ಟವರ್ ಉಪಕರಣಗಳ ಕಳ್ಳತನ: ಇಬ್ಬರ ಬಂಧನ

| Published : May 09 2024, 01:00 AM IST

ಸಾರಾಂಶ

ಆರೋಪಿಗಳ ಪೈಕಿ ಪ್ರಥಮ ಆರೋಪಿ ಎಲ್.ಬಿ.ಭರತ್ ಬೆಂಗಳೂರು ನಗರದ ಕುಂಬಳಗೂಡಿನಲ್ಲಿ ವಾಸವಿದ್ದು, ಮಹದೇವ ಕುಮಾರ್ ನೊಂದಿಗೆ ಸೇರಿ ಏರ್ಟೆಲ್ ಕಂಪನಿ ನೌಕರರ ಸೋಗಿನಲ್ಲಿ ಬಹು ಮಹಡಿ ಕಟ್ಟಡದ ಮನೆಗಳ ಮೇಲೆ ಅಳವಡಿಸಲಾಗಿದ್ದ ಮೊಬೈಲ್ ಟವರ್ ಗಳ ದುರಸ್ತಿ ನೆಪದಲ್ಲಿ ಮನೆ ಮಾಲೀಕರನ್ನು ವಂಚಿಸಿ ಉಪಕರಣಗಳನ್ನು ಲೂಟಿ ಮಾಡಿ ಪರಾರಿಯಾಗುತ್ತಿದ್ದರು.

ಕನ್ನಡಪ್ರಭ ವಾರ್ತೆ ಮದ್ದೂರು

ಏರ್ಟೆಲ್ ಕಂಪನಿ ನೌಕರರ ಸೋಗಿನಲ್ಲಿ ಮನೆಗಳ ಮೇಲೆ ಅಳವಡಿಸಿದ್ದ ಟವರ್ ಗಳ ಉಪಕರಣಗಳನ್ನು ಕಳವು ಮಾಡುತ್ತಿದ್ದ ಇಬ್ಬರನ್ನು ಮನೆ ಮಾಲೀಕರು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿರುವ ಘಟನೆ ಪಟ್ಟಣದ ಸಿದ್ಧಾರ್ಥ ನಗರ ಬಡಾವಣೆಯಲ್ಲಿ ಮಂಗಳವಾರ ಜರುಗಿದೆ.

ತಾಲೂಕು ಲಿಂಗಪಟ್ಟಣ ಗ್ರಾಮದ ಲೇಟ್ ಬಸವರಾಜು ಪುತ್ರ ಎಲ್. ಬಿ. ಭರತ್ (22) ಹಾಗೂ ನರೀಪುರ ಗ್ರಾಮದ ಲೇಟ್ ಮಹದೇವು ಪುತ್ರ ಮಹದೇವಕುಮಾರ್ ಅಲಿಯಾಸ್ ಬೆಟ್ಟಪ್ಪ ಬಂಧಿತ ಆರೋಪಿಗಳು. ಬಂಧಿತರಿಂದ ಮೊಬೈಲ್ ಟವರ್ ಗಳಲ್ಲಿ ಅಳವಡಿಸಲಾಗಿದ್ದ 1.40 ಲಕ್ಷ ರು. ಮೌಲ್ಯದ ಆರ್.ಆರ್.ಯೂನಿಟ್ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳ ಪೈಕಿ ಪ್ರಥಮ ಆರೋಪಿ ಎಲ್.ಬಿ.ಭರತ್ ಬೆಂಗಳೂರು ನಗರದ ಕುಂಬಳಗೂಡಿನಲ್ಲಿ ವಾಸವಿದ್ದು, ಮಹದೇವ ಕುಮಾರ್ ನೊಂದಿಗೆ ಸೇರಿ ಏರ್ಟೆಲ್ ಕಂಪನಿ ನೌಕರರ ಸೋಗಿನಲ್ಲಿ ಬಹು ಮಹಡಿ ಕಟ್ಟಡದ ಮನೆಗಳ ಮೇಲೆ ಅಳವಡಿಸಲಾಗಿದ್ದ ಮೊಬೈಲ್ ಟವರ್ ಗಳ ದುರಸ್ತಿ ನೆಪದಲ್ಲಿ ಮನೆ ಮಾಲೀಕರನ್ನು ವಂಚಿಸಿ ಉಪಕರಣಗಳನ್ನು ಲೂಟಿ ಮಾಡಿ ಪರಾರಿಯಾಗುತ್ತಿದ್ದರು.

