ಮಳೆ ಗಾಳಿಗೆ ರೈತ ವಿಲವಿಲ; ಕೈಗೆ ಸಿಗದ ಬೇಸಾಯ ಫಲ!

| Published : May 09 2024, 01:05 AM IST / Updated: May 09 2024, 10:38 AM IST

ಸಾರಾಂಶ

ಚಳ್ಳಕೆರೆ ತಾಲ್ಲೂಕಿನಾದ್ಯಂತ ಸುರಿದ ಗಾಳಿ ಮಳೆಗೆ ಬೆಳೆ ಹಾನಿ ಹೆಚ್ಚಾಗಿ, ಹಲವಾರು ರೈತರ ಕಟಾವಿಗೆ ಬಂದಿದ್ದ ಫಸಲು ನೆಲಕಚ್ಚಿವೆ.

 ಚಳ್ಳಕೆರೆ / ಹಿರಿಯೂರು / ಹೊಸದುರ್ಗ :   ತಾಲ್ಲೂಕಿನಾದ್ಯಂತ ಕೆಲವು ಭಾಗಗಳಲ್ಲಿ ಮಾತ್ರ ಬಿರುಗಾಳಿ, ಸಿಡಿಲಿನಿಂದ ಕೂಡಿದ ಮಳೆಗೆ ಬೆಳೆ ಹಾನಿ ಹೆಚ್ಚಾಗಿ ಹಲವಾರು ರೈತರ ಕಟಾವಿಗೆ ಬಂದಿದ್ದ ಫಸಲು ನೆಲಕಚ್ಚಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ವಿಶೇಷವಾಗಿ ಪರಶುರಾಮಪುರ ಮತ್ತು ದೇವರ ಮರಿಕುಂಟೆ ಸುತ್ತಮುತ್ತಲ ಪ್ರದೇಶದಲ್ಲಿ ಒಟ್ಟು ೫೪.೦೪ ಮಿ.ಮೀ. ಮಳೆಯಾಗಿದ್ದು, ಸಿಡಿಲು, ಗಾಳಿಗೆ ಬಹುತೇಕ ತೋಟದಲ್ಲಿದ್ದ ಬೆಳೆಗಳು ಸಂಪೂರ್ಣ ನಾಶವಾಗಿವೆ.

ಮಂಗಳವಾರ ರಾತ್ರಿ ಬಿದ್ದ ಗಾಳಿ ಮಳೆಗೆ ತಾಲ್ಲೂಕಿನ ರೇಣುಕಾಪುರ ಗ್ರಾಮದ ರಾಜಣ್ಣ ಎಂಬುವವರ ರಿ.ಸರ್ವೆ ನಂ. ೬೨/೬ರಲ್ಲಿ ನಾಲ್ಕು ಎಕರೆ ಪ್ರದೇಶದ ರೇಷ್ಮೆಗೂಡಿನ ಶೆಡ್ ಸಂಪೂರ್ಣ ನೆಲಕಚ್ಚಿ ಸುಮಾರು ೫ ಲಕ್ಷ ಸಂಭವಿಸಿದೆ ಎನ್ನಲಾಗಿದೆ. ಚನ್ನಮ್ಮನಾಗತಿಹಳ್ಳಿ ಕಾವಲಿನಲ್ಲಿ ಭೂಲಿಂಗಪ್ಪ ಎಂಬುವವ ರಿ.ಸರ್ವೆ ನಂ೧೧೫ರ ನಾಲ್ಕು ಎಕರೆ ಬಾಳೆ ತೋಟ ಗಾಳಿಗೆ ಸಿಕ್ಕು ಸಂಪೂರ್ಣ ನೆಲಕುರುಳಿದೆ. ದಾರ‍್ಲಹಳ್ಳಿಯ ಶಾಂತಮ್ಮ, ಓಬಳಾಪುರ ಗ್ರಾಮದ ರೇಣುಕಮ್ಮ, ಶಾಂತಮ್ಮ ಎಂಬುವವರ ಮನೆಗಳ ಸೀಟು ಹಾರಿಹೋಗಿ, ಗೋಡೆ ಕುಸಿದು ನಷ್ಟ ಸಂಭವಿಸಿದೆ.

