ನೇಹಾ ಹತ್ಯೆ ಖಂಡಿಸಿ ತೀವ್ರ ಪ್ರತಿಭಟನೆ

| Published : Apr 20 2024, 01:03 AM IST

ಸಾರಾಂಶ

ಹುಬ್ಬಳ್ಳಿಯ ಕಾಲೇಜುವೊಂದರಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಮಾಡಿದ್ದು ಖಂಡನೀಯ. ಹೀಗಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ರಾಜ್ಯಪಾಲರು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಶಿಪಾರಸು ಮಾಡಬೇಕು ಎಂದು ಆಗ್ರಹಿಸಿ ಭಾರತೀಯ ಜನತಾ ಪಕ್ಷದ ಮಂಡಳ ವತಿಯಿಂದ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಹುಬ್ಬಳ್ಳಿಯ ಕಾಲೇಜುವೊಂದರಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಮಾಡಿದ್ದು ಖಂಡನೀಯ. ಹೀಗಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ರಾಜ್ಯಪಾಲರು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಶಿಪಾರಸು ಮಾಡಬೇಕು ಎಂದು ಆಗ್ರಹಿಸಿ ಭಾರತೀಯ ಜನತಾ ಪಕ್ಷದ ಮಂಡಳ ವತಿಯಿಂದ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ಮಾಡಲಾಯಿತು.

ಈ ವೇಳೆ ಮಾತನಾಡಿದ ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ವಿಸರ್ಜನೆ ಮಾಡಬೇಕು. ರಾಜ್ಯದಲ್ಲಿ ತಮ್ಮ ಅಧಿಕಾರ ಹಾಗೂ ಮತದ ಆಸೆಗಾಗಿ ಸರ್ಕಾರ ಸುಮ್ಮನೆ ಕುಳಿತುಕೊಂಡಿದೆ. ಇದೇ ರೀತಿ ಮುಂದುವರಿದರೆ ರಾಜ್ಯದಲ್ಲಿ ಹಿಂದುಗಳು ಜೀವನ ಸಾಗಿಸುವುದು ಕಷ್ಟವಾಗಬಹುದು. ಹಾಡಹಗಲೇ ಇಂತಹ ಘಟನೆ ನಡೆದಿರುವುದು ಖಂಡನೀಯ. ಈ ಘಟನೆಯಲ್ಲಿ ಭಾಗಿಯಾದ ವ್ಯಕ್ತಿಗೆ ಮೇಲೆ ಸರ್ಕಾರ ಗಂಭೀರ ಕಾನೂನು ಕ್ರಮ ತೆಗೆದುಕೊಂಡು ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಮುಖಂಡ ಸಂಗನಗೌಡ ಚಿಕ್ಕೊಂಡ ಮಾತನಾಡಿ, ಈ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಪಾಕಿಸ್ತಾನ ಆಡಳಿತ ಹುಟ್ಟುಕೊಂಡಿದೆ ಅನ್ನುವ ರೀತಿಯಲ್ಲಿ ಘಟನೆಗಳು ಘಟಿಸುತ್ತಿವೆ. ನಿನ್ನೆ ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಎನ್ನುವ ವಿದ್ಯಾರ್ಥಿಗೆ ಪ್ರೀತಿಸುವಂತೆ ಒತ್ತಾಯಿಸಿ ಫಯಾಜ್ ಅನ್ನುವ ವ್ಯಕ್ತಿ ಚಾಕುವಿನಿಂದ ೯ ಸಲ ಇರಿದು ಕೊಲೆ ಮಾಡಿದ್ದಾನೆ. ಇಂತಹ ಘಟನೆ ನಡೆದಿರುವುದು ಖಂಡನೀಯ. ಸಾರ್ವಜನಿಕವಾಗಿ ಕೊಲೆ ಮಾಡಿರುವ ವ್ಯಕ್ತಿಯನ್ನು ಸಾರ್ವಜನಿಕವಾಗಿ ನೇಣಿಗೆ ಹಾಕಬೇಕು. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾಂದ್ ಎಂಬ ಘೋಷಣೆ, ಬೆಂಗಳೂರಿನ ಒಂದು ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಘಟನೆ, ಶ್ರೀರಾಮನವಮಿಯಂದು ಜೈ ಶ್ರೀರಾಮ ಘೋಷಣೆ ಕೂಗಿದವರ ಮೇಲೆ ಹಲ್ಲೆ ಘಟನೆಯಂತಹ ಘಟನೆಗಳು ನಡೆಯುತ್ತಿರುವುದು ತಾಲಿಬಾನ ಸಂಸ್ಕ್ರತಿ ಕಂಡು ಬರುತ್ತಿದೆ. ಸಿಎಂ ಸಿದ್ದರಾಮಯ್ಯನವರು ಕಠೋರ ಕಾನೂನು ಜಾರಿಗೆ ತರುವ ಮೂಲಕ ಈ ತಾಲಿಬಾನ ಸಂಸ್ಕ್ರತಿಯನ್ನು ಮಟ್ಟ ಹಾಕುವ ಕೆಲಸ ಮಾಡಬೇಕು. ಉತ್ತರಪ್ರದೇಶದಲ್ಲಿ ಸಿಎಂ ಯೋಗೀಜಿ ಜಾರಿಗೆ ತಂದಿರುವ ರೀತಿಯಲ್ಲಿ ಕಠೋರ ಕಾನೂನು ಜಾರಿಗೆ ತರಬೇಕೆಂದು ಆಗ್ರಹಿಸಿದರು.

