ಮುಂದೊಂದು ದಿನ ಪಡಿತರ ಅಂಗಡಿಯಲ್ಲಿ ನೀರು ಮಾರಾಟ!

| Published : Apr 20 2024, 01:03 AM IST

ಮುಂದೊಂದು ದಿನ ಪಡಿತರ ಅಂಗಡಿಯಲ್ಲಿ ನೀರು ಮಾರಾಟ!
Share this Article
  • FB
  • TW
  • Linkdin
  • Email

ಸಾರಾಂಶ

ಜಲಸಂಪನ್ಮೂಲ ಬಹಳ ಸೂಕ್ಷ್ಮವಾದ ವಿಚಾರ. ಮಳೆ ಆಗುವುದಕ್ಕಿಂತ ಮೊದಲು ಚರ್ಚೆ ಆರಂಭವಾಗುತ್ತದೆ. ಮಳೆ ಆದ ನಂತರವೂ ಕೂಡ ಚರ್ಚೆ ಆಗುತ್ತದೆ.

ಧಾರವಾಡ:

ಹರಿಯುವ ನೀರನ್ನು ನಡೆಯುವ ಹಾಗೆ ಮಾಡಬೇಕು, ನಡೆಯುವ ನೀರನ್ನು ನಿಲ್ಲುವ ಹಾಗೆ ಮಾಡಬೇಕು, ನಿಲ್ಲುವ ನೀರನ್ನು ಭೂಮಿಯಲ್ಲಿ ಇಂಗಿಸಬೇಕು. ಅಂದಾಗ ಮಾತ್ರ ಜಲಕ್ಷಾಮ ತಡೆಯಲು ಸಾಧ್ಯ. ಇಲ್ಲವಾದರೆ ಮುಂದೊಂದು ದಿನ ನೀರನ್ನು ರೇಷನ್ ಅಂಗಡಿಯಲ್ಲಿ ಪಡೆಯುವ ಪರಿಸ್ಥಿತಿ ಬಂದರೆ ಆಶ್ಚರ್ಯವಿಲ್ಲ ಎಂದು ಬೆಳಗಾವಿಯ ವಿಶ್ವೇಶ್ವರ ತಾಂತ್ರಿಕ ವಿಶ್ವವಿದ್ಯಾಲಯ ಸಿವ್ಹಿಲ್ ವಿಭಾಗದ ಮುಖ್ಯಸ್ಥ ಡಾ. ಆನಂದ ಶಿವಪುರ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು ಪ್ರೊ. ಎಂ.ಆರ್. ಕುಂಭಾರ ದತ್ತಿ ಅಂಗವಾಗಿ ಆಯೋಜಿಸಿರುವ ‘ಜಲ ಸಂಪನ್ಮೂಲ ಮಾಹಿತಿ’ ವಿಷಯ ಕುರಿತು ಉಪನ್ಯಾಸದಲ್ಲಿ ಅವರು ಮಾತನಾಡಿ, ಜಲಸಂಪನ್ಮೂಲ ಬಹಳ ಸೂಕ್ಷ್ಮವಾದ ವಿಚಾರ. ಮಳೆ ಆಗುವುದಕ್ಕಿಂತ ಮೊದಲು ಚರ್ಚೆ ಆರಂಭವಾಗುತ್ತದೆ. ಮಳೆ ಆದ ನಂತರವೂ ಕೂಡ ಚರ್ಚೆ ಆಗುತ್ತದೆ ಎಂದರು.ಭಾರತದಲ್ಲಿ 13 ನದಿಗಳಲ್ಲಿ ಎಂಟು ಜಲಸಂಪನ್ಮೂಲದ ನದಿಗಳ ಕುರಿತು ವಾದ-ವಿವಾದ ಕೋರ್ಟ್‌ನಲ್ಲಿದೆ. ಮುಂದೆ ಯುದ್ಧವಾದರೆ ನೀರಿನ ಸಲುವಾಗಿಯೇ ಯುದ್ಧವಾಗಬಹುದು. ವಿಶ್ವದಲ್ಲಿ ಹೆಚ್ಚು ನೀರಿರುವ ದೇಶ ಐಸ್‌ಲ್ಯಾಂಡ್, ಬೆಗನ್ನ, ಕೆನಡಾ, ನಾರ್ವೆ, ಪನಾಮ ಹೀಗೆ ಒಟ್ಟು 10 ದೇಶಗಳಿವೆ. ಕಡಿಮೆ ನೀರಿರುವುದು ಸೌದಿ ಅರೇಬಿಯಾ, ಸಿಂಗಾಪೂರ, ಇಸ್ರೆಲ್, ಓಮರ್ ಹೀಗೆ ಹಲವಾರು ದೇಶಗಳು ನೀರಿನ ಕೊರತೆ ಅನುಭವಿಸುತ್ತಿವೆ ಎಂದು ಮಾಹಿತಿ ನೀಡಿದರು.

ಭಾರತದಲ್ಲಿ ಬೇರೆ ಬೇರೆ ವಿಧದಲ್ಲಿ ನೀರಿನ ಸಂಪನ್ಮೂಲವಿದೆ. ಜಗತ್ತಿನಲ್ಲಿ ಶೇ.0009 ಶುದ್ಧ ನೀರು ಮಾತ್ರ ಇದೆ. ಅಂತರ್ಜಲದಿಂದ ಎಂಟು ಕಿಲೋ ಮೀಟರ್‌ ವರೆಗೆ ನೀರು ಪಡೆಯಬಹುದು. ಮಳೆ ಬಂದಾಗ ಕೃಷಿಗೆ ಸಂಬಂಧಿಸಿದ ನೀರಿನ ಶೇ.005 ಮಾತ್ರ. ಸಮುದ್ರದಲ್ಲಿ ಶೇ.97.2 ನೀರಿದೆ. ಅದು ಉಪ್ಪಿನ ನೀರು. ಸಮುದ್ರದ ನೀರು ಸಿಹಿಯಾಗಿದ್ದರೆ ಎಲ್ಲ ನೀರು ಆವಿ ಆಗಿ ಹೋಗುತ್ತಿತ್ತು. ಹಾಗಾಗಿ ನಿಸರ್ಗ ಆ ನೀರಿನಲ್ಲಿ ಉಪ್ಪಿನಂಶವಿಟ್ಟಿದೆ. ಹೀಗಾಗಿ ನೀರಿನ ಪ್ರಮಾಣ ಉಳಿದುಕೊಂಡಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಮಾತನಾಡಿದರು. ಪ್ರಾಧ್ಯಾಪಕ ಡಾ. ವಿನಾಯಕ ಬಂಕಾಪುರ ಇದ್ದರು. ಶಂಕರ ಕುಂಬಿ ಸ್ವಾಗತಿಸಿದರು. ಡಾ. ಮಹೇಶ ಹೊರಕೇರಿ ನಿರೂಪಿಸಿದರು. ಪ್ರೊ. ಎಸ್.ಎಲ್. ಸಂಗಮ ವಂದಿಸಿದರು.