ಕಾಟಂದೇವರಕೋಟೆಯಲ್ಲಿ ರಾಜಪ್ಪ ಎಂಬುವವರ ಮೂರು ಎಕರೆ ಮೆಕ್ಕೆಜೋಳ ನೆಲಕಚ್ಚಿದ್ದು, ಓ.ಪಾಲಮ್ಮ ಎರಡು ಎಕರೆ ಪಪ್ಪಾಯ ಗಾಳಿಗೆ ಬಿದ್ದಿದೆ. ಓ.ಶಿವಣ್ಣ ಎಂಬುವವರ ಮೂರು ಎಕರೆ ಪ್ರದೇಶದ ಪಪ್ಪಾಯವೂ ನೆಲಕಚ್ಚಿದೆ. ಶ್ರೀನಿವಾಸ್ ಎಂಬುವವರ ಜಮೀನಿನಲ್ಲಿದ್ದ ದಾಳಿಂಬೆ, ಸಿ.ಟಿ.ಅಶ್ವತರೆಡ್ಡಿ ಅವರಿಗೆ ಸೇರಿದ ಅಡಕೆ ಮತ್ತು ಬಾಳೆ ಬೆಳೆ ಲಕ್ಷಾಂತರ ರು. ನಷ್ಟವಾಗಿದೆ.

ಓಬಳಾಪುರ ಗ್ರಾಮದ ನರಸಿಂಹಪ್ಪರ ಜಮೀನಿನಲ್ಲಿದ್ದ ಮೆಕ್ಕೆಜೋಳ , ತಿಮ್ಮಪ್ಪಗೆ ಸೇರಿದ ಮೂರು ಎಕರೆ ಪ್ರದೇಶದ ಮೆಕ್ಕೆಜೋಳ ಗಾಳಿಗೆ ಮುರಿದು ಬಿದ್ದಿವೆ. ಲಿಂಗರಾಜು ಎಂಬುವವರ ೫ ಎಕರೆ ಪ್ರದೇಶದ ಮೆಕ್ಕೆಜೋಳ, ಜಿ.ಎಲ್.ಗವಿಸಿದ್ದಪ್ಪ ೪೧ ಅಡಿಕೆ ಗಿಡ ನಾಶವಾಗಿದೆ. ಮಂಜುನಾಥ ೩೦ ಅಡಿಗೆ ಗಿಡಗಳು ಮುರಿದು ನೆಲಕಚ್ಚಿವೆ. ವಿ.ಹನುಮಪ್ಪ ೧.೨೬ ಎಕರೆ ಪ್ರದೇಶದ ಬಾಳೆ ನೆಲಕಚ್ಚಿದೆ. ವೆಂಕಟೇಶ್ ಎಂಬುವವರ ಬೆಳೆ ನಷ್ಟ ಉಂಟಾಗಿದೆ.

ಮಳೆಗಾಗಿ ಪ್ರಾರ್ಥಿಸಿ ಆಂಜನೇಯನ ಮೊರೆ

ಹೊಸದುರ್ಗ: ತಾಲೂಕಿನ ಐತಿಹಾಸಿಕ ನೀರಗುಂದ ಗ್ರಾಮದ ಶ್ರೀ ಅರಮನೆ ಆಂಜನೇಯಸ್ವಾಮಿಗೆ ಬುಧವಾರ ನಡೆದ ಅಮಾವಾಸ್ಯೆ ಅಂಗವಾಗಿ ಮಳೆಗಾಗಿ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.ಪ್ರತಿ ವರ್ಷ ಏಪ್ರಿಲ್ ತಿಂಗಳಲ್ಲಿಯೇ ಪೂರ್ವ ಮುಂಗಾರು ಮಳೆಯಾಗುತ್ತಿತ್ತು. ಆದರೆ ಈ ಬಾರಿ ಏಪ್ರಿಲ್ ಕಳೆದು ಮೇ ಮೊದಲನೇ ವಾರ ಕಳೆದರೂ ಸ್ವಲ್ಪವೂ ಮಳೆ ಬಂದಿಲ್ಲ. ಇದರಿಂದ ಗ್ರಾಮಸ್ಥರಲ್ಲಿ ಆತಂಕ ಉಂಟಾಯಿತು. ಇದರಿಂದಾಗಿ ಶ್ರೀ ಮಾರುತಿ ಸೇವಾ ಸಮಿತಿಯವರು ಮಳೆಗಾಗಿ ಭಕ್ತಿಯಿಂದ ಪ್ರಾರ್ಥಿಸಿ ವಿಶೇಷ ಪೂಜಾ ಕಾರ್ಯ ಹಮ್ಮಿ ಕೊಂಡಿದ್ದರು. ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಿಂದಲೇ ಸ್ವಾಮಿಗೆ ಮಹಾಗಣಪತಿ ಪೂಜೆ, ಪುಣ್ಯಹಃ, ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ಪೂಜೆ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ಜರುಗಿದವು.