ಕಳೆದ 7ರಂದು ಸದರಿ ಆರೋಪಿಗಳು ಪಟ್ಟಣದ ಸಿದ್ಧಾರ್ಥ ನಗರ ಬಡಾವಣೆಯ ಪುರಸಭಾ ಸದಸ್ಯೆ ಸುಮಿತ್ರ ರಮೇಶ್ ಮನೆಗೆ ಧಾವಿಸಿದ ಆರೋಪಿಗಳು ನಾವು ಏರ್ಟೆಲ್ ಕಂಪನಿ ನೌಕರರು ಎಂದು ನಂಬಿಸಿ ಮನೆ ಮೇಲೆ ಅಳವಡಿಸಲಾಗಿದ್ದ ಮೊಬೈಲ್ ಟವರ್ ಗಳ ದುರಸ್ತಿ ನೆಪದಲ್ಲಿ ಟವರ್ ನ ಆರ್ .ಆರ್. ಯೂನಿಟ್ ಗಳನ್ನು ಅಪಹರಿಸಲು ಸಂಚು ನಡೆಸಿದ್ದರು.

ಈ ವೇಳೆ ಮನೆ ಮಾಲೀಕ ರಮೇಶ್ ಅನುಮಾನಗೊಂಡು ಪೊಲೀಸರಿಗೆ ಆರೋಪಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಸರ್ಕಲ್ ಇನ್ಸ್ ಪೆಕ್ಟರ್ ಕೆ.ಆರ್.ಪ್ರಸಾದ್, ಪಿಎಸ್ಐ ಮಂಜುನಾಥ್ ಸೂಚನೆ ಮೇರೆಗೆ ಸ್ಥಳಕ್ಕೆ ಧಾವಿಸಿದ ಮದ್ದೂರು ಅಪರಾಧ ವಿಭಾಗದ ಪಿಎಸ್ಐ ಜಮೀರ್ ಅಹಮದ್, ಮುಖ್ಯಪೇದೆ ಗುರುಪ್ರಸಾದ್, ಪೇದಗಳಾದ ವಿಷ್ಣುವರ್ಧನ್ ಹಾಗೂ ಓಂಕಾರಪ್ಪ ಅವರು ಆರೋಪಿಗಳನ್ನು ವರ್ಷಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದಾಗ ಇಡೀ ಮೊಬೈಲ್ ಟವರ್ ಗಳ ಉಪಕರಣ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಬಂಧಿತ ಪ್ರಮುಖ ಆರೋಪಿ ಎಲ್. ಬಿ. ಭರತ್ ಬೆಂಗಳೂರಿನ ಜ್ಞಾನಭಾರತಿ, ಅನ್ನಪೂರ್ಣೇಶ್ವರಿ ನಗರ, ತಾವರೆಗೆರೆ, ಕೋಲಾರ, ರಾಮನಗರ, ಕನಕಪುರ ಹಾಗೂ ಹಾರೋಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಏರ್ಟೆಲ್ ನೌಕರರ ಹೆಸರಿನಲ್ಲಿ ಮನೆಗಳ ಮೇಲಿದ್ದ ಟವರ್ ಉಪಕರಣಗಳನ್ನು ಕಳವು ಮಾಡಿದ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಏರ್ಟೆಲ್ ಟವರ್ ಗಳ ನಿರ್ವಹಣಾ ಕಾರ್ಯದ ಹೊಣೆ ಹೊತ್ತಿರುವ ಎ.ಎಸ್‌.ಟಿ. ಕಂಪನಿ ಟೆಕ್ನೀಷಿಯನ್ ಪ್ರಸನ್ನ ನೀಡಿರುವ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಬಂಧಿತರನ್ನು ಪಟ್ಟಣದ ಜೆಎಂಎಫ್ ಸಿ ನ್ಯಾಯಾಲಯದ ಎರಡನೇ ಅಪರ ಸಿವಿಲ್ ನ್ಯಾಯಾಧೀಶ ಎನ್. ವಿ. ಕೋನಪ್ಪ ಅವರ ಮುಂದೆ ಹಾಜರುಪಡಿಸಿದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.