ಸೋಲಾರ್ ದೀಪದ ಕಂಬಕ್ಕೆ ಅಳವಡಿಸಿದ್ದ ಶ್ರೀ ರಾಮಚಂದ್ರ ಪ್ರಭುವಿನ ಕೇಸರಿ ಬಾವುಟ ತೆರವು

| Published : May 09 2024, 12:45 AM IST

ಸೋಲಾರ್ ದೀಪದ ಕಂಬಕ್ಕೆ ಅಳವಡಿಸಿದ್ದ ಶ್ರೀ ರಾಮಚಂದ್ರ ಪ್ರಭುವಿನ ಕೇಸರಿ ಬಾವುಟ ತೆರವು
Share this Article
  • FB
  • TW
  • Linkdin
  • Email

ಸಾರಾಂಶ

ಸೋಲಾರ್ ದೀಪದ ಕಂಬಕ್ಕೆ ಅಳವಡಿಸಿದ್ದ ಶ್ರೀ ರಾಮಚಂದ್ರ ಪ್ರಭುವಿನ ಕೇಸರಿ ಬಾವುಟವನ್ನು ಸ್ವತಃ ಪಿಡಿಒ ಈಶಕುಮಾರ್ ಏಣಿ ಮೇಲೇರಿ ತೆರವುಗೊಳಿಸಿದ್ದಲ್ಲದೇ, ಅದನ್ನು ನೆಲಕ್ಕೆ ಬಿಸಾಡಿರುವ ಘಟನೆ ತಾಲೂಕಿನ ನಗರ್ಲೆ ಗ್ರಾಮದಲ್ಲಿ ನಡೆದಿದೆ. ಬಾವುಟ ಕಟ್ಟಲು ಅನುಮತಿ ಪಡೆದಿಲ್ಲ, ತೆರವುಗೊಳಿಸುವಂತೆ ಮೌಖಿಕವಾಗಿ ತಿಳಿಸಿದರೂ ತೆಗೆದಿರಲಿಲ್ಲ.

ಕನ್ನಡಪ್ರಭ ವಾರ್ತೆ ನಂಜನಗೂಡು

ಸೋಲಾರ್ ದೀಪದ ಕಂಬಕ್ಕೆ ಅಳವಡಿಸಿದ್ದ ಶ್ರೀ ರಾಮಚಂದ್ರ ಪ್ರಭುವಿನ ಕೇಸರಿ ಬಾವುಟವನ್ನು ಸ್ವತಃ ಪಿಡಿಒ ಈಶಕುಮಾರ್ ಏಣಿ ಮೇಲೇರಿ ತೆರವುಗೊಳಿಸಿದ್ದಲ್ಲದೇ, ಅದನ್ನು ನೆಲಕ್ಕೆ ಬಿಸಾಡಿರುವ ಘಟನೆ ತಾಲೂಕಿನ ನಗರ್ಲೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದಲ್ಲಿ ಮೇ 4 ರಂದು ಶ್ರೀರಾಮ ನವಮಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದರ ವಿಶೇಷವಾಗಿ ನಂಜನಗೂಡು-ಟಿ. ನರಸೀಪುರ ಮುಖ್ಯರಸ್ತೆಯ ರಸ್ತೆ ವಿಭಜಕದಲ್ಲಿರುವ ಸೋಲಾರ್ ವಿದ್ಯುತ್ ಕಂಬಕ್ಕೆ ಶ್ರೀರಾಮಚಂದ್ರ ಪ್ರಭುವಿನ ಕೇಸರಿ ಬಾವುಟವನ್ನು ಯುವಕರು ಕಟ್ಟಿದ್ದಾರೆ.

ಬಾವುಟ ಕಟ್ಟಲು ಅನುಮತಿ ಪಡೆದಿಲ್ಲ, ತೆರವುಗೊಳಿಸುವಂತೆ ಮೌಖಿಕವಾಗಿ ತಿಳಿಸಿದರೂ ತೆಗೆದಿರಲಿಲ್ಲ. ಹಾಗಾಗಿ ಬುಧವಾರ ನಾನೇ ಖುದ್ದು ತೆರಳಿ ಏಣಿ ಹತ್ತಿ ತೆರವು ಮಾಡಿದ್ದೇನೆ ಎಂದು ಪಿಡಿಒ ಈಶಕುಮಾರ್ ತಿಳಿಸಿದ್ದಾರೆ.

ಆದರೆ, ಇದಕ್ಕೆ ಯುವಕರು ಆಕ್ಷೇಪ ವ್ಯಕ್ತಪಡಿಸಿದ್ದು, ಗ್ರಾಮದಲ್ಲಿ ಈ ರೀತಿಯ ಅನೇಕ ಬಾವುಟಗಳನ್ನು ಅಳವಡಿಸಲಾಗಿದೆ. ಯಾರೂ ಕೂಡ ಅನುಮತಿ ಪಡೆದಿಲ್ಲ. ಆ ಬಾವುಟ ಇದ್ದಿದ್ದರೆ ಏನೂ ಸಮಸ್ಯೆ ಇರಲಿಲ್ಲ. ಹಿಂದು ಧಾರ್ಮಿಕ ನಂಬಿಕೆಗೆ ಧಕ್ಕೆ ತರುವ ನಿಟ್ಟಿನಲ್ಲಿ ಪಿಡಿಒ ಈಶಕುಮಾರ್ ತಾವೇ ಖುದ್ದು ಏಣಿ ಹತ್ತಿ ಬಾವುಟವನ್ನು ಕಿತ್ತು ನೆಲೆಕ್ಕೆ ಬಿಸಾಡುವ ಮೂಲಕ ಹಿಂದೂಗಳನ್ನು ಕೆರಳುವಂತೆ ಮಾಡಿದ್ದಾರೆ.

ಇವರಿಗೆ ಕಿಂಚಿತ್ತು ಧಾರ್ಮಿಕ ಸಹಿಷ್ಣುತೆ ಇದ್ದಿದ್ದರೆ ಧಾರ್ಮಿಕ ಭಾವನೆಗಳನ್ನು ಕೆರಳುವಂತೆ ನಡೆದುಕೊಳ್ಳುತ್ತಿರಲಿಲ್ಲ. ಇದರ ಹಿಂದೆ ಏನೋ ಷಡ್ಯಂತ್ರವಿದೆ ಎಂದು ಗ್ರಾಮದ ಯುವಕರು ಆರೋಪಿಸಿದ್ದಾರೆ.

ಇದರಿಂದಾಗಿ ಪಿಡಿಒ ಈಶಕುಮಾರ್ ಹಾಗೂ ಯುವಕರ ನಡುವೆ ವಾಗ್ವಾದವೂ ನಡೆದಿದೆ. ಇನ್ನು ಪಿಡಿಒ ಈಶಕುಮಾರ್ ಶ್ರೀರಾಮಚಂದ್ರ ಪ್ರಭುವಿನ ಬಾವುಟವನ್ನು ಕಿತ್ತು ಕೆಲಕ್ಕೆ ಬಿಸಾಡುವುದನ್ನು ಯುವಕರು ವಿಡಿಯೋ ಚಿತ್ರೀಕರಣ ಮಾಡಿದ್ದು, ಸಾಮಾಜಿಕ ಜಾಲತಾಣಗಳನ್ನು ಹರಿಬಿಟ್ಟಿದ್ದಾರೆ. ಪಿಡಿಒ ನಡೆದುಕೊಂಡಿರುವ ರೀತಿಗೆ ವ್ಯಾಪಕ ಖಂಡನೆಯು ಸಹ ವ್ಯಕ್ತವಾಗಿದೆ.