ಮನೆಯಲ್ಲಿ ಅವಿತಿದ್ದ ಚಿರತೆ ಕೊನೆಗೂ ಸೆರೆ

| Published : Apr 28 2024, 01:16 AM IST

ಮನೆಯಲ್ಲಿ ಅವಿತಿದ್ದ ಚಿರತೆ ಕೊನೆಗೂ ಸೆರೆ
Share this Article
  • FB
  • TW
  • Linkdin
  • Email

ಸಾರಾಂಶ

ಶುಕ್ರವಾರ ಮಧ್ಯಾಹ್ನ ೪ ಗಂಟೆ ಸುಮಾರಿಗೆ ಮಹಾಬಲೇಶ್ವರ ನಾಯ್ಕರ ಮೇಲೆ ದಾಳಿ ಮಾಡಿ ಗಾಯಗೊಳಿಸಿದ್ದ ಚಿರತೆ ಬಳಿಕ ಮನೆಯೊಂದರ ಒಳಹೊಕ್ಕು ಅಡಗಿ ಕುಳಿತಿತ್ತು.

ಕನ್ನಡಪ್ರಭ ವಾರ್ತೆ ಕುಮಟಾ

ತಾಲೂಕಿನ ಬಾಡದ ಮಾದರಿ ರಸ್ತೆಯಲ್ಲಿ ಮನುಷ್ಯರ ಮೇಲೂ ದಾಳಿ ಮಾಡಿ ಮನೆಯೊಂದರೊಳಗೆ ಅವಿತು ಆತಂಕ ಹುಟ್ಟಿಸಿದ್ದ ಚಿರತೆಯನ್ನು ಅರಿವಳಿಕೆ ತಜ್ಞರನ್ನು ಕರೆಸಿ ಪ್ರಜ್ಞೆ ತಪ್ಪಿಸಿ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಶನಿವಾರ ಸಂಜೆ ಯಶಸ್ವಿಯಾಗಿದೆ.

ಚಿರತೆಗೆ ಶಿವಮೊಗ್ಗದಿಂದ ಬಂದ ಅರವಳಿಕೆ ತಜ್ಞ ಡಾ. ಅಭಿಲಾಷ ನೇತೃತ್ವದ ತಂಡ ಅರಿವಳಿಕೆ ಚುಚ್ಚುಮದ್ದನ್ನು ನೀಡಿತು. ಬಳಿಕ ಅರಣ್ಯ ಮತ್ತು ಪೊಲೀಸ್‌ ಸಿಬ್ಬಂದಿ ಅದು ಅವಿತಿದ್ದ ಮನೆಯೊಳಗಿಂದ ಚಿರತೆಯನ್ನು ಸುರಕ್ಷಿತವಾಗಿ ಹೊರತಂದರು. ಬಳಿಕ ಬೋನಿನಲ್ಲಿಟ್ಟು ಮುಂದಿನ ಹಂತದ ಚಿಕಿತ್ಸೆ ನೀಡಿ ಸ್ಥಳಾಂತರಿಸುವ ಪ್ರಕ್ರಿಯೆ ನಡೆಸಲಾಯಿತು.

ಶುಕ್ರವಾರ ಮಧ್ಯಾಹ್ನ ೪ ಗಂಟೆ ಸುಮಾರಿಗೆ ಮಹಾಬಲೇಶ್ವರ ನಾಯ್ಕರ ಮೇಲೆ ದಾಳಿ ಮಾಡಿ ಗಾಯಗೊಳಿಸಿದ್ದ ಚಿರತೆ ಬಳಿಕ ಮನೆಯೊಂದರ ಒಳಹೊಕ್ಕು ಅಡಗಿ ಕುಳಿತಿತ್ತು. ಅದೇ ಮನೆಯಲ್ಲಿ ಸಿಲುಕಿಕೊಂಡಿದ್ದ ಜನರನ್ನು ರಾತ್ರಿ ಸುರಕ್ಷಿತವಾಗಿ ಹೊರತಂದು ಹೊರಗಿನಿಂದ ಮನೆ ಬಾಗಿಲು ಮುಚ್ಚಲಾಗಿತ್ತು. ಬಲೆ ಹಾಗೂ ಬೋನು ತಂದು ಚಿರತೆ ಹಿಡಿಯಲು ರಾತ್ರಿಯಿಡೀ ನಡೆಸಿದ ಕಾರ್ಯಾಚರಣೆ ವಿಫಲವಾಗಿತ್ತು. ಹೀಗಾಗಿ, ಅರವಳಿಕೆ ನೀಡಿ ಚಿರತೆ ಹಿಡಿಯವುದೊಂದೇ ಮಾರ್ಗ ಎಂದು ನಿರ್ಧರಿಸಿ ಶಿವಮೊಗ್ಗದ ಅರವಳಿಕೆ ತಜ್ಞರ ತಂಡಕ್ಕೆ ಮಾಹಿತಿ ನೀಡಲಾಗಿತ್ತು.

ಶನಿವಾರ ಸಂಜೆಯಾಗುತ್ತಾ ಬಂದರೂ ಅರವಳಿಕೆ ತಂಡ ಬಾರದ ಹಿನ್ನೆಲೆಯಲ್ಲಿ ಸಾರ್ವಜನಿಕರು ಸ್ಥಳದಲ್ಲಿ ಪ್ರತಿಭಟಿಸಿ, ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸ್ಥಳದಲ್ಲಿದ್ದ ಅಧಿಕಾರಿಗಳು ಜನರಿಗೆ ಸಮಜಾಯಿಷಿ ನೀಡುತ್ತಿರುವಾಗಲೇ ಅರವಳಿಕೆ ತಜ್ಞರ ತಂಡ ಬಂದು ಕಾರ್ಯಾಚರಣೆಗೆ ಇಳಿಯಿತು. ಕೆಲ ನಿಮಿಷಗಳಲ್ಲೇ ಕಾರ್ಯಾಚರಣೆ ಯಶಸ್ವಿಯಾಗಿ ಮುಗಿದು ಎಚ್ಚರ ತಪ್ಪಿದ ಚಿರತೆಯನ್ನು ಬೇರೆಡೆ ಸಾಗಿಸಲಾಯಿತು.