ತನಿಖೆ ದಾರಿ ತಪ್ಪಿದ ನೇಹಾ ಹತ್ಯೆ ಪ್ರಕರಣ

| Published : Apr 27 2024, 01:17 AM IST

ಸಾರಾಂಶ

ಒಬ್ಬ ಅಮಾಯಕ ಹೆಣ್ಣು ಮಗುವನ್ನು ಕ್ರೂರವಾಗಿ ಕೊಲೆ ಮಾಡಿರುವುದು ಎಲ್ಲರೂ ತಲೆತಗ್ಗಿಸುವಂತಹ ವಿಚಾರ. ಕಾಂಗ್ರೆಸ್ಸಿನವರು ಇಡೀ ಪ್ರಕರಣದ ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದರು.

ಹುಬ್ಬಳ್ಳಿ:

ನೇಹಾ ಹತ್ಯೆ ಪ್ರಕರಣದ ತನಿಖೆ ಈಗಾಗಲೇ ದಾರಿತಪ್ಪಿದೆ. ರಾಜ್ಯ ಸರ್ಕಾರಕ್ಕೆ ಯಾರನ್ನೂ ರಕ್ಷಣೆ ಮಾಡುವ ಉದ್ದೇಶವಿಲ್ಲದೇ ಇದ್ದರೆ ಈ ಕೂಡಲೇ ಪ್ರಕರಣವನ್ನು ಸಿಬಿಐಗೆ ವಹಿಸಲಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಇಲ್ಲಿನ ಬಿಡನಾಳದಲ್ಲಿರುವ ನೇಹಾ ನಿವಾಸಕ್ಕೆ ಶುಕ್ರವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬ ಅಮಾಯಕ ಹೆಣ್ಣು ಮಗುವನ್ನು ಕ್ರೂರವಾಗಿ ಕೊಲೆ ಮಾಡಿರುವುದು ಎಲ್ಲರೂ ತಲೆತಗ್ಗಿಸುವಂತಹ ವಿಚಾರ. ಕಾಂಗ್ರೆಸ್ಸಿನವರು ಇಡೀ ಪ್ರಕರಣದ ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದರು. ಈ ಷಡ್ಯಂತ್ರದ ಹಿಂದೆ ಬಹಳಷ್ಟು ಜನ ಇದ್ದಾರೆ ಎಂದು ನೇಹಾ ತಂದೆ-ತಾಯಿ ಹೇಳುತ್ತಿದ್ದಾರೆ. ಸಮಗ್ರ ತನಿಖೆಯಾಗಬೇಕಾದರೆ ಸಿಬಿಐಗೆ ಕೊಡಬೇಕು ಎನ್ನುವುದು ಕುಟುಂಬಸ್ಥರ ಆಗ್ರಹ. ಆದರೆ, ರಾಜ್ಯ ಸರ್ಕಾರ ಸಿಐಡಿಗೆ ಕೊಟ್ಟು ಕೈ ತೊಳೆದುಕೊಳ್ಳುವ ಕೆಲಸ ಮಾಡಿದೆ ಎಂದು ದೂರಿದರು.

ಈ ಪ್ರಕರಣದಲ್ಲಿ ಪೊಲೀಸರು ಅರೋಪಿಯನ್ನು ಬಂಧಿಸಿ ವಿಚಾರಣೆಗೆ ತಮ್ಮ ವಶಕ್ಕೆ ಪಡೆಯದೇ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದೆ. ಇದರಿಂದ ಪ್ರಕರಣ ದಾರಿ ತಪ್ಪಿದೆ. ಈಗಲೂ ಕಾಲ ಮಿಂಚಿಲ್ಲ, ಸಿಬಿಐಗೆ ಕೊಟ್ಟರೆ ನ್ಯಾಯ ಸಿಗುತ್ತದೆ ಅನ್ನುವ ವಿಶ್ವಾಸ ನಮಗಿದೆ ಎಂದರು.

ಅವರಾಗಿದ್ದರೆ?

ಈ ಪ್ರಕರಣದಲ್ಲಿ ಪ್ರತಿಪಕ್ಷ ರಾಜಕಾರಣ ಮಾಡುತ್ತಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಉತ್ತರಿಸಿದ ಬೊಮ್ಮಾಯಿ, ಒಂದು ಕಾಲೇಜು ಕ್ಯಾಂಪಸ್ ನಲ್ಲಿ ಭೀಕರ ಕೊಲೆ ನಡೆದರೆ ವಿರೋಧ ಪಕ್ಷ ಸುಮ್ಮನೆ ಕುಳಿತುಕೊಳ್ಳಬೇಕಾ? ಅವರು ವಿರೋಧ ಪಕ್ಷದಲ್ಲಿದ್ದರೆ ಸುಮ್ಮನೆ ಕೂರುತ್ತಿದ್ದರಾ? ಈ ಘಟನೆಯಿಂದಾಗಿ ಇಡೀ ಕರ್ನಾಟಕ ಬೆಚ್ಚಿಬಿದ್ದಿದೆ. ಮಠಾಧೀಶರು ಸಂಘ-ಸಂಸ್ಥೆಗಳು ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿದ್ದಾರೆ. ಅವರೇನು ರಾಜಕೀಯ ಮಾಡುತ್ತಿದ್ದಾರಾ? ಎಂದು ಪ್ರಶ್ನಿಸಿದರು.