ಶ್ರೀ ಅರಮನೆ ಆಂಜನೇಯಸ್ವಾಮಿಯ ಅಪ್ಪಣೆಯಂತೆ ಸಂಜೆಯ ಹೊತ್ತಿಗೆ ಕಾಕತಾಳೀಯ ಎಂಬಂತೆ ಮಳೆ ಬಂದಿದೆ. ಇದರಿಂದ ಗ್ರಾಮಸ್ಥರಿಗೆ ಸಂತಸ ಉಂಟಾಗಿದ್ದು, ಸ್ವಾಮಿಯ ಮಹಿಮೆ ಬಗ್ಗೆ ಜನರಲ್ಲಿ ಭಕ್ತಿ ಭಾವನೆಯೂ ಹೆಚ್ಚಾಗಿದೆ ಎಂದು ಶ್ರೀ ಮಾರುತಿ ಸೇವಾ ಸಮಿತಿ ಅಧ್ಯಕ್ಷ ಕುರ್ಕೆ ತಿಪ್ಪೇಶಪ್ಪ ತಿಳಿಸಿದ್ದಾರೆ.

ಹಿರಿಯೂರಲ್ಲಿ ‘ಮಳೆ ’ಮಂದಹಾಸ : ಹಿರಿಯೂರು: ತಾಲೂಕಿನಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆಯು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ್ದು, ಅತೀ ಹೆಚ್ಚು ಮಳೆ ಬಬ್ಬೂರು ಗ್ರಾಮದಲ್ಲಿ ದಾಖಲಾಗಿದೆ. 27.4 ಮಿ.ಮೀ. ಮಳೆ ಬಬ್ಬೂರಿನಲ್ಲಿ ಬಂದಿದ್ದು, ಹಿರಿಯೂರು 22.6, ಇಕ್ಕನೂರು 10.0 ಹಾಗೂ ಈಶ್ವರಗೆರೆಯಲ್ಲಿ 4.2 ಮಿಮೀ ಸುರಿದಿದೆ. ಸೂಗೂರು ಮತ್ತು ಜೆಜೆ ಹಳ್ಳಿಯಲ್ಲಿ ಯಾವುದೇ ಮಳೆ ವರದಿ ದಾಖಲಾಗಿಲ್ಲ. ಅತೀ ಹೆಚ್ಚು ನೀರಿನ ಅಭಾವ ಕಂಡಿದ್ದ ತಾಲೂಕಿನ ಐಮಂಗಲ ಮತ್ತು ಜೆಜೆ ಹಳ್ಳಿ ಹೋಬಳಿಗಳ ಕೆಲವು ಹಳ್ಳಿಗಳಲ್ಲಿ ಕಡಿಮೆ ಪ್ರಮಾಣದ ಮಳೆಯಾಗಿದ್ದು ರೈತರು ಮತ್ತು ಕುಡಿಯುವ ನೀರಿಗಾಗಿ ಗ್ರಾಮಸ್ಥರು ಇನ್ನೂ ಹೆಚ್ಚಿನ ಮಳೆಯ ನಿರೀಕ್ಷೆಯಲ್ಲಿದ್ದಾರೆ.