ಕುಟುಂಬದೊಂದಿಗೆ ಕಾಲ ಕಳೆದು ಚುನಾವಣೆ ಒತ್ತಡ ಕಳೆದ ಅಸೂಟಿ

| Published : May 09 2024, 01:05 AM IST

ಕುಟುಂಬದೊಂದಿಗೆ ಕಾಲ ಕಳೆದು ಚುನಾವಣೆ ಒತ್ತಡ ಕಳೆದ ಅಸೂಟಿ
Share this Article
  • FB
  • TW
  • Linkdin
  • Email

ಸಾರಾಂಶ

ಸುಮಾರು ಎರಡು ತಿಂಗಳು ಕಾಲ ಕುಟುಂಬದ ಜೊತೆಗೆ ಕಾಲ ಕಳೆಯಲು ಆಗಿರಲಿಲ್ಲ. ಹೀಗಾಗಿ ಎರಡು ದಿನಗಳ ಕಾಲ ಪೂರ್ತಿ ಮನೆಯಲ್ಲಿದ್ದು ನಂತರ ಪಕ್ಷದ ಮುಖಂಡರನ್ನು ಭೇಟಿಯಾಗುವ ಚಿಂತನೆ ಇದೆ.

ಧಾರವಾಡ:

ಸುಮಾರು ಎರಡು ತಿಂಗಳಿಂದ ಹಗಲು-ರಾತ್ರಿ ಎನ್ನದೇ ಚುನಾವಣಾ ಕಾರ್ಯದಲ್ಲಿ ನಿರತರಾದ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಮತದಾನ ಮುಗಿಯುತ್ತಲೇ ಮನೆಯಲ್ಲಿ ಕುಟುಂಬದ ಜೊತೆಗೆ ಬುಧವಾರ ಕಾಲ ಕಳೆದರು.

ಇಲ್ಲಿಯ ಸಂಪಿಗೆ ನಗರದಲ್ಲಿ ಮನೆ ಮಾಡಿರುವ ಅಸೂಟಿ ಅವರು, ಮತದಾನ ಮುಗಿಸಿದ ಆಯಾಸವನ್ನು ತಡವಾಗಿ ಏಳುವ ಮೂಲಕ ಕಳೆದರು. ತಂದೆ-ತಾಯಿ ಜೊತೆಗೆ ಕೆಲ ಹೊತ್ತು ಚರ್ಚೆ ನಡೆಸಿ ನಂತರ ಪತ್ನಿ, ಮಕ್ಕಳೊಂದಿಗೆ ಸಂಜೆ ವರೆಗೂ ಕಾಲ ಕಳೆದರು. ಪುತ್ರ ಸುದನ್ವ ಜೊತೆ ಆಟವಾಡಿ, ಟಿವಿ ನೋಡಿ ಅಸೂಟಿ ಚುನಾವಣೆಯ ಒತ್ತಡದಿಂದ ತುಸು ಹೊರ ಬಂದರು.

ಸುಮಾರು ಎರಡು ತಿಂಗಳು ಕಾಲ ಕುಟುಂಬದ ಜೊತೆಗೆ ಕಾಲ ಕಳೆಯಲು ಆಗಿರಲಿಲ್ಲ. ಹೀಗಾಗಿ ಎರಡು ದಿನಗಳ ಕಾಲ ಪೂರ್ತಿ ಮನೆಯಲ್ಲಿದ್ದು ನಂತರ ಪಕ್ಷದ ಮುಖಂಡರನ್ನು ಭೇಟಿಯಾಗುವ ಚಿಂತನೆ ಇದೆ. ನನ್ನ ಮೇಲಿನ ವಿಶ್ವಾಸದಿಂದ ಅಭ್ಯರ್ಥಿ ಮಾಡಿ ಇಡೀ ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಪರಿಚಯಿಸಿದ ಗೌರವ ಪಕ್ಷದ ಹಿರಿಯರಿಗೆ ಸಲ್ಲಬೇಕು. ವಿಶೇಷವಾಗಿ ಸಂತೋಷ ಲಾಡ್‌, ಶಾಸಕರಾದ ವಿನಯ ಕುಲಕರ್ಣಿ, ಎನ್‌.ಎಚ್‌. ಕೋನರಡ್ಡಿ, ಅಬ್ಬಯ್ಯ ಪ್ರಸಾದ ಅವರು ಹಗಲು ರಾತ್ರಿ ನನ್ನ ಪರ ನಿಂತು ಮತದಾರರ ಮನವೊಲಿಸಿದ್ದು ಅವರಿಗೆ ಕೃತಜ್ಞತೆ ಹೇಳಬೇಕಾಗುತ್ತದೆ ಎಂದು ಅಸೂಟಿ ಹೇಳಿದರು.

ಮತದಾನ ಮುಗಿದ ಕೂಡಲೇ ಕೆಲವರು ರೆಸಾರ್ಟ್‌ಗಳಿಗೆ ತೆರಳುತ್ತಾರೆ. ಆದರೆ, ನಾನು ಮಾತ್ರ ಮನೆಯಲ್ಲಿದ್ದು ಕುಟುಂಬಕ್ಕೆ ಸಮಯ ನೀಡುತ್ತೇನೆ. ನಂತರದಲ್ಲಿ ಮತದಾರರಿಗೆ ಧನ್ಯವಾದ ಹೇಳಲು ಕ್ಷೇತ್ರಕ್ಕೆ ಹೋಗಲಿದ್ದೇನೆ. ಈ ಚುನಾವಣೆಯಲ್ಲಿ ಗೆಲ್ಲುವ ನಿರೀಕ್ಷೆ ಸಾಕಷ್ಟಿದ್ದು ಜೂನ್ 4ರ ವರೆಗೆ ಕಾಯ್ದು ನೋಡೋಣ ಎಂದು ಅಸೂಟಿ ಹೇಳಿದರು.