ಪುರಸಭೆ ಸದಸ್ಯ ನೀಲಪ್ಪ ನಾಯಕ ಮಾತನಾಡಿ, ನೇಹಾ ಹಿರೇಮಠ ಹತ್ಯೆ ಮಾಡಿದ ಫಯಾಜ್ ಸರ್ಕಾರ ಕಠಿಣ ಶಿಕ್ಷೆ ವಿಧಿಸಬೇಕು. ಕಾಂಗ್ರೆಸ್ ಸರ್ಕಾರ ಕುರುಡು ಸರ್ಕಾರವಾಗಿದೆ. ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ತರಬೇಕೆಂದು ಒತ್ತಾಯಿಸಿದ ಅವರು, ಉತ್ತರಪ್ರದೇಶದಲ್ಲಿ ಸಿಎಂ ಯೋಗಿಜಿ ಸರ್ಕಾರ ಕಾನೂನು ಬದ್ಧವಾಗಿ ಆಡಳಿತ ನಡೆಸುತ್ತಿದೆ. ಅದೇ ರೀತಿಯಲ್ಲಿ ನಮ್ಮಲ್ಲಿಯೂ ನಡೆಯಬೇಕೆಂದರು.

ಪ್ರತಿಭಟನೆಯಲ್ಲಿ ಬಿಜೆಪಿ ಮಂಡಳ ಅಧ್ಯಕ್ಷ ಸಿದ್ರಾಮ ಕಾಖಂಡಕಿ, ಮುಖಂಡರಾದ ಬಸವರಾಜ ಬಿಜಾಪುರ, ಪ್ರವೀಣ ಪವಾರ, ಶಿವಪುತ್ರ ಕೆಂಭಾವಿ, ಬಾಬು ನಿಕ್ಕಂ, ಕಲ್ಲು ಸೊನ್ನದ, ಮಲ್ಲಿಕಾರ್ಜುನ ದೇವರಮನಿ, ಶಿವಶಂಕ್ರೆಯ್ಯ ಹಿರೇಮಠ, ಸಂತೋಷ ನಾಯಕ, ರಾಜು ಮುಳವಾಡ, ಮುತ್ತುರಾಜ ಹಾಲಿಹಾಳ, ನಾಗರಾಜ ದೇವಕರ,ದಯಾನಂದ ಸಾರವಾಡ, ಅಶೋಕ ಮಿಣಜಗಿ, ಯಮನೂರಿ ವಡ್ಡರ, ಶ್ರೀಶೈಲ ಬಂಚೋಡಿ, ಪದ್ಮರಾಜ ಒಡೆಯರ, ಸುರೇಶ ಹೂಗಾರ, ಗುಂಡು ಗಾಯಕವಾಡ, ಮಹೇಶ ಹಿರೇಕುರಬರ ಇತರರು ಭಾಗವಹಿಸಿದ್ದರು.

---

ನೇಹಾ ಕೊಲೆ; ಜಿಗಜಿಣಗಿ ಖಂಡನೆ

ವಿಜಯಪುರ:

ಹುಬ್ಬಳ್ಳಿಯಲ್ಲಿ ನಡೆದ ಕಾರ್ಪೊರೇಟರ್ ಪುತ್ರಿ ನೇಹಾ ಕೊಲೆ ಅತ್ಯಂತ ದುರಂತ ಸಂಗತಿ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಹೇಳಿದರು. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಘಟನೆ ವೈಯಕ್ತಿಕ ದ್ವೇಷದಿಂದ ಆಗಿರಬಹುದು ಎಂಬ ಸಿಎಂ ಹೇಳಿಕೆಗೆ ಅಸಮಾಧಾನ ಹೊರಹಾಕಿದ ಅವರು, ಹಾಡಹಗಲೇ‌ ಕೊಲೆಯಾಗಿದೆ. ರಸ್ತೆ ಮೇಲೆ ಹಾಡಹಗಲೇ ಕೊಲೆಯಂಥ ಘಟನೆ ನಡೆದಿದೆ. ಇದು ಕಾನೂನು ಸುವ್ಯವಸ್ಥೆಯಾ? ಹಾಡಹಗಲೇ ಕೊಲೆ ನಡೆದಿದ್ದಕ್ಕೆ ಖಂಡನೆ ಮಾಡಲೇಬೇಕು ಎಂದರು.

