ಕೈಕೊಟ್ಟ ವಾಹನ, ಕಂಗಾಲಾದ ಪತ್ರಕರ್ತರು!

| Published : May 09 2024, 01:05 AM IST

ಸಾರಾಂಶ

ಇಷ್ಟೆಲ್ಲ ಸಮಸ್ಯೆಯಿದ್ದರೂ ನಗರದ ವಾರ್ತಾ ಇಲಾಖೆಗೆ ಕಳೆದ 7-8 ವರ್ಷಗಳಿಂದ ಸುಸಜ್ಜಿತ ವಾಹನ ನೀಡಲು ಸಾಧ್ಯವಾಗಿಲ್ಲ. ಹೊಸ ವಾಹನ ಬೇಡಿಕೆ ಇಟ್ಟಾಗ ರಾಮನಗರದಲ್ಲಿ ಕೆಟ್ಟು ನಿಂತಿದ್ದ ವಾಹನವನ್ನು ದುರಸ್ತಿ ಮಾಡಿಸಿ ಇಲ್ಲಿಗೆ ಒದಗಿಸಲಾಗಿದೆ.

ಹುಬ್ಬಳ್ಳಿ:

ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣೆಯ ಮತದಾನದ ವರದಿ ಮಾಡಲು ತೆರಳಿದ್ದ ಪತ್ರಕರ್ತರು ವಾರ್ತಾ ಇಲಾಖೆಯ ವಾಹನ ಕೈಕೊಟ್ಟು ನಿಂತಲ್ಲಿ ತಳ್ಳಿ, ದೂಡಿಕೊಂಡು ವರದಿ ಮಾಡುವ ದುಸ್ಥಿತಿ ಮಂಗಳವಾರ ಎದುರಾಗಿತು.

ವಾರ್ತಾ ಇಲಾಖೆ ವಾಹನ ಬಹಳ ಹಳೇದಾಗಿದ್ದರಿಂದ ಪದೇ ಪದೇ ಸಮಸ್ಯೆ ನಿರ್ಮಾಣವಾಯಿತು. ತಕ್ಷಣ ವಾಹನ ಅವ್ಯವಸ್ಥೆಯ ಕುರಿತು ಜಿಲ್ಲಾ ಚುನಾವಣಾಕಾರಿ ಹಾಗೂ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರ ಗಮನಕ್ಕೆ ತಂದಾಗ ಕೂಡಲೇ ಸ್ಪಂದಿಸಿದ ಅವರು, ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದರು. ತಮ್ಮ ಆಪ್ತ ಸಹಾಯಕರಿಂದ ವಾರ್ತಾ ಇಲಾಖೆಯ ಸಿಬ್ಬಂದಿಗೆ ಕರೆ ಮಾಡಿ ಬದಲಿ ವಾಹನದ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು. ಆದರೆ, ಇನ್ನೆರಡು ಗ್ರಾಮಗಳು ಮಾತ್ರ ಇದ್ದುದರಿಂದ ಬೇರೆ ವಾಹನ ಬೇಡ ಎಂದು ನಿರ್ಧರಿಸಿ ವಾರ್ತಾ ಇಲಾಖೆಯ ಅದೇ ವಾಹನದಲ್ಲಿ ಮರಳಿ ಬರುವಂತಾಗಿತು.

ಇಷ್ಟೆಲ್ಲ ಸಮಸ್ಯೆಯಿದ್ದರೂ ನಗರದ ವಾರ್ತಾ ಇಲಾಖೆಗೆ ಕಳೆದ 7-8 ವರ್ಷಗಳಿಂದ ಸುಸಜ್ಜಿತ ವಾಹನ ನೀಡಲು ಸಾಧ್ಯವಾಗಿಲ್ಲ. ಹೊಸ ವಾಹನ ಬೇಡಿಕೆ ಇಟ್ಟಾಗ ರಾಮನಗರದಲ್ಲಿ ಕೆಟ್ಟು ನಿಂತಿದ್ದ ವಾಹನವನ್ನು ದುರಸ್ತಿ ಮಾಡಿಸಿ ಇಲ್ಲಿಗೆ ಒದಗಿಸಲಾಗಿದೆ. ಅಲ್ಲಿಂದ ಇಲ್ಲಿಯ ವರೆಗೆ ಹುಬ್ಬಳ್ಳಿಯ ಪತ್ರಕರ್ತರಿಗೆ ದೂಡುವ ಈ ವಾಹನವೇ ಅನಿವಾರ್ಯವಾಗಿದೆ.

ನಗರಕ್ಕೆ ಯೋಜನೆ ಹಾಗೂ ಸಮಾರಂಭಗಳಿಗೆ ಸಚಿವರು, ಮುಖ್ಯಮಂತ್ರಿ ಆಗಮಿಸಿದಾಗ ಅಲ್ಲಿಗೆ ಪತ್ರಕರ್ತರ ಕರೆದೊಯ್ಯಲು ಇದೆ ವಾಹನ ಗತಿಯಾಗಿದೆ. ಸುಮಾರು 18-19 ಆಸನದ ಸಾಮರ್ಥ್ಯ ಹೊಂದಿದೆ. ಆದರೆ, ಅದಕ್ಕಿಂತ ಹೆಚ್ಚು ಜನರನ್ನು ಇದರಲ್ಲಿ ಕರೆದುಕೊಂಡು ಹೋಗುತ್ತಾರೆ. ಹೊಸ ವಾಹನ ಒದಗಿಸಲು ಕೇಂದ್ರ ಸಚಿವರು, ಹುಬ್ಬಳ್ಳಿಯವರಾದ ಇಬ್ಬರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರೂ ಸಹ ವಾಹನ ನೀಡಿಲ್ಲ. ಪ್ರತಿ ಸರ್ಕಾರದಲ್ಲಿ ಒಂದಿಬ್ಬರು ಸಚಿವರಿರುತ್ತಾರೆ. ಮುಖ್ಯಮಂತ್ರಿಗಳೇ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊಂದಿದ್ದರೂ ಹುಬ್ಬಳ್ಳಿಯಂತಹ ನಗರದಲ್ಲಿ ಈ ಪರಿಸ್ಥಿತಿಯಿದೆ.