ಪಡೆದುಕೊಂಡೇ ಮುಂದೆ ಸಾಗುತ್ತಾರೆ. ಇದರಿಂದ ಪ್ರತಿಯೊಬ್ಬರಿಗೂ ಒಳಿತಾಗುತ್ತದೆ ಎಂಬುದು ಜನರ ವಾಡಿಕೆ.

ವಿಶೇಷ:

ಈ ದೇವಸ್ಥಾನದ ವಿಶೇಷವೆಂದರೆ ದೇವಸ್ಥಾನದ ಮೇಲ್ಚಾವಣಿ ನಿರ್ಮಾಣ ಮಾಡಿದರೆ ಫಲಕಾರಿಯಾಗುವುದಿಲ್ಲ, ತನ್ನಿಂದಾನೆ ಕುಸಿದು ಬೀಳುತ್ತದೆ. ದೇವಸ್ಥಾನದ ಸುತ್ತಲೂ ಸುಂದರವಾದ ಗಿಡ-ಮರ ಇದ್ದರೂ ಮರಗಳ ನೆರಳು ಗರ್ಭಗುಡಿ ಮೇಲೆ ಬೀಳುವ ಮೊದಲೇ ಗಿಡದ ಆ ಕೊಂಬೆಗಳು ತುಂಡಾಗಿ ಬೀಳುತ್ತವೆ. ದೇವಸ್ಥಾನ ಇತಿಹಾಸದ ಮೂಲಗಳ ಪ್ರಕಾರ ಮರಳು, ನೀರು, ಕಲ್ಲು ಮತ್ತು ಕಟ್ಟಡ ಕಾರ್ಮಿಕರನ್ನು ವಿವಿಧ ಏಳು ಗ್ರಾಮಗಳಿಂದ ಕರೆಯಿಸಿ ಒಂದೇ ದಿನದಲ್ಲಿ ನಿರ್ಮಾಣ ಮಾಡಿದಾಗ ಮಾತ್ರ ಮೇಲ್ಚಾವಣಿ ನಿಲ್ಲುತ್ತದೆ ಎಂಬುದು ಇಲ್ಲಿನ ಪೂಜಾರಿಗಳ ವಾದವಾಗಿದೆ. ಇದು ದೈವಿ ಶಕ್ತಿ ಎನ್ನುತ್ತಾರೆ ಇಲ್ಲಿನ ಭಕ್ತರು.

ಈ ಭಾಗದ ಜನರು ತಿಂಗಳ ಮುಂಚೆ ಸಭೆ ನಡೆಸಿ ತಮ್ಮದೇ ಆದ ಸಮಿತಿಯೊಂದನ್ನು ರಚಿಸಿಕೊಳ್ಳುತ್ತಾರೆ. ಅದರಿಂದ ಜಾತ್ರೆಯ ಖರ್ಚಿಗೆ ಅಗತ್ಯವಾದ ಹಣ ಸಂಗ್ರಹಿಸಿ ಬಸವಣ್ಣನಿಗೆ ಅಭಿಷೇಕ, ವಿಶೇಷ ಪೂಜೆ, ಪ್ರಸಾದ ವಿನಿಯೋಗ, ಅನ್ನದಾಸೋಹ ಹಾಗೂ ಮನರಂಜನಾ ಕಾರ್ಯಕ್ರಮ ನಡೆಸಲಾಗುತ್ತದೆ. ನಾನಾ ಧಾರ್ಮಿಕ ಕಾರ್ಯಕ್ರಮ, ಜೋಡಿ ಎತ್ತುಗಳ ಮೆರವಣಿಗೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ದೇವಸ್ಥಾನ ಸಮಿತಿಯಿಂದ ಸನ್ಮಾನಿಸಲಾಗುತ್ತಿದೆ.

ಈ ಜಾತ್ರೆಗೆ ತೊಂಡಿಹಾಳ, ಹಾಲಕೆರೆ, ನರೇಗಲ್, ಯಲಬುರ್ಗಾ, ಬಿನ್ನಾಳ, ಯರೇಹಂಚಿನಾಳ, ಕರಮುಡಿ, ಹಿರೇಮ್ಯಾಗೇರಿ, ಮುಧೋಳ, ಗದಗ, ಕೊಪ್ಪಳ ಸೇರಿದಂತೆ ಸುತ್ತ-ಮುತ್ತಲಿನ ಹಲವಾರು ಗ್ರಾಮಗಳಿಂದ ಭಕ್ತರು ಆಗಮಿಸಿ ಕೆರಿಬಸವೇಶ್ವರನ ಕೃಪೆಗೆ ಪಾತ್ರರಾಗುತ್ತಾರೆ.