---ನೇಹಾ ಹತ್ಯೆಗೆ ಶ್ರೀಗಳ ಖಂಡನೆ

ಬಸವನಬಾಗೇವಾಡಿ:

ಹುಬ್ಬಳ್ಳಿಯ ಪ್ರತಿಷ್ಠಿತ ಕಾಲೇಜಿನಲ್ಲಿ ಗುರುವಾರ ಹಾಡಹಗಲೇ ವಿದ್ಯಾರ್ಥಿನಿ ಕೊಲೆ ನಡೆದಿರುವುದು ಖಂಡನೀಯ. ವಿದ್ಯಾರ್ಥಿ ನೇಹಾ ಹಿರೇಮಠ ಕೊಂದ ವ್ಯಕ್ತಿಗೆ ಜೀವಾವಧಿ ಶಿಕ್ಷೆಯಾಗಬೇಕು. ಇಂತಹವರನ್ನು ಗುಂಡಿಕ್ಕಿ ಕೊಲ್ಲಬೇಕು. ಇಸ್ಲಾಂ ಧರ್ಮದ ಯುವಕ ಈ ರೀತಿ ಮಾಡಿದ್ದು ಸರಿಯಲ್ಲ. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗೀಜಿ ಅವರ ಆಡಳಿತ ಹೇಗಿದೆ ಹಾಗೇನೂ ಕರ್ನಾಟಕದಲ್ಲಿ ಒಮ್ಮೆ ಮಾಡಿ ನೋಡಿ ಎಲ್ಲರಿಗೆ ಭಯ ಹುಟ್ಟುತ್ತದೆ. ಈ ಹೆಣ್ಣು ಮಗಳಿಗೆ ಆಗಿರುವಂತೆ ಯಾವ ಹೆಣ್ಣು ಮಕ್ಕಳಿಗೆ ಈ ರೀತಿ ಆಗಬಾರದು ಎಂದು ತಾಲೂಕಿನ ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

----

ನೇಹಾ ಹತ್ಯೆ, ಮನುಕುಲವೇ

ತಲೆ ತಗ್ಗಿಸುವಂತಹದ್ದು

ಬಸವನಬಾಗೇವಾಡಿ:

ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಎನ್ನುವ ವಿದ್ಯಾರ್ಥಿನಿಯ ಕೊಲೆ ಖಂಡನೀಯವಾಗಿದೆ. ಮಾನವ ಕುಲ ತಲೆತಗ್ಗಿಸುವಂತಾಗಿದೆ. ಕರ್ನಾಟಕದಲ್ಲಿ ಇತ್ತೀಚೆಗೆ ವಿಶೇಷವಾಗಿ ಕಾಂಗ್ರೆಸ್ ಪಕ್ಷ ಅಧಿಕಾರ ವಹಿಸಿಕೊಂಡ ನಂತರ ಇಂತಹ ಘಟನೆಗಳು ನಡೆಯುತ್ತಿರುವುದು ಖೇದಕರ ಸಂಗತಿಯಾಗಿದೆ ಎಂದು ಭಾರತೀಯ ಜನತಾ ಪಕ್ಷದ ಮುಖಂಡರಾದ ಸಾವಿತ್ರಿ ಕಲ್ಯಾಣಶೆಟ್ಟಿ ಎಂದು ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನೇಹಾ ಕೊಲೆ ಕುರಿತು ಮಾನ್ಯ ಗೃಹಮಂತ್ರಿ ಪರಮೇಶ್ವರ ಅವರು ಕೊಟ್ಟ ಹೇಳಿಕೆ ಮಹಿಳಾಕುಲಕ್ಕೆ ಅವಮಾನ ಮಾಡುವಂತಾಗಿದೆ. ಅಪರಾಧಿಗಳಿಗೆ ಶಿಕ್ಷೆ ಕೊಡುವುದನ್ನು ಬಿಟ್ಟು ಪರೋಕ್ಷವಾಗಿ ಬೆಂಬಲಿಸುವ ನೀತಿಯನ್ನು ಕೈ ಬಿಡಬೇಕು. ಇತ್ತೀಚೆಗೆ ಬೆಂಗಳೂರಿನಲ್ಲಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದವರ ಮೇಲೆ ಹಲ್ಲೆ ಮಾಡಿರುವುದು. ಬೆಂಗಳೂರಿನ ಕೆಫೆ ಒಂದರಲ್ಲಿ ಬಾಂಬ್ ಬ್ಲಾಸ್ಟ್ ಮಾಡಿದ ಘಟನೆಗಳು ನಡೆದಿವೆ. ಅಷ್ಟೇ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಲಾಯಿತು. ಇಂತಹ ಘಟನೆಗಳು ಪದೇಪದೇ ನಡೆಯುತ್ತಿರುವುದರಿಂದ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹಾಳಾಗಿದೆ ಎಂದು ಅರ್ಥವಾಗುತ್ತದೆ. ಇಂತಹ ಘಟನೆಗಳ ಕುರಿತು ಯಾವೊಬ್ಬ ಕಾಂಗ್ರೆಸ್ ಮುಖಂಡರು ಖಂಡಿಸದೇ ಇರುವುದು ಅವರ ಮುಖವಾಡವನ್ನು ತೋರಿಸುತ್ತದೆ. ರಾಜ್ಯಪಾಲರು ಮಧ್ಯಪ್ರವೇಶಿಸಿ ಸರಕಾರಕ್ಕೆ ಬುದ್ಧಿ ಹೇಳುವ ಅವಶ್ಯಕತೆ ಇಂದು ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.